ಅಮೆರಿಕದಲ್ಲಿ ಇಸ್ರೇಲಿ ಬಲಪಂಥೀಯ ಗುಂಪುಗಳಿಂದ ಯಹೂದಿ ತೀವ್ರವಾದಿಗಳಿಗಾಗಿ ದೇಣಿಗೆ ಸಂಗ್ರಹ !‌

Update: 2023-01-24 17:41 GMT

ಜೆರುಸಲೇಂ,ಜ.24: ಇಸ್ರೇಲ್ನಲ್ಲಿ ಅತ್ಯಂತ ಕುಖ್ಯಾತ ದ್ವೇಷಪರಾಧ ಪ್ರಕರಣಗಳಲ್ಲಿ ದೋಷಿಗಳಾಗಿರುವ ಯಹೂದಿ ತೀವ್ರವಾದಿಗಳಿಗೆ ನೆರವಾಗಲು ಇಸ್ರೇಲಿ ಬಲಪಂಥೀಯ ಗುಂಪೊಂದು ಅಮೆರಿಕನ್ನರಿಂದ ತೆರಿಗೆ ವಿನಾಯಿತಿಯಿರುವ ದೇಣಿಗೆಗಳನ್ನು ಸಂಗ್ರಹಿಸುತ್ತಿದ್ದಾರೆಂದು ಅಸೋಸಿಯೇಟೆಡ್ ಪ್ರೆಸ್ ಹಾಗೂ ಇಸ್ರೇಲಿ ತನಿಖಾ ವರದಿ ಸಂಸ್ಥೆ ಶೊಮ್ರಿಮ್ ವರದಿ ಮಾಡಿದೆ.

ಅಮೆರಿಕದಲ್ಲಿ ಇಸ್ರೇಲಿನ ಕಟ್ಟರ್ಪಂಥೀಯರು ಸಕ್ರಿಯರಾಗಿ ಕಾರ್ಯಾಚರಿಸುತ್ತಿದ್ದಾರೆಂಬುದನ್ನು ಈ ಬೆಳವಣಿಗೆಗಳು ಸೂಚಿಸಿವೆ ಎಂದು ವರದಿ ತಿಳಿಸಿದೆ.

ಅಮೆರಿದ ಶ್ಲೋಮ್ ಅಸಿರಾಯಿಚ್ ಎಂಬ ಯಹೂದಿ ಲಾಭೋದ್ದೇಶರಹಿತ ಸಂಘಟನೆಯೊಂದರ ಮೂಲಕ ಇಸ್ರೇಲಿ ಬಲಪಂಥೀಯರು ಈ ದೇಣಿಗೆಗಳನ್ನು ಸಂಗ್ರಹಿಸಿದ್ದಾರೆ. ಅಮೆರಿಕದಲ್ಲಿ ಯೆಹೂದಿ ಬಲಪಂಥೀಯರು ಈವರೆಗೆ ಸಂಗ್ರಹವಾದ ದೇಣಿಗೆಯ ಒಟ್ಟು ಮೊತ್ತ ಎಷ್ಟೆಂದು ತಿಳಿದುಬಂದಿಲ್ಲ. ಆದರೆ ಈ ದೇಣಿಗೆಗಳನ್ನು ಇಸ್ರೇಲಿ ಪ್ರಧಾನಿ ಯಿಝಾಕ್ ರಾಬಿನ್ ಅವರ ಹಂತಕ ಸೇರಿದಂತೆ ಜೈಲು ವಾಸ ಅನುಭವಿಸುತ್ತಿರುವ ಇಸ್ರೇಲಿ ತೀವ್ರವಾದಿಗಳು ಮತ್ತು ಪೆಲೆಸ್ತೀನಿಯರ ವಿರುದ್ಧ ಮಾರಣಾಂತಿಕ ದಾಳಿಗಳನ್ನು ನಡೆಸಿದವರಿಗೆ ನೆರವಾಗಲು ಸಂಗ್ರಹಿಸಲಾಗುತ್ತಿದೆಯೆಂದು ಅಮೆರಿಕದ ನ್ಯೂಜೆರ್ಸಿಯಲ್ಲಿ ಅಸೋಸಿಯೇಟೆಡ್ ಪ್ರೆಸ್ ಹಾಗೂ ಶೊಮ್ರಿಮ್ ನಡೆಸಿದ ಕುಟುಕು ಕಾರ್ಯಾಚರಣೆಯು ಬಹಿರಂಗಪಡಿಸಿದೆ.

ಇಸ್ರೇಲ್ನಲ್ಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ನೇತೃತ್ವದಲ್ಲಿ ಕಟ್ಟರ್ ಬಲಪಂಥೀಯ ಸರಕಾರವು ಅಧಿಕಾರಕ್ಕೇರಿರುವ ಬೆನ್ನಲ್ಲೇ ಅಮೆರಿಕದಲ್ಲಿ ಯಹೂದಿ ಬಲಪಂಥೀಯ ಸಂಘಟನೆಗಳು ಸಕ್ರಿಯವಾಗಿರುವುದು ಹೆಚ್ಚು ಮಹತ್ವ ಪಡೆದಿದೆಯೆಂದು ವರದಿ ತಿಳಿಸಿದೆ.

Similar News