ಉಸಿರಾಟ ಸಂಬಂಧಿ ಕಾಯಿಲೆ: ಉತ್ತರ ಕೊರಿಯಾ ರಾಜಧಾನಿಯಲ್ಲಿ ಲಾಕ್ಡೌನ್ ಜಾರಿ

Update: 2023-01-25 17:45 GMT

ಪ್ಯೋಂಗ್ಯಾಂಗ್, ಜ.25: ಗುರುತಿಸಲಾಗದ ಉಸಿರಾಟದ ಕಾಯಿಲೆಯ ಹೆಚ್ಚುತ್ತಿರುವ ಪ್ರಕರಣಗಳಿಂದಾಗಿ ಉತ್ತರ ಕೊರಿಯಾದ ರಾಜಧಾನಿ ಪ್ಯೋಂಗ್ಯಾಂಗ್ನಲ್ಲಿ 5 ದಿನಗಳ ಲಾಕ್ಡೌನ್ಗೆ ಆದೇಶಿಸಲಾಗಿದೆ ಎಂದು ಸರಕಾರದ ಮೂಲಗಳನ್ನು ಉಲ್ಲೇಖಿಸಿ ಎನ್ಕೆ ನ್ಯೂಸ್ ಬುಧವಾರ ವರದಿ ಮಾಡಿದೆ.
ಈ ಆದೇಶದಲ್ಲಿ ಕೋವಿಡ್-19 ಸೋಂಕಿನ ಬಗ್ಗೆ ಉಲ್ಲೇಖಿಸಿಲ್ಲ. ಆದರೆ , ನಗರದ ಜನತೆ ರವಿವಾರ ಮಧ್ಯರಾತ್ರಿಯವರೆಗೆ ಮನೆಯಲ್ಲೇ ಉಳಿದುಕೊಳ್ಳಬೇಕು ಮತ್ತು ಪ್ರತೀ ದಿನ ತಮ್ಮ ದೇಹದ ಉಷ್ಣಾಂಶದ ತಪಾಸಣೆ ನಡೆಸಿ ಮಾಹಿತಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.

ಈ ಮಧ್ಯೆ, ಪ್ಯೋಂಗ್ಯಾಂಗ್ ನಗರದ ನಿವಾಸಿಗಳು ಕಠಿಣ ನಿರ್ಬಂಧ ಜಾರಿಯ ಸಾಧ್ಯತೆಯನ್ನು ನಿರೀಕ್ಷಿಸಿ ದೈನಂದಿನ ಬಳಕೆಯನ್ನು ಸಂಗ್ರಹಿಸಲು ಧಾವಿಸುತ್ತಿದ್ದಾರೆ ಎಂದು ಸ್ಥಳೀಯ ವೆಬ್ಸೈಟ್ ಮಂಗಳವಾರ ವರದಿ ಮಾಡಿದೆ. ದೇಶದ ಇತರೆಡೆಯೂ ಕ್ರಮೇಣ ಲಾಕ್ಡೌನ್ ಜಾರಿಯಾಗಬಹುದು ಎಂದು ಸ್ಥಳೀಯ ಮಾಧ್ಯಮಗಳ ವರದಿ ಹೇಳಿದೆ. ಜ್ವರ ಸೇರಿದಂತೆ ಉಸಿರಾಟದ ಕಾಯಿಲೆಗಳ ವಿರುದ್ಧ ಹೋರಾಡಲು ಸಾಂಕ್ರಾಮಿಕ ವಿರೋಧಿ ಕ್ರಮಗಳ ಕುರಿತು ಸರಕಾರಿ ಸ್ವಾಮ್ಯದ ಮಾಧ್ಯಮಗಳು ವರದಿ ಮಾಡಿವೆ. ಆದರೆ ಲಾಕ್ಡೌನ್ ಆದೇಶದ ಬಗ್ಗೆ ಇದುವರೆಗೆ ವರದಿ ಮಾಡಿಲ್ಲ.

ದೇಶದಲ್ಲಿ ಕೋವಿಡ್ ಸೋಂಕಿನ ಪ್ರಥಮ ಅಲೆ ಉಲ್ಬಣಿಸಿರುವುದನ್ನು ಕಳೆದ ವರ್ಷ ಉತ್ತರ ಕೊರಿಯಾ ದೃಢೀಕರಿಸಿತ್ತು. ಆದರೆ ಆಗಸ್ಟ್ ತಿಂಗಳ ವೇಳೆಗೆ ಕೋವಿಡ್ ವಿರುದ್ಧ ಗೆಲುವು ಸಾಧಿಸಿರುವುದಾಗಿ ಸರಕಾರ ಘೋಷಿಸಿತ್ತು. ಕೋವಿಡ್ ಸೋಂಕಿತರ ಪ್ರಮಾಣ, ಆಸ್ಪತ್ರೆಗೆ ದಾಖಲಾದವರು,  ಮೃತರ ಸಂಖ್ಯೆಯ ಬಗ್ಗೆ ಯಾವುದೇ ಮಾಹಿತಿಯನ್ನು ಒದಗಿಸಿಲ್ಲ.

Similar News