​ನನ್ನ ಮೇಲೆ ಕ್ಷಿಪಣಿ ದಾಳಿ ನಡೆಸುವುದಾಗಿ ಪುಟಿನ್ ಬೆದರಿಸಿದ್ದರು: ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್

Update: 2023-01-30 16:57 GMT

ಲಂಡನ್, ಜ.30: ಉಕ್ರೇನ್ ಮೇಲೆ ದಾಳಿ ನಡೆಸುವಂತೆ ರಶ್ಯ ಪಡೆಗೆ ಆದೇಶಿಸುವ ಕೆಲ ಕ್ಷಣಗಳ ಮೊದಲು  ರಶ್ಯ ಅಧ್ಯಕ್ಷ ಪುಟಿನ್ ತನ್ನ ಮೇಲೆ ಕ್ಷಿಪಣಿ ದಾಳಿ ನಡೆಸುವ ಬೆದರಿಕೆ ಒಡ್ಡಿದ್ದರು ಎಂದು ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಪ್ರತಿಪಾದಿಸಿದ್ದಾರೆ.

ಫೆಬ್ರವರಿ 24ರಂದು ಉಕ್ರೇನ್ ಮೇಲೆ ರಶ್ಯದ ಆಕ್ರಮಣಕ್ಕೆ ಸ್ವಲ್ಪ ಮೊದಲು ಬೋರಿಸ್ ಜಾನ್ಸನ್ಗೆ ದೂರವಾಣಿ ಕರೆ ಮಾಡಿದ್ದ ಪುಟಿನ್ ಈ ಬೆದರಿಕೆ ಒಡ್ಡಿದ್ದರು ಎಂದು ಬಿಬಿಸಿ ಪ್ರಸಾರ ಮಾಡಲಿರುವ ನೂತನ ಸಾಕ್ಷ್ಯಚಿತ್ರದಲ್ಲಿ ಉಲ್ಲೇಖಿಸಲಾಗಿದೆ. ಬೋರಿಸ್ ಜಾನ್ಸನ್ ಹಾಗೂ ಇತರ ಪಾಶ್ಚಿಮಾತ್ಯ ಮುಖಂಡರು  ಉಕ್ರೇನ್ ದೇಶವನ್ನು ಬೆಂಬಲಿಸುವ ಜತೆಗೆ ರಶ್ಯದ ಆಕ್ರಮಣವನ್ನು ಖಂಡಿಸಿ ಹೇಳಿಕೆ ನೀಡಿದ್ದರಿಂದ ಪುಟಿನ್ ಹತಾಶರಾಗಿದ್ದರು. ದೂರವಾಣಿ ಸಂಭಾಷಣೆಯ ಸಂದರ್ಭ ತಮ್ಮ ಅಸಮಾಧಾನವನ್ನು ಸೂಚಿಸಿದ ಪುಟಿನ್ ಒಂದು ಹಂತದಲ್ಲಿ `ಬೋರಿಸ್, ನಿಮಗೆ ನೋವುಂಟು ಮಾಡಲು ನಾನು ಬಯಸುವುದಿಲ್ಲ. ಆದರೆ ನಿಮ್ಮತ್ತ ಒಂದು ಕ್ಷಿಪಣಿ ಹಾರಿಸಿದರೆ ಒಂದೇ ನಿಮಿಷ ಸಾಕು' ಎಂದಿದ್ದರು.

ಬೋರಿಸ್, ಉಕ್ರೇನ್ ಖಂಡಿತಾ ನೇಟೊದತ್ತ ವಾಲುವುದಿಲ್ಲ ಎಂದು ನೀವು ಹೇಳಿದ್ದು ನೆನಪಿದೆಯೇ? ಈಗೇನು ಹೇಳುತ್ತೀರಿ ಎಂದು ಪ್ರಶ್ನಿಸಿದ್ದ ಪುಟಿನ್ `ಏನೇ ಆದರೂ ಉಕ್ರೇನ್ ನೇಟೋಗೆ ಸೇರ್ಪಡೆಗೊಳ್ಳುವ ಪ್ರಶ್ನೆಯೇ ಇಲ್ಲ. ಇದು ನಿಮಗೆ ನೆನಪಿರಲಿ ಎಂದು ಹೇಳಿರುವುದಾಗಿ ಸಾಕ್ಷ್ಯಚಿತ್ರದಲ್ಲಿ ಉಲ್ಲೇಖಿಸಲಾಗಿದೆ.
ನನ್ನ ಮೇಲೆ ಕ್ಷಿಪಣಿ ದಾಳಿಯ ಬೆದರಿಕೆ ಒಡ್ಡುವಾಗ ಪುಟಿನ್ ಅತ್ಯಂತ ನಿರಾಳವಾಗಿ ಮಾತನಾಡುತ್ತಿದ್ದರು. ಧ್ವನಿಯಲ್ಲಿ ಯಾವುದೇ ಉದ್ವೇಗವಿರಲಿಲ್ಲ ಎಂದೂ ಜಾನ್ಸನ್ ಹೇಳಿದ್ದಾರೆ.

ಉಕ್ರೇನ್ ಮೇಲಿನ ಆಕ್ರಮಣ ಆರಂಭಗೊಳ್ಳುವ ಕೆಲ ದಿನಗಳ ಹಿಂದೆ ಪುಟಿನ್ಗೆ ದೂರವಾಣಿ ಕರೆ ಮಾಡಿದ್ದ ಜಾನ್ಸನ್, ಉಕ್ರೇನ್ ನೇಟೊಗೆ ಸೇರ್ಪಡೆಯಾಗುವ ಸಾಧ್ಯತೆಯಿಲ್ಲ. ಆದ್ದರಿಂದ ಯಾವುದೇ ಸಮಸ್ಯೆಯನ್ನೂ ಮಾತುಕತೆಯ ಮೂಲಕ ಪರಿಹರಿಸಬಹುದು. ಒಂದು ವೇಳೆ ಉಕ್ರೇನ್ ಮೇಲೆ ಆಕ್ರಮಣ ನಡೆಸಿದರೆ ಉಕ್ರೇನ್ ನೇಟೊದ ಸದಸ್ಯನಾಗಲು ಪ್ರೇರೇಪಿಸಿದಂತಾಗುತ್ತದೆ ಎಂದು ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಕರೆ ಮಾಡಿದ್ದ ಪುಟಿನ್, ಕ್ಷಿಪಣಿ ದಾಳಿಯ ಬೆದರಿಕೆ ಒಡ್ಡಿದ್ದಾರೆ ಎಂದು ಬಿಬಿಸಿಯಲ್ಲಿ ಪ್ರಸಾರವಾಗಲಿರುವ ಸಾಕ್ಷ್ಯಚಿತ್ರದಲ್ಲಿ ಹೇಳಲಾಗಿದೆ.

Similar News