ಅಮೆರಿಕ ಭೇಟಿ: ಮೋದಿಗೆ ಬೈಡನ್ ಆಹ್ವಾನ

Update: 2023-02-02 02:46 GMT

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಈ ವರ್ಷದ ಬೇಸಿಗೆಯಲ್ಲಿ ಅಮೆರಿಕಕ್ಕೆ ಅಧಿಕೃತ ಭೇಟಿ ನೀಡುವಂತೆ ಆಹ್ವಾನಿಸಿದ್ದಾರೆ.

ತಾತ್ವಿಕವಾಗಿ ಈ ಆಹ್ವಾನವನ್ನು ಒಪ್ಪಿಕೊಳ್ಳಲಾಗಿದೆ ಹಾಗೂ ಎರಡೂ ದೇಶಗಳ ಮುಖಂಡರಿಗೆ ಅನುಕೂಲಕರವಾದ ದಿನವನ್ನು ನಿಗದಿಪಡಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

ಈ ವರ್ಷ ಜಿ-20ಗೆ ಸಂಬಂಧಿಸಿದ ಸರಣಿ ಕಾರ್ಯಕ್ರಮಗಳನ್ನು ಭಾರತ ಆಯೋಜಿಸುತ್ತಿದ್ದು, ಸೆಪ್ಟೆಂಬರ್‌ನಲ್ಲಿ ನಡೆಯುವ ಜಿ-20 ಶೃಂಗಸಭೆಯಲ್ಲಿ ಬೈಡನ್ ಕೂಡಾ ಪಾಲ್ಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಜೂನ್ ಅಥವಾ ಜುಲೈ ತಿಂಗಳಲ್ಲಿ ಉಭಯ ಗಣ್ಯರಿಗೆ ಅನುಕೂಲವಾಗುವ ಸೂಕ್ತ ದಿನಕ್ಕಾಗಿ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಈ ಸಂದರ್ಭದಲಿ ಅಮೆರಿಕದ ಹವಸ್ ಆಫ್ ರೆಪ್ರೆಸೆಂಟೇಟಿವ್ ಹಗೂ ಸೆನೆಟ್ ಅಧಿವೇಶನ ಈ ಅವಧಿಯಲ್ಲಿ ನಡೆಯಲಿದ್ದು, ಮೋದಿಯವರಿಗೆ ಪೂರ್ವನಿರ್ಧರಿತ ದೇಶೀಯ ಅಥವಾ ಅಂತರರಾಷ್ಟ್ರೀಯ ಕಾರ್ಯಕ್ರಮಗಳು ಇಲ್ಲದಿದ್ದಲ್ಲಿ ಕೆಲ ದಿನಗಳ ಭೇಟಿ ನಿಗದಿಯಾಗುವ ಸಾಧ್ಯತೆ ಇದೆ.

ಅಮೆರಿಕ ಕಾಂಗ್ರೆಸ್‌ನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುವುದು ಹಾಗೂ ಶ್ವೇತಭವನದಲ್ಲಿ ಅಧಿಕೃತ ಔತಣ ಸೇರಿದಂತೆ ಕೆಲ ದಿನಗಳು ಈ ಅಧಿಕೃತ ಭೇಟಿಗೆ ಅಗತ್ಯ ಎಂದು ಹೇಳಲಾಗಿದೆ. ಜಿ-20 ಕಾರ್ಯಕ್ರಮಗಳ ಜತೆಗೆ ವರ್ಷಾಂತ್ಯದಲ್ಲಿ ನಡೆಯುವ ರಾಜ್ಯ ವಿಧಾನಸಭೆಗಳ ಚುನಾವಣೆಗಳ ಪ್ರಚಾರದಲ್ಲೂ ಮೋದಿ ನಿರತರಾಗಬೇಕಿದ್ದು, ಎಡೆಬಿಡದ ಕಾರ್ಯಕ್ರಮಗಳ ನಡುವೆ ಅಮೆರಿಕ ಭೇಟಿಗೆ ದಿನಾಂಕ ಹೊಂದಿಸಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.

Similar News