ಅಫ್ಘಾನ್: ಮಹಿಳೆಯರ ಹಕ್ಕಿನ ಕುರಿತು ಧ್ವನಿ ಎತ್ತಿದ ಪ್ರೊಫೆಸರ್ ಗೆ ಥಳಿತ; ಬಂಧನ

Update: 2023-02-03 17:13 GMT

ಕಾಬೂಲ್, ಫೆ.3:   ಅಫ್ಘಾನಿಸ್ತಾನದಲ್ಲಿ ಮಹಿಳೆಯರಿಗೆ ಉನ್ನತ ಶಿಕ್ಷಣ ನಿಷೇಧಿಸಿದ ತಾಲಿಬಾನ್ ಆದೇಶದ ವಿರುದ್ಧ ಟಿವಿ ವಾಹಿನಿಯ ನೇರಪ್ರಸಾರ ಕಾರ್ಯಕ್ರಮದಲ್ಲಿ ಧ್ವನಿ ಎತ್ತಿದ ಪ್ರೊಫೆಸರ್ರನ್ನು ಥಳಿಸಿ ಬಂಧಿಸಲಾಗಿದೆ ಎಂದು ಅವರ ಆಪ್ತರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಡಿಸೆಂಬರ್ ನಲ್ಲಿ ಟಿವಿ ನೇರಪ್ರಸಾರ ಕಾರ್ಯಕ್ರಮದಲ್ಲಿ ಹಿರಿಯ ಪತ್ರಿಕೋದ್ಯಮ ಉಪನ್ಯಾಸಕ ಇಸ್ಮಾಯಿಲ್ ಮಷಾಲ್ (Ismail mashal) ತನ್ನ ಪದವಿ ಪ್ರಮಾಣ ಪತ್ರವನ್ನು ಹರಿದುಹಾಕುವ ಮೂಲಕ ಮಹಿಳೆಯರಿಗೆ ಉನ್ನತ ಶಿಕ್ಷಣ ನಿಷೇಧಕ್ಕೆ ವಿರೋಧ ಸೂಚಿಸಿದ್ದರು. ಓರ್ವ ವ್ಯಕ್ತಿ ಮತ್ತು ಶಿಕ್ಷಕನಾಗಿ, ಮಹಿಳೆಯರ ಹಕ್ಕುಗಳ ಪ್ರತಿಪಾದನೆಯ ನಿಟ್ಟಿನಲ್ಲಿ ಏನನ್ನೂ ಮಾಡದ ಸ್ಥಿತಿಯಲ್ಲಿದ್ದೇನೆ. ಆದ್ದರಿಂದ ನನ್ನ ಪ್ರಮಾಣಪತ್ರಗಳು ನಿಷ್ಪ್ರಯೋಜಕವಾಗಿವೆ ಎಂದು ಅದನ್ನು ಹರಿದುಹಾಕಿದ್ದೇನೆ. ನನ್ನ ಜೀವಕ್ಕೆ ಸಂಚಕಾರ ಬಂದರೂ ತೊಂದರೆಯಿಲ್ಲ,  ಸಹೋದರಿಯರ ಪರ ಇನ್ನೂ ಧ್ವನಿ ಎತ್ತಲಿದ್ದೇನೆ  ಎಂದು ಇಸ್ಮಾಯಿಲ್ ಹೇಳಿದ್ದರು.

ಇತ್ತೀಚಿನ ದಿನಗಳಲ್ಲಿ ಅವರು ಕಾಬೂಲ್ನ ಸುತ್ತಮುತ್ತ ಸಂಚರಿಸುತ್ತಾ ಮಹಿಳೆಯರಿಗೆ ಹಾಗೂ ಪುರುಷರಿಗೆ ಉಚಿತ ಪುಸ್ತಕ ಹಂಚುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಅವರನ್ನು ನಿರ್ದಯವಾಗಿ ಥಳಿಸಿ ಅತ್ಯಂತ ಅಗೌರವದ ರೀತಿಯಲ್ಲಿ ಬಂಧಿಸಲಾಗಿದ್ದು ಈಗ ಅವರ ಬಗ್ಗೆ ಯಾವುದೇ ಮಾಹಿತಿಯಿಲ್ಲ  ಎಂದು ಇಸ್ಮಾಯಿಲ್ ಅವರ ಆಪ್ತರು ಶುಕ್ರವಾರ ಹೇಳಿದ್ದಾರೆ.

ಶಿಕ್ಷಕ ಇಸ್ಮಾಯಿಲ್ ಮಷಾಲ್ (Ismail mashal) ಕಳೆದ ಕೆಲ ಸಮಯದಿಂದ ವ್ಯವಸ್ಥೆಯ ವಿರುದ್ಧ ಪ್ರಚೋದನಾತ್ಮಕ ಕ್ರಿಯೆಯಲ್ಲಿ ತೊಡಗಿದ್ದರು. ಅವರನ್ನು ವಿಚಾರಣೆಗಾಗಿ ಭದ್ರತಾ ಸಂಸ್ಥೆಗಳು ಕರೆದೊಯ್ದಿವೆ ಎಂದು ಮಾಹಿತಿ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಅಬ್ದುಲ್ ಹಕ್ ಹಮದ್ ಹೇಳಿದ್ದಾರೆ.

ಇದನ್ನು ಓದಿ: ಅಜ್ಜ-ಅಜ್ಜಿಯನ್ನು ಭೇಟಿ ಮಾಡಲು ಇಚ್ಛೆಯಿಲ್ಲದಿದ್ದರೆ...: ಮಕ್ಕಳ ಪರವಾಗಿ ತೀರ್ಪು ನೀಡಿದ ಇಟಲಿ ಕೋರ್ಟ್ ಹೇಳಿದ್ದೇನು?

Similar News