ಚೀನಾದ ಶಂಕಿತ ಬೇಹುಗಾರಿಕೆ ಬಲೂನ್ ಹೊಡೆದುರುಳಿಸಿದ ಅಮೆರಿಕ: ಅಗತ್ಯ ಪ್ರತಿಕ್ರಿಯೆ ನೀಡುವ ಎಚ್ಚರಿಕೆ ನೀಡಿದ ಚೀನಾ

Update: 2023-02-05 07:12 GMT

ಬೀಜಿಂಗ್: ಶನಿವಾರ ಅಟ್ಲಾಂಟಿಕ್ ಕರಾವಳಿ ಪ್ರದೇಶದಲ್ಲಿ ಪೆಂಟಗನ್ ಚೀನಾದ ಶಂಕಿತ ಬೇಹುಗಾರಿಕಾ ಬಲೂನ್ (Chinese spy balloon) ಅನ್ನು ಹೊಡೆದುರುಳಿಸಿರುವ ಕ್ರಮವನ್ನು ಅಮೆರಿಕಾದ ಅಧ್ಯಕ್ಷ ಜೋ ಬೈಡನ್ ಶ್ಲಾಘಿಸಿದ್ದಾರೆ. ಆದರೆ, ಈ ಕುರಿತು ವ್ಯಗ್ರ ಪ್ರತಿಕ್ರಿಯೆ ನೀಡಿರುವ ಚೀನಾ, ಅಮೆರಿಕಾದ ಕ್ರಮಕ್ಕೆ ತನ್ನ ಅತೃಪ್ತಿ ವ್ಯಕ್ತಪಡಿಸಿದ್ದು, ಇದಕ್ಕೆ ಪ್ರತಿಯಾಗಿ ತಾನು ಅಗತ್ಯ ಪ್ರತಿಕ್ರಿಯೆ ನೀಡಲಿದ್ದೇನೆ ಎಂದು ಎಚ್ಚರಿಕೆ ನೀಡಿದೆ ಎಂದು ndtv.com ವರದಿ ಮಾಡಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಪೆಂಟಗನ್ ಅಧಿಕಾರಿಯೊಬ್ಬರು, "ಕಳೆದ ಹಲವಾರು ದಿನಗಳಿಂದ ಉತ್ತರ ಅಮೆರಿಕಾದ ಮೇಲೆ ಹಾರಾಡುತ್ತಿದ್ದ ಶಂಕಿತ ಬೇಹುಗಾರಿಕಾ ಬಲೂನು ಅನ್ನು ದಕ್ಷಿಣ ಕರೋಲಿನಾ ರಾಜ್ಯದ ಆಗ್ನೇಯ ಕರಾವಳಿ ಭಾಗದಲ್ಲಿ ಎಫ್-22 ವಿಮಾನದ ಮೂಲಕ ಕ್ಷಿಪಣಿ ಉಡಾಯಿಸಿ ಪತನಗೊಳಿಸಲಾಯಿತು. ಕ್ಷಿಪಣಿ ಉಡಾಯಿಸಿ ಪತನಗೊಳಿಸಿದ ನಂತರ 47 ಅಡಿ(14 ಮೀ)ಯಷ್ಟು ಆಳದ ನೀರಿಗೆ ಬಿದ್ದಿತು" ಎಂದು ತಿಳಿಸಿದ್ದಾರೆ.

ಈ ಕ್ರಮವನ್ನು "ಅನಿವಾರ್ಯ ಮತ್ತು ಕಾನೂನು ಸಮ್ಮತ"ವೆಂದು ಸಮರ್ಥಿಸಿಕೊಂಡಿರುವ ಅಮೆರಿಕಾ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್, "ಚೀನಾ ನಮ್ಮ ದೇಶದ ಸಾರ್ವಭೌಮತೆಯನ್ನು ಉಲ್ಲಂಘಿಸಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಚೀನಾದ ಈ ನಡೆಯು ಸ್ವೀಕರಾರ್ಹವಲ್ಲ" ಎಂದು ಹೇಳಿದ್ದಾರೆ.

ಶನಿವಾರ ಮಧ್ಯಾಹ್ನ ಕಾರ್ಯಾಚರಣೆಯ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಹಿರಿಯ ರಕ್ಷಣಾ ಅಧಿಕಾರಿಯೊಬ್ಬರು, "ಅಮೆರಿಕಾ ಪ್ರಜೆಗಳ ಸುರಕ್ಷತೆಗೆ ಧಕ್ಕೆಯಾಗದ ರೀತಿಯಲ್ಲಿ ಸೇನಾ ಕಾರ್ಯಾಚರಣೆ ಮೂಲಕ ಬಲೂನನ್ನು ಪತನಗೊಳಿಸಲಾಯಿತು" ಎಂದು ತಿಳಿಸಿದ್ದಾರೆ. ಸಂಬಂಧಿತ ಪ್ರಾಧಿಕಾರಗಳಿಗೆ ಅಮೆರಿಕಾ ಕರಾವಳಿ ವ್ಯಾಪ್ತಿಯಲ್ಲಿ ಪತನಗೊಂಡಿರುವ ಬಲೂನಿನ ಅವಶೇಷಗಳನ್ನು ಸಂಗ್ರಹಿಸಲು ಇನ್ನೂ ಅವಕಾಶ ನೀಡಲಾಗಿದೆ ಎಂದೂ ಅವರು ಹೇಳಿದ್ದಾರೆ.

ಇದನ್ನೂ ಓದಿ: ಪತ್ನಿಯ ತಲೆಗೆ ಹೊಡೆದ ಆರೋಪ: ವಿನೋದ್ ಕಾಂಬ್ಳಿ ವಿರುದ್ಧ ಪ್ರಕರಣ

Similar News