ಟರ್ಕಿ ಭೂಕಂಪ: 96 ಗಂಟೆಗಳ ಕಾಲ ತನ್ನದೇ ಮೂತ್ರ ಕುಡಿದು ಅವಶೇಷಗಳಡಿ ಬದುಕುಳಿದ ಬಾಲಕ

Update: 2023-02-11 17:50 GMT

ಅಂಕಾರ: ಟರ್ಕಿಯ ಭೀಕರ ಭೂಕಂಪದಲ್ಲಿ ಸಿಲುಕಿರುವವರ ರಕ್ಷಣೆ ಕಾರ್ಯಾಚರಣೆ ಇನ್ನೂ ನಡೆಯುತ್ತಲಿದ್ದು, ಹಲವರನ್ನು ರಕ್ಷಿಸಲಾಗುತ್ತಿದೆ. 94‌ ಗಂಟೆಗಳ ಕಾಲ ಅವಶೇಷಗಳಡಿಯಲ್ಲಿ ಸಿಲುಕಿದ್ದ ಅದ್ನಾನ್ ಮುಹಮ್ಮದ್ ಕೊರ್ಕುಟ್(Adnan Muhammet Korkut) ಎಂಬ 17 ವರ್ಷದ ಬಾಲಕನನ್ನು ರಕ್ಷಣಾ ತಂಡಗಳು ರಕ್ಷಿಸಿದ್ದು, ಆತನ ಕರುಣಾಜನಕ ಕತೆಯನ್ನು ಮಾಧ್ಯಮಗಳು ವರದಿ ಮಾಡಿದೆ. 

ಸುಮಾರು 94 ಗಂಟೆಗಳ ಕಾಲ ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿದ್ದ ಆತ ತನ್ನ ಕುಟುಂಬದ ಮನೆಯಲ್ಲಿ ನಿದ್ರಿಸುತ್ತಿದ್ದ ವೇಳೆ ಭೂಕಂಪ ಸಂಭವಿಸಿದೆ. ಅವಶೇಷಗಳಡಿಯಲ್ಲಿ ಸಿಲುಕಿದ್ದ ಆತ ತನ್ನ ಸ್ವಂತ ಮೂತ್ರವನ್ನು ಕುಡಿದು ಬದುಕಿದ್ದೇನೆ ಎಂದು ಮಾಧ್ಯಮವೊಂದಕ್ಕೆ ತಿಳಿಸಿದ್ದಾನೆ. 

"ನಿದ್ರೆಗೆ ಜಾರದಿರಲು ನಾನು ಪ್ರತಿ 25 ನಿಮಿಷಗಳಿಗೊಮ್ಮೆ ನನ್ನ ಫೋನ್‌ನಲ್ಲಿ ಅಲಾರಾಂ ಆಗುವಂತೆ ಹೊಂದಿಸಿದ್ದೆ. ಆದರೆ, ಎರಡು ದಿನಗಳ ನಂತರ, ಬ್ಯಾಟರಿ ಖಾಲಿ ಆಗಿ ಫೋನ್‌ ಆಫ್‌ ಆಯಿತು" ಎಂದು ಆತ ಹೇಳಿದ್ದಾನೆ. 

“ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವಾಗ, ನನಗೆ ಧ್ವನಿಗಳು ಕೇಳಿಸುತ್ತಿದ್ದವು, ಆದರೆ ಯಾರಿಗೂ ನನ್ನ ಮಾತು ಕೇಳುತ್ತಿರಲಿಲ್ಲ. ಇದು ತನ್ನನ್ನು ಚಿಂತೆಗೀಡು ಮಾಡುತ್ತಿತ್ತು. ರಕ್ಷಣಾ ಪ್ರಯತ್ನಗಳ ಸಮಯದಲ್ಲಿ ನಾನು ನಜ್ಜುಗುಜ್ಜಾಗಬಹುದೆಂದು ನಾನು ಹೆದರುತ್ತಿದ್ದೆ. ಬಂದು ನನ್ನನ್ನು ರಕ್ಷಿಸಿದ ಜನರಿಗೆ ಧನ್ಯವಾದಗಳು" ಎಂದು ಆತ ಹೇಳಿಕೊಂಡಿದ್ದಾನೆ. 

ಟರ್ಕಿಯ ದಕ್ಷಿಣ ನಗರ ಅಂಟಾಕ್ಯಾದಲ್ಲಿ ಕುಸಿದ ಕಟ್ಟಡದ ಅವಶೇಷಗಳಿಂದ 79 ಗಂಟೆಗಳ ನಂತರ ಅಂಬೆಗಾಲಿಡುವ ಮಗುವೊಂದನ್ನೂ ಸಹ ಗುರುವಾರ ರಕ್ಷಿಸಲಾಗಿದೆ.  

ಸರಣಿ ಭೂಕಂಪಗಳು ಟರ್ಕಿ ಮತ್ತು ಸಿರಿಯಾದಲ್ಲಿ 24,000 ಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆದಿವೆ. ಸುಮಾರು 80,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ರಕ್ಷಣಾ ಪ್ರಯತ್ನಗಳು ಭರದಿಂದ ನಡೆಯುತ್ತಿವೆಯಾದರೂ, ಪ್ರತಿಕೂಲ ಹವಾಮಾನವು ರಕ್ಷಣಾ ಕಾರ್ಯಾಚರಣೆಗೆ ತೊಡಕಾಗುತ್ತಿದೆ.

Similar News