ಭಾರತದಲ್ಲಿ ತೆರಿಗೆ ಸಮೀಕ್ಷೆಗಳ ಬೆನ್ನಲ್ಲೇ ಬಿಬಿಸಿಯ ಸಂಪಾದಕೀಯ ಸ್ವಾತಂತ್ರ್ಯದ ಬೆಂಬಲಕ್ಕೆ ನಿಂತ ಬ್ರಿಟಿಷ್‌ ಸರ್ಕಾರ

Update: 2023-02-22 08:26 GMT

 ಲಂಡನ್‌ : ಬಿಬಿಸಿ ಮಾಧ್ಯಮ ಸಂಸ್ಥೆಯ ಹೊಸದಿಲ್ಲಿ ಮತ್ತು ಮುಂಬೈ ಕಚೇರಿಗಳಲ್ಲಿ ಭಾರತೀಯ ಐಟಿ ಅಧಿಕಾರಿಗಳು ತೆರಿಗೆ ಸಮೀಕ್ಷೆ ಹೆಸರಿನಲ್ಲಿ ನಡೆಸಿದ ತಪಾಸಣೆಯ ಕೆಲವೇ ದಿನಗಳಲ್ಲಿ ಪ್ರತಿಕ್ರಿಯಿಸಿರುವ ಬ್ರಿಟಿಷ್‌ ವಿದೇಶ ಸಚಿವ ಡೇವಿಡ್‌ ರುಟ್ಲೇ, ಬಿಬಿಸಿ ಗೆ ಸಂಪಾದಕೀಯ ಸ್ವಾತಂತ್ರ್ಯವಿರಬೇಕೆಂದು ಬಯಸಿದ್ದೇವೆ ಎಂದರು.

"ನಾವು ಬಿಬಿಸಿಗೆ ಧನಸಹಾಯ ಒದಗಿಸುತ್ತಿದ್ದೇವೆ. ಬಿಬಿಸಿ ವರ್ಲ್ಡ್‌ ಸರ್ವಿಸ್‌ ಮುಖ್ಯ ಎಂದು ನಮಗೆ ತಿಳಿದಿದೆ. ಬಿಬಿಸಿಗೆ ಸಂಪಾದಕೀಯ ಸ್ವಾತಂತ್ರ್ಯ ಬೇಕೆಂದು ನಾವು ಬಯಸುತ್ತೇವೆ. ಅದು ನಮ್ಮನ್ನು (ಕನ್ಸರ್ವೇಟಿವ್ಸ್) ಅನ್ನು ಟೀಕಿಸುತ್ತದೆ, ಅದು ಲೇಬರ್‌ ಪಾರ್ಟಿಯನ್ನು ಟೀಕಿಸುತ್ತದೆ. ನಾವು  ಬಹಳ ಮುಖ್ಯ ಎಂದು ತಿಳಿಯುವ ಸ್ವಾತಂತ್ರ್ಯ ಬಿಬಿಸಿಗಿದೆ. ಆ ಸ್ವಾತಂತ್ರ್ಯಕ್ಕೆ ಮಹತ್ವವಿದೆ ಹಾಗೂ ಈ ಮಹತ್ವದ ಬಗ್ಗೆ ಭಾರತ ಸರ್ಕಾರ ಸಹಿತ ಜಗತ್ತಿನಾದ್ಯಂತದ ನಮ್ಮ ಸ್ನೇಹಿಕರಿಗೆ ತಿಳಿಸಲು ನಾವು ಬಯಸುತ್ತೇವೆ," ಎಂದು ರುಟ್ಲೇ ಹೇಳಿದ್ದಾರೆ.

ಭಾರತದ ಐಟಿ ಅಧಿಕಾರಿಗಳು ಬಿಬಿಸಿಯ ಭಾರತದ ಕಚೇರಿಗಳಲ್ಲಿ ನಡೆಸಿರುವ ತೆರಿಗೆ ಸಮೀಕ್ಷೆ ಕುರಿತು ಭಾರತದ ಅಧಿಕಾರಿಗಳೊಂದಿಗೆ ಮಾತನಾಡಿದ್ದೇವೆ, ಪರಿಸ್ಥಿತಿ ಅವಲೋಕಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

ಬಿಬಿಸಿ ಕಚೇರಿಯಲ್ಲಿ ನಡೆಸಲಾದ ತೆರಿಗೆ ಸಮೀಕ್ಷೆ ಕಳವಳಕಾರಿ ಎಂದು ಲೇಬರ್‌ ಪಾರ್ಟಿ ಸಂಸದ ಫೇಬಿಯನ್‌ ಹ್ಯಾಮಿಲ್ಟನ್‌ ಹೇಳಿದ್ದಾರೆ.

Similar News