ಹುಳಹುಪ್ಪಟೆ ತಿಂದು, ಮೂತ್ರ ಕುಡಿದು ಅಮೆಝಾನ್ ಅರಣ್ಯದಲ್ಲಿ 31 ದಿನ ಕಳೆದ ವ್ಯಕ್ತಿ!

Update: 2023-03-02 05:53 GMT

ಬೊಲಿವಿಯಾ: ದಟ್ಟ ಅಮೆಝಾನ್ ಅರಣ್ಯದಲ್ಲಿ ದಾರಿ ತಪ್ಪಿ ಒಬ್ಬಂಟಿಯಾಗಿ ಬೇರ್ಪಡೆಯಾದ ವ್ಯಕ್ತಿಯೊಬ್ಬರು 31 ದಿನಗಳ ಕಾಲ ದಟ್ಟ ಅರಣ್ಯದಲ್ಲಿ ಅಲೆದಾಡುತ್ತಾ, ಹುಳ ಹುಪ್ಪಟೆ ತಿಂದು, ಮೂತ್ರ ಕುಡಿದು ಬದುಕಿ ಬಂದಿರುವ ಕುತೂಹಲಕಾರಿ ಪ್ರಕರಣ ಬೆಳಕಿಗೆ ಬಂದಿದೆ.

ಉತ್ತರ ಬೊಲಿವಿಯದಲ್ಲಿ ಜನವರಿ 25ರಂದು ಸ್ನೇಹಿತರ ಜತೆಗೆ ಬೇಟೆಗೆ ತೆರಳಿದ್ದ 30 ವರ್ಷ ವಯಸ್ಸಿನ ಜೋನಾಥನ್ ಅಕೋಸ್ಟಾ ತಮ್ಮ ಗುಂಪಿನಿಂದ ಬೇರ್ಪಟ್ಟಿದ್ದರು ಎಂದು ಬಿಬಿಸಿ ವರದಿ ಮಾಡಿದೆ. ಒಂದು ತಿಂಗಳ ಬಳಿಕ ಪರಿಹಾರ ಮತ್ತು ರಕ್ಷಣಾ ತಂಡ ಇವರನ್ನು ಪತ್ತೆ ಮಾಡಿದೆ.

ಮೂವತ್ತೊಂದು ದಿನಗಳ ಅವಧಿಯಲ್ಲಿ ತಮ್ಮ ಅರಣ್ಯ ವಾಸದ ವೇಳೆ ತಾವು ಎದುರಿಸಿದ ಸಂಕಷ್ಟಗಳನ್ನು ಹಾಗೂ ಜೀವಂತವಾಗಿ ಉಳಿದುಕೊಂಡ ಘಟನೆಯನ್ನು ಜೋನಾಥನ್ ಮೆಲುಕು ಹಾಕಿಕೊಂಡಿದ್ದಾರೆ. ಹುಳ ಹುಪ್ಪಟೆ ಮತ್ತು ಕೀಟಗಳನ್ನು, ಪಪ್ಪಾಯಿದಂಥ ಕಾಡು ಹಣ್ಣುಗಳನ್ನು ತಿಂದು ಬದುಕಿ ಉಳಿದಿದ್ದಾಗಿ ಹೇಳಿಕೊಂಡಿದ್ದಾರೆ.

"ಮಳೆಗಾಗಿ ನಾನು ದೇವರನ್ನು ಪ್ರಾರ್ಥಿಸಿದೆ. ಮಳೆ ಬಾರದಿದ್ದರೆ ನಾನು ಬದುಕಿ ಉಳಿಯುತ್ತಿರಲಿಲ್ಲ" ಎಂದು ವಿವರಿಸಿದರು. ರಬ್ಬರ್ ಬೂಟಿನಲ್ಲಿ ಮಳೆ ನೀರು ಸಂಗ್ರಹಿಸಿ ಕುಡಿದಿದ್ದಾಗಿ ಹೇಳಿರುವ ಅವರು, ನೀರು ಸಿಗದಿದ್ದಾಗ ಸ್ವ ಮೂತ್ರ ಕುಡಿದು ಬದುಕಿ ಉಳಿದೆ ಎಂದು ಹೇಳಿದ್ದಾರೆ.

ಕಾಡುಮೃಗಗಳಿಂದ ಎದುರಾದ ಅಪಾಯವನ್ನು ಕೂಡಾ ವಿವರಿಸಿರುವ ಅವರು ಅಂತಿಮವಾಗಿ 31 ದಿನ ಬಳಿಕ ರಕ್ಷಣಾ ಸಿಬ್ಬಂದಿಯಿಂದ 300 ಮೀಟರ್ ದೂರದಲ್ಲಿ ನೆರವಿಗಾಗಿ ಯಾಚಿಸುತ್ತಿದ್ದಾಗ ಸಿಬ್ಬಂದಿ ನೆರವಿಗೆ ಧಾವಿಸಿದ್ದರು. 31 ದಿನಗಳ ಅವಧಿಯಲ್ಲಿ 17 ಕೆ.ಜಿ. ತೂಕ ಕಳೆದುಕೊಂಡಿರುವ ಜೋನಾಥನ್ ಅವರನ್ನು ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.

Similar News