ಪಾಕಿಸ್ತಾನ: ಇಮ್ರಾನ್ ಬಂಧನಕ್ಕೆ `ಹೈಡ್ರಾಮಾ' ಬರಿಗೈಯಲ್ಲಿ ಮರಳಿದ ಪೊಲೀಸರು

Update: 2023-03-05 17:55 GMT

ಲಾಹೋರ್, ಮಾ.5: ಬಂಧನ ವಾರಾಂಟ್ ಜಾರಿಯಾಗಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‍ ಖಾನ್‍ರನ್ನು ಬಂಧಿಸಲು ಅಧಿಕಾರಿಗಳು ಲಾಹೋರ್‍ನ ನಿವಾಸಕ್ಕೆ ರವಿವಾರ ಆಗಮಿಸಿದ್ದರು. ಆದರೆ ಇಮ್ರಾನ್ ಎಲ್ಲಿದ್ದಾರೆ ಎಂಬುದು ಪತ್ತೆಯಾಗದೆ ವಾಪಾಸು ತೆರಳಿದರು ಎಂದು ಮಾಧ್ಯಮಗಳು ವರದಿ ಮಾಡಿವೆ.

ಆದರೆ ಪೊಲೀಸರು ಮನೆಯಿಂದ ತೆರಳಿದೊಡನೆ ಇಮ್ರಾನ್ ತಮ್ಮ ಮನೆಯೆದುರು ಬೆಂಬಲಿಗರುನ್ನುದ್ದೇಶಿಸಿ ಮಾತನಾಡಿದರು.

ನ್ಯಾಯಾಲಯದ ಆದೇಶದಂತೆ ಇಮ್ರಾನ್‍ರನ್ನು ಬಂಧಿಸಲು  ಇಸ್ಲಮಾಬಾದ್ ಪೊಲೀಸರ ತಂಡವು ಲಾಹೋರ್‍ಗೆ ಆಗಮಿಸಿದೆ. ಪೊಲೀಸ್ ಅಧೀಕ್ಷಕರು ಇಮ್ರಾನ್ ಅವರ ಕೋಣೆಗೆ ಹೋದಾಗ ಇಮ್ರಾನ್ ಅಲ್ಲಿರಲಿಲ್ಲ ಎಂದು ಇಸ್ಲಮಾಬಾದ್ ಪೊಲೀಸರು ಟ್ವೀಟ್ ಮಾಡಿದ್ದಾರೆ. ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ಹಾಜರಾಗಲು ವಿಫಲವಾದ ಬಳಿಕ ಇಮ್ರಾನ್ ಬಂಧನಕ್ಕೆ ವಾರಾಂಟ್ ಜಾರಿಯಾಗಿತ್ತು.

ಈ ಮಧ್ಯೆ, ಇಮ್ರಾನ್ ಬಂಧನವಾಗಬಹುದು ಎಂಬ ವರದಿಯ ಬಳಿಕ ಅವರ ಲಾಹೋರ್ ನಿವಾಸದ ಎದುರು ಸಾವಿರಾರು ಬೆಂಬಲಿಗರು ನೆರೆದಿದ್ದರು. ಪೊಲೀಸರ ತಂಡ ತೆರಳಿದ ಬಳಿಕ ಲಾಹೋರ್‍ನ `ಝಮಾನ್ ಪಾರ್ಕ್' ನಿವಾಸದ ಎದುರು ಬೆಂಬಲಿಗರುನ್ನುದ್ದೇಶಿಸಿ ಇಮ್ರಾನ್‍ಖಾನ್ ಮಾತನಾಡಿದಾಗ ಮನೆಯ ಹೊರಭಾಗದಲ್ಲಿ ಸ್ಥಳೀಯ ಪೊಲೀಸರು ಹಾಜರಿದ್ದರು ಎಂದು ವರದಿಯಾಗಿದೆ. `ಸುಳ್ಳು ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲಾಗಿದ್ದು ಸಮನ್ಸ್ ಜಾರಿಯಾಗಿದೆ. ಈ ಬಗ್ಗೆ ದೇಶ ತಿಳಿದುಕೊಳ್ಳಬೇಕು. ಭ್ರಷ್ಟ ಆಡಳಿತದ ವಿರುದ್ಧ ರಾಷ್ಟ್ರವು ಒಗ್ಗಟ್ಟಿನಿಂದ ನಿಲ್ಲದಿದ್ದರೆ ಅದು ದೇಶಕ್ಕೆ ಕೆಟ್ಟಶಕುನವಾಗಲಿದೆ' ಎಂದು ಇಮ್ರಾನ್ ಹೇಳಿದರು.

ಇಸ್ಲಮಾಬಾದ್ ಪೊಲೀಸರಿಂದ ನೋಟಿಸ್ ಬಂದಿದೆ. ಆದರೆ ನೋಟಿಸ್‍ನಲ್ಲಿ ಇಮ್ರಾನ್ ಬಂಧನದ ಆದೇಶವಿರಲಿಲ್ಲ. ನಮ್ಮ ವಕೀಲರೊಂದಿಗೆ ಸಮಾಲೋಚಿಸಿ ಕಾನೂನು ಕ್ರಮದ ಬಗ್ಗೆ ನಿರ್ಧರಿಸಲಾಗುವುದು  ಎಂದು ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ ಪಕ್ಷದ ಉಪಾಧ್ಯಕ್ಷ ಶಾ ಮಹ್ಮೂದ್ ಖುರೇಶಿ ಹೇಳಿದ್ದಾರೆ.

 ಇದನ್ನು ಓದಿ:  ಪಂಜಾಬ್:‌ ಜೈಲಿನಲ್ಲಿ ಗಾಯಕ ಮೂಸೆವಾಲಾ ಕೊಲೆ ಆರೋಪಿಗಳನ್ನು ಹತ್ಯೆಗೈದು ಸಂಭ್ರಮಿಸುತ್ತಿರುವ ಕೈದಿಗಳ ವಿಡಿಯೋ ವೈರಲ್‌

Similar News