ಇಮ್ರಾನ್ ಬಂಧನ ವಾರಂಟ್ ಅಮಾನತಿಗೆ ಇಸ್ಲಮಾಬಾದ್ ಕೋರ್ಟ್ ನಕಾರ

Update: 2023-03-06 18:27 GMT

ಇಸ್ಲಮಾಬಾದ್, ಮಾ.6: ತೋಷಕಾನಾ ಪ್ರಕರಣದಲ್ಲಿ ತನ್ನ ವಿರುದ್ಧ ಜಾರಿಗೊಂಡಿರುವ ಜಾಮೀನುರಹಿತ ಬಂಧನ ವಾರಂಟನ್ನು ಅಮಾನತುಗೊಳಿಸಲು ಕೋರಿ ಮಾಜಿ ಪ್ರಧಾನಿ ಇಮ್ರಾನ್ಖಾನ್ ಸಲ್ಲಿಸಿದ್ದ ಮನವಿಯನ್ನು ಇಸ್ಲಮಾಬಾದ್ನ ನ್ಯಾಯಾಲಯ ತಿರಸ್ಕರಿಸಿರುವುದಾಗಿ ವರದಿಯಾಗಿದೆ.

ಬಂಧನ ವಾರಾಂಟ್ ಅಮಾನತು ಕೋರಿ ಇಮ್ರಾನ್ಖಾನ್ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆಗೆ ಎತ್ತಿಕೊಂಡ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಜಾಫರ್ ಇಕ್ಬಾಲ್, ಕೋರ್ಟ್ ಕಲಾಪದ ಅಂತ್ಯದಲ್ಲಿ ತೀರ್ಪು ಪ್ರಕಟಿಸಿದರು. ಇಮ್ರಾನ್ ಯಾವತ್ತೂ ನ್ಯಾಯಾಲಯದ ಆದೇಶವನ್ನು ಗೌರವಿಸಿದ್ದಾರೆ. ಅವರು ನ್ಯಾಯಾಲಯದಲ್ಲಿ ಹಾಜರಾಗಲು ಬಯಸುತ್ತಿರುವುದರಿಂದ ಪೊಲೀಸರು ಬಂಧಿಸುವಂತಿಲ್ಲ ಎಂದು ಇಮ್ರಾನ್ರನ್ನು ಪ್ರತಿನಿಧಿಸಿದ್ದ  ವಕೀಲರು ವಾದ ಮಂಡಿಸಿದರು. ಇದಕ್ಕೆ ಉತ್ತರಿಸಿದ ನ್ಯಾಯಾಧೀಶರು, ಬಂಧನ ವಾರಂಟ್ ಅಮಾನತಿಗೆ ಮನವಿಯನ್ನು ಇಮ್ರಾನ್ಖಾನ್ ಇಸ್ಲಮಾಬಾದ್ ಹೈಕೋರ್ಟ್ಗೆ ಸಲ್ಲಿಸಬೇಕಿತ್ತು ಎಂದು ಹೇಳಿದರು.


ಇಮ್ರಾನ್ಖಾನ್ ಲಾಹೋರ್ನಲ್ಲಿನ ತಮ್ಮ ಝಮಾನ್ ಪಾರ್ಕ್ ನಿವಾಸದಲ್ಲಿದ್ದಾರೆ ಮತ್ತು ಯಾವ ರೀತಿ ನ್ಯಾಯಾಲಯದ ಎದುರು ಹಾಜರಾಗಬಹುದು ಎಂಬ ಬಗ್ಗೆ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ. ಇಮ್ರಾನ್ ವಿರುದ್ಧ ಚುನಾವಣಾ ಕಾಯ್ದೆ 2017ರಡಿ ಖಾಸಗಿ ದೂರು ದಾಖಲಾಗಿದ್ದು ಸಾಮಾನ್ಯವಾಗಿ ಖಾಸಗಿ ದೂರನ್ನು ಆಧರಿಸಿ ವಾರಂಟ್ ಜಾರಿಯಾಗುವುದಿಲ್ಲ ಎಂದು ವಕೀಲರು ವಾದಿಸಿದರು. ತೋಷಖಾನಾ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಲು ನಿರಂತರ ವಿಫಲವಾಗಿರುವ ಇಮ್ರಾನ್ಖಾನ್ ವಿರುದ್ಧ ಫೆಬ್ರವರಿ 28ರಂದು ಜಾಮೀನುರಹಿತ ಬಂಧನಕ್ಕೆ ವಾರಂಟ್ ಜಾರಿಯಾಗಿತ್ತು. ಈ ಹಿನ್ನೆಲೆಯಲ್ಲಿ ರವಿವಾರ ಇಸ್ಲಮಾಬಾದ್ ಪೊಲೀಸರು ಇಮ್ರಾನ್ರನ್ನು ಬಂಧಿಸಲು  ಲಾಹೋರ್ನಲ್ಲಿನ ಅವರ ನಿವಾಸಕ್ಕೆ ಆಗಮಿಸಿದ್ದರು. ಆದರೆ ಇಮ್ರಾನ್ರನ್ನು ಪತ್ತೆಹಚ್ಚಲಾಗದೆ ಬರಿಗೈಯಲ್ಲಿ ವಾಪಸಾಗಿದ್ದರು. ಈ ಮಧ್ಯೆ, ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(ಪಿಟಿಐ) ಪಕ್ಷ ಇಮ್ರಾನ್ಗೆ ಬಂಧನದ ನಂತರದ ಜಾಮೀನು ನೀಡಬೇಕೆಂದು ರವಿವಾರ ಲಾಹೋರ್ ಹೈಕೋರ್ಟ್ ಮೊರೆಹೋಗಿತ್ತು. ಆದರೆ ಅರ್ಜಿಯ ಜತೆ ಸಂಪೂರ್ಣ ದಾಖಲೆ ಒದಗಿಸಿಲ್ಲ ಎಂದು ಆಕ್ಷೇಪಿಸಿದ್ದ ಹೈಕೋರ್ಟ್ ರಿಜಿಸ್ಟ್ರಾರ್ ಅರ್ಜಿಯನ್ನು ತಿರಸ್ಕರಿಸಿದ್ದರು.

Similar News