ಹೆಚ್ಚುತ್ತಿರುವ ಹಿರಿಯರ ಜನಸಂಖ್ಯೆ: ನಿವೃತ್ತಿ ವಯಸ್ಸನ್ನು ಹೆಚ್ಚಿಸಲು ಚೀನಾ ಯೋಜನೆ

Update: 2023-03-14 18:08 GMT

ಬೀಜಿಂಗ್, ಮಾ.14: ದೇಶದಲ್ಲಿ ಹಿರಿಯರ ಜನಸಂಖ್ಯೆ ತ್ವರಿತವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚೀನಾವು  ನಿವೃತ್ತಿ ವಯಸ್ಸನ್ನು ಕ್ರಮೇಣವಾಗಿ ಮತ್ತು ಹಂತಹಂತವಾಗಿ  ಹೆಚ್ಚಿಸುವ ಯೋಜನೆಯಲ್ಲಿದೆ ಎಂದು ಮಾನವ ಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಯನ್ನು ಉಲ್ಲೇಖಿಸಿ ‘ಗ್ಲೋಬಲ್ ಟೈಮ್ಸ್’ ವರದಿ ಮಾಡಿದೆ.

60 ಮತ್ತು ಅದಕ್ಕಿಂತ ಹೆಚ್ಚಿನ ಜನರ ಸಮೂಹವು 280 ದಶಲಕ್ಷದಷ್ಟು ಇದ್ದು  2035ರ ವೇಳೆಗೆ 400 ದಶಲಕ್ಷಕ್ಕೂ ಅಧಿಕವಾಗಲಿದೆ (ಅಮೆರಿಕ ಮತ್ತು ಬ್ರಿಟನ್‌ನ ಒಟ್ಟು ಜನಸಂಖ್ಯೆಗೆ ಸಮ) ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗದ ವರದಿ ಹೇಳಿದೆ. 1960ರಲ್ಲಿ ಜೀವಿತಾವಧಿಯು ಸುಮಾರು 44 ವರ್ಷವಿದ್ದರೆ 2021ರಲ್ಲಿ 78 ವರ್ಷಗಳಿಗೆ ಹೆಚ್ಚಿದ್ದು 2050ರ ವೇಳೆಗೆ 80 ವರ್ಷ ಮೀರುವುದಾಗಿ ಅಂದಾಜಿಸಲಾಗಿದೆ.

ನಿವೃತ್ತಿ ವಯಸ್ಸನ್ನು ಹೆಚ್ಚಿಸಲು ಚೀನಾ ‘ಪ್ರಗತಿಪರ, ಹೊಂದಿಕೊಳ್ಳುವ ಮತ್ತು ವಿಶಿಷ್ಟ ಮಾರ್ಗವನ್ನು ರೂಪಿಸಲಿದೆ. ನಿವೃತ್ತಿ ವಯಸ್ಸಿಗೆ ಹತ್ತಿರವಾಗಿರುವ ಜನರ ನಿವೃತ್ತಿಯನ್ನು  ಹಲವು ತಿಂಗಳವರೆಗೆ ವಿಳಂಬಿಸಲಾಗುವುದು. ಯುವಕರು ಕೆಲ ವರ್ಷ ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಈ ಸುಧಾರಣೆಯ ಅತ್ಯಂತ ಮಹತ್ವದ ಲಕ್ಷಣವೆಂದರೆ, ಜನರು ತಮ್ಮ ಸಂದರ್ಭ ಮತ್ತು ಪರಿಸ್ಥಿತಿಗೆ ಅನುಗುಣವಾಗಿ, ಯಾವಾಗ ನಿವೃತ್ತರಾಗಬೇಕು ಎಂದು ಸ್ವಯಂ ಆಯ್ಕೆ ಮಾಡಲು ಅವಕಾಶವಿದೆ ಎಂದು ಚೀನಾದ ಕಾರ್ಮಿಕ ಮತ್ತು ಸಾಮಾಜಿಕ ಭದ್ರತೆ ವಿಜ್ಞಾನ ಅಕಾಡೆಮಿಯ ಅಧ್ಯಕ್ಷ ಜಿನ್ ವೆಗಾಂಗ್ ಹೇಳಿದ್ದಾರೆ.

ನಿವೃತ್ತರಾಗುವವರ ಸಂಖ್ಯೆ ಹೆಚ್ಚುತ್ತಿರುವುದರಿಂದ ಚೀನಾದ 31 ಪ್ರಾಂತೀಯ ಮಟ್ಟದ ಆಡಳಿತಗಳ ಪೈಕಿ 11 ಪ್ರಾಂತಗಳಲ್ಲಿ ಪಿಂಚಣಿ ಪಾವತಿಗೆ ಸಮಸ್ಯೆ ಎದುರಾಗಿದೆ. ವ್ಯವಸ್ಥೆ ಹೀಗೆಯೇ ಮುಂದುವರಿದರೆ 2035ರ ವೇಳೆಗೆ ಪಿಂಚಣಿ ಪಾವತಿ ನಿಧಿ ಬರಿದಾಗಲಿದೆ ಎಂದು ಚೀನಾದ ಅರ್ಥಶಾಸ್ತ್ರಜ್ಞರು ಎಚ್ಚರಿಕೆ ನೀಡಿದ್ದಾರೆ. 

ಈಗ ಚೀನಾದಲ್ಲಿ ಪುರುಷ ಉದ್ಯೋಗಿಗಳಿಗೆ 60 ವರ್ಷ, ಕಚೇರಿಯಲ್ಲಿ ಕೆಲಸ ಮಾಡುವ ಮಹಿಳೆಯರಿಗೆ 55 ವರ್ಷ ಮತ್ತು ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ 50 ವರ್ಷವನ್ನು ನಿವೃತ್ತಿ ವಯಸ್ಸು ಎಂದು ನಿಗದಿಗೊಳಿಸಲಾಗಿದೆ. ನಿವೃತ್ತಿ ವಯಸ್ಸನ್ನು ಬದಲಾಯಿಸುವ ಬಗ್ಗೆ ಚೀನಾ ಇನ್ನೂ ಅಧಿಕೃತವಾಗಿ ಘೋಷಣೆ ಮಾಡಿಲ್ಲ.

Similar News