ಅಮೆರಿಕದಲ್ಲಿ ದ್ವೇಷಾಪರಾಧ ಪ್ರಕರಣ 12% ಏರಿಕೆ: ಎಫ್‌ಬಿಐ ವರದಿ

Update: 2023-03-14 18:16 GMT

ವಾಷಿಂಗ್ಟನ್, ಮಾ.14: ಅಮೆರಿಕದಲ್ಲಿ 2021ರಲ್ಲಿ ದ್ವೇಷಾಪರಾಧ ಪ್ರಕರಣದಲ್ಲಿ ಸುಮಾರು 12%ದಷ್ಟು ಏರಿಕೆಯಾಗಿದ್ದು ಇದರಲ್ಲಿ 64.5ರಷ್ಟು ಸಂತ್ರಸ್ತರು ಜನಾಂಗೀಯ ಅಥವಾ ಪೂರ್ವಗ್ರಹ ದ್ವೇಷಕ್ಕೆ ಗುರಿಯಾಗಿದ್ದಾರೆ  ಎಂದು ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಷನ್(ಎಫ್‌ಬಿಐ) ವರದಿ ಹೇಳಿದೆ.

ರಾಷ್ಟ್ರೀಯವಾಗಿ, 2020ರಲ್ಲಿ 8,120 ದ್ವೇಷಾಪರಾಧ ಪ್ರಕರಣಗಳು ವರದಿಯಾಗಿದ್ದರೆ 2021ರಲ್ಲಿ 9,065 ಪ್ರಕರಣ ವರದಿಯಾಗಿದ್ದು ಇದು 11.6%ದಷ್ಟು ಏರಿಕೆಯಾಗಿದೆ.  ಒಟ್ಟು ಅಪರಾಧ ಪ್ರಕರಣಗಳ 43.2%ದಷ್ಟು ಬೆದರಿಕೆಗೆ ಸಂಬಂಧಿಸಿದೆ. 2021ಕ್ಕೆ ನವೀಕರಿಸಿದ ಮಾಹಿತಿ ಎಲ್ಲಾ ಕಾನೂನುಜಾರಿ ಸಂಸ್ಥೆಯ  ದ್ವೇಷಾಪರಾಧ ಘಟನೆ ವರದಿಯನ್ನು ಒಳಗೊಂಡಿದೆ ಎಂದು ಸೋಮವಾರ ಬಿಡುಗಡೆಯಾದ ತನ್ನ ನವೀಕೃತ ವಾರ್ಷಿಕ ವರದಿಯಲ್ಲಿ  ಎಫ್‌ಬಿಐ ಉಲ್ಲೇಖಿಸಿದೆ.

ನವೀಕೃತ ದ್ವೇಷಾಪರಾಧ ಮಾಹಿತಿ ವರದಿಯು 10,840 ಘಟನೆಗಳು ಹಾಗೂ 12,411 ಸಂಬಂಧಿತ ಅಪರಾಧಗಳನ್ನು ಒಳಗೊಂಡಿದೆ. 64.5%ದಷ್ಟು ಸಂತ್ರಸ್ತರು ಅಪರಾಧಿಗಳ ಜನಾಂಗೀಯತೆ/ ಪೂರ್ವಗ್ರಹ ಪೀಡಿತ ಉದ್ದೇಶಗಳ ಬಲಿಪಶುಗಳಾಗಿದ್ದಾರೆ. 15.9%ದಷ್ಟು ಬಲಿಪಶುಗಳು ಅಪರಾಧಿಗಳ ಲೈಂಗಿಕ ದೃಷ್ಟಿಕೋನದ ಆಸಕ್ತಿಗೆ ಬಲಿಯಾಗಿದ್ದರೆ, 14.1%ದಷ್ಟು ಮಂದಿ ಅಪರಾಧಿಗಳ ಧಾರ್ಮಿಕ ಪೂರ್ವಗ್ರಹಿಕೆಯ ಬಲಿಪಶುಗಳಾಗಿದ್ದಾರೆ . 411 ಸಂತ್ರಸ್ತರನ್ನು ಒಳಗೊಂಡ  ಬಹುಆಯಾಮದ ಪೂರ್ವಗ್ರಹಿಕೆಯ 310 ಘಟನೆಗಳು, 12,411 ಬಲಿಪಶುಗಳನ್ನು ಒಳಗೊಂಡ  ಏಕ ಆಯಾಮದ ಪೂರ್ವಗ್ರಹಿಕೆಯ 10,500 ಪ್ರಕರಣ ವರದಿಯಾಗಿದೆ.

2021ರಲ್ಲಿ ವರದಿಯಾದ 8,327 ಪ್ರಕರಣಗಳನ್ನು ವ್ಯಕ್ತಿಗಳ ವಿರುದ್ಧ ಅಪರಾಧ ಎಂದು ವರ್ಗೀಕರಿಸಲಾಗಿದ್ದು ಇದರಲ್ಲಿ 43.2%ದಷ್ಟು ಬೆದರಿಕೆ, 35.5%ದಷ್ಟು ಹಲ್ಲೆ ಪ್ರಕರಣ, 20.1%ದಷ್ಟು ತೀವ್ರ ಹಲ್ಲೆ ಪ್ರಕರಣಗಳಾಗಿವೆ. ದ್ವೇಷಾಪರಾಧದಡಿ 19 ಅತ್ಯಾಚಾರ ಪ್ರಕರಣ, 18 ಕೊಲೆ ಪ್ರಕರಣ ದಾಖಲಾಗಿದೆ. ಆಸ್ತಿಗಳ ವಿರುದ್ಧದ ಅಪರಾಧ ವಿಭಾಗದಡಿ ದಾಖಲಾದ 3,817 ಪ್ರಕರಣಗಳಲ್ಲಿ 71.2%ದಷ್ಟು ಪ್ರಕರಣಗಳು ವಿನಾಶ/ಹಾನಿ/ವಿಧ್ವಂಸಕ ಪ್ರಕರಣಗಳಾಗಿವೆ. 267 ಪ್ರಕರಣಗಳನ್ನು ಸಮಾಜದ ವಿರುದ್ಧದ ಅಪರಾಧ ವಿಭಾಗದಡಿ ಸೇರಿಸಲಾಗಿದೆ. ಜೂಜು, ವೇಶ್ಯಾವಾಟಿಕೆ, ಮಾದಕವಸ್ತು ಸೇವನೆ ಇತ್ಯಾದಿಗಳಿಗೆ ವಿಧಿಸಿರುವ ನಿಷೇಧವನ್ನು ಉಲ್ಲಂಘಿಸಿ ನಡೆಸುವ ಕೃತ್ಯಗಳು ಈ ವಿಭಾಗದಡಿ ಸೇರಿವೆ ಎಂದು ಎಫ್‌ಬಿಐ ವರದಿ ಹೇಳಿದೆ.

Similar News