ಕರಾಚಿ: ಆಹಾರ ವಿತರಣಾ ಕೇಂದ್ರದಲ್ಲಿ ಕಾಲ್ತುಳಿತ; 11 ಮಂದಿ ಮೃತ್ಯು

Update: 2023-03-31 17:26 GMT

ಕರಾಚಿ, ಮಾ.31: ಪಾಕಿಸ್ತಾನದ ಕರಾಚಿ ನಗರದಲ್ಲಿ ರಮಝಾನ್ ಸಂದರ್ಭದ ಉಚಿತ ಆಹಾರ ವಿತರಣಾ ಕೇಂದ್ರದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 8 ಮಹಿಳೆಯರು ಹಾಗೂ 3 ಮಕ್ಕಳ ಸಹಿತ ಕನಿಷ್ಟ 11 ಮಂದಿ ಮೃತಪಟ್ಟು ಇತರ ಹಲವರು ಗಾಯಗೊಂಡಿರುವುದಾಗಿ ವರದಿಯಾಗಿದೆ.

ಕರಾಚಿಯ ಎಸ್ಐಟಿ ಕೈಗಾರಿಕಾ ಪ್ರದೇಶದಲ್ಲಿ ಖಾಸಗಿ ಸಂಸ್ಥೆಯೊಂದು ಶುಕ್ರವಾರ ಉಚಿತ ಆಹಾರ ವಿತರಣೆ ಹಮ್ಮಿಕೊಂಡಿದ್ದು ಆಹಾರದ ಪೊಟ್ಟಣ ಪಡೆಯಲು ಜನರು ನೂಕುನುಗ್ಗಲು ನಡೆಸಿದಾಗ ಕಾಲ್ತುಳಿತ ಸಂಭವಿಸಿದೆ. 8 ಮಹಿಳೆಯರು ಹಾಗೂ 3 ಮಕ್ಕಳು ಮೃತಪಟ್ಟಿದ್ದು ಹಲವರು ಪ್ರಜ್ಞೆ ಕಳೆದುಕೊಂಡಿದ್ದಾರೆ. ತೀವ್ರ  ಅಸ್ವಸ್ಥಗೊಂಡಿದ್ದ 6 ಮಂದಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಲ್ತುಳಿತ ಸಂಭವಿಸಿದಾಗ ಜನರು ದಿಕ್ಕಾಪಾಲಾಗಿ ಓಡುವಾಗ ಕೆಲವರು ಅಲ್ಲೇ ಹತ್ತಿರದ ನಾಲೆಗೆ ಬಿದ್ದು ಗಾಯಗೊಂಡರು ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ `ಜಿಯೊ ನ್ಯೂಸ್' ವರದಿ ಮಾಡಿದೆ.

ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ, ಸ್ಥಳೀಯ ಸಂಸದ, ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಝರ್ದಾರಿ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಪ್ರಕರಣದ ಬಗ್ಗೆ ವರದಿ ನೀಡುವಂತೆ ಸಿಂಧ್ ಪ್ರಾಂತದ ಮುಖ್ಯಮಂತ್ರಿ ಮುರಾದ್ ಆಲಿ ಶಾ ಕರಾಚಿ ನಗರದ ಕಮಿಷನರ್ಗೆ ಸೂಚಿಸಿದ್ದಾರೆ. 

Similar News