ದೋಷಾರೋಪದ 24 ಗಂಟೆಯಲ್ಲೇ ಟ್ರಂಪ್ 40 ಲಕ್ಷ ಡಾಲರ್ ದೇಣಿಗೆ ಸಂಗ್ರಹ!

Update: 2023-04-01 02:47 GMT

ವಾಷಿಂಗ್ಟನ್: ಅಶ್ಲೀಲ ನಟಿಯೊಬ್ಬರ ಬಾಯಿ ಮುಚ್ಚಿಸಲು ಹಣ ಪಾವತಿಸಿದ ಪ್ರಕರಣದಲ್ಲಿ ಮ್ಯಾನ್‌ಹಟ್ಟನ್ ಗ್ರ್ಯಾಂಡ್ ಜ್ಯೂರಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿರುದ್ಧ ದೋಷಾರೋಪ ಮಾಡಿದ 24 ಗಂಟೆಗಳಲ್ಲೇ 40 ಲಕ್ಷ ಡಾಲರ್ ಮೊತ್ತವನ್ನು ಟ್ರಂಪ್ ಕ್ರೋಢೀಕರಿಸಿದ್ದಾರೆ.

ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿಯಾಗಲು ಸಿದ್ಧತೆ ನಡೆಸಿರುವ ಟ್ರಂಪ್‌ಗೆ ಶೇಕಡ 25ಕ್ಕಿಂತಲೂ ಹೆಚ್ಚು ಮೊತ್ತ ಮೊದಲ ಬಾರಿಯ ದಾನಿಗಳಿಂದ ಬಂದಿರುವುದು ಅಚ್ಚರಿಗೆ ಕಾರಣವಾಗಿದೆ. ಇದು ರಿಪಬ್ಲಿಕನ್ ಪಕ್ಷದ ಪ್ರಾಥಮಿಕ ಸುತ್ತಿನ ಮುಂಚೂಣಿ ಅಭ್ಯರ್ಥಿಯಾಗಿ ಟ್ರಂಪ್ ಅವರ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿದೆ ಎಂದು ಮಾಧ್ಯಮ ಪ್ರಕಟಣೆ ಹೇಳಿದೆ.

"ಅಮೆರಿಕದ ಮಾಜಿ ಅಧ್ಯಕ್ಷರ ವಿರುದ್ಧ ದೋಷಾರೋಪ ಮಾಡಿರುವ ಕ್ರಮ ಮಾಜಿ ಅಧ್ಯಕ್ಷರ ಗೌರವಕ್ಕೆ ಚ್ಯುತಿ ತರುವ, ನಮ್ಮ ನ್ಯಾಯ ವ್ಯವಸ್ಥೆಯನ್ನು ಅಸ್ತ್ರವಾಗಿ ಬಳಸುವ ಕ್ರಮ ಎನ್ನುವುದು ನಂಬಲು ಅಸಾಧ್ಯ ಎನಿಸಿದ ಪ್ರಮಾಣದಲ್ಲಿ ಹರಿದು ಬಂದ ತಳಮಟ್ಟದ ದೇಣಿಗೆಯಿಂದ ದೃಢಪಟ್ಟಿದೆ" ಎಂದು ಪ್ರಚಾರ ಸಮಿತಿ ಹೇಳಿದೆ.

ಕೇವಲ 34 ಡಾಲರ್‌ಗಳ ಸರಾಸರಿ ದೇಣಿಗೆಯೊಂದಿಗೆ 2024 ಅಭಿಯಾನಕ್ಕೆ ಕಠಿಣ ಪರಿಶ್ರಮಿ ದೇಶಪ್ರೇಮಿಗಳ ಸಂಘಟನೆಗಳು ನೆರವಾಗಿರುವುದು ಸ್ಪಷ್ಟ. ಚುನಾವಣೆ ಮೇಲೆ ಪ್ರಭಾವ ಬೀರುವ ಉದ್ದೇಶದ ವಿಶೇಷ ಆಸಕ್ತಿಯ ದಾನಿಗಳಾದ ಕೋಟ್ಯಧಿಪತಿಗಳಿಂದ ಇವರು ಬೇಸತ್ತಿದ್ದಾರೆ ಎಂದು ಪ್ರಕಟಣೆ ಹೇಳಿಕೊಂಡಿದೆ.

ದೋಷಾರೋಪ ಹೊರಿಸಿದ ಕೆಲವೇ ಗಂಟೆಗಳಲ್ಲಿ ಟ್ರಂಪ್ ಅಭಿಯಾನಕ್ಕೆ ಎಲ್ಲ 50 ರಾಜ್ಯಗಳಿಂದ ದೇಣಿಗೆ ಹರಿದು ಬಂದಿದೆ ಎಂದು ಪ್ರಕಟಣೆ ಹೇಳಿದೆ.

Similar News