ಟೆಲ್ಅವೀವ್, ವೆಸ್ಟ್ ಬ್ಯಾಂಕ್ ನಲ್ಲಿ ಮಾರಣಾಂತಿಕ ದಾಳಿಗೆ 3 ಮಂದಿ ಮೃತ್ಯು; ಸೇನೆ ಸಜ್ಜುಗೊಳಿಸಿದ ಇಸ್ರೇಲ್

Update: 2023-04-08 16:56 GMT

ಟೆಲ್ಅವೀವ್, ಎ.8: ವೆಸ್ಟ್ ಬ್ಯಾಂಕ್ ಮತ್ತು ಟೆಲ್ಅವೀವ್ ನಲ್ಲಿ ಶುಕ್ರವಾರ ಪ್ರತ್ಯೇಕ ಘಟನೆಗಳಲ್ಲಿ ಇಟಾಲಿಯನ್ ಪ್ರವಾಸಿ ಸಹಿತ 3 ಮಂದಿ ಮೃತಪಟ್ಟಿದ್ದು ಇಸ್ರೇಲ್-ಫೆಲೆಸ್ತೀನ್ ನಡುವಿನ ಉದ್ವಿಗ್ನತೆ ಹೆಚ್ಚಿರುವಂತೆಯೇ ಪೊಲೀಸ್ ಮತ್ತು ಸೇನೆಯ ಮೀಸಲು ಪಡೆಯನ್ನು ಸಜ್ಜುಗೊಳಿಸುವಂತೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆದೇಶಿಸಿದ್ದಾರೆ.

ಶುಕ್ರವಾರ ಟೆಲ್ಅವೀವ್ ಮತ್ತು ಆಕ್ರಮಿತ ವೆಸ್ಟ್ಬ್ಯಾಂಕ್ ನಲ್ಲಿ ಫೆಲೆಸ್ತೀನೀಯರು ನಡೆಸಿದ ದಾಳಿಯಲ್ಲಿ ಮೂವರು ಮೃತಪಟ್ಟಿದ್ದಾರೆ. ಇಸ್ರೇಲ್ ನ ವಾಣಿಜ್ಯ ಕೇಂದ್ರ ಟೆಲ್ಅವೀವ್ ನಲ್ಲಿ ಪ್ರವಾಸಿಗರ ಗುಂಪಿನ ಮೇಲೆ ಕಾರೊಂದು ನುಗ್ಗಿ 30 ವರ್ಷದ ಇಸ್ರೇಲ್ ಪ್ರಜೆ ಮೃತಪಟ್ಟಿದ್ದು 7 ಬ್ರಿಟನ್ ಪ್ರವಾಸಿಗರು ಗಾಯಗೊಂಡಿದ್ದಾರೆ. ಅಪಘಾತ ಎಸಗಿದ ಕಾರಿನ ಚಾಲಕನನ್ನು ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದು ಆತನನ್ನು ಇಸ್ರೇಲ್ ನಿವಾಸಿ ಫೆಲೆಸ್ತೀನ್ ಪ್ರಜೆ ಎಂದು ಗುರುತಿಸಲಾಗಿದೆ. ದಾಳಿಯನ್ನು ಖಂಡಿಸಿರುವ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ `ತಮ್ಮ ದೇಶ ಇಸ್ರೇಲ್ ಜತೆ ದೃಢವಾಗಿ ನಿಲ್ಲಲಿದೆ' ಎಂದಿದ್ದಾರೆ.

ಆಕ್ರಮಿತ ವೆಸ್ಟ್ಬ್ಯಾಂಕ್ ನ ಜೋರ್ಡಾನ್ ವ್ಯಾಲಿಯ ಇಸ್ರೇಲಿ ವಸಾಹತು ಪ್ರದೇಶದ ಬಳಿ ಇಬ್ಬರು ಬ್ರಿಟಿಷ್-ಇಸ್ರೇಲಿ ಮಹಿಳೆಯರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದ್ದು ಅವರ ತಾಯಿ ಗುಂಡಿನ ದಾಳಿಯಲ್ಲಿ  ಗಾಯಗೊಂಡಿದ್ದಾರೆ. ಈ ದಾಳಿಗೆ ಹಮಾಸ್ ಹೊಣೆ ಎಂದು ಇಸ್ರೇಲ್ ದೂಷಿಸಿದೆ.

ಸಂಯಮ ವಹಿಸುವಂತೆ ಅಂತರಾಷ್ಟ್ರೀಯ ಸಮುದಾಯದ ಮನವಿಯ ಹೊರತಾಗಿಯೂ, ಬುಧವಾರ ಅಲ್-ಅಕ್ಸಾ ಮಸೀದಿಯ ಆವರಣದಲ್ಲಿ ಇಸ್ರೇಲಿ ಪೊಲೀಸರು ಫೆಲೆಸ್ತೀನೀಯರ ಜತೆ ಘರ್ಷಣೆ ನಡೆಸಿದ ನಂತರ ಹಿಂಸಾಚಾರ ಭುಗಿಲೆದ್ದಿದೆ.

ಶುಕ್ರವಾರ ಬೆಳಗ್ಗೆ ಇಸ್ರೇಲ್ ಪಡೆ ನಡೆಸಿದ್ದ ವಾಯುದಾಳಿಯಲ್ಲಿ  ದಕ್ಷಿಣ ಲೆಬನಾನ್ ನಲ್ಲಿ ಹಮಾಸ್ ಉಗ್ರ ಸಂಘಟನೆಯ ನೆಲೆಗಳಿಗೆ ಹಾನಿಯಾಗಿದೆ. ಲೆಬನಾನ್ ನ ಟಿಯರೆ ವಲಯದಲ್ಲಿ ಮತ್ತು ಗಾಝಾದಲ್ಲಿ ಸ್ಫೋಟ ಕೇಳಿಬಂದಿದೆ ಎಂದು ಎಎಫ್ಪಿ  ಸುದ್ಧಿಸಂಸ್ಥೆ ವರದಿ ಮಾಡಿದೆ. ಗಾಝಾದಲ್ಲಿ ಹಮಾಸ್ಗೆ ಸೇರಿದ ಎರಡು ಶಸ್ತ್ರಾಸ್ತ್ರ ಉತ್ಪಾದನಾ ಕಾರ್ಖಾನೆಗಳು ಹಾಗೂ ಉಗ್ರರು ಬಳಸುತ್ತಿದ್ದ ಸುರಂಗ ಮಾರ್ಗವನ್ನು ಧ್ವಂಸಗೊಳಿಸಲಾಗಿದೆ ಎಂದು ಇಸ್ರೇಲ್ ಸೇನೆ ಹೇಳಿದೆ. ಎರಡೂ ಕಡೆಯವರು ಗರಿಷ್ಟ ಸಂಯಮ ವಹಿಸುವಂತೆ ವಿಶ್ವಸಂಸ್ಥೆ ಮುಖ್ಯಸ್ಥ ಅಂಟೋನಿಯೊ ಗುಟೆರಸ್ ಆಗ್ರಹಿಸಿದ್ದಾರೆ.

ಯಾವುದೇ ದೇಶದ ಅಮಾಯಕ ಪ್ರಜೆಗಳನ್ನು ಗುರಿಯಾಗಿಸಿ ನಡೆಸುವ ದಾಳಿಯನ್ನು ಸಮರ್ಥಿಸಲಾಗದು ಎಂದು ಅಮೆರಿಕ ಹೇಳಿದ್ದು, ತಾನು ಇಸ್ರೇಲ್ ಜತೆ ದೃಢವಾಗಿ ನಿಲ್ಲುವುದಾಗಿ ಘೋಷಿಸಿದೆ.

ಇಸ್ರೇಲ್ನ ಭದ್ರತೆ ಮತ್ತು ಲೆಬನಾನ್ನ ಸ್ಥಿರತೆ ಹಾಗೂ ಸಾರ್ವಭೌಮತ್ವಕ್ಕೆ ತನ್ನ ಅಚಲ ಬೆಂಬಲವನ್ನು ಫ್ರಾನ್ಸ್ ಪುನರುಚ್ಚರಿಸಿದೆ. ಯೆಹೂದಿ ಆಡಳಿತದ ಆಕ್ರಮಣವನ್ನು ಖಂಡಿಸುವುದಾಗಿ ಇರಾನ್ ಪ್ರತಿಕ್ರಿಯಿಸಿದ್ದರೆ ಶಾಶ್ವತ ಕದನವಿರಾಮ ಜಾರಿಗೆ ರಶ್ಯ ಕರೆ ನೀಡಿದೆ.  

ಖತರ್ ಮಧ್ಯಸ್ಥಿಕೆ

ಉದ್ವಿಗ್ನತೆಯನ್ನು ತಗ್ಗಿಸಲು ಮತ್ತು ಇಸ್ರೇಲ್-ಫೆಲೆಸ್ತೀನೀಯರು ಸಂಯಮ ವಹಿಸುವಂತೆ ಮನವೊಲಿಸಲು ಮಧ್ಯಸ್ಥಿಕೆ ವಹಿಸುವುದಾಗಿ ಖತರ್ ಘೋಷಿಸಿದೆ. ಎರಡೂ ಕಡೆಯವರು ಸಂಯಮ ವಹಿಸುವಂತೆ ಲೆಬನಾನ್ಲ್ಲಿರುವ ವಿಶ್ವಸಂಸ್ಥೆಯ ಮಧ್ಯಂತರ ಪಡೆ(ಯುಎನ್ಐಎಫ್ಐಎಲ್) ಕರೆ ನೀಡಿದೆ.

ಈ ಮಧ್ಯೆ, ಲೆಬನಾನ್ ಕಡೆಯಿಂದ ಇಸ್ರೇಲ್ನ ವಾಯುಪ್ರದೇಶದತ್ತ ಬರುತ್ತಿದ್ದ ಡ್ರೋನ್ ಅನ್ನು ಹೊಡೆದುರುಳಿಸಿರುವುದಾಗಿ ಇಸ್ರೇಲ್ ಸೇನೆ ಹೇಳಿದೆ. ಗಾಝಾ ಸಿಟಿಯಲ್ಲಿನ ಅಲ್-ದೊರಾ ಮಕ್ಕಳ ಆಸ್ಪತ್ರೆಗೆ ಆಂಶಿಕ ಹಾನಿಯಾಗಿದೆ ಎಂದು ಫೆಲೆಸ್ತೀನ್ ಆರೋಗ್ಯ ಇಲಾಖೆ ಹೇಳಿದೆ. ಭಯಾನಕ ಇಸ್ರೇಲ್ ದಾಳಿ ಖಂಡನೀಯ. ಇದರ ಪರಿಣಾಮಗಳಿಗೆ  ಇಸ್ರೇಲ್ ಸಂಪೂರ್ಣ ಹೊಣೆಯಾಗಿದೆ ಎಂದು ಹಮಾಸ್ ಪ್ರತಿಕ್ರಿಯಿಸಿದೆ. ಇಸ್ರೇಲ್ನ ಆಕ್ರಮಣ ಮತ್ತು ವಾಯುದಾಳಿ ನಿಲ್ಲುವವರೆಗೂ ರಾಕೆಟ್ ದಾಳಿ ಮುಂದುವರಿಯಲಿದೆ ಎಂದು ಹಮಾಸ್ ಹೇಳಿರುವುದಾಗಿ ವರದಿಯಾಗಿದೆ.

Similar News