×
Ad

ಗಾಂಜಾ ಕಳ್ಳಸಾಗಣೆ ಆರೋಪ: ಭಾರತೀಯ ಮೂಲದ ವ್ಯಕ್ತಿಯನ್ನು ನೇಣಿಗೇರಿಸಿದ ಸಿಂಗಾಪುರ

Update: 2023-04-26 11:45 IST

ಬ್ಯಾಂಕಾಕ್: ಮರಣ ದಂಡನೆಯನ್ನು ವಿಧಿಸಬಾರದು ಎಂಬ ಪ್ರಮುಖ ಮರಣ ದಂಡನೆ ವಿರೋಧಿ ಹೋರಾಟಗಾರರ ಮನವಿಯನ್ನು ಸರ್ಕಾರವು ನಿರಾಕರಿಸಿದ್ದರಿಂದ ಮಾದಕ ವಸ್ತು ಕಳ್ಳ ಸಾಗಾಣಿಕೆಯಲ್ಲಿ ದೋಷಿಯೆಂದು ಘೋಷಿತನಾಗಿದ್ದ 46 ವರ್ಷದ ಭಾರತೀಯ ಮೂಲದ ವ್ಯಕ್ತಿಯನ್ನು ಬುಧವಾರ ಸಿಂಗಾಪುರದಲ್ಲಿ ನೇಣಿಗೇರಿಸಲಾಗಿದೆ.

ಅಕ್ಟೋಬರ್ 9, 2018ರಂದು ಒಂದು ಕೆಜಿಗೂ ಹೆಚ್ಚು ಗಾಂಜಾವನ್ನು ಕಳ್ಳ ಸಾಗಣೆ ಮಾಡಿದ ಆರೋಪಕ್ಕೆ ಗುರಿಯಾಗಿದ್ದ ತಂಗರಾಜು ಸುಪ್ಪಯ್ಯ ಎಂಬ ವ್ಯಕ್ತಿಗೆ ನ್ಯಾಯಾಲಯವು ಮರಣ ದಂಡನೆ ವಿಧಿಸಿತ್ತು. ಮಾದಕ ದ್ರವ್ಯ ಸೇವನೆ ಹಾಗೂ ಮಾದಕ ದ್ರವ್ಯ ಪತ್ತೆ ಪರೀಕ್ಷೆಗೆ ಒಳಗಾಗಲು ವಿಫಲನಾಗಿದ್ದರಿಂದ 2014ರಲ್ಲಿ ಆತನನ್ನು ಬಂಧಿಸಲಾಗಿತ್ತು.

ಮಂಗಳವಾರ ತಂಗರಾಜುಗೆ ವಿಧಿಸಿರುವ ಮರಣ ದಂಡನೆಯ ಕುರಿತು ತಮ್ಮ ಬ್ಲಾಗ್‌ಸ್ಪಾಟ್‌ನಲ್ಲಿ "ತಂಗರಾಜು ಏಕೆ ಸಾಯಲು ಅರ್ಹನಲ್ಲ?" ಎಂಬ ಪೋಸ್ಟ್ ಮಾಡಿದ್ದ ಬ್ರಿಟಿಷ್ ಕೋಟ್ಯಧಿಪತಿ ರಿಚರ್ಡ್ ಬ್ರಾನ್ಸನ್, "ಸುಪ್ಪಯ್ಯಗೆ ವಿಧಿಸಲಾಗಿರುವ ಶಿಕ್ಷೆಯು ಮಾನದಂಡಗಳಿಗೆ ಅನುಗುಣವಾಗಿಲ್ಲ ಮತ್ತು ಸಿಂಗಾಪುರವು ಮುಗ್ಧ ವ್ಯಕ್ತಿಯನ್ನು ಹತ್ಯೆಗೈಯ್ಯುವುದರಲ್ಲಿದೆ" ಎಂದು ಕಳವಳ ವ್ಯಕ್ತಪಡಿಸಿದ್ದರು.

ಈ ಪೋಸ್ಟ್‌ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಸಿಂಗಾಪುರ ಗೃಹ ವ್ಯವಹಾರಗಳ ಸಚಿವಾಲಯವು, ಮರಣ ದಂಡನೆಗೆ ಸಂಬಂಧಿಸಿದಂತೆ ಬ್ರಾನ್ಸನ್ ಅವರ ಸಿಂಗಾಪುರ ಪ್ರಜೆಗಳ ಕುರಿತ ದೃಷ್ಟಿಕೋನವು ದೇಶದ ನ್ಯಾಯಾಧೀಶರು ಹಾಗೂ ದೇಶದ ಅಪರಾಧ ನ್ಯಾಯ ವ್ಯವಸ್ಥೆಗೆ ಅಗೌರವ ತೋರಿದೆ ಎಂದು ಟೀಕಿಸಿದೆ.

ಬ್ರಾನ್ಸನ್ ಅಲ್ಲದೆ ಸಿಂಗಾಪುರದಲ್ಲಿನ ಯೂರೋಪ್ ಒಕ್ಕೂಟದ ನಿಯೋಗ ಹಾಗೂ ಆಸ್ಟ್ರೇಲಿಯಾದ ಸಂಸದ ಗ್ರಹಾಂ ಪೆರೆಟ್ ಕೂಡಾ ಮರಣ ದಂಡನೆ ಕುರಿತು ಹೇಳಿಕೆ ನೀಡಿದ್ದರು.

ಸೋಮವಾರ ಸಿಂಗಾಪೂರದಲ್ಲಿನ ಯೂರೋಪ್ ಒಕ್ಕೂಟದ ಸದಸ್ಯ ದೇಶಗಳು, ನಾರ್ವೆ ಹಾಗೂ ಸ್ವಿಝರ್ಲೆಂಡ್‌ನ ರಾಯಭಾರಿ ನಿಯೋಗಗಳು ತಂಗರಾಜುಗೆ ವಿಧಿಸಿರುವ ಮರಣ ದಂಡನೆಯನ್ನು ತಡೆ ಹಿಡಿದು, ಅದನ್ನು ಮರಣ ದಂಡನೆಯೇತರ ಶಿಕ್ಷೆಯನ್ನಾಗಿ ಪರಿವರ್ತಿಸಬೇಕು ಎಂದು ಪ್ರಾಧಿಕಾರಗಳನ್ನು ಒತ್ತಾಯಿಸಿದ್ದವು.

ಕಳೆದ ಗುರುವಾರ ಈ ಕುರಿತು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದ ಪೆರೆಟ್, "ತಂಗರಾಜುಗೆ ಮರಣ ದಂಡನೆ ವಿಧಿಸುವ ಯೋಜನೆಯು ಅಂತಾರಾಷ್ಟ್ರೀಯ ಕಾನೂನು ಮಾನದಂಡಗಳ ಉಲ್ಲಂಘನೆಯಾಗಿದೆ" ಎಂದು ಪ್ರತಿಪಾದಿಸಿದ್ದರು ಎಂದು ವರದಿಯಾಗಿದೆ.

ಆದರೆ, ಈ ಆಗ್ರಹಗಳನ್ನು ತಳ್ಳಿ ಹಾಕಿರುವ ಸಿಂಗಾಪುರ ಗೃಹ ವ್ಯವಹಾರಗಳ ಸಚಿವಾಲಯವು, ಮಾದಕ ದ್ರವ್ಯ ಕಳ್ಳ ಸಾಗಣೆ ನಿಭಾವಣೆ ಕುರಿತ ತನ್ನ ಶೂನ್ಯ ಸಹಿಷ್ಣುತೆ ಹಾಗೂ ಬಹು ಮಾದರಿ ದೃಷ್ಟಿಕೋನವನ್ನು ಪುನರುಚ್ಚರಿಸಿದ್ದು, ಈ ನೀತಿಯಲ್ಲಿ ಪುನರ್ವಸತಿ ಕಾರ್ಯಕ್ರಮಗಳೂ ಸೇರಿವೆ ಎಂದು ಸ್ಪಷ್ಟಪಡಿಸಿದೆ.

Similar News