ಜಾತಿ ತಾರತಮ್ಯ ನಿಷೇಧ ಮಸೂದೆಯನ್ನು ಅಂಗೀಕರಿಸಿದ ಕ್ಯಾಲಿಫೋರ್ನಿಯಾ ಸ್ಟೇಟ್ ಸೆನೆಟ್

Update: 2023-05-12 06:20 GMT

ಕ್ಯಾಲಿಫೋರ್ನಿಯಾ: ಚಾರಿತ್ರಿಕ ನಡೆಯೊಂದರಲ್ಲಿ ಕ್ಯಾಲಿಫೋರ್ನಿಯಾ ಸ್ಟೇಟ್ ಸೆನೆಟ್ ಜಾತಿ ತಾರತಮ್ಯ ನಿಷೇಧ ಮಸೂದೆಯನ್ನು ಗುರುವಾರ ಅಂಗೀಕರಿಸಿದೆ ಎಂದು news18.com ವರದಿ ಮಾಡಿದೆ.

ಅಮೆರಿಕಾದಲ್ಲಿರುವ ತಾರತಮ್ಯ ನಿಷೇಧ ಕಾಯ್ದೆಗಳ ಪೈಕಿ ಜಾತಿಯನ್ನು ರಕ್ಷಿತ ಪ್ರವರ್ಗಕ್ಕೆ ಸೇರಿಸಿರುವ SB-403 ಮಸೂದೆಯನ್ನು 34-1 ಮತಗಳ ಅಂತರದಲ್ಲಿ ಅಂಗೀಕರಿಸಿರುವ ಕ್ಯಾಲಿಫೋರ್ನಿಯಾ ಸ್ಟೇಟ್ ಸೆನೆಟ್, ಆ ಮೂಲಕ ಅಮೆರಿಕಾದಲ್ಲಿ ಜಾತಿ ತಾರತಮ್ಯ ನಿಷೇಧ ಕಾಯ್ದೆಯನ್ನು ಅಳವಡಿಸಿಕೊಂಡ ಮೊತ್ತಮೊದಲ ರಾಜ್ಯವಾಗಿದೆ. ಲಾಭರಹಿತ ಸಮಾನತೆ ಪ್ರಯೋಗಾಲಯದ ನೇತೃತ್ವದಲ್ಲಿ ಮಸೂದೆಯನ್ನು ಮಂಡಿಸಿರುವ ಅನುಮೋದಕರ ಪ್ರಕಾರ, ಈ ಮಸೂದೆಯನ್ಮು ಶಾಸನವಾಗಿ ಅಂಗೀಕರಿಸಲು ರಾಜ್ಯಪಾಲರ ಸಹಿಗೆ ರವಾನಿಸುವ ಮುನ್ನ ಇಂತಹುದೇ ಮಸೂದೆಯನ್ನು ಜನ ಪ್ರತಿನಿಧಿಗಳ ರಾಜ್ಯ ಸದನದಲ್ಲಿ ಮಂಡಿಸಲಾಗುವುದು ಎಂದು ತಿಳಿಸಿದ್ದಾರೆ.

ಕ್ಯಾಲಿಫೋರ್ನಿಯಾ ಸೆನೆಟರ್ ಐಶಾ ವಹಾಬ್ SB-403 ಮಸೂದೆಯನ್ನು ಮಂಡಿಸಿದ್ದು, ಈ ಮಸೂದೆಯ ಪ್ರಕಾರ ಜಾತಿಯನ್ನು ಸಂರಕ್ಷಿತ ಪ್ರವರ್ಗವನ್ನಾಗಿ ಈಗಾಗಲೇ ಅಸ್ತಿತ್ವದಲ್ಲಿರುವ ಕಾನೂನಿಗೆ ಸೇರ್ಪಡೆ ಮಾಡಲಾಗುತ್ತದೆ. ಇದರಿಂದ ಕ್ಯಾಲಿಫೋರ್ನಿಯಾ ರಾಜ್ಯದ ಎಲ್ಲ ಜನರೂ ಸಂಪೂರ್ಣ ಹಾಗೂ ಸಮಾನ ವಸತಿ, ಲಾಭಗಳು, ಸೌಲಭ್ಯಗಳು, ಹಕ್ಕುಗಳು ಅಥವಾ ಸೇವೆಗಳನ್ನು ಎಲ್ಲ ಬಗೆಯ ವ್ಯಾವಹಾರಿಕ ಸಂಸ್ಥೆಗಳಲ್ಲಿ ಪಡೆಯಲು ಅರ್ಹರಾಗಿರುತ್ತಾರೆ.

ಜಾತಿ ಪಕ್ಷಪಾತ ಹಾಗೂ ಪೂರ್ವಗ್ರಹದಿಂದ ವ್ಯವಸ್ಥಿತವಾಗಿ ಹಾನಿಗೊಳಗಾಗಿರುವವರಿಗೆ SB-403 ಮಸೂದೆಯು ವಿಶೇಷ ಸುರಕ್ಷತೆ ಒದಗಿಸಲಿದೆ. ಜಾತಿ ತಾರತಮ್ಯ ಹಾಗೂ ಜಾತಿ ಆಧಾರಿತ ಹಿಂಸಾಚಾರದಲ್ಲಿ ಭಾಗಿಯಾಗಿರುವವರಿಗೆ ಅಥವಾ ಅವಕಾಶ ನೀಡಿ, ಅದರ ಹೊಣೆಯಿಂದ ನುಣುಚಿಕೊಳ್ಳುವವರು ಅಥವಾ ವಿಭಜಿಸುವವರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಈ ಮಸೂದೆ ಒಳಗೊಂಡಿದೆ.

ಎಪ್ರಿಲ್ ತಿಂಗಳಲ್ಲಿ ಕ್ಯಾಲಿಫೋರ್ನಿಯಾ ನ್ಯಾಯಾಂಗ ಸಮಿತಿಯು ಸರ್ವಾನುಮತದಿಂದ SB-403 ಮಸೂದೆಗೆ ಅನುಮೋದನೆ ನೀಡಿದ ವಾರಗಳ ನಂತರ ಈ ಮೈಲಿಗಲ್ಲು ಮಸೂದೆ ಅಂಗೀಕಾರಗೊಂಡಿದೆ.

Similar News