ಉಕ್ರೇನ್, ರಶ್ಯಕ್ಕೆ ವಿಶೇಷ ಪ್ರತಿನಿಧಿ ರವಾನೆ: ಚೀನಾ

Update: 2023-05-12 17:34 GMT

ಬೀಜಿಂಗ್, ಮೇ 12: ಉಕ್ರೇನ್ನಲ್ಲಿನ ಯುದ್ಧಕ್ಕೆ ರಾಜಕೀಯ ಇತ್ಯರ್ಥ ಕಂಡುಕೊಳ್ಳುವ ನಿಟ್ಟಿನಲ್ಲಿ ಮಾತುಕತೆಯ ವೇದಿಕೆ ಕಲ್ಪಿಸುವ ಉದ್ದೇಶದಿಂದ ಸೋಮವಾರದಿಂದ ಉಕ್ರೇನ್, ರಶ್ಯ ಮತ್ತು ಇತರ ಯುರೋಪಿಯನ್ ದೇಶಗಳಿಗೆ ವಿಶೇಷ ಪ್ರತಿನಿಧಿಯನ್ನು ರವಾನಿಸುವುದಾಗಿ ಚೀನಾ ಹೇಳಿದೆ.

ಜಾಗತಿಕ ಬಿಕ್ಕಟ್ಟು ನಿವಾರಣೆಯಲ್ಲಿ ಪ್ರಮುಖ ಮಧ್ಯಸ್ಥಿಕೆದಾರನಾಗಿ ತನ್ನನ್ನು ಬಿಂಬಿಸಿಕೊಳ್ಳುತ್ತಿರುವ ಚೀನಾವು ಉಕ್ರೇನ್ ಸಂಘರ್ಷಕ್ಕೆ ಮಾತುಕತೆಯ ಮೂಲಕ ಶಾಂತಿಯುತ ಪರಿಹಾರ ಕಂಡುಕೊಳ್ಳಬೇಕೆಂದು ಆರಂಭದಿಂದಲೂ ಪ್ರತಿಪಾದಿಸುತ್ತಾ ಬಂದಿದೆ ಎಂದು ಚೀನಾದ ವಿದೇಶಾಂಗ ಇಲಾಖೆ ಹೇಳಿದೆ.

ಮೇ 15ರಿಂದ ಚೀನಾದ ವಿಶೇಷ ಪ್ರತಿನಿಧಿ ಲಿ ಹುಯಿ ಉಕ್ರೇನ್, ಪೋಲ್ಯಾಂಡ್, ಫ್ರಾನ್ಸ್, ಜರ್ಮನಿ ಮತ್ತು ರಶ್ಯಕ್ಕೆ ಭೇಟಿ ನೀಡಿ ಉಕ್ರೇನ್ ಬಿಕ್ಕಟ್ಟಿಗೆ ರಾಜಕೀಯ ಇತ್ಯರ್ಥ ಕಂಡುಕೊಳ್ಳುವ ಬಗ್ಗೆ ಎಲ್ಲಾ ಪಕ್ಷಗಳೊಂದಿಗೆ ಸಂವಹನ ನಡೆಸಲಿದ್ದಾರೆ ಎಂದು ಚೀನಾ ವಿದೇಶಾಂಗ ಇಲಾಖೆಯ ವಕ್ತಾರ ವಾಂಗ್ ವೆನ್ಬಿನ್ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ. ನಿರರ್ಗಳವಾಗಿ ರಶ್ಯನ್ ಭಾಷೆ ಮಾತನಾಡುವ ಲಿ ಹುಯಿ, ರಶ್ಯದಲ್ಲಿ ಚೀನಾದ ರಾಯಭಾರಿಯಾಗಿ 10 ವರ್ಷ ಕಾರ್ಯನಿರ್ವಹಿಸಿದ್ದಾರೆ. ಈ ವಾರ ಚೀನಾದ ವಿದೇಶಾಂಗ ಸಚಿವ ಕ್ವಿನ್ ಗಾಂಗ್ ಯುರೋಪ್ಗೆ ಭೇಟಿ ನೀಡಿ ಜರ್ಮನಿ, ಫ್ರಾನ್ಸ್ ಮತ್ತು ನಾರ್ವೆಯ ವಿದೇಶಾಂಗ ಸಚಿವರೊಂದಿಗೆ ಸಭೆ  ನಡೆಸಿದ್ದರು.

ಉಕ್ರೇನ್ ಬಿಕ್ಕಟ್ಟು ಪ್ರಾರಂಭವಾದಂದಿನಿಂದ ಚೀನಾವು ವಸ್ತುನಿಷ್ಟ ಮತ್ತು ನ್ಯಾಯೋಚಿತ ನಿಲುವಿಗೆ ಬದ್ಧವಾಗಿದೆ, ಶಾಂತಿಗಾಗಿ ಮನ ಒಲಿಸುವ ಪ್ರಯತ್ನ ನಡೆಸಿದೆ ಮತ್ತು ಮಾತುಕತೆಯನ್ನು ಬೆಂಬಲಿಸಿದೆ. ಆದರೆ ಉಕ್ರೇನ್ನಲ್ಲಿನ ಪರಿಸ್ಥಿತಿ ಇನ್ನೂ ಉಲ್ಬಣಿಸುತ್ತಲೇ ಇದೆ ಎಂದು ವಾಂಗ್ ವೆನ್ಬಿನ್ ಹೇಳಿದ್ದಾರೆ.

Similar News