ಯುದ್ಧ ನಿಧಿ ಸಂಗ್ರಹಿಸಲು ಉಕ್ರೇನ್ ಅಧ್ಯಕ್ಷರ ಮನೆ ಮಾರಾಟ: ರಶ್ಯ

Update: 2023-05-26 16:41 GMT

ಮಾಸ್ಕೊ, ಮೇ 26: ಉಕ್ರೇನ್ ವಿರುದ್ಧದ ಯುದ್ಧವು ನಿರೀಕ್ಷಿಸಿದ್ದಕ್ಕಿಂತಲೂ ದೀರ್ಘಾವಧಿಗೆ ವಿಸ್ತರಿಸುವುದರಿಂದ ಯುದ್ಧದ ವೆಚ್ಚವನ್ನು ಭರಿಸಲು ಕ್ರಿಮಿಯಾದಲ್ಲಿರುವ ಉಕ್ರೇನ್ ಅಧ್ಯಕ್ಷರ ಅಪಾರ್ಟ್‍ಮೆಂಟ್ ಮಾರಾಟ ಮಾಡಲು ನಿರ್ಧರಿಸಲಾಗಿದೆ ಎಂದು  ರಶ್ಯದ ಉನ್ನತ ಮೂಲಗಳನ್ನು ಉಲ್ಲೇಖಿಸಿ `ದಿ ಟೆಲಿಗ್ರಾಫ್' ವರದಿ ಮಾಡಿದೆ.

ರಜಾದಿನದಲ್ಲಿ ಬಳಸುವ ಉದ್ದೇಶದಿಂದ ಕ್ರಿಮಿಯಾದ ಕರಾವಳಿ ನಗರ ಲಿವಾಡಿಯಾದಲ್ಲಿ 2013ರಲ್ಲಿ ಝೆಲೆನ್‍ಸ್ಕಿ ಕುಟುಂಬ ವಿಶಾಲವಾದ ಅಪಾರ್ಟ್‍ಮೆಂಟ್ ಖರೀದಿಸಿ ಈ ಅಪಾರ್ಟ್‍ಮೆಂಟ್ ಅನ್ನು ನವೀಕರಿಸಿತ್ತು. ಆದರೆ ಆ ಬಳಿಕ ಕ್ರಿಮಿಯಾವು ರಶ್ಯದ  ಸ್ವಾಧೀನಕ್ಕೆ ಬಂದಿದ್ದರಿಂದ ಈ ಅಪಾರ್ಟ್‍ಮೆಂಟ್ ಕಾಲಿಬಿದ್ದಿದೆ. ಈಗ ಈ ಆಸ್ತಿಯ ಮೌಲ್ಯ ಸುಮಾರು 8 ಲಕ್ಷ ಡಾಲರ್(ಸುಮಾರು ಆರೂವರೆ ಕೋಟಿ ರೂಪಾಯಿ)ಗಳಾಗಿದ್ದು ಈ ಅಪಾರ್ಟ್‍ಮೆಂಟ್ ಅನ್ನು ಹರಾಜು ಹಾಕಿ, ಅದರಿಂದ ದೊರಕುವ ಹಣವನ್ನು ಯುದ್ಧದ ವೆಚ್ಚದ ನಿಧಿಗೆ ಜಮೆ ಮಾಡಲಾಗುವುದು ಮತ್ತು ಇದನ್ನು ಯುದ್ಧದ ವೆಚ್ಚ, ಯುದ್ಧದಲ್ಲಿ ಸಾವನ್ನಪ್ಪಿದ ಯೋಧರ ಕುಟುಂಬಕ್ಕೆ ಪರಿಹಾರ ಒದಗಿಸಲು ಬಳಸಲಾಗುವುದು ಎಂದು ರಶ್ಯದ ಮಾಧ್ಯಮಗಳು ವರದಿ ಮಾಡಿವೆ.

ಈ ಹಿಂದೆ ಉಕ್ರೇನ್ ಉದ್ಯಮಿಗಳು ಹಾಗೂ ರಾಜಕಾರಣಿಗಳಿಗೆ ಸೇರಿದ್ದ 57 ಆಸ್ತಿಗಳನ್ನು ಹರಾಜು ಪ್ರಕ್ರಿಯೆಗೆ  ಗುರುತಿಸಲಾಗಿದ್ದು  ಇದರಲ್ಲಿ ಕ್ರಿಮಿಯಾದಲ್ಲಿರುವ ಸಂಸತ್ ಭವನ, ಝೆಲೆನ್‍ಸ್ಕಿ ಪತ್ನಿ ಒಲೆನಾ ಝೆಲೆನ್‍ಸ್ಕ ಹೆಸರಲ್ಲಿರುವ ಅಪಾರ್ಟ್‍ಮೆಂಟ್ ಕೂಡಾ ಸೇರಿದೆ ಎಂದು ಕ್ರಿಮಿಯಾದ ಗವರ್ನರ್ ಸೆರ್ಗೆಯ್ ಅಕ್ಸಿಯೊನೊವ್ ಹೇಳಿದ್ದಾರೆ.

Similar News