ಸುಡಾನ್‍ನಲ್ಲಿ ಪರಿಸ್ಥಿತಿ ಸುಧಾರಣೆ ಸೌದಿ ಅರೆಬಿಯಾ

Update: 2023-05-26 16:58 GMT

ರಿಯಾದ್, ಮೇ 26: ಸುಡಾನ್‍ನಲ್ಲಿ ಮೇ 24ರ ಬಳಿಕ ಪರಿಸ್ಥಿತಿಯಲ್ಲಿ ಸುಧಾರಣೆಯಾಗುತ್ತಿದೆ ಎಂದು ಸೌದಿ ಅರೆಬಿಯಾದ ವಿದೇಶಾಂಗ ಇಲಾಖೆ ಮತ್ತು ಅಮೆರಿಕದ ಜಂಟಿ ಹೇಳಿಕೆ ತಿಳಿಸಿದೆ.

ಸೌದಿ ಮತ್ತು ಅಮೆರಿಕದ ನೇತೃತ್ವದಲ್ಲಿ ನಡೆದ ಮಾತುಕತೆಯ ಬಳಿಕ ಕದನ ವಿರಾಮ ಜಾರಿಗೆ ಸುಡಾನ್‍ನ ಸಶಸ್ತ್ರಪಡೆ ಹಾಗೂ ಅರೆಸೇನಾ ಪಡೆ ಸಮ್ಮತಿಸಿದ್ದವು. ಆದರೆ ಬಳಿಕ ಕದನ ವಿರಾಮ ಉಲ್ಲಂಘನೆಯಾಗಿದ್ದು ಸುಡಾನ್‍ನ ಹಲವೆಡೆ ಘರ್ಷಣೆ ಮುಂದುವರಿದಿದೆ ಎಂದು ವರದಿಯಾಗಿತ್ತು.

ಸುಡಾನ್‍ನಲ್ಲಿ ಕಳೆದ 2 ದಿನಗಳಿಗೆ ಹೋಲಿಸಿದರೆ ಮೇ 24ರಿಂದ ಪರಿಸ್ಥಿತಿಯಲ್ಲಿ ಸುಧಾರಣೆಯಾಗಿರುವುದನ್ನು ಗಮನಿಸಿದ್ದೇವೆ. ಮೇ 25ರಂದು ಮಾನವೀಯ ನೆರವು ವಿತರಣೆಗೆ ಹೆಚ್ಚಿನ ಸಮಸ್ಯೆಯಾಗಿಲ್ಲ ಮತ್ತು ಕದನ ವಿರಾಮವನ್ನು ಎರಡೂ ಕಡೆಯವರು ಗೌರವಿಸಿದ್ದಾರೆ ಎಂದು ಹೇಳಿಕೆ ತಿಳಿಸಿದೆ. ಮೇ 24ರಂದು ಕದನ ವಿರಾಮ ಉಲ್ಲಂಘನೆಯಾದ ಬಗ್ಗೆ ಅಮೆರಿಕ ಮತ್ತು ಸೌದಿ ಅರೆಬಿಯಾದ ಪ್ರತಿನಿಧಿಗಳು ಉಭಯ ಬಣಗಳಿಗೂ ಎಚ್ಚರಿಕೆ ನೀಡಿದ್ದು, ನಾಗರಿಕರ ಜೀವ ರಕ್ಷಣೆ ಎರಡೂ ಕಡೆಯವರ ಜವಾಬ್ದಾರಿಯಾಗಿದೆ. ಕದನ ವಿರಾಮ ಮತ್ತೆ ಉಲ್ಲಂಘನೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಕಠಿಣ ಸಂದೇಶ ರವಾನಿಸಲಾಗಿದೆ ಎಂದು ವರದಿಯಾಗಿದೆ.

Similar News