ಚೀರಾಟ, ರಕ್ತದ ಹೊಳೆ: ಒಡಿಶಾ ರೈಲು ದುರಂತದ ಬಗ್ಗೆ ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?

Update: 2023-06-03 04:27 GMT

ಬಲಸೋರ್: ಇಲ್ಲಿಗ ಸಮೀಪದ ಬಹನಾಗ ಗ್ರಾಮದಲ್ಲಿ ಅಶೋಕ್ ಸಮಾಲ್ ಶುಕ್ರವಾರ ಎಂದಿನಂತೆ ತಮ್ಮ ಅಂಗಡಿ ಮುಚ್ಚುವ ಸಿದ್ಧತೆಯಲ್ಲಿದ್ದಾಗ ಈ ಭೀಕರ ದುರಂತದ ಸುದ್ದಿ ಮುಟ್ಟಿತು. ಕೊಲ್ಕತ್ತಾ- ಚೆನ್ನೈ ಮುಖ್ಯ ರೈಲು ಹಳಿಯಲ್ಲೇ ಓಡುತ್ತಾ ಘಟನಾ ಸ್ಥಳಕ್ಕೆ ಧಾವಿಸಿದಾಗ ಕಂಡು ಬಂದ ದೃಶ್ಯ ಭಯಾನಕ; ರಾಶಿಬಿದ್ದ ಬೋಗಿಗಳು, ಗಾಯಾಳುಗಳ ಆರ್ತನಾದ ಮತ್ತು ಎಲ್ಲೆಂದರಲ್ಲಿ ರಕ್ತದ ಹೊಳೆ.

"ಗಾಯಾಳುಗಳ ಚೀರಾಟ ಮುಗಿಲು ಮುಟ್ಟಿತ್ತು. ಎಲ್ಲೆಲ್ಲೂ ರಕ್ತ ಹರಿಯುತ್ತಿತ್ತು. ಬೋಗಿಗಳ ನಡುವೆ ಸಿಕ್ಕಿಹಾಕಿಕೊಂಡ ನೂರಾರು ಮಂದಿ ನೆರವಿಗಾಗಿ ಮೊರೆ ಇಡುತ್ತಿದ್ದರು. ಬುಡಮೇಲಾದ ಬೋಗಿಗಳ ಒಳಗೆ ನೂರಾರು ಮಂದಿ ಸಿಕ್ಕಿಹಾಕಿಕೊಂಡಿರುವುದು ಕಂಡುಬಂತು" ಎಂದು ಸಮಾಲ್ ವಿವರಿಸಿದ್ದಾರೆ.

ಸಂಜೆ 7ರ ಸುಮಾರಿಗೆ ದುರಂತ ಸಂಭವಿಸಿದ್ದು, ಬೋಗಿಗಳ ನಡುವೆ ಸಿಕ್ಕಿಹಾಕಿಕೊಂಡಿದ್ದ ದೇಹಗಳನ್ನು ಹೊರತೆಗೆಯಲು ಬೋಗಿಗಳನ್ನು ಕತ್ತರಿಸಬೇಕಾಯಿತು. ಕೆಲವರು ತಮ್ಮ ಅದೃಷ್ಟದ ಬಗ್ಗೆ ದೇವರಿಗೆ ಕೃತಜ್ಞತೆ ಹೇಳುತ್ತಿದ್ದು, ಇಂಥವರಲ್ಲಿ ಗೋಬಿಂದ ಮಂಡಲ್ ಕೂಡಾ ಒಬ್ಬರು. ಇವರು ಕೋರಮಂಡಲ ಎಕ್ಸ್‌ಪ್ರೆಸ್ ರೈಲಿನ ಮೊದಲ ಬೋಗಿಯಲ್ಲಿದ್ದರು ಹಾಗೂ ಅಪಾಯದಿಂದ ಪಾರಾಗಿದ್ದರು.

"ಹಠಾತ್ತಾಗಿ ರೈಲು ಡಿಕ್ಕಿ ಹೊಡೆದಾಗ ವೇಗವಾಗಿ ಬೋಗಿಗಳು ಹಳಿತಪ್ಪಿದವು. ನಾನು ಪ್ರಯಾಣಿಸುತ್ತಿದ್ದ ಬೋಗಿ ದೂರಕ್ಕೆ ಎಸೆಯಲ್ಪಟ್ಟಿತು. ನನ್ನ ಆಸನದ ಪಕ್ಕದ ಕಿಟಕಿಯ ಸರಳು ಮುರಿದದ್ದು ಕಂಡುಬಂತು. ಅದನ್ನು ತಳ್ಳಿ ಹೊರಬಂದೆ. ಬೋಗಿಯಲ್ಲಿದ್ದ ಹಲವರನ್ನು ತಕ್ಷಣವೇ ಸ್ಥಳಕ್ಕೆ ಧಾವಿಸಿದ ಸಮಾಲ್‌ನಂಥ ಗ್ರಾಮಸ್ಥರು ರಕ್ಷಿಸಿದರು" ಎಂದು ಎಎನ್‌ಐ ಜತೆ ಮಾತನಾಡಿದ ಅವರು ವಿವರಿಸಿದರು.

ಒಟ್ಟು 15 ಬೋಗಿಗಳು ಉರುಳಿರುವ ದೃಶ್ಯ ಕಾಣಿಸುತ್ತಿದ್ದು, ಕಂಪಾರ್ಟ್‌ಮೆಂಟ್‌ಗಳ ತುದಿಯಲ್ಲಿ ನಿಂತು ಜನ ನೆರವಿಗಾಗಿ ಮೊರೆ ಇಡುತ್ತಿದ್ದಾರೆ. ಮುರಿದ ಕಿಟಕಿಗಳ ಮೂಲಕ ಸ್ಥಳೀಯರು ಬಹುತೇಕ ಮಂದಿಯನ್ನು ರಕ್ಷಿಸಿದ್ದರೆ, ಮುರಿದು ಬಿದ್ದ ಆಸನಗಳ ನಡುವೆ ಇನ್ನೂ ಹಲವು ಮಂದಿ ಸಿಕ್ಕಿಹಾಕಿಕೊಂಡಿದ್ದಾರೆ. ಉದ್ಯೋಗ ಅರಸಿ ಪಶ್ಚಿಮ ಬಂಗಾಳದಿಂದ ದಕ್ಷಿಣ ರಾಜ್ಯಗಳತ್ತು ಹೊರಟಿದ್ದ ಹಲವು ಮಂದಿ ಕೂಲಿ ಕಾರ್ಮಿಕರು ರೈಲಿನಲ್ಲಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

Similar News