ವರ್ಜಿನಿಯಾ: ಲಘುವಿಮಾನದ ಬೆನ್ನಟ್ಟಿದ ಯುದ್ಧವಿಮಾನಗಳು; ಬೆಟ್ಟಕ್ಕೆ ಅಪ್ಪಳಿಸಿದ ಲಘುವಿಮಾನ

Update: 2023-06-05 17:38 GMT

ವಾಷಿಂಗ್ಟನ್: ಅಮೆರಿಕದ ರಾಜಧಾನಿ ವಾಷಿಂಗ್ಟನ್ ಡಿಸಿ ಪ್ರದೇಶದಲ್ಲಿ ವಾಯುಪ್ರದೇಶವನ್ನು ಉಲ್ಲಂಘಿಸಿದ ಸೆಸ್ನಾ ಲಘುವಿಮಾನವನ್ನು ಎಫ್-16 ಯುದ್ಧವಿಮಾನಗಳು ಬೆನ್ನಟ್ಟಿದ್ದು ಬಳಿಕ ಲಘುವಿಮಾನ ವರ್ಜೀನಿಯಾದ ಪರ್ವತಪ್ರದೇಶಕ್ಕೆ ಅಪ್ಪಳಿಸಿದ್ದು ವಿಮಾನದಲ್ಲಿದ್ದ 4 ಮಂದಿಯೂ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ನ್ಯೂಯಾರ್ಕ್ ನತ್ತ ತೆರಳಬೇಕಿದ್ದ ವಿಮಾನ 180 ಡಿಗ್ರಿ ತಿರುಗಿ ವರ್ಜೀನಿಯಾದತ್ತ ಸಂಚರಿಸಿದೆ. ಇದನ್ನು ಅಮೆರಿಕದ ಎಫ್-16 ಜೆಟ್ ವಿಮಾನಗಳು ಸೂಪರ್ಸಾನಿಕ್ ಶಬ್ದದೊಂದಿಗೆ ಬೆನ್ನಟ್ಟಿದವು. ಅಲ್ಲದೆ ಪೈಲಟ್ನೊಂದಿಗೆ ಸಂಪರ್ಕ ಸಾಧಿಸುವ ಪ್ರಯತ್ನವೂ ವಿಫಲವಾಗಿದೆ. ಬಳಿಕ ಸೆಸ್ನಾ ವಿಮಾನ ವರ್ಜೀನಿಯಾದ ಪರ್ವತಕ್ಕೆ ಅಪ್ಪಳಿಸಿ ಪತನಗೊಂಡಿದೆ.  ವಿಮಾನದಲ್ಲಿ ಪೈಲಟ್ ಸೇರಿ 4 ಮಂದಿಯಿದ್ದು ಯಾರೊಬ್ಬರೂ ಬದುಕುಳಿದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸೆಸ್ನಾ ವಿಮಾನ ಫ್ಲೋರಿಡಾದ ‘ಎನ್ಕೋರ್ ಮೋಟರ್ಸ್ ಆಫ್ ಮೆಲ್ಬೋರ್ನ್’ ಸಂಸ್ಥೆಯಲ್ಲಿ ನೋಂದಣಿಗೊಂಡಿದ್ದು, ತನ್ನ ಪುತ್ರಿ, ಮೊಮ್ಮಗು ಮತ್ತು ದಾದಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು ಎಂದು ಎನ್ಕೋರ್ ಮೋಟರ್ಸ್ ನ ಮಾಲಕ ಜಾನ್ ರುಂಪೆಲ್ ಹೇಳಿರುವುದಾಗಿ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

ಟೆನೆಸ್ಸೀ ನಗರದ ವಿಮಾನನಿಲ್ದಾಣದಿಂದ ಟೇಕಾಫ್ ಆಗಿದ್ದ ಸೆಸ್ನಾ ವಿಮಾನ ನ್ಯೂಯಾರ್ಕ್ನ ಲಾಂಗ್ಐಲ್ಯಾಂಡ್ ನ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕಿತ್ತು. ಅಮೆರಿಕದ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ವಿಮಾನ ದುರಂತ ಪ್ರಕರಣದ ಬಗ್ಗೆ ತನಿಖೆ ನಡೆಸಲಿದೆ ಎಂದು ಮೂಲಗಳು ಹೇಳಿವೆ.

Similar News