ಇಂದಿರಾಗಾಂಧಿ ಹತ್ಯೆಯ ಸ್ತಬ್ಧಚಿತ್ರ ದ್ವೇಷಾಪರಾಧವಲ್ಲ: ಕೆನಡಾ

Update: 2023-06-10 17:06 GMT

ಒಟ್ಟಾವ: ಜೂನ್ 4ರಂದು ಕೆನಡಾದ ಗ್ರೇಟರ್ ಟೊರಂಟೊ ಪ್ರದೇಶದಲ್ಲಿ ನಡೆದ ಪರೇಡ್‍ನಲ್ಲಿ ಭಾರತದ ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಹತ್ಯೆಯ ಸ್ತಬ್ಧಚಿತ್ರ ಪ್ರದರ್ಶನ ದ್ವೇಷಾಪರಾಧದ ಪ್ರಕರಣವಲ್ಲ ಎಂದು ಭಾವಿಸುವುದಾಗಿ ಕೆನಡಾದ ಕಾನೂನು ಜಾರಿ ಪ್ರಾಧಿಕಾರ ಹೇಳಿದೆ.

ಘಟನೆ ನಡೆದಿರುವ ಬ್ರಾಂಪ್ಟನ್ ನಗರದ ಮೇಯರ್ ಪ್ಯಾಟ್ರಿಕ್ ಬ್ರೌನ್ ಅವರ ಕಚೇರಿ ಬಿಡುಗಡೆಗೊಳಿಸಿರುವ ಹೇಳಿಕೆಯಲ್ಲಿ `ಇದು ಬ್ರಾಂಪ್ಟನ್ ನಗರಾಡಳಿತದ ಕಾರ್ಯಕ್ರಮವಲ್ಲ. ಈ ಘಟನೆಯ ವೀಡಿಯೊವನ್ನು ಪೊಲೀಸರು ಪರಿಶೀಲಿಸಿದ್ದು ಇದು ದ್ವೇಷಾಪರಾಧವಾಗದು ಎಂಬ ನಿರ್ಧಾರಕ್ಕೆ ಬಂದಿದ್ದಾರೆ' ಎಂದು ಉಲ್ಲೇಖಿಸಲಾಗಿದೆ.

`ಹಕ್ಕು ಮತ್ತು ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಕೆನಡಾ ಕಾಯ್ದೆಯ ಸೆಕ್ಷನ್ 2ರ ಪ್ರಕಾರ ಕೆನಡಿಯನ್ನರಿಗೆ ಚಿಂತನೆ, ನಂಬಿಕೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಖಾತರಿಪಡಿಸಿದ್ದಾರೆ. ಸೆಕ್ಷನ್ 2ಕ್ಕೆ ಯಾವುದೇ ಬದಲಾವಣೆ ಫೆಡರಲ್ ಸರಕಾರದ ಮಟ್ಟದಲ್ಲಿ ನಡೆಯಬೇಕು. ಪೊಲೀಸರು ಕಾನೂನನ್ನು ರಚಿಸುವುದಿಲ್ಲ, ಅವರು ಅದನ್ನು ಜಾರಿಗೊಳಿಸುತ್ತಾರೆ ಅಷ್ಟೇ' ಎಂದು ಹೇಳಿಕೆ ತಿಳಿಸಿದೆ.

ಇಂದಿರಾಗಾಂಧಿ ಹತ್ಯೆಯ ಸ್ತಬ್ಧಚಿತ್ರ ಪ್ರದರ್ಶನದ ಬಗ್ಗೆ ಭಾರತೀಯ-ಕೆನಡಿಯನ್ ಸಂಘಟನೆಗಳೂ ಆಕ್ರೋಶ ವ್ಯಕ್ತಪಡಿಸಿವೆ. ದ್ವೇಷದ ಅಪರಾಧವಲ್ಲದೆ, ಇದು ಸುಮಾರು 2 ದಶಲಕ್ಷದಷ್ಟು ಕಾನೂನು ಪರಿಪಾಲಿಸುವ ಭಾರತೀಯ-ಕೆನಡಿಯನ್ನರ ಮೂಲದೇಶದಲ್ಲಿ ಪ್ರಜಾಸತ್ತಾತ್ಮಕ ರೀತಿಯಲ್ಲಿ ಚುನಾಯಿತರಾದ ನಾಯಕಿಯ ವಿರುದ್ಧದ ಭಯೋತ್ಪಾದನೆ ಕೃತ್ಯದ ಸಂಭ್ರಮಾಚರಣೆಯೂ ಆಗಿದೆ. 

ಇಂತಹ ಕೃತ್ಯಗಳು ಮುಂದುವರಿದರೆ ಜಾಗತಿಕ ವೇದಿಕೆಯಲ್ಲಿ ಕೆನಡಾದ ಪ್ರತಿಷ್ಟೆಗೆ ಕುಂದುಂಟಾಗಲಿದೆ ಮತ್ತು ಕೆನಡಾ-ಭಾರತ ನಡುವಿನ ಸಂಬಂಧ ಸುಧಾರಣೆಯ ಅವಕಾಶದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಕೆನಡಾ-ಇಂಡಿಯಾ ಪ್ರತಿಷ್ಟಾನದ ಅಧ್ಯಕ್ಷ ಸತೀಶ್ ಠಾಕುರ್ ಪ್ರತಿಕ್ರಿಯಿಸಿದ್ದಾರೆ.

Similar News