ಜಾತಿಗಣತಿ: ರಾಜಕೀಯ ಬೇಡ
PC: PTI
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಈ ದೇಶದ ಸಾಮಾಜಿಕ, ಆರ್ಥಿಕ, ರಾಜಕೀಯ ವಲಯಗಳಲ್ಲಿ ಶೋಷಿತ ಸಮುದಾಯಗಳ ಸಬಲೀಕರಣವಾಗಬೇಕಾದರೆ ಜಾತಿಗಣತಿ ಅತ್ಯಗತ್ಯವಾಗಿದೆ. ಹಿಂದೂ ಸಮಾಜದ ಒಗ್ಗಟ್ಟು, ಏಳಿಗೆಯ ಬಗ್ಗೆ ಸದಾ ಭಾಷಣ ಬಿಗಿಯುವ ಬಿಜೆಪಿಯಂತೂ ಈ ಗಣತಿಯ ಬಗ್ಗೆ ವಿಶೇಷ ಆಸಕ್ತಿಯನ್ನು ವಹಿಸಬೇಕಾಗಿತ್ತು. ಯಾಕೆಂದರೆ, ಜಾತಿಗಣತಿಯ ಅಂತಿಮ ಗುರಿಯೇ ಹಿಂದೂ ಸಮಾಜದ ತಳಸ್ತರದಲ್ಲಿರುವ ಶೋಷಿತ ಜಾತಿಗಳನ್ನು ಗುರುತಿಸಿ ಅವುಗಳ ಅಭಿವೃದ್ಧಿಗೆ ಕಾರ್ಯಕ್ರಮವನ್ನು ರೂಪಿಸುವುದು. ಸಾವಿರಾರು ಜಾತಿಗಳ ಸಂಘಟಿತ ರೂಪವೇ ಹಿಂದೂ ಧರ್ಮವಾಗಿರುವುದರಿಂದ, ದುರ್ಬಲ ಜಾತಿಗಳನ್ನು ಮೇಲೆತ್ತುವ ಮೂಲಕ ಹಿಂದೂ ಸಮಾಜವನ್ನು ಮೇಲೆತ್ತಲು ಸಾಧ್ಯ. ಜಾತಿ ಗಣತಿಯ ಅಗತ್ಯವನ್ನು ಹೇಳಿದ್ದು ಸ್ವತಃ ಸುಪ್ರೀಂಕೋರ್ಟ್. ಉನ್ನತ ಶಿಕ್ಷಣದಲ್ಲಿ ಮೀಸಲಾತಿಯ ಬಗ್ಗೆ ವಿಚಾರಣೆಯ ಸಂದರ್ಭದಲ್ಲಿ, ಜಾತಿಗಳ ಕುರಿತಂತೆ ಸರಿಯಾದ ಅಂಕಿಅಂಶಗಳಿರದೇ ಇರುವುದನ್ನು ನ್ಯಾಯಾಲಯ ಉಲ್ಲೇಖಿಸಿತ್ತು. 1931ರಲ್ಲಿ ಬ್ರಿಟಿಷರು ನಡೆಸಿದ ಜಾತಿ ಸಮೀಕ್ಷೆಯನ್ನೇ ಆಧರಿಸಿ ಈ ದೇಶದಲ್ಲಿ ಮೀಸಲಾತಿಯನ್ನು ಹಂಚಲಾಗುತ್ತದೆ. ಅದೇ ಡೇಟಾಗಳ ಸರಾಸರಿಯನ್ನು ಬಳಸಿಕೊಂಡು ಇಂದಿನ ದಿನಗಳಲ್ಲಿ ಹಿಂದುಳಿದ ವರ್ಗಗಳ ಜಾತಿಗಳ ಸ್ಥಿತಿಗತಿಯನ್ನು ಅಳೆಯಲಾಗುತ್ತಿದೆ. ಮೀಸಲಾತಿಯ ತನ್ನ ಉದ್ದೇಶ ವಿಫಲವಾಗಲು ಇದೂ ಒಂದು ಪ್ರಮುಖ ಕಾರಣವಾಗಿದೆ. ಸಂದರ್ಭ ಬಂದಾಗಲೆಲ್ಲ ‘ಇನ್ನೂ ಮೀಸಲಾತಿಯ ಅವಧಿಯನ್ನು ವಿಸ್ತರಿಸುವುದು ಎಷ್ಟು ಸರಿ?’ ‘ದುರ್ಬಲ ಜಾತಿಗಳು ಸಬಲವಾದಾಗ ಮೀಸಲಾತಿಯನ್ನು ನಿಲ್ಲಿಸಬೇಕು’ ಎಂಬಿತ್ಯಾದಿ ಉಪದೇಶಗಳನ್ನು ನೀಡುವ ಜನರು, ಈ ಮೀಸಲಾತಿ ತನ್ನ ಉದ್ದೇಶವನ್ನು ಎಷ್ಟರಮಟ್ಟಿಗೆ ಸಾಧಿಸಿದೆ? ಮೀಸಲಾತಿ ದುರ್ಬಲ ಜಾತಿಗಳನ್ನು ಸಬಲರನ್ನಾಗಿ ಮಾಡಿದೆಯೆ? ಮೀಸಲಾತಿಯ ಲಾಭ ಪಡೆದು ಶೋಷಿತ ಸಮುದಾಯಗಳು ರಾಜಕೀಯವಾಗಿ, ಆರ್ಥಿಕವಾಗಿ ಮೇಲ್‌ಜಾತಿಯಷ್ಟೇ ಪ್ರಾತಿನಿಧ್ಯವನ್ನು ತಮ್ಮದಾಗಿಸಿಕೊಂಡಿದೆಯೆ? ಎನ್ನುವ ಪ್ರಶ್ನೆಗಳಿಗೆೆ ಉತ್ತರಿಸದೆ ಜಾರಿಗೊಳ್ಳುತ್ತಾರೆ. ಕನಿಷ್ಟ ಮೀಸಲಾತಿಯನ್ನು ಪಡೆದ ಜಾತಿಗಳ ಸ್ಥಿತಿಗತಿಯೇನು? ಎನ್ನುವುದನ್ನು ತಿಳಿದುಕೊಳ್ಳಬೇಕಾದರೂ ಜಾತಿ ಆಧಾರದಲ್ಲಿ ಸಮೀಕ್ಷೆ ನಡೆಸುವುದು ಅತ್ಯಗತ್ಯವಾಗಿದೆ. ಆದರೆ ಜಾತಿಗಣತಿಯನ್ನು ಇವರೆಲ್ಲ ಒಳಗೊಳಗೆ ವಿರೋಧಿಸುತ್ತಾ ಬಂದಿದ್ದಾರೆ. ಹೀಗೆ ವಿರೋಧಿಸುವವರಲ್ಲಿ ಬಹುತೇಕರು ಮೇಲ್‌ಜಾತಿಗೆ ಸೇರಿದವರು ಎನ್ನುವುದು ಆಕಸ್ಮಿಕವಲ್ಲ.
ದೇಶಾದ್ಯಂತ ಜಾತಿಗಣತಿ ನಡೆಸುವುದರ ಬಗ್ಗೆ ರಾಜಕೀಯ ನಾಯಕರು ಹೇಳಿಕೆಗಳನ್ನು ನೀಡುತ್ತಾ ಬರುತ್ತಿದ್ದಾರೆಯೇ ಹೊರತು, ಅದು ಅನುಷ್ಠಾನಗೊಳ್ಳುವ ಹೊತ್ತಿಗೆ ಸಾವಿರ ವಿಘ್ನಗಳು ಎದುರಾಗುತ್ತವೆ. ಆರಂಭದಲ್ಲಿ ಜಾತಿಗಣತಿಯನ್ನು ‘ಹಿಂದೂ ಧರ್ಮವನ್ನು ಒಡೆಯಲು ಮಾಡುತ್ತಿರುವ ಸಂಚು’ ಎಂದು ಬಿಜೆಪಿ ಟೀಕಿಸಿತ್ತು. ಬಿಹಾರ, ತೆಲಂಗಾಣ, ಕರ್ನಾಟಕದಲ್ಲಿ ಜಾತಿಗಣತಿ ನಡೆಯುತ್ತಿರುವಾಗ ಬಿಜೆಪಿಯು ಅದನ್ನು ಶತಾಯಗತಾಯ ವಿರೋಧಿಸಿತು. ಅಪಪ್ರಚಾರಗಳನ್ನು ನಡೆಸಿತು. ಬಿಹಾರ ಜಾತಿಗಣತಿಯ ವರದಿಯನ್ನು ಮಂಡಿಸಿದಾಗ, ಸ್ವತಃ ಪ್ರಧಾನಿ ಮೋದಿಯವರೇ ಅದರ ವಿರುದ್ಧ ಹೇಳಿಕೆಗಳನ್ನು ನೀಡಿದರು. ಕೆಲವು ರಾಜಕೀಯ ನಾಯಕರು ನಿಜಕ್ಕೂ ವಿರೋಧಿಸುತ್ತಿರುವುದು ಜಾತಿಗಣತಿಯನ್ನಲ್ಲ, ಬದಲಿಗೆ ಶೋಷಿತ ಸಮುದಾಯಗಳು ಏಳಿಗೆಯಾಗುವುದನ್ನು. ಮೀಸಲಾತಿ ಸೌಲಭ್ಯ ಅರ್ಹರಿಗೆ ತಲುಪಿ ಅವರು ಅಭಿವೃದ್ಧಿಯಾಗುವುದು ಆ ನಾಯಕರಿಗೆ ಇಷ್ಟವಿಲ್ಲ. ಮೇಲ್‌ಜಾತಿಯ ಜನರ ಒತ್ತಡಗಳೇ ಜಾತಿ ಸಮೀಕ್ಷೆಗೆ ಅತಿ ದೊಡ್ಡ ತಡೆಯಾಗಿದೆ. ಇದೀಗ ಬಿಹಾರದಲ್ಲಿ ಚುನಾವಣೆ ಎದುರಾಗುತ್ತಿರುವ ಕಾರಣ, ಜೆಡಿಯು ಜೊತೆಗೆ ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿರುವುದರಿಂದ ಜಾತಿಗಣತಿಯ ಪರವಾಗಿ ಬಿಜೆಪಿ ಮಾತನಾಡತೊಡಗಿದೆ. ಆದರೆ ಆಳದಲ್ಲಿ ಅದು ಜಾತಿಗಣತಿಯ ಬಗ್ಗೆ ಅಸಹನೆಯನ್ನು ಹೊಂದಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇತ್ತೀಚೆಗಷ್ಟೇ ಜನಗಣತಿಯ ಜೊತೆಗೆ ಜಾತಿಗಣತಿಯನ್ನು ಮಾಡುವುದಾಗಿ ಕೇಂದ್ರ ಸರಕಾರ ಹೇಳಿಕೆಯನ್ನು ನೀಡಿದೆ. ಆದರೆ ಇದೀಗ, ಜನಗಣತಿ ಸಂಬಂಧ ಹೊರಡಿಸಿರುವ ಅಧಿಸೂಚನೆಯಲ್ಲಿ ಎಲ್ಲಿಯೂ ಜಾತಿಗಣತಿಯನ್ನು ನಮೂದಿಸಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆೆ. ಅಂದರೆ, ಕೇಂದ್ರ ಸರಕಾರದ ಜಾತಿಗಣತಿ ಬರೇ ಹೇಳಿಕೆಗಷ್ಟೇ ಸೀಮಿತವಾಗಿದೆಯೇ ಎನ್ನುವ ಪ್ರಶ್ನೆ ಎದ್ದಿದೆ.
ತೆಲಂಗಾಣ, ಬಿಹಾರದಲ್ಲಿ ಜಾತಿಗಣತಿ ನಡೆದಿದ್ದು, ಅದರ ವರದಿಯು ಹೊರಬಿದ್ದಿದೆ. ಆದರೆ ಅದರ ಆಧಾರದಲ್ಲಿ ಆರ್ಥಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ರೂಪಿಸುವ ಕೆಲಸಕ್ಕೆ ಇನ್ನೂ ಚಾಲನೆ ದೊರಕಿಲ್ಲ. ಇದೇ ಸಂದರ್ಭದಲ್ಲಿ ಕರ್ನಾಟಕದಲ್ಲಿ ಜಾತಿಗಣತಿಯ ಬಹುದೊಡ್ಡ ಅಣಕ ನಡೆಯುತ್ತಿದೆ. ಹತ್ತು ವರ್ಷಗಳ ಹಿಂದೆಯೇ ಜಾತಿಗಣತಿ ನಡೆದಿದೆಯಾದರೂ, ಅದರ ವರದಿಯನ್ನು ಸ್ವೀಕರಿಸಲು ಸರಕಾರ ಮೀನಾಮೇಷ ಎಣಿಸತೊಡಗಿತು. ಹಿಂದಿನ ಬಿಜೆಪಿ ಮತ್ತು ಜೆಡಿಎಸ್ ನೇತೃತ್ವದ ಸರಕಾರ ಜಾತಿಗಣತಿಯನ್ನು ವಿರೋಧಿಸುತ್ತಾ ಬಂದಿರುವುದರಿಂದ, ಅದನ್ನು ಸ್ವೀಕರಿಸುವುದು ದೂರದ ಮಾತು. ಗಣತಿಗೆ ಆದೇಶ ನೀಡಿದ ಕಾಂಗ್ರೆಸ್ ಸರಕಾರ ಕೂಡ ವರದಿಯನ್ನು ಸ್ವೀಕರಿಸಲು ಹಿಂಜರಿಯಿತು. ಮೇಲ್‌ಜಾತಿಗಳು ಬಹಿರಂಗವಾಗಿಯೇ ಈ ವರದಿಯನ್ನು ವಿರೋಧಿಸುತ್ತಿರುವುದು ಕಾಂಗ್ರೆಸ್ ಸರಕಾ ಕೈ ಕಟ್ಟಿ ಹಾಕಿತು. ‘ಅಕ್ಕಿಯ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ’ ಎನ್ನುವಂತೆ, ಇತ್ತ ಮೇಲ್‌ಜಾತಿಗಳ ವಿರೋಧ ಕಟ್ಟಿಕೊಳ್ಳಲೂ ಧೈರ್ಯವಿಲ್ಲ, ದುರ್ಬಲಜಾತಿಗಳ ಮತಗಳನ್ನು ಕಳೆದುಕೊಳ್ಳಲೂ ಇಷ್ಟವಿಲ್ಲ ಎನ್ನುವ ಸ್ಥಿತಿ ಕಾಂಗ್ರೆಸ್ ಸರಕಾರದ್ದಾಯಿತು. ಆದುದರಿಂದಲೇ ‘ಬೀಸುವ ದೊಣ್ಣೆಯಿಂದ ಪಾರಾದರೆ ನೂರು ವರ್ಷ ಆಯಸ್ಸು’ ಎಂಬಂತೆ, ತಕ್ಷಣಕ್ಕೆ ಜಾತಿ ಗಣತಿ ವರದಿಯ ಬಿಕ್ಕಟ್ಟಿನಿಂದ ಪಾರಾಗುವುದಕ್ಕಾಗಿ ‘ಮರು ಸಮೀಕ್ಷೆ’ಯ ನೆಪವನ್ನು ಮುಂದಿಟ್ಟಿದೆ. ಈಗಿನ ಸಮೀಕ್ಷೆಗೆ ಹತ್ತು ವರ್ಷಗಳಾಗಿರುವುದರಿಂದ ಈ ಮರು ಸಮೀಕ್ಷೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆದರೆ, ‘ಜಾತಿ ಗಣತಿಯ ವರದಿಯ ಬಗ್ಗೆ ಲಿಂಗಾಯತ ಮತ್ತು ಒಕ್ಕಲಿಗರ ವ್ಯಾಪಕ ಆಕ್ರೋಶ’ವೇ ಈ ನಿರ್ಧಾರಕ್ಕೆ ಕಾರಣ ಎನ್ನುವುದು ಸ್ಪಷ್ಟ. ಮರು ಸಮೀಕ್ಷೆ ನಡೆಸಿದರೂ, ಮೇಲ್‌ಜಾತಿಯ ಜನರು ಅಲ್ಲೂ ತಪ್ಪುಗಳನ್ನು ಹುಡುಕುವ ಸಾಧ್ಯತೆಗಳನ್ನು ಅಲ್ಲಗಳೆಯುವ ಹಾಗಿಲ್ಲ. ಆಗ ಸರಕಾರ ಇನ್ನೊಂದು ಹೊಸ ಸಮೀಕ್ಷೆಗೆ ಆದೇಶ ನೀಡುತ್ತದೆಯೇ? ಅಸ್ಪಶ್ಯತೆ, ಜಾತಿ ವ್ಯವಸ್ಥೆ ಇತ್ಯಾದಿಗಳನ್ನು ಬೆಂಬಲಿಸುವ ನಾಯಕರಿಗೆ ಜಾತಿ ಗಣತಿಯ ವರದಿ ಯಾವತ್ತೂ ಪಥ್ಯವಾಗುವುದಿಲ್ಲ. ಶೋಷಿತ ಸಮುದಾಯದ ಪರವಾಗಿರುವ ಯಾವುದೇ ಕಾನೂನನ್ನು ಬಲಾಢ್ಯರ ವಿರೋಧವನ್ನು ಎದುರಿಸುತ್ತಲೇ ಈ ದೇಶದಲ್ಲಿ ಜಾರಿಗೊಳಿಸಲಾಗಿದೆ. ಇಲ್ಲವಾದರೆ ಈ ದೇಶದಲ್ಲಿ ಯಾವುದೇ ಅಸ್ಪಶ್ಯ ವಿರೋಧಿ, ರೈತಪರವಾಗಿರುವ ಕಾನೂನನ್ನು ಜಾರಿಗೊಳಿಸಲು ಆಳುವವರಿಗೆ ಸಾಧ್ಯವಾಗುತ್ತಿರಲಿಲ್ಲ.
ಜಾತಿ ಈ ದೇಶದ ವಾಸ್ತವ. ಜಾತಿಗಣತಿಯನ್ನು ಮಾಡದೆಯೇ ಈ ದೇಶದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ವಾಸ್ತವಗಳನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ. ಬ್ರಿಟಿಷರ ಕಾಲದಲ್ಲಿ ನಡೆದ ಜಾತಿಗಣತಿಯ ಆಧಾರದಲ್ಲಿ ಶೋಷಿತ ಸಮುದಾಯವನ್ನು ಗುರುತಿಸಲು ಮುಂದಾದರೆ, ಅರ್ಹರಿಗೆ ನ್ಯಾಯ ಸಿಗುತ್ತದೆ ಎನ್ನುವಂತಿಲ್ಲ. ಎಲ್ಲ ಸಮುದಾಯಗಳನ್ನು ಅಭಿವೃದ್ಧಿಯ ತೆಕ್ಕೆಗೆ ತೆಗೆದುಕೊಳ್ಳಬೇಕಾದರೆ ಜಾತಿಗಣತಿ ನಡೆಯಲೇಬೇಕು. ಎಲ್ಲ ರಾಜಕೀಯ ಪಕ್ಷಗಳು ಈ ವಿಷಯದಲ್ಲಿ ರಾಜಕೀಯವನ್ನು ಬದಿಗಿಟ್ಟು, ಕಾರ್ಯಪ್ರವೃತ್ತರಾಗಬೇಕಾಗಿದೆ. ಎಲ್ಲ ದುರ್ಬಲ, ಶೋಷಿತ ಸಮುದಾಯಕ್ಕೂ ಸಾಮಾಜಿಕ ನ್ಯಾಯ ದಕ್ಕುವಂತೆ ಮಾಡಲು, ಜಾತಿ ಗಣತಿಯನ್ನು ದೇಶಾದ್ಯಂತ ಒಂದು ಆಂದೋಲನದ ರೀತಿಯಲ್ಲಿ ಹಮ್ಮಿಕೊಳ್ಳಬೇಕು. ಈ ನಿಟ್ಟಿನಲ್ಲಿ ಜಾತಿಗಣತಿಯ ಬಗ್ಗೆ ಕೇಂದ್ರ ಸರಕಾರ ತನ್ನ ಸ್ಪಷ್ಟ ನಿಲುವನ್ನು ಬಹಿರಂಗಪಡಿಸಬೇಕು ಮಾತ್ರವಲ್ಲ, ಕೇಂದ್ರ ಸರಕಾರ ನಡೆಸುವ ಗಣತಿಯು ಹಿಂದುಳಿದ ಜಾತಿಗಳ ಶೈಕ್ಷಣಿಕ, ಸಾಮಾಜಿಕ, ರಾಜಕೀಯ, ಆರ್ಥಿಕ ಸ್ಥಿಗತಿಗಳನ್ನು ಸಮಗ್ರವಾಗಿ ಗುರುತಿಸುವಂತಾಗಬೇಕು.