ಅಂಗೋಲಾ | ಇಂಧನ ಬೆಲೆ ಹೆಚ್ಚಳ ವಿರೋಧಿಸಿ ಪ್ರತಿಭಟನೆ; 22 ಮಂದಿ ಮೃತ್ಯು
PC | X.com
ಲುವಾಂಡಾ, ಆ.1: ದಕ್ಷಿಣ ಆಫ್ರಿಕಾದ ಅಂಗೋಲಾ ರಾಷ್ಟ್ರದಲ್ಲಿ ಇಂಧನ ಬೆಲೆಯಲ್ಲಿ 7 ರೂಪಾಯಿ ಹೆಚ್ಚಳ ಮಾಡಿದ ಸರಕಾರದ ನಿರ್ಧಾರವನ್ನು ಖಂಡಿಸಿ ನಡೆದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ್ದು ಕನಿಷ್ಠ 22 ಮಂದಿ ಸಾವನ್ನಪ್ಪಿದ್ದಾರೆ. 1200ಕ್ಕೂ ಅಧಿಕ ಜನರನ್ನು ಬಂಧಿಸಲಾಗಿದೆ ಎಂದು ಅಧ್ಯಕ್ಷ ಜೊವಾವೊ ಲಾರೆನ್ಸೋ ಅವರ ಕಚೇರಿಯ ಹೇಳಿಕೆ ತಿಳಿಸಿದೆ.
ಪೆಟ್ರೋಲ್ ಬೆಲೆ ಏರಿಕೆಯನ್ನು ವಿರೋಧಿಸಿ ರಾಜಧಾನಿ ಲುವಾಂಡಾದಲ್ಲಿ ಟ್ಯಾಕ್ಸಿ ಚಾಲಕರು ಹಮ್ಮಿಕೊಂಡ ಮುಷ್ಕರ ರಾಷ್ಟ್ರಮಟ್ಟಕ್ಕೆ ವ್ಯಾಪಿಸಿದ್ದು ದೊಂಬಿ, ಲೂಟಿ, ಗಲಭೆ, ಹಿಂಸಾಚಾರ ಉಲ್ಬಣಿಸಿದೆ. ಹಿಂಸಾಚಾರವನ್ನು ನಿಯಂತ್ರಿಸಲು ಪೊಲೀಸರಿಗೆ ಸಮಸ್ಯೆಯಾದ ಬಳಿಕ ಕನಿಷ್ಠ 6 ಪ್ರಾಂತಗಳಲ್ಲಿ ಸೇನೆಯನ್ನು ನಿಯೋಜಿಸಲಾಗಿದೆ. ಅಂಗಡಿಗಳನ್ನು ಬಂದ್ ಮಾಡಿದ್ದು ಅಘೋಷಿತ ಕಫ್ರ್ಯೂ ಜಾರಿಗೊಂಡಿದೆ. ಸರಕಾರದ ಅಂಕಿಅಂಶ ಪ್ರಕಾರ 197 ಜನರು ಗಾಯಗೊಂಡಿದ್ದು 66 ಅಂಗಡಿಗಳನ್ನು ಲೂಟಿ ಮಾಡಲಾಗಿದೆ. ಗಲಭೆ, ಹಿಂಸಾಚಾರದಲ್ಲಿ 22 ಮಂದಿ ಸಾವನ್ನಪ್ಪಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.