ಗಾಝಾದಲ್ಲಿ ಕಳ್ಳತನ, ಲೂಟಿ ಗ್ಯಾಂಗ್‌ಗಳು ಸಕ್ರಿಯ : ನಿರಾಶ್ರಿತರಿಗೆ ತಲುಪದ ನೆರವು ಸಾಮಾಗ್ರಿಗಳು
Photo | REUTERS
ಯುದ್ಧಪೀಡಿತ ಗಾಝಾದಲ್ಲಿ ಕಳ್ಳತನ, ಲೂಟಿ ಗ್ಯಾಂಗ್ ಗಳು ಸಕ್ರಿಯವಾಗಿದೆ. ಹಸಿವಿನಿಂದ ಕಂಗೆಟ್ಟ ಜನರಿಗೆ ಮಾನವೀಯ ನೆರವು ಸಾಮಾಗ್ರಿಗಳು ತಲುಪುವಲ್ಲಿ ವಿಫಲವಾಗಿದೆ ಎಂದು ಯುಎನ್ ಏಜೆನ್ಸಿಗಳು, ನೆರವು ಸಂಸ್ಥೆಗಳು ಮತ್ತು ವಿಶ್ಲೇಷಕರು ಕಳವಳ ವ್ಯಕ್ತಪಡಿಸಿದ್ದಾರೆ.
ಗಾಝಾ ಮೇಲೆ ಕಳೆದ 22 ತಿಂಗಳಿನಿಂದ ಇಸ್ರೇಲ್ ಸುದೀರ್ಘವಾಗಿ ದಾಳಿ ನಡೆಸುತ್ತಾ ಬಂದಿದೆ. ಸಾವಿರಾರು ಜನರು ಒಪ್ಪೊತ್ತಿನ ಆಹಾರ, ಹನಿ ನೀರು ಸಿಗದೆ ಅಪೌಷ್ಟಿಕತೆಯಿಂದ ಮರಣದಂಚಿನಲ್ಲಿದ್ದಾರೆ. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಪೋಟೊಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಕ್ರೋಶಕ್ಕೆ ಕಾರಣವಾದ ಬಳಿಕ ಗಾಝಾಗೆ ಅಲ್ಪ ಪ್ರಮಾಣದಲ್ಲಿ ಮಾನವೀಯ ನೆರವು ರವಾನೆಗೆ ಇಸ್ರೇಲ್ ಅನುಮತಿಸಿದೆ. ಆದರೆ ಅದನ್ನು ಅರ್ಧದಲ್ಲೇ ಕೆಲವು ಗ್ಯಾಂಗ್ ಗಳು ಲೂಟಿ ಮಾಡುತ್ತಿದೆ. ಹಸಿವು ಜನರನ್ನು ಪರಸ್ಪರ ಹೊಡೆದಾಡುವಂತೆ ಮಾಡಿದೆ. ಜನರು ಆಹಾರಕ್ಕಾಗಿ ಚಾಕು ಹಿಡಿದುಕೊಂಡು ಪರಸ್ಪರ ಕಾದಾಡುತ್ತಿದ್ದಾರೆ.
ʼಫೆಲೆಸ್ತೀನ್ ನಾಗರಿಕರು ಆಹಾರದ ಟ್ರಕ್ ಗಳು ಮತ್ತು ಯುರೋಪಿಯನ್ ವಾಯುಪಡೆಗಳು ನೆರವು ನೀಡುವ ಸ್ಥಳಗಳಿಗೆ ಧಾವಿಸಿ ಬರುತ್ತಿರುವುದು ಕಂಡು ಬಂದಿದೆʼ ಎಂದು AFP ವರದಿ ಮಾಡಿದೆ.
ಕೇಂದ್ರ ಗಾಝಾದ ಅಲ್-ಝವೇದಾದಲ್ಲಿ ವಿಮಾನದ ಮೂಲಕ ಪ್ಯಾರಾಚೂಟ್ ನೆರವಿನಿಂದ ಆಹಾರ ಸಾಮಗ್ರಿಗಳನ್ನು ಕೆಳಕ್ಕೆ ಹಾಕಿದಾಗ, ಹಸಿವಿನಿಂದ ಕಂಗೆಟ್ಟಿದ್ದ ಫೆಲೆಸ್ತೀನಿಯನ್ನರು ಅವುಗಳತ್ತ ದೌಡಾಯಿಸಿದ್ದು, ಆಹಾರ ಸಾಮಗ್ರಿಗಳ ಪೊಟ್ಟಣಗಳು ಒಡೆದು, ಅವು ಮಣ್ಣುಪಾಲಾಗಿರುವುದು ಕಂಡು ಬಂದಿದೆ ಎಂದು ವರದಿ ಉಲ್ಲೇಖಿಸಿದೆ.
►ಒಂದು ಚೀಲ ಹಿಟ್ಟಿಗಾಗಿ ಸರತಿ ಸಾಲಿನಲ್ಲಿ ಕಾಯುತ್ತಿರುವ ಸಾವಿರಾರು ಜನರು!
“ಹಸಿವು ಜನರನ್ನು ಪರಸ್ಪರ ಹೊಡೆದಾಡುವಂತೆ ಮಾಡಿದೆ. ಜನರು ಆಹಾರಕ್ಕಾಗಿ ಚಾಕು ಹಿಡಿದುಕೊಂಡು ಪರಸ್ಪರ ಕಾದಾಡುತ್ತಿದ್ದಾರೆ” ಎಂದು ನೆರವಿಗಾಗಿ ಆಗಮಿಸಿದ್ದ ಅಮೀರ್ ಝಕೋತ್ ಎಂಬ ಫೆಲೆಸ್ತೀನ್ ವ್ಯಕ್ತಿ AFP ಸುದ್ದಿ ಸಂಸ್ಥೆಯ ಬಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಇಂತಹ ಅಡಚಣೆಗಳನ್ನು ತಪ್ಪಿಸಲು ಉದ್ದೇಶಿತ ಗಮ್ಯ ಸ್ಥಾನಕ್ಕೂ ಮುನ್ನ ನಿಲುಗಡೆ ಮಾಡಿ, ಜನರು ಪರಸ್ಪರ ಸಹಾಯ ಮಾಡಿಕೊಳ್ಳುವಂತೆ ನೋಡಿಕೊಳ್ಳಬೇಕು ಎಂದು ವಿಶ್ವ ಆಹಾರ ಕಾರ್ಯಕ್ರಮ ಚಾಲಕರಿಗೆ ಸೂಚಿಸಲಾಗಿದ್ದರೂ, ಅದರಿಂದ ಯಾವುದೇ ಪ್ರಯೋಜನ ಆಗಿಲ್ಲ.
“ನಾನು ಪರಿಹಾರದ ಚೀಲವನ್ನು ತೆಗೆದುಕೊಳ್ಳುವಾಗ, ಟ್ರಕ್ ಒಂದು ಬಹುತೇಕ ನನಗೆ ತಾಗಿತು. ನಾನು ಈ ವೇಳೆ ಗಾಯಗೊಂಡೆ” ಎಂದು ಉತ್ತರ ಗಾಝಾ ಪಟ್ಟಿಯ ಝಿಕಿಮ್ ಪ್ರದೇಶದ ಗೋಧಿ ಹಿಟ್ಟಿನ ಚೀಲವೊಂದನ್ನು ತಮ್ಮ ತಲೆಯ ಮೇಲೆ ಹೊತ್ತೊಯ್ಯುತ್ತಿದ್ದ ಹಸಿವಿನಿಂದ ಕಂಗೆಟ್ಟ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.
ʼರಫಾ ಬಳಿಯ ಆಹಾರ ವಿತರಣಾ ಸ್ಥಳಕ್ಕೆ ತೆರಳಿದೆ. ಸರತಿ ಸಾಲನ್ನು ಸೇರಿಕೊಂಡು, ನನ್ನ ಸ್ಥಳವನ್ನು ಕಾಯ್ದಿರಿಸಿದೆ. ಒಂದು ಚೀಲ ಹಿಟ್ಟು ಅಥವಾ ಸ್ವಲ್ಪ ಅಕ್ಕಿ ಮತ್ತು ಬೇಳೆಗಾಗಿ ಸಾವಿರಾರು ಜನರು ಹಸಿವಿನಿಂದ ಅಲ್ಲಿ ಕಾಯುತ್ತಿದ್ದರುʼ ಎಂದು ಮುಹಮ್ಮದ್ ಅಬು ತಾಹಾ ಎಂಬವರು ಹೇಳಿದರು.
“ದಿಢೀರನೆ ನಾವು ಗುಂಡಿನ ಸದ್ದುಗಳನ್ನು ಕೇಳಿದೆವು. ಅಲ್ಲಿ ತಪ್ಪಿಸಿಕೊಳ್ಳಲು ಯಾವುದೇ ದಾರಿ ಇರಲಿಲ್ಲ. ಜನರು ಮಕ್ಕಳು, ಮಹಿಳೆಯರು, ವೃದ್ಧರೆನ್ನದೆ ಪರಸ್ಪರರನ್ನು ತಳ್ಳಾಡುತ್ತಾ, ಓಡಲು ಪ್ರಾರಂಭಿಸಿದರು. ಆ ದೃಶ್ಯ ನಿಜಕ್ಕೂ ದುರಂತಮಯವಾಗಿತ್ತು. ಎಲ್ಲಿ ನೋಡಿದರಲ್ಲಿ ರಕ್ತ ಚೆಲ್ಲಾಡುತ್ತಿತ್ತು. ಗಾಯಗೊಂಡ ಜನರು, ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವುʼ ಎಂದು ನೆರವು ಕೇಂದ್ರಗಳಲ್ಲಿನ ಭೀಕರ ದೃಶ್ಯವನ್ನು ಮುಹಮ್ಮದ್ ಅಬು ತಹಾ ವಿವರಿಸಿದರು.
ಮೇ 27ರಿಂದ ಇಲ್ಲಿಯವರೆಗೆ ಗಾಝಾ ಪಟ್ಟಿಯಲ್ಲಿ ನೆರವಿಗಾಗಿ ಕಾಯುತ್ತಿದ್ದ ಸುಮಾರು 1,400 ಮಂದಿ ಹತ್ಯೆಗೀಡಾಗಿದ್ದಾರೆ. ಈ ಪೈಕಿ ಬಹುತೇಕ ನೆರವು ಕೇಂದ್ರಗಳು ಇಸ್ರೇಲ್ ಗೆ ಸೇರಿದ್ದಾಗಿವೆ ಎಂದು ವಿಶ್ವಸಂಸ್ಥೆ ಹೇಳಿದೆ.
ಪರವಾನಗಿ ನಿರಾಕರಣೆ, ನಿಧಾನ ಗತಿಯ ಸುಂಕ ತೆರವು, ಸೀಮಿತ ಪ್ರವೇಶ ದ್ವಾರಗಳು ಸೇರಿದಂತೆ ಗಾಝಾದಲ್ಲಿ ಪರಿಹಾರ ಸಾಮಗ್ರಿ ವಿತರಿಸಲು ಇಸ್ರೇಲ್ ಪ್ರಾಧಿಕಾರಗಳು ಹೇರಿರುವ ನಿರ್ಬಂಧಗಳನ್ನು ಅಂತಾರಾಷ್ಟ್ರೀಯ ಸಂಘಟನೆಗಳು ಖಂಡಿಸುತ್ತಾ ಬಂದಿವೆ.
►ನೆರವು ಸಾಮಾಗ್ರಿಗಳನ್ನು ಲೂಟಿಗೈಯ್ಯುತ್ತಿರುವ ಗುಂಪುಗಳು!
ಹಸಿದ ಜನರಿಗಾಗಿ ಸಾಗಿಸುತ್ತಿರುವ ನೆರವು ಸಾಮಾಗ್ರಿಗಳನ್ನು ಗುಂಪುಗಳು ಲೂಟಿ ಮಾಡುತ್ತಿವೆ. ಗೋದಾಮುಗಳ ಮೇಲೆ ನೇರವಾಗಿ ದಾಳಿ ಮಾಡುತ್ತಿದ್ದಾರೆ. ಅದನ್ನು ಅತಿಯಾದ ಬೆಲೆಗೆ ಮರುಮಾರಾಟ ಮಾಡುವ ವ್ಯಾಪಾರಿಗಳಿಗೆ ನೀಡಲಾಗುತ್ತಿದೆ ಎಂದು ಹಲವರು ಆರೋಪಿಸಿದ್ದಾರೆ.
ಈ ದಯಾನೀಯ ಪರಿಸ್ಥಿತಿಯನ್ನು "ಇದು ಬಲಿಷ್ಠನು ಉಳಿಯುವನು ಎಂಬ ಡಾರ್ವಿನಿಯನ್ ಮಾತಿನಂತೆ ಇದೆʼ ಎಂದು ಯುರೋಪಿಯನ್ ಕೌನ್ಸಿಲ್ ಆನ್ ಫಾರಿನ್ ರಿಲೇಶನ್ಸ್ (ECFR) ಮುಹಮ್ಮದ್ ಶೆಹಾದಾ ಹೇಳಿದರು.
ʼʼಜಗತ್ತಿನಲ್ಲಿ ಅತಿ ಹೆಚ್ಚು ಹಸಿವಿನಿಂದ ಬಳಲುತ್ತಿರುವ ಮತ್ತು ಶಕ್ತಿ ಇಲ್ಲದ ಜನರು ಟ್ರಕ್ ಅನ್ನು ಬೆನ್ನಟ್ಟಿ ಓಡಬೇಕು ಮತ್ತು ಗಂಟೆಗಟ್ಟಲೆ ಬಿಸಿಲಿನಲ್ಲಿ ಕಾಯಬೇಕು. ಹಿಟ್ಟಿನ ಚೀಲಕ್ಕಾಗಿ ಸ್ಪರ್ಧೆ ಮಾಡಲು ಪ್ರಯತ್ನಿಸಬೇಕು" ಎಂದು ಮುಹಮ್ಮದ್ ಶೆಹಾದಾ ಅಲ್ಲಿನ ದಯನೀಯ ಪರಿಸ್ಥಿತಿಯನ್ನು ವಿವರಿಸಿದ್ದಾರೆ.
2023ರ ಅಕ್ಟೋಬರ್ ನಲ್ಲಿ ಯುದ್ಧ ಪ್ರಾರಂಭವಾದ ನಂತರ ವಿಶ್ವಸಂಸ್ಥೆ ನೀಡುತ್ತಿರುವ ಸಹಾಯವನ್ನು ಹಮಾಸ್ ಲೂಟಿ ಮಾಡುತ್ತಿದೆ ಎಂದು ಇಸ್ರೇಲ್ ಆರೋಪಿಸಿದೆ. ಈ ಆರೋಪವನ್ನು ಆಧಾರವಾಗಿಸಿಕೊಂಡು ಇಸ್ರೇಲ್ ಮಾರ್ಚ್ ನಿಂದ ಮೇ ತಿಂಗಳವರೆಗೆ ಗಾಝಾದ ಮೇಲೆ ಸಂಪೂರ್ಣ ನಿರ್ಬಂಧ ಹೇರಿತ್ತು. ಆ ನಂತರ, ಇಸ್ರೇಲ್ ಮತ್ತು ಅಮೆರಿಕ ಬೆಂಬಲದೊಂದಿಗೆ ನೆರವು ಕೇಂದ್ರವನ್ನು ಇಸ್ರೇಲ್ ಸ್ಥಾಪಿಸಿದೆ.
ಆದರೆ ಗಾಝಾದ ಎರಡು ಮಿಲಿಯನ್ ಗಿಂತಲೂ ಹೆಚ್ಚು ನಿವಾಸಿಗಳಿಗೆ ಇಸ್ರೇಲ್ ಮತ್ತು ಅಮೆರಿಕ ಬೆಂಬಲದ ಕೇವಲ ನಾಲ್ಕು ವಿತರಣಾ ಕೇಂದ್ರಗಳು ಮಾತ್ರ ಇದೆ. ನೆರವು ವಿತರಾಣಾ ಕೇಂದ್ರದಲ್ಲಿ ಹಸಿದ ನಾಗರಿಕರ ಮೇಲೆ ದಾಳಿ ನಡೆಯುತ್ತಿರುವುದರಿಂದ ಈ ನೆರವು ಕೇಂದ್ರಗಳನ್ನು ʼಸಾವಿನ ಬಲೆʼ ಎಂದು ಯುಎನ್ ಕರೆದಿದೆ.
ಹಮಾಸ್ ಹಲವಾರು ಫೆಲೆಸ್ತೀನಿಯರ ಮೇಲೆ ದಾಳಿ ಮಾಡಿ ಗಾಝಾದ ಜನರಿಂದ ನೆರವು ಸಲಕರಣೆ ಕಸಿದು ಕೊಂಡಿದೆ ಎಂದು ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ಹೇಳಿತ್ತು. ಆದರೆ ಜುಲೈ 26ರಂದು ನ್ಯೂಯಾರ್ಕ್ ಟೈಮ್ಸ್ ಪ್ರಕಟಿಸಿದ ವರದಿಯ ಪ್ರಕಾರ, ಹಿರಿಯ ಇಸ್ರೇಲ್ ಸೇನಾ ಅಧಿಕಾರಿಗಳು ಹಮಾಸ್ ಯುಎನ್ ನೀಡಿದ ಸಹಾಯವನ್ನು ಲೂಟಿ ಮಾಡುತ್ತಿದೆ ಎಂಬುದಕ್ಕೆ ಯಾವುದೇ ದೃಢವಾದ ಸಾಕ್ಷ್ಯ ದೊರೆತಿಲ್ಲವೆಂದು ತಿಳಿಸಿದ್ದಾರೆ.
ಇದಲ್ಲದೆ ಫೆಲೆಸ್ತೀನ್ ನಲ್ಲಿ ಕ್ರಿಮಿನಲ್ ಜಾಲಗಳನ್ನು ಸಜ್ಜುಗೊಳಿಸಿ ನೆರವು ಸಲಕರಣೆಗಳನ್ನು ಲೂಟಿ ಮಾಡಲು ಅವಕಾಶ ಮಾಡಿಕೊಡಲಾಗಿದೆ ಎಂದು ಇಸ್ರೇಲ್ ಸೇನೆಯ ಮೇಲೆಯೇ ಆರೋಪವಿದೆ.
"ಯುದ್ಧದ ಆರಂಭದಿಂದಲೂ ನೆರವು ಸಲಕರಣೆಗಳ ಕಳ್ಳತನವನ್ನು ಇಸ್ರೇಲ್ ಪಡೆಗಳ ಕಣ್ಗಾವಲಿನಲ್ಲಿ ಕ್ರಿಮಿನಲ್ ಗ್ಯಾಂಗ್ ಗಳು ನಡೆಸುತ್ತಿವೆ ಮತ್ತು ಗಾಝಾಗೆ ಕೆರೆಮ್ ಶಾಲೋಮ್ ಕ್ರಾಸಿಂಗ್ ಪಾಯಿಂಟ್ ನ ಸಮೀಪದಲ್ಲಿ ಅವರಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ" ಎಂದು ಯುಎನ್ ಮಾನವೀಯ ಕಚೇರಿಯ ಫೆಲೆಸ್ತೀನ್ ಪ್ರಾಂತ್ಯಗಳ ಮುಖ್ಯಸ್ಥ ಜೊನಾಥನ್ ವಿಟ್ಟಲ್ ಈ ಮೊದಲು ಹೇಳಿದ್ದರು.
ಇಸ್ರೇಲ್ ಮತ್ತು ಫೆಲೆಸ್ತೀನ್ ಮಾಧ್ಯಮ ವರದಿಗಳ ಪ್ರಕಾರ, ಯಾಸರ್ ಅಬು ಶಬಾಬ್ ನೇತೃತ್ವದ ಬೆಡೋಯಿನ್ ಬುಡಕಟ್ಟಿನ ಸದಸ್ಯರನ್ನು ಒಳಗೊಂಡ ʼಪಾಪ್ಯುಲರ್ ಫೋರ್ಸಸ್ʼ ಎಂಬ ಸಶಸ್ತ್ರ ಗುಂಪು ಇಸ್ರೇಲ್ ನಿಯಂತ್ರಣದಲ್ಲಿರುವ ದಕ್ಷಿಣ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದೆ.
ರಫಾ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ರಿಮಿನಲ್ ಗ್ಯಾಂಗ್ ಅನ್ನು ಅಬು ಶಬಾಬ್ ಮುನ್ನಡೆಸುತ್ತಿದ್ದು, ಈ ಕ್ರಿಮಿನಲ್ ಗ್ಯಾಂಗ್ ನೆರವು ಟ್ರಕ್ ಗಳನ್ನು ಲೂಟಿ ಮಾಡುವ ಆರೋಪವನ್ನು ಹೊಂದಿದೆ ಎಂದು ವಿವರಿಸುತ್ತದೆ.
ಜೂನ್ ನಲ್ಲಿ ಇಸ್ರೇಲ್ ಅಧಿಕಾರಿಗಳು ಹಮಾಸ್ ವಿರುದ್ಧದ ಗ್ಯಾಂಗ್ ಗಳನ್ನು ಸಜ್ಜುಗೊಳಿಸಿರುವುದನ್ನು ಒಪ್ಪಿಕೊಂಡರು, ಆದರೆ, ಅಬು ಶಬಾಬ್ ನೇತೃತ್ವದ ಗ್ಯಾಂಗ್ ಅನ್ನು ನೇರವಾಗಿ ಹೆಸರಿಸಲಿಲ್ಲ. ಇಸ್ರೇಲ್ ಸೈನ್ಯದ ಅನುಮೋದನೆಯಿಲ್ಲದೆ, ಗಾಝಾದಲ್ಲಿ ಇದ್ಯಾವುದೂ ಸಂಭವಿಸುವುದಿಲ್ಲ ಎಂದು ಗಾಝಾದ ಮಾನವೀಯ ಕಾರ್ಯಕರ್ತರೋರ್ವರು ಹೇಳಿದ್ದಾರೆ.