×
Ad

ಅಂತರಾಷ್ಟ್ರೀಯ ಮಾನವೀಯ ಕಾನೂನನ್ನು ಗೌರವಿಸಿ : ಇಸ್ರೇಲ್ ಗೆ ರೆಡ್ ಕ್ರಾಸ್‌ ಆಗ್ರಹ

Update: 2023-10-12 23:37 IST

Photo : PTI

ರಿಯಾದ್: ಗಾಝಾ ಪ್ರದೇಶದ ಮೇಲೆ ಬಾಂಬ್ ಗಳ ಸುರಿಮಳೆ ನಿಲ್ಲಿಸಲು ಇಸ್ರೇಲ್ ಮೇಲೆ ಅಂತರಾಷ್ಟ್ರೀಯ ಸಮುದಾಯ ಒತ್ತಡ ಹೇರುವಂತೆ ಮತ್ತು ಗಾಝಾದಲ್ಲಿ ಮಾನವೀಯ ನೆರವಿನ ಕಾರಿಡಾರ್ ಗೆ ಅನುವು ನೀಡಿ ದಿಗ್ಬಂಧನಕ್ಕೆ ಒಳಗಾದ ಪೆಲೆಸ್ತೀನಿಯನ್ ಜನತೆಗೆ ತುರ್ತು ನೆರವು ಒದಗಿಸುವಂತೆ ಅರಬ್ ರೆಡ್ ಕ್ರೆಸೆಂಟ್ ಮತ್ತು ರೆಡ್ ಕ್ರಾಸ್‌ ಸಂಘಟನೆ ಆಗ್ರಹಿಸಿದೆ.

ಬುಧವಾರ ನಡೆದ ರೆಡ್‌ ಕ್ರೆಸೆಂಟ್ ಮತ್ತು ರೆಡ್ ಕ್ರಾಸ್‌ ಸಭೆಯಲ್ಲಿ ಗಾಝಾದ ಮೇಲೆ ಇಸ್ರೇಲ್ ನಡೆಸುತ್ತಿರುವ ‘ಆಕ್ರಮಣ’ವನ್ನು ಮತ್ತು ಅಂತರಾಷ್ಟ್ರೀಯ ಮಾನವೀಯ ಕಾನೂನನ್ನು ಇಸ್ರೇಲ್ ಕಡೆಗಣಿಸಿರುವುದನ್ನು ಖಂಡಿಸಲಾಗಿದೆ. ರೆಡ್ ಕ್ರಾಸ್‌ ಹಮಾಸ್ ಮತ್ತು ಇಸ್ರೇಲಿ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ ಎಂದು ಮೂಲಗಳು ಹೇಳಿವೆ.

‘ಒತ್ತೆಯಾಳುಗಳ ಬಿಡುಗಡೆಗೆ ಹಮಾಸ್ ಜತೆ ಸಂಪರ್ಕದಲ್ಲಿದ್ದೇವೆ. ತಟಸ್ಥ ಮಧ್ಯವರ್ತಿಯಾಗಿ ಮಾನವೀಯ ಭೇಟಿಗೆ ಅನುವು ಮಾಡಿಕೊಡಲು, ಒತ್ತೆಯಾಳುಗಳು ಮತ್ತವರ ಕುಟುಂಬ ಸದಸ್ಯರ ನಡುವೆ ಸಂವಹನ ಸಾಧಿಸಲು, ಅವರ ಬಿಡುಗಡೆಗೆ ಸಿದ್ಧರಾಗಿ ನಿಲ್ಲುತ್ತೇವೆ’ ಎಂದು ಅಂತರಾಷ್ಟ್ರೀಯ ರೆಡ್ ಕ್ರಾಸ್‌ ಸಮಿತಿಯ ಪ್ರಾದೇಶಿಕ ನಿರ್ದೇಶಕ ಫ್ಯಾಬ್ರಿಝಿಯೊ ಕಾರ್ಬೊನಿ ಹೇಳಿದ್ದಾರೆ.

► ನಮಗೆ ನೈತಿಕತೆಯನ್ನು ಬೋಧಿಸಬೇಡಿ: ರೆಡ್ ಕ್ರಾಸ್‌ ಹೇಳಿಕೆಗೆ ಇಸ್ರೇಲ್ ಪ್ರತಿಕ್ರಿಯೆ

ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆಗೊಳಿಸುವವರೆಗೆ ಗಾಝಾ ಪಟ್ಟಿಯ ಮೇಲಿನ ದಿಗ್ಬಂಧನ ಮುಂದುವರಿಯಲಿದೆ. ಮಾನವೀಯತೆ ಇದ್ದವರಿಗೆ ಮಾತ್ರ ಮಾನವೀಯತೆ ತೋರಿಸಬಹುದು ಎಂದು ಇಸ್ರೇಲ್ ಗುರುವಾರ ಪ್ರತಿಕ್ರಿಯಿಸಿದೆ.

ಗಾಝಾ ಪಟ್ಟಿಗೆ ಇಂಧನ ಪೂರೈಕೆಗೆ ಅಡ್ಡಿಪಡಿಸಿದರೆ ಈಗಾಗಲೇ ತುಂಬಿತುಳುಕಿರುವ ಆಸ್ಪತ್ರೆಗಳು ಶವಾಗಾರಗಳಾಗಲಿವೆ ಎಂಬ ರೆಡ್ ಕ್ರಾಸ್ ನ ಹೇಳಿಕೆಗೆ ಪ್ರತಿಕ್ರಿಯಿಸಿರುವ ಇಸ್ರೇಲ್ ನ ಇಂಧನ ಸಚಿವ ಇಸ್ರೇಲ್ ಕಾಟ್ಝ್ ಇಸ್ರೇಲ್ ನ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸುವವರೆಗೆ ದಿಗ್ಬಂಧನ ತೆರವಾಗದು ಎಂದರು. ‘ ಗಾಝಾಕ್ಕೆ ಮಾನವೀಯ ನೆರವು? ಯಾವುದೇ ಇಲೆಕ್ಟ್ರಿಕಲ್ ಸ್ವಿಚ್ ಆನ್ ಆಗದು, ಯಾವುದೇ ಜಲವಿದ್ಯುತ್ ಸ್ಥಾವರ ತೆರೆಯದು. ನಮಗೆ ಯಾರೊಬ್ಬರೂ ನೈತಿಕತೆಯನ್ನು ಬೋಧಿಸುವ ಅಗತ್ಯವಿಲ್ಲ’ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News