×
Ad

ರಕ್ತದೋಕುಳಿಯಲ್ಲಿ ಗಾಝಾದ ಅಲ್-ಶಿಫಾ ಆಸ್ಪತ್ರೆ; ವಿಶ್ವ ಆರೋಗ್ಯ ಸಂಸ್ಥೆ ಕಳವಳ

Update: 2023-12-17 23:09 IST

Photo: PTI

ಜಿನೆವಾ: ಇಸ್ರೇಲಿ ಬಾಂಬ್ ದಾಳಿಯಿಂದ ಧ್ವಂಸಗೊಂಡ ಉತ್ತರ ಗಾಝಾದ ಅಲ್-ಶಿಫಾ ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡ್ ರಕ್ತದೋಕುಳಿಯಾಗಿದ್ದು ಇದನ್ನು ತುರ್ತಾಗಿ ನವೀಕರಿಸಬೇಕಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ರವಿವಾರ ಹೇಳಿದೆ.

ಗಾಝಾದ ಅತೀ ದೊಡ್ಡ ಆಸ್ಪತ್ರೆಯಾಗಿರುವ ಅಲ್-ಶಿಫಾದ ಪುನರುಜ್ಜೀವನಕ್ಕೆ ಮೊದಲ ಆದ್ಯತೆ ನೀಡಲಾಗುವುದು ಎಂದು ಹೇಳಿಕೆ ತಿಳಿಸಿದೆ.

ನೆಲೆ ಕಳೆದುಕೊಂಡಿರುವ ಸಾವಿರಾರು ಮಂದಿ ಆಸ್ಪತ್ರೆಯ ಕಟ್ಟಡದಲ್ಲಿ ಆಶ್ರಯ ಪಡೆದಿದ್ದು ಇಲ್ಲಿ ಕುಡಿಯುವ ನೀರು ಮತ್ತು ಆಹಾರದ ತೀವ್ರ ಕೊರತೆಯಿದೆ. ವಿಶ್ವಸಂಸ್ಥೆಯ ನೆರವು ತಂಡ ಶನಿವಾರ ಆಸ್ಪತ್ರೆಗೆ ವೈದ್ಯಕೀಯ ಸಾಮಾಗ್ರಿಗಳನ್ನು ತಲುಪಿಸಲು ಸಾಧ್ಯವಾಗಿದೆ. ಆದರೆ ಆಸ್ಪತ್ರೆಯೊಳಗೆ ಗಾಯಗೊಂಡ ನೂರಾರು ರೋಗಿಗಳು, ಮತ್ತು ಪ್ರತೀ ನಿಮಿಷಕ್ಕೆ ಹೊಸ ರೋಗಿಗಳು ಬರುತ್ತಿರುವುದರಿಂದ ಆಸ್ಪತ್ರೆಯ ತುರ್ತು ಸೇವಾ ವಿಭಾಗವು ರಕ್ತದ ಸ್ಥಾನ ಮಾಡಿರುವಂತೆ ಭಾಸವಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

ಆಸ್ಪತ್ರೆಯಲ್ಲಿ ಕೆಲವೇ ಮಂದಿ ಸಿಬ್ಬಂದಿಗಳಿರುವುದರಿಂದ ಕನಿಷ್ಟ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿದೆ. ಗಂಭೀರ ಸ್ಥಿತಿಯಲ್ಲಿರುವ ರೋಗಿಗಳನ್ನು ಶಸ್ತ್ರಚಿಕಿತ್ಸೆಗಾಗಿ ಅಲ್-ಅಹ್ಲಿ ಅರಬ್ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತಿದೆ. ಆಮ್ಲಜನಕ ಮತ್ತು ಇಂಧನ ಕೊರತೆಯಿಂದ ಆಪರೇಷನ್ ಕೊಠಡಿಗಳು ಕಾರ್ಯ ನಿರ್ವಹಿಸುತ್ತಿಲ್ಲ. ಆಸ್ಪತ್ರೆಯನ್ನು ತುರ್ತು ನವೀಕರಿಸುವ ಅಗತ್ಯವಿದೆ ಎಂದು ವಿಶ್ವ ಆರೋಗ್ಯಸಂಸ್ಥೆಯ ವರದಿ ಹೇಳಿದೆ.

ಇಂಧನ, ಆಮ್ಲಜನಕ, ಔಷಧ, ಆಹಾರ, ನೀರು ಇತ್ಯಾದಿಗಳನ್ನು ತುರ್ತಾಗಿ ಪೂರೈಸಿದರೆ ಆಸ್ಪತ್ರೆಯ 20 ಶಸ್ತ್ರಚಿಕಿತ್ಸೆ ಹಾಗೂ ಇತರ ವಾರ್ಡ್‍ಗಳನ್ನು ಸಕ್ರಿಯಗೊಳಿಸಬಹುದು. ಪ್ರಸ್ತುತ ಅಲ್-ಅಹ್ಲಿ ಅರಬ್ ಆಸ್ಪತ್ರೆಯೊಂದೇ ಉತ್ತರ ಗಾಝಾ ಪಟ್ಟಿಯಲ್ಲಿ ಆಂಶಿಕವಾಗಿ ಕಾರ್ಯನಿರ್ವಹಿಸುವ ಏಕೈಕ ಆಸ್ಪತ್ರೆಯಾಗಿದೆ. ಅಲ್-ಶಿಫಾ, ಅಲ್-ಅವ್ಡಾ ಮತ್ತು ಅಲ್-ಸಹಾಬ ಮೆಡಿಕಲ್ ಕಾಂಪ್ಲೆಕ್ಸ್ ಆಸ್ಪತ್ರೆಗಳು ಕನಿಷ್ಟ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ವರದಿಯಾಗಿದೆ.

ಗಾಝಾ ಪಟ್ಟಿಯ ಬಹುತೇಕ ಆಸ್ಪತ್ರೆಗಳು ನೆಲೆ ಕಳೆದುಕೊಂಡವರು ಹಾಗೂ ಗಾಯಗೊಂಡ ಜನರಿಂದ ತುಂಬಿದೆ. ಇಂಧನ, ಆಮ್ಲಜನಕ ಮತ್ತು ವೈದ್ಯಕೀಯ ಪೂರೈಕೆಯ ಕೊರತೆ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದೆ. ತೀವ್ರ ಗಾಯಗೊಂಡವರನ್ನು ನೆಲದ ಮೇಲೆ ಮಲಗಿಸಿ ಗಾಯಕ್ಕೆ ಹೊಲಿಗೆ ಹಾಕುವ ಪರಿಸ್ಥಿತಿಯಿದೆ. ಅನಸ್ತೇಷಿಯಾ ಒದಗಿಸಲೂ ಸಾಧ್ಯವಾಗುತ್ತಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

ಈ ಮಧ್ಯೆ, ಪಶ್ಚಿಮದಂಡೆಯ ತುಲ್ಕಾರ್ಮ್ ನಗರದ ಮೇಲೆ ಇಸ್ರೇಲೆ ರವಿವಾರ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಟ 5 ಫೆಲೆಸ್ತೀನೀಯರು ಮೃತಪಟ್ಟಿರುವುದಾಗಿ ಫೆಲೆಸ್ತೀನಿಯನ್ ಆರೋಗ್ಯ ಇಲಾಖೆ ಹೇಳಿದೆ. ಗಾಝಾ ಪಟ್ಟಿಯಲ್ಲಿ ಪರಿಸ್ಥಿತಿ ವಿಪತ್ತಿನ ಅಂಚಿನೆಡೆಗೆ ಸಾಗುತ್ತಿದ್ದು ಅಲ್ಲಿ ತಕ್ಷಣ ಕದನ ವಿರಾಮ ಘೋಷಣೆಯಾಗಬೇಕು ಎಂದು ಫ್ರಾನ್ಸ್ ಆಗ್ರಹಿಸಿದೆ.

ಗಾಝಾ ಆರೋಗ್ಯ ವ್ಯವಸ್ಥೆಯ ಮೂಲಾಧಾರ

ಹಗೆತನ, ಪ್ರತೀಕಾರದ ಕೃತ್ಯಗಳು ಮುಂದುವರಿದಂತೆ ಗಾಝಾ ಪಟ್ಟಿಯಾದ್ಯಂತ ಆರೋಗ್ಯ ರಕ್ಷಣೆಯ ಅಗತ್ಯ ಹೆಚ್ಚಾಗುತ್ತಿದೆ. ಗಾಝಾದ ಆರೋಗ್ಯ ವ್ಯವಸ್ಥೆಯ ಮೂಲಾಧಾರವಾದ ಅಲ್-ಶಿಫಾ ಆಸ್ಪತ್ರೆಯನ್ನು ತುರ್ತಾಗಿ ಮರುಸ್ಥಾಪಿಸಬೇಕು. ಇದರಿಂದ ಮುತ್ತಿಗೆಗೆ ಒಳಗಾಗಿರುವ ಪ್ರದೇಶದಲ್ಲಿ ಸಾವು, ವಿನಾಶ, ಹಸಿವು ಮತ್ತು ಕಾಯಿಲೆಯ ವಿಷವರ್ತುಲದಲ್ಲಿ ಸಿಲುಕಿರುವ ಜನರಿಗೆ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ. ಅಲ್-ಶಿಫಾ ಆಸ್ಪತ್ರೆಗೆ ಆರೋಗ್ಯ ಸಾಮಾಗ್ರಿಗಳನ್ನು ತಲುಪಿಸಲು ಮತ್ತು ಅಲ್ಲಿನ ಸೌಲಭ್ಯ ವ್ಯವಸ್ಥೆಗಳನ್ನು ಪರಿಶೀಲಿಸಲು ಡಿಸೆಂಬರ್ 16ರಂದು ವಿಶ್ವಸಂಸ್ಥೆಯ ನಿಯೋಗ ನಡೆಸಿದ ಕಾರ್ಯಾಚರಣೆಯಲ್ಲಿ ತನ್ನ ಸಿಬ್ಬಂದಿಗಳೂ ಸಹಕರಿಸಿದ್ದರು. ನಿಯೋಗವು ಔಷಧ, ಶಸ್ತ್ರಚಿಕಿತ್ಸಾ ಸಾಮಾಗ್ರಿಗಳು, ಅನಸ್ತೇಷಿಯಾಗಳನ್ನು ಒದಗಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಅಲ್-ಶಿಫಾ ಆಸ್ಪತ್ರೆಯಲ್ಲಿ ಈಗ ಕನಿಷ್ಟ ಮೂಲಸೇವೆಗಳನ್ನು ಮಾತ್ರ ಒದಗಿಸಲು ಸಾಧ್ಯವಾಗುತ್ತಿದೆ. ದಿನಕ್ಕೆ ಸುಮಾರು 30 ರೋಗಿಗಳಿಗೆ ಡಯಾಲಿಸಿಸ್ ಒದಗಿಸಲಾಗುತ್ತಿದೆ. ಡಯಾಲಿಸಿಸ್ ಯಂತ್ರಗಳು ದಿನದ 24 ಗಂಟೆಯೂ ಕಾರ್ಯಾಚರಿಸುತ್ತಿದ್ದು ಸಣ್ಣ ಜನರೇಟರ್ ಅನ್ನು ಬಳಸಿಕೊಳ್ಳುತ್ತಿದೆ ಎಂದು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News