ಭಾರತ, ರಷ್ಯಾ ತಮ್ಮ ಸತ್ತ ಆರ್ಥಿಕತೆಯನ್ನು ಒಟ್ಟಿಗೆ ಹೂತುಹಾಕಲಿ : ಡೊನಾಲ್ಡ್ ಟ್ರಂಪ್
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Photo: PTI)
ಹೊಸದಿಲ್ಲಿ : ಭಾರತದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಶೇ.25 ರಷ್ಟು ಸುಂಕವನ್ನು ಘೋಷಿಸಿದ ಒಂದು ದಿನದ ನಂತರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಮತ್ತು ರಷ್ಯಾವನ್ನು ಮತ್ತೆ ಟೀಕಿಸಿದ್ದಾರೆ.
ಭಾರತವು ರಷ್ಯಾದೊಂದಿಗೆ ಏನು ಮಾಡುತ್ತದೆ ಎಂಬುದು ನನಗೆ ಮುಖ್ಯವಲ್ಲ. ರಷ್ಯಾ ಮತ್ತು ಭಾರತ ಏನು ಮಾಡಲಿವೆ ಎಂಬುದರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಎರಡೂ ರಾಷ್ಟ್ರಗಳು ತಮ್ಮ ಸತ್ತ ಆರ್ಥಿಕತೆಗಳನ್ನು ಒಟ್ಟಿಗೆ ಹೂತುಹಾಕಲಿ ಎಂದು ಟ್ರಂಪ್ ಹೇಳಿದ್ದಾರೆ.
ನಾವು ಭಾರತದೊಂದಿಗೆ ಬಹಳ ಕಡಿಮೆ ವ್ಯವಹಾರ ಮಾಡಿದ್ದೇವೆ. ಅವರ ಸುಂಕಗಳು ಬಹಳ ಹೆಚ್ಚಿವೆ. ಇದು ವಿಶ್ವದಲ್ಲೇ ಅತ್ಯಧಿಕವಾಗಿವೆ. ಅದೇ ರೀತಿ, ರಷ್ಯಾ ಮತ್ತು ಯುಎಸ್ಎ ಒಟ್ಟಿಗೆ ಯಾವುದೇ ವ್ಯವಹಾರವನ್ನು ಮಾಡುವುದಿಲ್ಲ ಎಂದು ಅವರು ಟ್ರುತ್ ಸೋಷಿಯಲ್‌ನಲ್ಲಿನ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಬುಧವಾರ ಡೊನಾಲ್ಡ್ ಟ್ರಂಪ್ ಅವರು ಭಾರತದ ಉತ್ಪನ್ನಗಳ ಮೇಲೆ ಶೇ.25ರಷ್ಟು ಸುಂಕ ವಿಧಿಸುವುದಾಗಿ ಘೋಷಿಸಿದ್ದರು. ಇದು ಆ.1ರಿಂದಲೇ ಜಾರಿಗೊಳ್ಳಲಿದೆ. ರಷ್ಯಾದಿಂದ ತೈಲ ಮತ್ತು ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತಿರುವುದಕ್ಕಾಗಿ ಭಾರತವು ಹೆಚ್ಚುವರಿ ದಂಡವನ್ನು ಪಾವತಿಸಬೇಕಿದೆ ಎಂದು ಹೇಳಿದ್ದರು.