ರಾಮೇಶ್ವರಂನಲ್ಲಿ ದೇಶದ ಮೊಟ್ಟಮೊದಲ ವರ್ಟಿಕಲ್ ಲಿಫ್ಟ್ ಸಮುದ್ರ ಸೇತುವೆ ಉದ್ಘಾಟಿಸಿದ ಪ್ರಧಾನಿ ಮೋದಿ
Photo credit: PTI
ರಾಮೇಶ್ವರಂ: ಇಂದು ಪ್ರಧಾನಿ ನರೇಂದ್ರ ಮೋದಿ ರಾಮೇಶ್ವರಂನಲ್ಲಿ ನಿರ್ಮಿಸಲಾಗಿರುವ ಭಾರತದ ಮೊಟ್ಟಮೊದಲ ವರ್ಟಿಕಲ್ ಲಿಫ್ಟ್ ಸಮುದ್ರ ಸೇತುವೆಯನ್ನು ಉದ್ಘಾಟಿಸಿದರು.
ತಮ್ಮ ತಮಿಳುನಾಡು ಭೇಟಿಯ ವೇಳೆ ವಿವಿಧ ಮೂಲಸೌಕರ್ಯ ಯೋಜನೆಗಳಿಗೆ ಅವರು ಚಾಲನೆ ನೀಡಲಿದ್ದಾರೆ.
ತಮ್ಮ ಈ ಭೇಟಿಯ ಭಾಗವಾಗಿ ಅವರು ರಾಮೇಶ್ವರಂನ ಪ್ರಸಿದ್ಧ ರಾಮನಾಥ ಸ್ವಾಮಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ನಂತರ, 8,300 ಕೋಟಿ ರೂ.ಗೂ ಅಧಿಕ ಮೌಲ್ಯದ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಸರಕಾರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಯೋಜನೆಗಳ ಪೈಕಿ, ವಲಜಪೇಟ್ ಹಾಗೂ ರಾಣಿಪೇಟ್ ನಡುವಿನ 28 ಕಿಮೀ ಉದ್ದದ ನಾಲ್ಕು ಪಥದ ರಾಷ್ಟ್ರೀಯ ಹೆದ್ದಾರಿಗೆ ಶಂಕುಸ್ಥಾಪನೆ, ವಿಲ್ಲುಪುರಂ ಹಾಗೂ ಪುದುಚೆರಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 332ರ ನಡುವಿನ ಇನ್ನೂ ಮೂರು ರಾಷ್ಟ್ರೀಯ ಹೆದ್ದಾರಿಗಳ ನಾಲ್ಕು ಪಥಗಳ ವಿಭಾಗ, ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 32ರ ಪೂಂಡಿಯಾಂಕುಪ್ಪಂನಿಂದ ಸತ್ತನಾಥಪುರಂ ನಡುವಿನ 57 ಕಿಮೀ ಉದ್ದದ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 36ರ ಚೋಲಪುರಂ ಹಾಗೂ ತಂಜಾವೂರ್ ನಡುವಿನ 48 ಕಿಮೀ ಉದ್ದದ ರಸ್ತೆಯ ಉದ್ಘಾಟನೆ ಸೇರಿವೆ.
ಈ ಯೋಜನೆಗಳು ಪುಣ್ಯ ಕ್ಷೇತ್ರಗಳು ಹಾಗೂ ಪ್ರವಾಸಿ ತಾಣಗಳ ಸಂಪರ್ಕವನ್ನು ಸುಧಾರಿಸುವ ಗುರಿ ಹೊಂದಿದ್ದು, ಪ್ರಮುಖ ನಗರಗಳ ನಡುವಿನ ಪ್ರಯಾಣದ ಅವಧಿಯನ್ನು ತಗ್ಗಿಸಲಿದೆ ಹಾಗೂ ಆರೋಗ್ಯ ಸೇವೆ ಸೌಕರ್ಯಗಳು ಹಾಗೂ ಬಂದರುಗಳಿಗೆ ತ್ವರಿತ ಸಂಪರ್ಕವನ್ನು ಕಲ್ಪಿಸಲಿವೆ. ಈ ಯೋಜನೆಗಳಿಂದ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗಳಿಗೆ ಸಾಗಿಸುವುದು ಮತ್ತಷ್ಟು ಸುಲಭವಾಗಲಿದೆ ಎಂದು ನಿರೀಕ್ಷಿಸಲಾಗಿದ್ದು, ಈ ಪ್ರಾಂತ್ಯದಲ್ಲಿನ ಚರ್ಮ ಮತ್ತು ಸಣ್ಣ ಕೈಗಾರಿಕೆಗಳ ಆರ್ಥಿಕ ಚಟುವಟಿಕೆಗಳಿಗೆ ಮತ್ತಷ್ಟು ಉತ್ತೇಜನ ದೊರೆಯಲಿದೆ ಎಂದೂ ಅಂದಾಜಿಸಲಾಗಿದೆ.
#WATCH | PM Narendra Modi inaugurates New Pamban Bridge in Rameswaram, Tamil Nadu. India’s first vertical lift sea bridge and flags off Rameswaram-Tambaram (Chennai) new train service on the occasion of Ram Navami 2025
— Hindustan Times (@htTweets) April 6, 2025
(ANI) pic.twitter.com/6DPNdp2UX0