×
Ad

ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವ ಗ್ರಾಮೀಣ ಪ್ರತಿಭೆ ಖಲೀಲ್ ಕೈರಂಗಳ

ಕರ್ನಾಟಕ ರಾಜ್ಯ ಮಾಸ್ಟರ್ ವಾಲಿಬಾಲ್ ತಂಡಕ್ಕೆ ಆಯ್ಕೆ

Update: 2025-10-13 09:59 IST

ಮಂಗಳೂರು: ಸಾಧನೆಗೆ ಅಸಾಧ್ಯವಾದದ್ದು ಯಾವುದೂ ಇಲ್ಲ ಎಂಬ ಮಾತಿದೆ. ಅದೇರೀತಿ ಒಬ್ಬ ವ್ಯಕ್ತಿ ಸತತ ಅಭ್ಯಾಸ, ಮನೋಸ್ಥೈರ್ಯ, ಏಕಾಗ್ರತೆ, ಕಠಿಣ ಪರಿಶ್ರಮಪಟ್ಟರೆ ಅತ್ಯುತ್ತಮ ಕ್ರೀಡಾಪಟುವಾಗಿ ಮೂಡಿ ಬರಲು ಸಾಧ್ಯ ಎಂಬುದಕ್ಕೆ ಖಲೀಲ್ ಕೈರಂಗಳ ಸಾಕ್ಷಿ.

ವಾಲಿಬಾಲ್ ಆಟಗಾರರಾಗಿರುವ ಖಲೀಲ್ ಕೈರಂಗಳ ಗ್ರಾಮೀಣ ಪ್ರತಿಭೆ. ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಕೂಟದಲ್ಲಿ ಭಾಗವಹಿಸಿರುವ ಖಲೀಲ್, ವಾಲಿಬಾಲ್ ಕ್ರೀಡೆಯಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಇವರು, ಗುಜರಾತ್, ವಾರಣಾಸಿ ಹಾಗೂ ತಿರುವನಂತಪುರ ದಲ್ಲಿ ನಡೆದ ರಾಷ್ಟ್ರಮಟ್ಟದ ಮಾಸ್ಟರ್ ವಾಲಿಬಾಲ್ ಪಂದ್ಯ ಕೂಟದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಚಿನ್ನದ ಪದಕವನ್ನು ಗಳಿಸಿದ್ದಾರೆ. ಸದ್ಯ ಇವರು ಕರ್ನಾಟಕ ರಾಜ್ಯ ಮಾಸ್ಟರ್ ವಾಲಿಬಾಲ್ ತಂಡಕ್ಕೆ ಆಯ್ಕೆಯಾಗಿ ಯುವ ಕ್ರೀಡಾಳುಗಳಿಗೆ ಸ್ಫೂರ್ತಿಯಾಗಿದ್ದಾರೆ ಎಂದರೆ ತಪ್ಪಾಗದು.

‘‘ನಮ್ಮ ಊರಾದ ಕೈರಂಗಳದ ಶ್ರೀ ಕೃಷ್ಣ ಗೇಮ್ಸ್ ಕ್ಲಬ್‌ನ ವಾಲಿಬಾಲ್ ತಂಡವು ನನ್ನ ಪ್ರತಿಭೆಯನ್ನು ಗುರುತಿಸಿ ತಂಡದಲ್ಲಿ ಅವಕಾಶ ಕೊಟ್ಟಿತು. ಅಲ್ಲದೇ, ಜಿಲ್ಲಾ ಮಟ್ಟದ ಪಂದ್ಯಾಟಗಳಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡಿತು. ಇದು ನನಗೆ ಸಿಕ್ಕ ಮೊದಲ ಬೆಂಬಲ’’ ಎನ್ನುತ್ತಾರೆ ಖಲೀಲ್.

ಪ್ರಸಕ್ತ ಖಲೀಲ್ ಶ್ರೀ ಕೃಷ್ಣ ಗೇಮ್ಸ್ ಕ್ಲಬ್‌ನ ‘ಎ’ ತಂಡದ ನಾಯಕರಾಗಿದ್ದಾರೆ. ಅಸೈಗೋಳಿಯ ಕಾರುಣ್ಯ ಫೌಂಡೇಶನ್ ಪ್ರತೀ ವರ್ಷ ನೀಡುವ ‘ಕಾರುಣ್ಯ ಪ್ರಶಸ್ತಿ’ಯ 2025ನೇ ಸಾಲಿನ ಪ್ರಶಸ್ತಿಯನ್ನು ಖಲೀಲ್‌ರಿಗೆ ನೀಡಿ ಗೌರವಿಸಿದೆ.

ಜೀವನಕ್ಕಾಗಿ ಮೀನು ಮಾರಾಟ

ವೃತ್ತಿಯಲ್ಲಿ ಮೊಬೈಲ್ ಟೆಕ್ನೀಶಿಯನ್ ಆಗಿ ಊರಿನಲ್ಲಿ ಅಂಗಡಿ ತೆರೆದಿದ್ದ ಖಲೀಲ್ ಕೈರಂಗಳ ಅದು ಕೈ ಹಿಡಿಯದಿದ್ದಾಗ ತಂದೆ ನಡೆಸಿಕೊಂಡು ಬರುತ್ತಿದ್ದ ಮೀನು ಮಾರಾಟ ಉದ್ಯಮವನ್ನೇ ಜೀವನೋಪಾಯಕ್ಕಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಪ್ರಸಕ್ತ ಖಲೀಲ್ ಮೀನು ಮಾರಾಟಗಾರನಾಗಿ ಬದುಕು ಕಟ್ಟಿಕೊಂಡಿದ್ದಾರೆ.

ಉಳ್ಳಾಲ ತಾಲೂಕು ವಾಲಿಬಾಲ್ ಅಸೋಸಿಯೇಶನ್ ನನ್ನ ಸಾಧನೆಯನ್ನು ಗುರುತಿಸಿ ಸನ್ಮಾನಿಸಿರುವುದು ಖುಷಿ ತಂದಿದೆ. ಊರಿನ ಪ್ರತಿಭಾವಂತ ಯುವಕರಿಗೆ ತರಬೇತಿ ನೀಡಿ ಅವರನ್ನು ವಾಲಿಬಾಲ್ ಕ್ರೀಡೆಯಲ್ಲಿ ರಾಜ್ಯ, ರಾಷ್ಟ್ರಮಟ್ಟದ ಕ್ರೀಡಾಪಟುಗಳಾಗಿ ಹೊರಹೊಮ್ಮುವಂತೆ ಮಾಡುವುದು ನನ್ನ ಆಶಯ.

-ಖಲೀಲ್ ಕೈರಂಗಳ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಮುಹಮ್ಮದ್ ಅಲಿ, ಮೋಂಟುಗೋಳಿ

contributor

Similar News