ಭಾರತದ ಗಂಟಲೊಳಗೆ ಟ್ರಂಪ್ ಕಡುಬು
ಎರಡನೇ ಬಾರಿ ಅಮೆರಿಕದ ಚುಕ್ಕಾಣಿಯನ್ನು ಕೈಗೆತ್ತಿಕೊಂಡಿರುವ ಡೊನಾಲ್ಡ್ ಟ್ರಂಪ್, ಅಲ್ಲಿನ ಜನಾಂಗೀಯ ವಾದಿ ಮತ್ತು ಬಂಡವಾಳಶಾಹಿ ಶಕ್ತಿಗಳಿಗೆ ಪೂರಕವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಭಾರತದ ಗಂಟಲೊಳಗೆ ಟ್ರಂಪ್‌ನ ಕಡುಬು ಇಳಿಯುವುದು ಕಷ್ಟವಾಗಿದೆ. ತನ್ನ ಸ್ಥಾನದ ಘನತೆಯನ್ನೇ ಬಲಿಕೊಟ್ಟು ‘ಅಬ್‌ಕಿ ಬಾರ್ ಟ್ರಂಪ್ ಸರ್ಕಾರ್’ ಎಂದು ಈ ಹಿಂದೆ ಅಮೆರಿಕದ ಭಾರತೀಯ ಅನಿವಾಸಿಗಳ ಮುಂದೆ ಟ್ರಂಪ್ ಪರವಾಗಿ ಘೋಷಣೆಕೂಗಿದ್ದ ನರೇಂದ್ರ ಮೋದಿಯವರ ಮುಖಕ್ಕೆ ಹೊಡೆದಂತಿವೆ ಟ್ರಂಪ್ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು.
ಇಂಧನ, ಕ್ರಿಮಿನಲ್‌ಗಳಿಗೆ ಕ್ಷಮಾದಾನ ಮತ್ತು ವಲಸೆ ಮುಂತಾದ ವಿಷಯಗಳಿಗೆ ಸಂಬಂಧಿಸಿದ ಹಲವು ಮಹತ್ವದ ಸರಕಾರಿ ಆದೇಶಗಳು ಮತ್ತು ನಿರ್ದೇಶನಗಳಿಗೆ ಅಮೆರಿಕ ಅಧ್ಯಕ್ಷನಾಗಿ ಅಧಿಕಾರ ವಹಿಸಿದ ದಿನವೇ ಡೊನಾಲ್ಡ್ ಟ್ರಂಪ್ ಸೋಮವಾರ ಸಹಿ ಹಾಕಿದ್ದಾರೆ. 2021ರಲ್ಲಿ ಅಮೆರಿಕದ ಸಂಸತ್ ಕಟ್ಟಡ ‘ಕ್ಯಾಪಿಟಲ್’ ಮೇಲೆ ದಾಳಿ ನಡೆಸಿರುವ ಸುಮಾರು 1,500 ಮಂದಿಗೆ ಕ್ಷಮಾದಾನ ನೀಡಿದ್ದಾರೆ. ಅಮೆರಿಕ-ಮೆಕ್ಸಿಕೊ ಗಡಿಯಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ, ಪ್ಯಾರಿಸ್ ಹವಾಮಾನ ಒಪ್ಪಂದದಿಂದ ಅಮೆರಿಕವನ್ನು ಹೊರ ತಂದಿದ್ದಾರೆ. ಪಾತಕಿಗಳ ಗುಂಪುಗಳನ್ನು ಭಯೋತ್ಪಾದಕ ಸಂಘಟನೆಗಳು ಎಂಬುದಾಗಿ ಘೋಷಿಸಿದ್ದಾರೆ ಮತ್ತು ಅಮೆರಿಕದ ಖಾಯಂ ನಿವಾಸಿಗಳಲ್ಲದವರ ಅಮೆರಿಕದಲ್ಲಿ ಹುಟ್ಟಿದ ಮಕ್ಕಳಿಗೆ ‘ಜನ್ಮಸಿದ್ಧ ಪೌರತ್ವ’ ಹಕ್ಕನ್ನು ಕೊನೆಗೊಳಿಸುವ ಆದೇಶಕ್ಕೂ ಸಹಿ ಹಾಕಿದ್ದಾರೆ.ಸ್ವಯಂಚಾಲಿತವಾಗಿ ನೀಡಲಾಗುವ ಜನ್ಮಸಿದ್ಧ ಪೌರತ್ವ ಹಕ್ಕನ್ನು ಕೊನೆಗೊಳಿಸುವ ನಿರ್ಧಾರವು ಅಮೆರಿಕದ ವಲಸೆ ನೀತಿಯಲ್ಲಿನ ಮಹತ್ವದ ಬದಲಾವಣೆಯೊಂದಕ್ಕೆ ಸಾಕ್ಷಿಯಾಗಿದೆ. ಈ ನಿರ್ಧಾರವು ತಾತ್ಕಾಲಿಕ ವೀಸಾಗಳಲ್ಲಿ ಅಮೆರಿಕದಲ್ಲಿ ವಾಸಿಸುತ್ತಿರುವ ಲಕ್ಷಾಂತರ ಭಾರತೀಯರ ಮೇಲೆ ಪರಿಣಾಮಗಳನ್ನು ಬೀರಲಿವೆೆ. ಈಗಾಗಲೇ ಅನಿವಾಸಿ ಭಾರತೀಯರು ಇದರ ವಿರುದ್ಧ ಕಾನೂನು ಹೋರಾಟಗಳನ್ನು ಆರಂಭಿಸಿದ್ದಾರೆ.
ಈವರೆಗೆ, ಹೆತ್ತವರು ಯಾವುದೇ ದೇಶದ ಪ್ರಜೆಗಳಾಗಿದ್ದರೂ, ಅವರು ಅಮೆರಿಕದಲ್ಲಿ ಸಕ್ರಮ ಅಥವಾ ಅಕ್ರಮ ವಲಸಿಗರಾಗಿದ್ದರೂ ಅವರ ಮಕ್ಕಳು ಅಮೆರಿಕದಲ್ಲಿ ಹುಟ್ಟಿದರೆ ಮಕ್ಕಳಿಗೆ ಸ್ವಯಂಚಾಲಿತವಾಗಿ ಅಮೆರಿಕದ ಪೌರತ್ವ ಸಿಗುತ್ತಿತ್ತು. ಆದರೆ ಈಗ ಅದು ಬದಲಾವಣೆಯಾಗಿದೆ.1868ರಲ್ಲಿ ಜನ್ಮಸಿದ್ಧ ಪೌರತ್ವದ ವಿಧಿಗಳನ್ನು ಒಳಗೊಂಡ 14ನೇ ತಿದ್ದುಪಡಿಯನ್ನು ಅಮೆರಿಕದ ಸಂವಿಧಾನಕ್ಕೆ ತರಲಾಯಿತು. ಈ ತಿದ್ದುಪಡಿಯು ಅಮೆರಿಕದ ನೆಲದಲ್ಲಿ ಹುಟ್ಟಿದ ಬಹುತೇಕ ಎಲ್ಲಾ ಮಕ್ಕಳಿಗೆ ಅಮೆರಿಕದ ಪೌರತ್ವವನ್ನು ನೀಡುತ್ತದೆ ಎಂಬುದಾಗಿ ಹಿಂದಿನಿಂದಲೂ ವ್ಯಾಖ್ಯಾನಿಸುತ್ತಾ ಬರಲಾಗಿದೆ. ‘‘ಅಮೆರಿಕದ ಕಾರ್ಯವ್ಯಾಪ್ತಿಗೆ ಒಳಪಡುವ ಶರತ್ತು ಈಡೇರಿದರೆ, ಅಮೆರಿಕದಲ್ಲಿ ಹುಟ್ಟಿದ ಅಥವಾ ಬೇರೆ ದೇಶದಲ್ಲಿ ಹುಟ್ಟಿ ಅಮೆರಿಕದಲ್ಲಿ ಪೌರತ್ವ ಪಡೆದುಕೊಂಡಿರುವ ಎಲ್ಲಾ ವ್ಯಕ್ತಿಗಳು ಅಮೆರಿಕದ ನಾಗರಿಕರಾಗುತ್ತಾರೆ’’ ಎಂದು 14ನೇ ತಿದ್ದುಪಡಿ ಹೇಳುತ್ತದೆ.
1898ರಲ್ಲಿ, ಅಮೆರಿಕದ ಸುಪ್ರೀಂ ಕೋರ್ಟ್‌ನ ಆದೇಶವೊಂದು ‘‘ಅಮೆರಿಕದ ಖಾಯಂ ವಾಸಿಗಳಾದರೂ, ಪೌರತ್ವಕ್ಕೆ ಅರ್ಹರಲ್ಲದ ಚೀನಾ ದಂಪತಿಗೆ ಹುಟ್ಟಿದ ಮಗನೂ ಅಮೆರಿಕದ ಸಂಪೂರ್ಣ ಕಾನೂನುಬದ್ಧ ಸ್ಥಾನಮಾನ ಪಡೆಯುವ ಹಕ್ಕು ಹೊಂದಿದ್ದಾನೆ.’’ ಎಂದು ಹೇಳುತ್ತದೆ. ಆದರೆ, ಇದಕ್ಕೆ ವ್ಯತಿರಿಕ್ತವಾಗಿ, ಹೆತ್ತವರ ಪೈಕಿ ಒಬ್ಬರಾದರೂ ಅಮೆರಿಕದ ಪ್ರಜೆಯಲ್ಲದಿದ್ದರೆ ಅವರಿಗೆ ಅಮೆರಿಕದಲ್ಲಿ ಹುಟ್ಟಿದ ಮಕ್ಕಳನ್ನು ಅಮೆರಿಕದ ಪ್ರಜೆಗಳು ಎಂಬುದಾಗಿ ಮಾನ್ಯ ಮಾಡಲಾಗುವುದಿಲ್ಲ ಎಂದು ಟ್ರಂಪ್ ಹೊರಡಿಸಿರುವ ಸರಕಾರಿ ಆದೇಶ ಹೇಳುತ್ತದೆ.
ಅಮೆರಿಕದ ಸಂವಿಧಾನಕ್ಕೆ ತರಲಾಗಿರುವ ಈ ಹಿಂದಿನ 14ನೇ ತಿದ್ದುಪಡಿಯನ್ನು ತಪ್ಪಾಗಿ ವ್ಯಾಖ್ಯಾನಿಸಲಾಗಿದೆ ಎಂಬುದಾಗಿ ಟ್ರಂಪ್ ಆಡಳಿತ ವಾದಿಸಿದೆ ಹಾಗೂ ‘‘ಅಮೆರಿಕದ ಕಾರ್ಯವ್ಯಾಪ್ತಿಗೆ ಒಳಪಡುವ ಶರತ್ತು ಈಡೇರಿದರೆ’’ ಎನ್ನುವುದನ್ನು ತನ್ನ ಹಿತಾಸಕ್ತಿಗೆ ಪೂರಕವಾಗಿ ವ್ಯಾಖ್ಯಾನಿಸಲು ಮುಂದಾಗಿದೆ. ‘‘... ಆದರೆ, ಅಮೆರಿಕದಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ಸಾರ್ವತ್ರಿಕ ಪೌರತ್ವವನ್ನು ನೀಡಬೇಕು ಎಂಬುದಾಗಿ 14ನೇ ತಿದ್ದುಪಡಿ ಯಾವತ್ತೂ ಹೇಳಿಲ್ಲ. ಅಮೆರಿಕದಲ್ಲಿ ಹುಟ್ಟಿದ, ಆದರೆ ಅದರ ಕಾರ್ಯವ್ಯಾಪ್ತಿಗೆ ಒಳಪಡದ ವ್ಯಕ್ತಿಗಳನ್ನು 14ನೇ ತಿದ್ದುಪಡಿಯು ಯಾವತ್ತೂ ಜನ್ಮಸಿದ್ಧ ಪೌರತ್ವದಿಂದ ಹೊರಗಿಟ್ಟಿದೆ’’ ಎಂದು ಟ್ರಂಪ್ ಸಹಿ ಹಾಕಿರುವ ಆದೇಶ ಹೇಳುತ್ತದೆ. ಅಮೆರಿಕವನ್ನು ಅಕ್ರಮವಾಗಿ ಪ್ರವೇಶಿಸುವ ಜನರನ್ನು ಹೊರಗಿಡಲು ಈ ವ್ಯಾಖ್ಯಾನವನ್ನು ಬಳಸಬೇಕು ಎಂಬುದಾಗಿ ಅಮೆರಿಕದ ಬಲಪಂಥೀಯರು ಹೇಳುತ್ತಲೇ ಬಂದಿದ್ದು, ಅದನ್ನೀಗ ಜಾರಿಗೊಳಿಸಲು ಟ್ರಂಪ್ ಮುಂದಾಗಿದ್ದಾರೆ.
ಇದು ಭಾರತೀಯರ ಮೇಲೆ ತೀವ್ರ ಪರಿಣಾಮವನ್ನು ಬೀರುವುದರಲ್ಲಿ ಅನುಮಾನವಿಲ್ಲ. ಅಮೆರಿಕದ ಇತ್ತೀಚಿನ ಜನಗಣತಿಯ ಪ್ರಕಾರ, ಅಮೆರಿಕದಲ್ಲಿ 54 ಲಕ್ಷಕ್ಕೂ ಅಧಿಕ ಭಾರತೀಯರು ಇದ್ದಾರೆ. ಇದು ಅಮೆರಿಕದ ಜನಸಂಖ್ಯೆಯ ಸುಮಾರು 1.47 ಶೇಕಡ ಆಗುತ್ತದೆ. ಈ ಪೈಕಿ, ಮೂರನೇ ಎರಡು ಭಾಗ ವಲಸಿಗರಾಗಿದ್ದಾರೆ ಮತ್ತು 34 ಶೇಕಡದಷ್ಟು ಮಂದಿ ಅಮೆರಿಕದಲ್ಲಿ ಹುಟ್ಟಿದವರಾಗಿದ್ದಾರೆ. ಟ್ರಂಪ್‌ರ ಆದೇಶ ಜಾರಿಯಾದರೆ, ತಾತ್ಕಾಲಿಕ ಉದ್ಯೋಗ ವೀಸಾ ಅಥವಾ ಪ್ರವಾಸಿ ವೀಸಾಗಳಲ್ಲಿ ಅಮೆರಿಕದಲ್ಲಿ ವಾಸಿಸುತ್ತಿರುವ ಭಾರತೀಯ ಪ್ರಜೆಗಳಿಗೆ ಹುಟ್ಟಿದ ಮಕ್ಕಳಿಗೆ ಸ್ವಯಂಚಾಲಿತವಾಗಿ ಪೌರತ್ವ ಲಭಿಸುವುದಿಲ್ಲ. ಅದೂ ಅಲ್ಲದೆ, ಮಕ್ಕಳನ್ನು ಹೆರುವುದಕ್ಕಾಗಿಯೇ ಅಮೆರಿಕಕ್ಕೆ ಪ್ರವಾಸ ಕೈಗೊಳ್ಳುವ ‘ಹೆರಿಗೆ ಪ್ರವಾಸೋದ್ಯಮ’ದ ಪ್ರವೃತ್ತಿಯೂ ಇದರೊಂದಿಗೆ ಕೊನೆಗೊಳ್ಳುತ್ತದೆ. ಅಮೆರಿಕದಲ್ಲಿ ಮಕ್ಕಳನ್ನು ಹೆತ್ತರೆ ಆ ಮಕ್ಕಳಿಗೆ ಆ ದೇಶದ ಪೌರತ್ವ ತನ್ನಿಂತಾನೆ ಸಿಗುತ್ತದೆ ಎನ್ನುವುದು ‘ಹೆರಿಗೆ ಪ್ರವಾಸೋದ್ಯಮ’ದ ಹಿಂದಿನ ಉದ್ದೇಶವಾಗಿದೆ. ತಮ್ಮ ಮಕ್ಕಳಿಗೆ ಅಮೆರಿಕದ ಸ್ವಯಂಚಾಲಿತ ಪೌರತ್ವವನ್ನು ಗಳಿಸಿಕೊಡುವುದಕ್ಕಾಗಿ ಮೆಕ್ಸಿಕನ್ನರು ಮತ್ತು ಭಾರತೀಯರು ‘ಹೆರಿಗೆ ಪ್ರವಾಸೋದ್ಯಮ’ದ ಮಾರ್ಗವನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ!
ಅಮೆರಿಕದ ನಿರ್ಧಾರಗಳಿಂದ ಭಾರತ ಕಂಪಿಸಿರುವುದು ಸುಳ್ಳಲ್ಲ. ಅಮೆರಿಕದಲ್ಲಿದ್ದು ಭಾರತದ ಮಧ್ಯಮವರ್ಗಕ್ಕೆ ದೇಶಪ್ರೇಮವನ್ನು ಬೋಧಿಸುವ ಭಾರತೀಯ ಅನಿವಾಸಿಗಳಾಗಿರುವ ಮೋದಿ ಅಭಿಮಾನಿಗಳು ಟ್ರಂಪ್ ತುರುಕಿದ ಕಡುಬನ್ನು ನುಂಗಲೂ ಆಗದೆ, ಉಗುಳಲೂ ಆಗದೆ ಏದುಸಿರು ಬಿಡುತ್ತಿದ್ದಾರೆ. ‘ಅಮೆರಿಕ ತನ್ನ ಮಿತ್ರ’ ಎನ್ನುವುದನ್ನು ಸಾಬೀತು ಪಡಿಸಲು ಹರ ಸಾಹಸ ನಡೆಸುತ್ತಲೇ ಬಂದಿರುವ ಮೋದಿ ನೇತೃತ್ವದ ಸರಕಾರ, ಇದೀಗ ಅಮೆರಿಕದ ನಿರ್ಧಾರಗಳಿಂದ ಆಗಬಹುದಾದ ಅನಾಹುತಗಳನ್ನು ಸರಿದೂಗಿಸಲು ಮತ್ತು ಅಮೆರಿಕವನ್ನು ಮನವೊಲಿಸಲು ಗರಿಷ್ಠ ಪ್ರಯತ್ನ ಪಡುತ್ತಿದೆ. ಅತ್ತ ಅಮೆರಿಕ ತನ್ನ ನಿರ್ಧಾರಗಳನ್ನು ಘೋಷಿಸಿದ ಬೆನ್ನಿಗೇ ಇತ್ತ, 18,000 ಅಕ್ರಮ ವಲಸಿಗರನ್ನು ಕರೆಸಿಕೊಳ್ಳಲು ಸಿದ್ಧ ಎಂದು ಭಾರತ ಹೇಳಿಕೆ ನೀಡಿದೆ. ಅಮೆರಿಕವು ಸ್ವದೇಶಕ್ಕೆ ಕಳುಹಿಸಲು ಸುಮಾರು 18,000 ಭಾರತೀಯರನ್ನು ಅಕ್ರಮ ವಲಸಿಗರು ಎಂದು ಗುರುತಿಸಿದ್ದು, ಇವರ ಗಡಿಪಾರು ಪ್ರಕ್ರಿಯೆಗೆ ಭಾರತ ಪೂರ್ಣ ಸಹಕಾರವನ್ನು ನೀಡಲಿದೆ ಎಂದು ಹೇಳಿದೆ. ಅಕ್ರಮ ವಲಸಿಗರಲ್ಲಿ ಗುಜರಾತ್ ಮೂಲದ ಜನರೇ ಹೆಚ್ಚಿರುವುದು ಗಮನಾರ್ಹವಾಗಿದೆ. ಭಾರತದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ, ಆರ್ಥಿಕ ಹಿಂಜರಿತ, ರಾಜಕೀಯ ಅರಾಜಕತೆ ಇವೆಲ್ಲವೂ ಅಧಿಕೃತ ಮತ್ತು ಅಕ್ರಮ ವಲಸೆಗಳನ್ನು ಹೆಚ್ಚಿಸಿದೆ. ಇದೀಗ ಅಮೆರಿಕ ಇದನ್ನೇ ಭಾರತಕ್ಕೆ ತಿರುಗುಬಾಣವಾಗಿ ಬಳಸಿದೆ. ಬಹುಶಃ ಈ ನಿರ್ಧಾರಗಳ ಮೂಲಕ ಭಾರತದ ಮೇಲೆ ಪರೋಕ್ಷ ಒತ್ತಡಗಳನ್ನು ಹಾಕಿ ತನ್ನ ಹಿತಾಸಕ್ತಿಯನ್ನು ಸಾಧಿಸುವುದು ಕೂಡ ಟ್ರಂಪ್‌ಗುರಿಯಾಗಿದೆ. ಮುಂದಿನ ದಿನಗಳಲ್ಲಿ ಈ ಬಿಕ್ಕಟ್ಟುಗಳನ್ನು ಭಾರತ ಹೇಗೆ ನಿಭಾಯಿಸಲಿದೆ ಎನ್ನುವುದನ್ನು ಕಾದು ನೋಡಬೇಕು. ಇದೇ ಸಂದರ್ಭದಲ್ಲಿ ಟ್ರಂಪ್ ಒತ್ತಡಕ್ಕೆ ಸಿಲುಕಿ ಇಂಧನ ಮತ್ತು ರಕ್ಷಣಾ ಒಪ್ಪಂದಗಳಿಗೆ ಸಂಬಂಧಿಸಿ ಭಾರತವು ರಶ್ಯ ಸೇರಿದಂತೆ ಅಮೆರಿಕ ವಿರೋಧಿ ದೇಶಗಳ ಜೊತೆಗೆ ಇಟ್ಟುಕೊಂಡಿರುವ ಸಂಬಂಧಗಳನ್ನು ಹೇಗೆ ನಿಭಾಯಿಸುತ್ತದೆ ಎನ್ನುವುದು ಕೂಡ ಟ್ರಂಪ್-ಮೋದಿ ನಡುವಿನ ಸಂಬಂಧದ ಮುಂದುವರಿಕೆಯಲ್ಲಿ ಮುಖ್ಯ ಪಾತ್ರವಹಿಸುತ್ತದೆ.