×
Ad

ಬಿಜೆಪಿ ವರಿಷ್ಠರೇ ಸಾಕಿರುವ ಹದ್ದು

Update: 2025-02-22 08:30 IST

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

‘‘ರಾಜ್ಯಾಧ್ಯಕ್ಷರ ಚುನಾವಣೆ ನಡೆಸುವ ಮೂಲಕ ಭಿನ್ನಮತ ಪರಿಹಾರವಾಗುತ್ತದೆ’’ ಎನ್ನುವ ಬಿಜೆಪಿ ವರಿಷ್ಠರ ನಂಬಿಕೆ ಹುಸಿಯಾಗಿದೆ. ‘‘ವರಿಷ್ಠರು ರಾಜ್ಯದಲ್ಲಿ ನಡೆಸುತ್ತಿರುವ ಚುನಾವಣೆಗಳ ಮೇಲೆಯೇ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ನಿಯಂತ್ರಣ ಸಾಧಿಸಿದ್ದಾರೆ, ಈ ಚುನಾವಣೆಯ ಮೇಲೆ ನಂಬಿಕೆಯಿಲ್ಲ’’ ಎನ್ನುವ ಮೂಲಕ ವರಿಷ್ಠರಿಗೆ ಯತ್ನಾಳ್ ಮತ್ತೊಮ್ಮೆ ಸೆಡ್ಡು ಹೊಡೆದಿದ್ದಾರೆ ಮಾತ್ರವಲ್ಲ, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಸ್ಪರ್ಧೆಯಿಂದ ಸಂಪೂರ್ಣ ಹಿಂದೆ ಸರಿದಿದೆ. ಇದರ ಅರ್ಥ, ವಿಜಯೇಂದ್ರ ಅವರ ನಾಯಕತ್ವವನ್ನು ಯತ್ನಾಳ್ ಬಣ ಅವಿರೋಧವಾಗಿ ಒಪ್ಪಿಕೊಂಡಿದೆ ಎಂದಲ್ಲ. ಚುನಾವಣೆಯ ಪ್ರಕ್ರಿಯೆಯ ಬಗ್ಗೆಯೇ ಅವರು ನಂಬಿಕೆಯನ್ನು ಹೊಂದಿಲ್ಲ. ಹಾಗಾದರೆ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆಯ ಬಗೆಯಾದರೂ ಹೇಗೆ? ಎನ್ನುವುದರ ಬಗ್ಗೆ ಯತ್ನಾಳ್ ಗುಂಪಿನ ಬಳಿ ಪರಿಹಾರವಿಲ್ಲ. ಅವರ ಒಂದೇ ಅಜೆಂಡಾ ‘‘ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನು ಬದಲಿಸಬೇಕು. ಚುನಾವಣೆ ನಡೆಸಿದರೆ ಅವರೇ ಮರು ಆಯ್ಕೆಯಾಗುವ ಸಾಧ್ಯತೆಗಳಿರುವ ಕಾರಣದಿಂದ ವರಿಷ್ಠರೇ ನೇರವಾಗಿ ಹಸ್ತಕ್ಷೇಪ ನಡೆಸಿ, ಸೂಕ್ತ ಅಭ್ಯರ್ಥಿಯನ್ನು ಗುರುತಿಸಿ ರಾಜ್ಯಾಧ್ಯಕ್ಷರನ್ನಾಗಿ ಮಾಡಬೇಕು’’ ಎನ್ನುವುದು ಇಂಗಿತವಾಗಿದೆ. ಅಂದರೆ ಚುನಾವಣೆ ನಡೆಯುವ ಮೊದಲೇ ಯತ್ನಾಳ್ ಗುಂಪು ಸೋಲನ್ನೊಪ್ಪಿಕೊಂಡಿದೆ. ಚುನಾವಣೆ ನಡೆದರೆ ಗೆಲುವು ತನ್ನದೇ ಎನ್ನುವುದು ಸ್ಪಷ್ಟವಿರುವಾಗ, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಇನ್ನೊಬ್ಬನನ್ನು ಆಯ್ಕೆ ಮಾಡುವುದನ್ನು ವಿಜಯೇಂದ್ರ ಒಪ್ಪಿಕೊಳ್ಳುವುದು ಸಾಧ್ಯವಿಲ್ಲದ ಮಾತು. ರಾಜ್ಯ ಬಿಜೆಪಿಯ ಸಮಸ್ಯೆ ಒಂದಿಂಚು ಸರಿದಿಲ್ಲ. ಅದನ್ನು ಪರಿಹರಿಸುವಲ್ಲಿ ವರಿಷ್ಠರು ಸಂಪೂರ್ಣ ವಿಫಲರಾಗಿರುವುದು ಮೇಲ್ನೋಟಕ್ಕೆ ಗೊತ್ತಾಗಿ ಬಿಡುತ್ತದೆ.

ಯತ್ನಾಳ್ ಅವರಿಗೆ ನೀಡಿರುವ ನೋಟಿಸ್ ಈಗ ಚರ್ಚೆಯಲ್ಲಿದೆ. ‘‘ನನಗೆ ನೋಟಿಸ್ ಬರುವ ಮೊದಲೇ ಮಾಧ್ಯಮಗಳಿಗೆ ಅದನ್ನು ಬಿಡುಗಡೆ ಮಾಡಿದ್ದು ಯಾರು? ವಿಜಯೇಂದ್ರ ಇಂತಹ ಕುಲಗೆಟ್ಟ ಕೆಲಸ ಬಿಡಬೇಕು. ಈಗಿನ ನೋಟಿಸ್ ಬಗ್ಗೆ ನಾನು ಏನೂ ಹೇಳುವುದಿಲ್ಲ. ಮಾಧ್ಯಮಗಳಿಗೆ ಈಗಿನ ನೋಟಿಸ್ ವಿಚಾರ ಸೋರಿಕೆ ಮಾಡಿದ್ದೇ ಅವನು’’ ಎಂದು ಏಕ ವಚನದಲ್ಲಿ ಯತ್ನಾಳ್ ಆರೋಪ ಮಾಡಿದ್ದಾರೆ. ನೋಟಿಸ್‌ಗೆ ಸ್ಪಷ್ಟೀಕರಣ ನೀಡಿ ತನ್ನ ಮೇಲಿರುವ ಆರೋಪಗಳನ್ನು ನಿರಾಕರಿಸುವ ಬದಲು, ನೋಟಿಸ್‌ಗೆ ಪ್ರತಿ ಸವಾಲು ಹಾಕುವಂತೆ ಅವರು ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಮೇಲೆ ಪ್ರತಿ ದಾಳಿ ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ ಕುಮಾರ ಬಂಗಾರಪ್ಪ ನಿವಾಸದಲ್ಲಿ ನಡೆದ ಸಭೆಯಲ್ಲಿ ವರಿಷ್ಠರ ತೀರ್ಮಾನಕ್ಕೆ ಬದ್ಧರಾಗುವ ನಿರ್ಣಯವನ್ನೂ ಕೈಗೊಂಡಿದ್ದಾರೆ. ವರಿಷ್ಠರ ನಿರ್ಧಾರಕ್ಕೆ ಯತ್ನಾಳ್ ಬಣ ಬದ್ಧರಾಗಿರುವುದು ನಿಜವೇ ಆಗಿದ್ದರೆ, ವಿಜಯೇಂದ್ರ ವಿರುದ್ಧದ ದಾಳಿಯನ್ನು ಮುಂದುವರಿಸಿರುವುದು ಯಾಕೆ? ಎನ್ನುವ ಪ್ರಶ್ನೆ ಎದುರಾಗುತ್ತದೆ. ವಿಜಯೇಂದ್ರ ವಿರುದ್ಧ ನಡೆಸುತ್ತಿರುವ ದಾಳಿ, ವರಿಷ್ಠರ ನಿರ್ಧಾರದ ಅನುಸಾರವಾಗಿ ನಡೆಯುತ್ತಿದೆಯೇ ಎನ್ನುವ ಅನುಮಾನ ಪಕ್ಷದೊಳಗಿರುವ ಕಾರ್ಯಕರ್ತರನ್ನು ಕಾಡುವುದು ಕೂಡ ಸಹಜವೇ ಆಗಿದೆ. ವರಿಷ್ಠರು ನೋಟಿಸ್‌ಗಳನ್ನು ನೀಡಿದಂತೆ ಮಾಡುವುದು ಮತ್ತು ಯತ್ನಾಳ್ ಅದಕ್ಕೆ ಉತ್ತರಿಸಿದಂತೆ ಮಾಡುವುದು ಮುಂದುವರಿದಿದೆ. ಇದೊಂದು ರೀತಿಯಲ್ಲಿ ‘‘ನಾವು ಹೊಡೆದಂತೆ ಮಾಡುತ್ತೇವೆ, ನೀನು ಅತ್ತಂತೆ ಮಾಡು’’ ಎಂಬ ಗಾದೆಯಂತಾಗಿದೆ. ನಿಜಕ್ಕೂ ವರಿಷ್ಠರಿಗೆ ಯತ್ನಾಳ್‌ರ ಬಾಯಿ ಮುಚ್ಚಿಸುವ ಉದ್ದೇಶ ಇದೆಯೆ? ಅಥವಾ ನಟನೆಯನ್ನಷ್ಟೇ ಮಾಡುತ್ತಿದ್ದಾರೆಯೆ?

ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಅವರು ಆಯ್ಕೆಯಾದ ಬಳಿಕವೂ, ತಮ್ಮ ಪ್ರತ್ಯೇಕ ಹೋರಾಟವನ್ನು ಕೈಬಿಡುವುದಿಲ್ಲ ಎನ್ನುವ ಸೂಚನೆಯನ್ನು ಯತ್ನಾಳ್ ನೀಡಿದ್ದಾರೆ. ಈಗಾಗಲೇ ರಾಜ್ಯಾಧ್ಯಕ್ಷರನ್ನು ಹೊರಗಿಟ್ಟು ವಕ್ಫ್ ವಿರುದ್ಧ ಹೋರಾಟ ನಡೆಸಿದ್ದ ಯತ್ನಾಳ್ ಗುಂಪು, ಮುಂದಿನ ದಿನಗಳಲ್ಲಿ ಬಾಂಗ್ಲಾ ನುಸುಳುಕೋರರ ವಿರುದ್ಧ ಹೋರಾಡುವ ಸೂಚನೆಯನ್ನು ನೀಡಿದೆ. ವಕ್ಫ್ ವಿರುದ್ಧ ಹೋರಾಟ, ಬಾಂಗ್ಲಾ ನುಸುಳುಕೋರರ ವಿರುದ್ಧ ಹೋರಾಟ ಇವೆಲ್ಲ ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳಲ್ಲ. ಆರೆಸ್ಸೆಸ್‌ಗೆ ಇಷ್ಟವಾದ ದ್ವೇಷ ರಾಜಕಾರಣಕ್ಕೆ ತುಪ್ಪ ಸುರಿಯಬಲ್ಲ ವಿಷಯಗಳಿವು. ಸಾರ್ವಜನಿಕ ಸಮಾವೇಶಗಳಲ್ಲಿ ಅತ್ಯಂತ ಅವಿವೇಕಿಯಂತೆ ಭಾಷಣ ಮಾಡುತ್ತಾ, ನಾಡನ್ನು ತನ್ನ ವಿಭಜನೆಯ ರಾಜಕೀಯಕ್ಕೆ ಬಲಿಕೊಡಲು ತುದಿಗಾಲಲ್ಲಿ ನಿಂತಿರುವ ಯತ್ನಾಳ್ ಲಿಂಗಾಯತನಾದರೂ, ಆರೆಸ್ಸೆಸ್ ಜೀತಕ್ಕೆ ಬಸವಣ್ಣರನ್ನೂ ತಲೆದಂಡ ನೀಡಲು ಹೇಸದವರು. ಆರೆಸ್ಸೆಸ್ ಮತ್ತು ಬಿಜೆಪಿಯೊಳಗಿರುವ ಒಂದು ಗುಂಪಿಗೆ ಯತ್ನಾಳ್ ಉಪಸ್ಥಿತಿ ಅತ್ಯಗತ್ಯವಾಗಿ ಬೇಕಾಗಿದೆ. ಅವರು ಯತ್ನಾಳ್‌ರನ್ನು ಬಹಿರಂಗವಾಗಿ ಬೆಂಬಲಿಸದಿದ್ದರೂ, ಅವರ ಪುಂಡಾಟಗಳಿಗೆ ಹಿಂದಿನಿಂದ ಕುಮ್ಮಕ್ಕು ನೀಡುತ್ತಿರುವುದು ಯಡಿಯೂರಪ್ಪ ಅವರಿಗೂ ಸ್ಪಷ್ಟವಾಗಿಯೇ ಗೊತ್ತಿದೆ. ನಿಜಕ್ಕೂ ಯತ್ನಾಳ್ ಅವರನ್ನು ಬಾಯಿ ಮುಚ್ಚಿಸುವ ಉದ್ದೇಶ ವರಿಷ್ಠರಿಗಿದ್ದರೆ, ಯಾವತ್ತೋ ಕೆಲಸ ಆಗಿ ಬಿಡುತ್ತ್ತಿತ್ತು. ಯಡಿಯೂರಪ್ಪ ಬಣದ ನಿಯಂತ್ರಣದಿಂದ ಬಿಜೆಪಿಯನ್ನು ಬಿಡಿಸಿಕೊಳ್ಳುವುದು ವರಿಷ್ಠರಿಗೂ ಬೇಕಾಗಿದೆ. ಆದರೆ ಅದನ್ನು ಬಹಿರಂಗವಾಗಿ ಜಾರಿಗೆ ತರುವ ಧೈರ್ಯವಿಲ್ಲ. ಈ ಕಾರಣದಿಂದಲೇ ಯತ್ನಾಳ್‌ರಂತಹ ಲಿಂಗಾಯತರು, ಈಶ್ವರಪ್ಪರಂತಹ ಕುರುಬ ಸಮುದಾಯದ ನಾಯಕರನ್ನು ಮುಂದಕ್ಕಿಟ್ಟು ತಾನು ಮಾತ್ರ ಅಮಾಯಕನಂತೆ ಅಭಿನಯಿಸುತ್ತಿದ್ದಾರೆ. ಆದುದರಿಂದಲೇ, ಯತ್ನಾಳ್‌ರ ಬಾಯಿ ಮುಚ್ಚಿಸುವುದಕ್ಕೆ ವರಿಷ್ಠರ ನೋಟಿಸ್‌ಗಳಿಗೆ ಸಾಧ್ಯವಾಗುತ್ತಿಲ್ಲ.

ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಅವರು ಅಧಿಕೃತವಾಗಿ ಆಯ್ಕೆಯಾದರೆ ವರಿಷ್ಠರು ಯತ್ನಾಳ್ ವಿರುದ್ಧ ಒಂದು ಸ್ಪಷ್ಟ ನಿರ್ಧಾರಕ್ಕೆ ಬರಲೇ ಬೇಕಾಗುತ್ತದೆ. ಯಾಕೆಂದರೆ, ‘‘ಮೌನ ನನ್ನ ದೌರ್ಬಲ್ಯವಲ್ಲ’’ ಎಂದು ಈಗಾಗಲೇ ವಿಜಯೇಂದ್ರ ಅವರು ಸ್ಪಷ್ಟಪಡಿಸಿದ್ದಾರೆ. ‘‘ಯತ್ನಾಳ್ ಮಾತನಾಡಿದ್ದನ್ನೆಲ್ಲ ಪಟ್ಟಿ ಮಾಡಿಟ್ಟುಕೊಂಡು ಒಂದೇ ಬಾರಿ ಉತ್ತರಿಸುವೆ’’ ಎಂದು ಅವರು ಎಚ್ಚರಿಸಿದ್ದಾರೆ. ಈ ಎಚ್ಚರಿಕೆ ಬರೇ ಯತ್ನಾಳ್ ಅವರಿಗೆ ಮಾತ್ರವಲ್ಲ. ಕೇಂದ್ರದ ವರಿಷ್ಠರಿಗೂ ರಾಜ್ಯದ ಆರೆಸ್ಸೆಸ್ ಮುಖಂಡರಿಗೂ ಅವರು ನೀಡಿರುವ ಪರೋಕ್ಷ ಬೆದರಿಕೆಯಾಗಿದೆ. ಯತ್ನಾಳ್ ಬಾಯಿ ಮುಚ್ಚಿಸದಿದ್ದರೆ ನಾನು ಬಾಯಿ ತೆರೆಯಬೇಕಾಗುತ್ತದೆ ಎನ್ನುವ ಸೂಚನೆ ಅದರಲ್ಲಿದೆ. ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಬಳಿಕವೂ ಯತ್ನಾಳ್ ಹಳೆ ಚಾಳಿಯನ್ನು ಮುಂದುವರಿಸಿದರೆ, ಅವರ ವಿರುದ್ಧ ಕ್ರಮ ತೆಗೆದುಕೊಳ್ಳದೇ ಇರುವ ಯಾವುದೇ ಕಾರಣಗಳು ವರಿಷ್ಠರ ಬಳಿ ಇರುವುದಿಲ್ಲ. ತನ್ನ ಸ್ಥಾನ ಉಳಿಸಿಕೊಳ್ಳಲು ಗರಿಷ್ಠ ಮೌನವನ್ನು ವಿಜಯೇಂದ್ರ ಪಾಲಿಸಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇಷ್ಟಕ್ಕೂ ಯತ್ನಾಳ್ ಪರವಾಗಿ ತಳಸ್ತರದಲ್ಲಿ ಕಾರ್ಯಕರ್ತರು ಇಲ್ಲ ಎನ್ನುವುದು ಈಗಾಗಲೇ ಜಿಲ್ಲಾ ಮಟ್ಟದ ಚುನಾವಣೆಗಳಲ್ಲಿ ಸಾಬೀತಾಗಿದೆ. ಅವರ ಮೇಲೆ ಕ್ರಮ ತೆಗೆದುಕೊಂಡರೆ ಬಿಜೆಪಿಗೆ ಧಕ್ಕೆಯಾಗುವಂತಹದೇನೂ ಇಲ್ಲ. ಯತ್ನಾಳ್‌ರನ್ನು ಪಕ್ಷದಿಂದ ವಜಾಗೊಳಿಸಿದರೆ ಅವರು ಬೀದಿಪಾಲಾಗಬೇಕಾಗುತ್ತದೆಯೇ ಹೊರತು, ಬೇರೆ ಪಕ್ಷಗಳು ಅವರನ್ನು ಆಹ್ವಾನಿಸಿ ಉತ್ತಮ ಸ್ಥಾನಮಾನಕೊಡುವ ಸಾಧ್ಯತೆಗಳೇನೂ ಇಲ್ಲ. ಒಟ್ಟಿನಲ್ಲಿ ಬಿಜೆಪಿಯ ಬಣ ರಾಜಕೀಯ ವರಿಷ್ಠರ ಮುಷ್ಟಿಯೊಳಗಿದೆ. ಅವರು ಅಮುಕಿದರೆ ಅದು ಸಾಯುತ್ತದೆ. ಆದರೆ ಅದಕ್ಕೆ ವರಿಷ್ಠರೇ ಸಿದ್ಧರಿಲ್ಲ ಎನ್ನುವುದು ಸದ್ಯದ ರಾಜ್ಯ ಬಿಜೆಪಿಯ ಅತಿದೊಡ್ಡ ಸಮಸ್ಯೆ. ಇದುವೇ ಯತ್ನಾಳ್‌ರ ಶಕ್ತಿಯು ಕೂಡ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News