ಜಾತಿಗಣತಿ: ಗಣಪತಿ ಮದುವೆ ಎಂದು?
ಭಾರತದಲ್ಲೇ ಮೊತ್ತ ಮೊದಲು ಜಾತಿಗಣತಿ ಆರಂಭಿಸಿದ್ದು ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರಕಾರ. ಆದರೆ ವರದಿಯನ್ನು ಮೊದಲು ಬಹಿರಂಗಗೊಳಿಸಿದ್ದು ಬಿಹಾರ. ರಾಜ್ಯದಲ್ಲಿ ಜಾತಿಗಣತಿ ವರದಿ ಸಿದ್ಧಗೊಂಡು ಹಲವು ವರ್ಷಗಳು ಉರುಳಿವೆಯಾದರೂ, ಅದನ್ನು ಸಂಪುಟ ಸಭೆಯಲ್ಲಿ ಬಹಿರಂಗಗೊಳಿಸುವುದು ಸರಕಾರಕ್ಕೆ ಅಸಾಧ್ಯವಾಗಿದೆ. ಈ ಹಿಂದೆ ಬಿಜೆಪಿ ಸರಕಾರ ಉದ್ದೇಶ ಪೂರ್ವಕವಾಗಿ ಜಾತಿಗಣತಿಯನ್ನು ಜಾರಿಗೊಳಿಸಲು ಮುಂದಾಗಲಿಲ್ಲ. ಯಾಕೆಂದರೆ ಆರಂಭದಿಂದಲೂ ಬಿಜೆಪಿ ಜಾತಿಗಣತಿಯನ್ನು ವಿರೋಧಿಸುತ್ತಾ ಬಂದಿತ್ತು. ಆದರೆ ಈ ಗಣತಿಗೆ ಚಾಲನೆ ನೀಡಿದ ಕಾಂಗ್ರೆಸ್ ಪಕ್ಷವೂ ವರದಿ ಮಂಡನೆಗೆ ಹಿಂದೇಟು ಹಾಕುತ್ತಿರುವುದು ವಿಪರ್ಯಾಸವಾಗಿದೆ. ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡು ಸರಕಾರ ರಚನೆ ಮಾಡಿದ ಸಂದರ್ಭದಲ್ಲಿ, ಕಾಂಗ್ರೆಸ್‌ಗೆ ವರದಿ ಮಂಡಿಸಲು ಕುಮಾರಸ್ವಾಮಿ ಅಡ್ಡಿಯಾಗಿದ್ದರು ಎಂದು ಭಾವಿಸೋಣ. ಆದರೆ ಇದೀಗ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಸ್ತಿತ್ವದಲ್ಲಿದೆ. ದಲಿತರು, ಹಿಂದುಳಿದವರ್ಗ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿಯನ್ನೇ ಕೇಂದ್ರವಾಗಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತ ನಡೆಸುತ್ತಿದ್ದಾರೆ. ಜಾತಿ ಗಣತಿ ವರದಿಯನ್ನು ಮಂಡಿಸಿ, ಅದರಲ್ಲಿರುವ ವಿವರಗಳನ್ನು ಬಹಿರಂಗಗೊಳಿಸಲು ಇದಕ್ಕಿಂತ ಒಳ್ಳೆಯ ಸಮಯ ಇನ್ನೊಂದಿಲ್ಲ. ಆದರೂ, ಸರಕಾರ ವರದಿಯನ್ನು ಬಹಿರಂಗ ಪಡಿಸಲು ಹಿಂಜರಿಯುತ್ತಿದೆ. ಈ ಹಿಂದೆ ಭರವಸೆ ನೀಡಿದಂತೆ, ಗುರುವಾರ ನಡೆದ ಸಂಪುಟ ಸಭೆಯಲ್ಲಿ ವರದಿ ಮಂಡನೆಯಾಗಿ ಚರ್ಚೆಗೆ ಬರಬೇಕಾಗಿತ್ತು. ವರದಿ ಚರ್ಚೆಯಾಗಲಿ ಎಂದು ಗೃಹ ಸಚಿವ ಪರಮೇಶ್ವರ್ ಕೂಡ ಮಾಧ್ಯಮಗಳ ಮುಂದೆ ಹೇಳಿಕೆಯನ್ನು ನೀಡಿದ್ದರು. ವರದಿ ಜಾರಿಗೊಳ್ಳುತ್ತದೆ ಎನ್ನುವ ಭರವಸೆಯನ್ನು ಸಿದ್ದರಾಮಯ್ಯ ಅವರು ಹಲವು ಬಾರಿ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ. ಇಷ್ಟಾದರೂ, ಕೊನೆಯ ಕ್ಷಣದಲ್ಲಿ ಜಾತಿ ಗಣತಿ ವರದಿ ಮಂಡನೆಯನ್ನು ಸರಕಾರ ಮುಂದಕ್ಕೆ ಹಾಕಿದೆ.
ಸಿದ್ದರಾಮಯ್ಯ ನೇತೃತ್ವದ ಸರಕಾರ ಜಾತಿ ಗಣತಿಯನ್ನು ತನ್ನ ಸಾಧನೆಯಾಗಿ ರಾಜ್ಯದ ಮುಂದೆ ಬಿಂಬಿಸಬೇಕಾಗಿತ್ತು. ಇಂದು ಇಡೀ ದೇಶ ಜಾತಿ ಗಣತಿಯ ಬಗ್ಗೆ ಚರ್ಚಿಸುತ್ತಿದೆ. ಆರಂಭದಲ್ಲಿ ಜಾತಿಗಣತಿಯ ವಿರುದ್ಧ ಹೇಳಿಕೆ ನೀಡುತ್ತಿದ್ದ ಬಿಜೆಪಿ ಕೂಡ ಜಾತಿಗಣತಿಯ ಪರ ಮಾಡತನಾಡುವಷ್ಟು ಸುಧಾರಿಸಿದೆ. ಬಿಹಾರದಲ್ಲಿ ಜಾತಿ ಗಣತಿ ವರದಿ ಮಂಡನೆಯಾದ ಬಳಿಕ ಉಳಿದ ರಾಜ್ಯಗಳು ಒಂದೊಂದಾಗಿ ಜಾತಿಗಣತಿಯ ಬಗ್ಗೆ ಆಸಕ್ತಿಯನ್ನು ತೋರಿಸುತ್ತಿವೆ. ಜಾತಿ ಗಣತಿಯ ಬಗ್ಗೆ ದುರ್ಬಲ ಜಾತಿಗಳು ಆಸಕ್ತಿ ತೋರಿಸುತ್ತಿರುವುದರಿಂದಾಗಿ ಅದನ್ನು ಸಂಪೂರ್ಣವಾಗಿ ನಿರಾಕರಿಸುವಂತಹ ಸ್ಥಿತಿಯಲ್ಲಿ ಬಿಜೆಪಿ ಇಲ್ಲ. ಆರೆಸ್ಸೆಸ್ ಕೂಡ ಜಾತಿ ಗಣತಿಯ ಬಗ್ಗೆ ಮೃದು ಮಾತುಗಳನ್ನು ಆಡಿವೆ. ಒಳಗಿಂದೊಳಗೆ ಜಾತಿಗಣತಿಯ ಬಗ್ಗೆ ಮಸಲತ್ತು ಮಾಡುತ್ತಿದೆೆಯಾದರೂ, ಬಹಿರಂಗವಾಗಿ ಅದರ ವಿರುದ್ಧ ಮಾತನಾಡುವ ಧೈರ್ಯ ಆರೆಸ್ಸೆಸ್‌ಗೆ ಇಲ್ಲವಾಗಿದೆ. ಇಂತಹ ಸಂದರ್ಭದಲ್ಲಿ ಇಡೀ ದೇಶಕ್ಕೆ ಮಾದರಿಯಾಗುವಂತೆ ಕರ್ನಾಟಕ ಜಾತಿ ಗಣತಿಯನ್ನು ಹಲವು ವರ್ಷಗಳ ಹಿಂದೆಯೇ ಪೂರ್ತಿಗೊಳಿಸಿದೆ. ಇದಕ್ಕೆ ಚಾಲನೆಯನ್ನು ನೀಡಿದ್ದು ಕಾಂಗ್ರೆಸ್ ಸರಕಾರವಾಗಿರುವುದರಿಂದ, ಅದನ್ನು ತನ್ನ ಸಾಧನೆಯಾಗಿ ಹೆಮ್ಮೆಯಿಂದ ಮಂಡನೆ ಮಾಡಬೇಕಾಗಿರುವುದು ಕೂಡ ಕಾಂಗ್ರೆಸ್ ಸರಕಾರವಾಗಿದೆ. ವಿಪರ್ಯಾಸವೆಂದರೆ, ತಾನೇ ಚಾಲನೆ ನೀಡಿದ ಕಾರ್ಯಕ್ಕೆ ಇದೀಗ ತಾನೇ ಕೀಳರಿಮೆ ಪಟ್ಟುಕೊಳ್ಳುತ್ತಿದೆ ಕಾಂಗ್ರೆಸ್ ಸರಕಾರ. ವರದಿಯನ್ನು ಅದಾವುದೋ ಅಪಾಯಕಾರಿ ಸ್ಫೋಟಕವೆಂಬಂತೆ, ಅದರ ಮಂಡನೆಯನ್ನು ಮುಂದೆ ಹಾಕುತ್ತಲೇ ಬರುತ್ತಿದೆ.
ಕಾಂಗ್ರೆಸ್ ಸರಕಾರಕ್ಕೆ ಜಾತಿ ಗಣತಿ ವರದಿ ಮಂಡನೆಗೆ ವಿರೋಧ ಪಕ್ಷಕ್ಕಿಂತ ಸ್ವಪಕ್ಷೀಯರೇ ಅಡ್ಡಿಯಾಗಿದ್ದಾರೆ. ಈಗಾಗಲೇ ಪಕ್ಷದಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಕೇಂದ್ರವಾಗಿಟ್ಟುಕೊಂಡು ಭಿನ್ನಧ್ವನಿಗಳು ಎದ್ದಿವೆ. ಉಪಮುಖ್ಯಮಂತ್ರಿ ಸ್ಥಾನ ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನಗಳೆರಡನ್ನು ಒಕ್ಕಲಿಗ ಸಮುದಾಯಕ್ಕೆ ಬಿಟ್ಟುಕೊಟ್ಟಿರುವುದು ಎಷ್ಟು ಸರಿ ಎನ್ನುವ ಪ್ರಶ್ನೆಯನ್ನು ದಲಿತ ಮತ್ತು ಹಿಂದುಳಿದ ವರ್ಗಗಳ ನಾಯಕರು ಕೇಳುತ್ತಿದ್ದಾರೆ. ಹಾಗೆ ಕೇಳಿದವರಿಗೆ ಕಾಂಗ್ರೆಸ್ ವರಿಷ್ಠರು ‘ತ್ಯಾಗ, ಬಲಿದಾನದ ಸಲಹೆಯನ್ನು ನೀಡಿ’ ಬಾಯಿ ಮುಚ್ಚಿಸುತ್ತಿದ್ದಾರೆ. ಒಂದೋ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡಿ ಅಥವಾ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ನಮಗೆ ಬಿಟ್ಟುಕೊಡಿ ಎಂದು ದಲಿತ ಸಮುದಾಯದ ಕಾಂಗ್ರೆಸ್ ನಾಯಕರು ವರಿಷ್ಠರಿಗೆ ಒತ್ತಡ ಹಾಕುತ್ತಿದ್ದಾರೆ. ಆದರೆ ಅವೆರಡನ್ನೂ ಬಿಟ್ಟುಕೊಡಲು ಡಿ.ಕೆ.ಶಿವಕುಮಾರ್ ಒಪ್ಪುತ್ತಿಲ್ಲ. ಬಲವಂತವಾಗಿ ಅವರನ್ನು ಇಳಿಸುವಂತಹ ಧೈರ್ಯ ಕಾಂಗ್ರೆಸ್ ವರಿಷ್ಠರಿಗೂ ಇದ್ದಂತಿಲ್ಲ. ಯಾಕೆಂದರೆ, ಒಕ್ಕಲಿಗ ಸಮುದಾಯವನ್ನು ಡಿಕೆಶಿ ಕಾಂಗ್ರೆಸ್‌ನೊಳಗೆ ಪ್ರತಿನಿಧಿಸುತ್ತಿದ್ದಾರೆ. ಅವರೇನಾದರೂ ಮುಖ್ಯಮಂತ್ರಿ ಸ್ಥಾನದ ಬೇಡಿಕೆಯಿಟ್ಟರೆ ಕಾಂಗ್ರೆಸ್‌ನ ಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ. ಜಾತಿ ಗಣತಿಯ ವಿರುದ್ಧ ಈಗಾಗಲೇ ಒಕ್ಕಲಿಗರು ಮತ್ತು ಲಿಂಗಾಯತರನ್ನು ಎತ್ತಿಕಟ್ಟುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಲಿಂಗಾಯತ ಮತ್ತು ಒಕ್ಕಲಿಗ ಸಂಘಟನೆಗಳು ಪತ್ರಿಕಾಗೋಷ್ಠಿಯನ್ನು ಕರೆದು ಜಾತಿ ಗಣತಿಯ ವಿರುದ್ಧ ಹೇಳಿಕೆಯನ್ನು ನೀಡಿವೆ. ಇಂತಹ ಹೊತ್ತಿನಲ್ಲಿ ವರದಿ ಮಂಡನೆ ಮಾಡಿದರೆ ಪಕ್ಷದೊಳಗೆ ಬಿರುಕು ಇನ್ನಷ್ಟು ಹೆಚ್ಚಬಹುದು ಎನ್ನುವ ಭೀತಿ ಕಾಂಗ್ರೆಸ್ ನಾಯಕರನ್ನು ಕಾಡುವಂತಿದೆ.
ರಾಹುಲ್ ಗಾಂಧಿಯವರು ಇಡೀ ದೇಶದಲ್ಲಿ ಜಾತಿ ಗಣತಿ ನಡೆಸಿ, ದುರ್ಬಲ ಜಾತಿಗಳನ್ನು ಮೇಲೆತ್ತುವ ಕನಸು ಕಾಣುತ್ತಿರುವ ಹೊತ್ತಿನಲ್ಲಿ, ಅದನ್ನು ಸಾಕಾರಗೊಳಿಸುವ ಭಾಗವಾಗಿ ಮೊತ್ತ ಮೊದಲು ರಾಜ್ಯ ಕಾಂಗ್ರೆಸ್ ತಾನು ನಡೆಸಿದ ಜಾತಿ ಗಣತಿ ವರದಿಯ ಬಗ್ಗೆಗಿರುವ ಕೀಳರಿಮೆಯನ್ನು ಬಿಟ್ಟು ಅದನ್ನು ಸಾಧನೆಯಾಗಿ ಬಿಂಬಿಸುವುದಕ್ಕೆ ಮುಂದಾಗಬೇಕು. ಅದಕ್ಕಾಗಿ ಕಾಂಗ್ರೆಸ್‌ನೊಳಗಿರುವ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದ ನಾಯಕರಿಗೆ ಆ ಗಣತಿಯ ಅಗತ್ಯವನ್ನು, ಮಹತ್ವವನ್ನು ಮನವರಿಕೆ ಮಾಡಿಕೊಡಬೇಕು. ಬಿಜೆಪಿ ತೋಡಿದ ಖೆಡ್ಡದಲ್ಲಿ ಬೀಳದಂತೆ ಅವರನ್ನು ತಡೆಯಬೇಕು. ಈ ನಿಟ್ಟಿನಲ್ಲಿ ಅದಕ್ಕಾಗಿ ವಿಶೇಷ ತರಗತಿಗಳನ್ನು ಕಾಂಗ್ರೆಸ್ ನಾಯಕರಿಗಾಗಿಯೇ ತೆಗೆದುಕೊಳ್ಳುವ ಅಗತ್ಯವಿದೆ ಎಂದು ಕಾಣುತ್ತದೆ. ಆ ತರಗತಿಯ ನೇತೃತ್ವವನ್ನು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಕೆಶಿಯವರೇ ವಹಿಸಿಕೊಳ್ಳಬೇಕಾಗಿದೆ. ಜಾತಿಗಣತಿ ವರದಿ ಬಿಡುಗಡೆಗೊಳ್ಳುವ ಮೊದಲೇ ಅದರ ಬಗ್ಗೆ ವ್ಯಕ್ತವಾಗುತ್ತಿರುವ ಆಕ್ಷೇಪಗಳಿಗೆ ಯಾವ ಬೆಲೆಯೂ ಇಲ್ಲ. ವಿರೋಧ ವ್ಯಕ್ತಪಡಿಸುವವರು ಜಾತಿ ಗಣತಿ ವರದಿ ಸರಿಯಿಲ್ಲ ಎನ್ನುವ ಕಾರಣಕ್ಕೆ ವಿರೋಧಿಸುತ್ತಿದ್ದಾರೆಯೇ ಅಥವಾ ಜಾತಿಗಣತಿ ವರದಿಯ ಅಗತ್ಯವೇ ಇಲ್ಲ ಎಂದು ಹೇಳುತ್ತಿದ್ದಾರೆಯೇ ಎನ್ನುವುದನ್ನು ಸ್ಪಷ್ಟಪಡಿಸಬೇಕು. ಜಾತಿ ಗಣತಿ ವರದಿ ಸರಿಯಿಲ್ಲ ಎನ್ನುವವರಿಗೆ ಆ ವರದಿಯ ವಿವರಗಳು ಸಿಕ್ಕಿರುವುದಾದರೂ ಹೇಗೆ? ವರದಿ ಬಹಿರಂಗವಾಗುವವರೆಗೆ ಕಾಯದೇ, ಅದಕ್ಕೆ ಮೊದಲೇ ವಿರೋಧಿಸುತ್ತಿರುವುದು ಯಾಕೆ? ಕೆಲವು ಜಾತಿ ಸಂಘಟನೆಗಳ ಮುಖಂಡರು ಬಿಜೆಪಿ ಮತ್ತು ಆರೆಸ್ಸೆಸ್‌ನ ಕುಮ್ಮಕ್ಕಿನ ಕಾರಣದಿಂದ ಗಣತಿಯನ್ನು ವಿರೋಧಿಸುತ್ತಿದ್ದಾರೆ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಇದನ್ನು ಮೊದಲು ಕಾಂಗ್ರೆಸ್‌ನೊಳಗಿರುವ ಒಕ್ಕಲಿಗ ಮತ್ತು ಲಿಂಗಾಯತ ನಾಯಕರಿಗೆ ಮನವರಿಕೆ ಮಾಡುವ ಅಗತ್ಯವಿದೆ. ಅವರ ಮೂಲಕವೇ ಅವರ ಸಮುದಾಯಕ್ಕೆ ಜಾತಿಗಣತಿ ವರದಿಯ ಮಹತ್ವವನ್ನು ಮನವರಿಕೆ ಮಾಡಿಸಬೇಕು. ಅದು ಕಾಂಗ್ರೆಸ್‌ನ ಒಕ್ಕಲಿಗ, ಲಿಂಗಾಯತ ನಾಯಕರ ಹೊಣೆಗಾರಿಕೆಯೂ ಹೌದು. ಮುಂದಿನ ಸಂಪುಟ ಸಭೆಯಲ್ಲಿ ವರದಿ ಮಂಡನೆಯಾಗಲಿದೆ, ಚರ್ಚೆಯಾಗಲಿದೆ ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಆದರೆ ಎಲ್ಲಿಯವರೆಗೆ ಕಾಂಗ್ರೆಸ್‌ನೊಳಗೆ ವರದಿಯ ಬಗ್ಗೆ ಗೊದಲ, ಕೀಳರಿಮೆಗಳಿವೆಯೋ ಅಲ್ಲಿಯವರೆಗೆ ವರದಿ ಮಂಡನೆ ಗಣಪತಿಯ ಮದುವೆಯಂತೆ ಮುಂದೆ ಹೋಗುತ್ತಲೇ ಇರುತ್ತದೆ.