ರ‍್ಯಾಗಿಂಗ್ ಹೆಸರಲ್ಲಿ ಮೆರೆದ ಕ್ರೌರ್ಯ!
ರ‍್ಯಾಗಿಂಗ್ ಪ್ರಕರಣದ ಬಂಧಿತ ಆರೋಪಿಗಳು (Photo credit: indiatoday.in)
ಕೇರಳವನ್ನು ‘ಬುದ್ಧಿಜೀವಿ’ಗಳ ನಾಡು ಎಂದು ಗುರುತಿಸಲಾಗುತ್ತದೆ. ಒಂದು ಕಾಲದಲ್ಲಿ ಜಾತೀಯತೆಯ ಕಾರಣಕ್ಕಾಗಿ ಸ್ವಾಮಿ ವಿವೇಕಾನಂದರಂತಹ ಸಂತರಿಂದಲೇ ‘ಜಾತಿವಾದಿಗಳ ಹುಚ್ಚಾಸ್ಪತ್ರೆ’ ಎಂದು ಟೀಕೆಗೊಳಗಾಗಲ್ಪಟ್ಟ ಕೇರಳವು ಬೇರೆ ಬೇರೆ ಆಂದೋಲನಗಳು, ಚಳವಳಿಗಳ ದೆಸೆಯಿಂದಾಗಿ, ದೇಶಕ್ಕೆ ಮಾದರಿ ರಾಜ್ಯವಾಗಿ ಬೆಳೆದಿದೆ. ಅತಿ ಹೆಚ್ಚು ಸಾಕ್ಷರತೆಯನ್ನು ಹೊಂದಿರುವ ಕೇರಳ ಅತಿ ಸಣ್ಣ ರಾಜ್ಯವಾದರೂ ಪ್ರವಾಸೋದ್ಯಮ, ಶಿಕ್ಷಣ, ಆರೋಗ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬಹಳಷ್ಟು ಸಾಧನೆಗಳನ್ನು ಮಾಡಿದೆ. ವಿಪರ್ಯಾಸವೆಂದರೆ, ಇಂತಹ ಕೇರಳ ಇಂದು ಮತ್ತೆ ಋಣಾತ್ಮಕ ವಿಷಯಗಳಿಗಾಗಿ ಸುದ್ದಿಯಲ್ಲಿದೆ. ಶಿಕ್ಷಣ ಕ್ಷೇತ್ರದಲ್ಲಿ ಸಾಧಿಸಿರುವ ಸಾಧನೆಗಳಿಗೆ ಮಸಿ ಬಳಿಯುವಂತೆ ಕೇರಳದಲ್ಲಿ ನಡೆಯುತ್ತಿರುವ ರ‍್ಯಾಗಿಂಗ್ ಪ್ರಕರಣಗಳು ದೇಶಾದ್ಯಂತ ಚರ್ಚೆಯ ವಿಷಯವಾಗುತ್ತಿವೆ.
ಕೇರಳದ ಕೊಟ್ಟಾಯಂನ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಮೂರನೇ ವರ್ಷದಲ್ಲಿ ಕಲಿಯುತ್ತಿರುವ ಐವರು ವಿದ್ಯಾರ್ಥಿಗಳು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಬರ್ಬರವಾಗಿ ರ‍್ಯಾಗಿಂಗ್ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಕಿರಿಯ ವಿದ್ಯಾರ್ಥಿಗಳು ಕೊಟ್ಟಾಯಂನ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಬಳಿಕ ಈ ಘಟನೆ ಜಾಹೀರಾಗಿದ್ದು, ರ್ಯಾಗಿಂಗ್ ನಡೆಸಿದ ಐವರು ಹಿರಿಯ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಇದು ಕೇವಲ ಹುಡುಗಾಟಕ್ಕೆ ನಡೆದ ರ‍್ಯಾಗಿಂಗ್ ಅಲ್ಲ ಎನ್ನುವುದು ತನಿಖೆಯಿಂದ ಗೊತ್ತಾಗಿದೆ. ರ‍್ಯಾಗಿಂಗ್ ಹೆಸರಿನಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಆರೋಪಿಗಳು ನೀಡಿದ ದೌರ್ಜನ್ಯಗಳನ್ನು ಗಮನಿಸಿದರೆ ಮೈ ಮನಸ್ಸು ನಡುಗುತ್ತದೆ. ಎಳೆಯ ವಿದ್ಯಾರ್ಥಿಗಳಲ್ಲಿ ಇಷ್ಟೊಂದು ಪ್ರಮಾಣದ ಕ್ರೌರ್ಯ ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಎದುರಾಗುತ್ತದೆ. ಆರೋಪಿಗಳು ವಿದ್ಯಾರ್ಥಿಗಳ ಮೇಲೆ ಕೈವಾರ, ಬ್ಲೇಡ್‌ಗಳು ಸೇರಿದಂತೆ ಹರಿತ ವಸ್ತುಗಳಿಂದ ಗಾಯಗಳನ್ನು ಮಾಡಿದ್ದಾರೆ. ಅಷ್ಟೇ ಅಲ್ಲ, ಅವರ ಗಾಯಗಳಿಗೆ ಉರಿಯುವ ದ್ರಾವಣವನ್ನು ಸುರಿದು ವಿಕೃತವಾಗಿ ಆನಂದಿಸಿದ್ದಾರೆ. ವಿದ್ಯಾರ್ಥಿಗಳು ನೋವಿನಿಂದ ಕಿರುಚುವಾಗ ಅವರ ಬಾಯಿಗಳಿಗೆ ಕ್ರೀಮ್‌ಗಳನ್ನು ಹಚ್ಚಿದ್ದಾರೆ. ಇಷ್ಟೇ ಅಲ್ಲ, ಕಿರಿಯ ವಿದ್ಯಾರ್ಥಿಗಳನ್ನು ನಗ್ನಗೊಳಿಸಿ ಅವರ ಗುಪ್ತಾಂಗಗಳಿಗೆ ಡಂಬೆಲ್‌ಗಳನ್ನು ನೇತು ಹಾಕಿದ್ದಾರೆ. ಇಷ್ಟೆಲ್ಲ ಭಯಾನಕ ಕೃತ್ಯಗಳನ್ನು ಎಸಗಿದ್ದರೂ, ಇವು ಕಾಲೇಜು ಆಡಳಿತ ಮಂಡಳಿಯ ಗಮನಕ್ಕೆ ಬಂದಿರಲಿಲ್ಲ. ಪಾಲಕರು ಪ್ರಾಂಶುಪಾಲರನ್ನು ಸಂಪರ್ಕಿಸಿದ ಬಳಿಕವಷ್ಟೇ ಆರೋಪಿಗಳ ಮೇಲೆ ಕ್ರಮ ತೆಗೆದುಕೊಳ್ಳಲಾಗಿದೆ. ತುಸು ಏರು ಪೇರಾಗಿದ್ದರೂ ವಿದ್ಯಾರ್ಥಿಗಳ ಜೀವಕ್ಕೆ ಅಪಾಯವಿತ್ತು. ಅಥವಾ ಪ್ರಕರಣ ಆತ್ಮಹತ್ಯೆಯಲ್ಲಿ ಮುಗಿದು ಬಿಡುತ್ತಿತ್ತು.
ಈ ರ‍್ಯಾಗಿಂಗ್ ಕೃತ್ಯವನ್ನು ಕೇರಳ ಸರಕಾರ ಗಂಭೀರವಾಗಿ ಪರಿಗಣಿಸುವುದು ಅತ್ಯಗತ್ಯವಾಗಿದೆ. ಯಾಕೆಂದರೆ, ಹದಿನೈದು ದಿನಗಳ ಹಿಂದೆಯಷ್ಟೇ ಇದೇ ಕೇರಳದಲ್ಲಿ 15 ವರ್ಷದ ವಿದ್ಯಾರ್ಥಿಯೊಬ್ಬ ವಿದ್ಯಾರ್ಥಿಗಳ ರ‍್ಯಾಗಿಂಗ್ ದೌರ್ಜನ್ಯಗಳಿಗೆ ನೊಂದು 26 ಮಹಡಿಯ ಫ್ಲ್ಯಾಟ್‌ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ವಿಪರ್ಯಾಸವೆಂದರೆ, ಈತ ನಿತ್ಯ ವಿದ್ಯಾರ್ಥಿಗಳಿಂದ ಅತ್ಯಂತ ಅಮಾನವೀಯವಾಗಿ ದೌರ್ಜನ್ಯಕ್ಕೊಳಗಾಗುತ್ತಿರುವುದು ಪೋಷಕರಿಗೂ ಗೊತ್ತಿರಲಿಲ್ಲ. ಏಕಾಏಕಿ ಆತ್ಮಹತ್ಯೆ ಮಾಡಿಕೊಂಡಾಗ ಆಘಾತಗೊಂಡ ಪೋಷಕರು ಅದಕ್ಕೆ ಕಾರಣಗಳನ್ನು ಹುಡುಕಲು ಮುಂದಾದಾಗ ಸಿಕ್ಕಿದ ಮಾಹಿತಿ ಅವರನ್ನು ಬೆಚ್ಚಿ ಬೀಳಿಸಿತ್ತು. ಆತ ಶಾಲೆಯಲ್ಲಿ ಮತ್ತು ಶಾಲೆಯ ಬಸ್‌ನಲ್ಲಿ ವಿದ್ಯಾರ್ಥಿಗಳಿಂದ ಬರ್ಬರವಾಗಿ ದೌರ್ಜನ್ಯಕ್ಕೊಳಗಾಗಿದ್ದ. ದೈಹಿಕವಾಗಿ ಹಲ್ಲೆ ನಡೆಸಿರುವುದು ಮಾತ್ರವಲ್ಲ, ಶಾಲೆಯಲ್ಲಿ ಟಾಯ್ಲೆಟ್ ಸೀಟ್‌ನ್ನು ನೆಕ್ಕುವಂತೆ ಅವನಿಗೆ ಬಲವಂತ ಪಡಿಸಲಾಗಿತ್ತು. ಅಷ್ಟೇ ಅಲ್ಲ, ಫ್ಲಶ್ ಮಾಡುವಾಗ ಕಮೋಡ್‌ನ ನೀರಿನಲ್ಲಿ ಆತನ ತಲೆಯನ್ನು ಮುಳುಗಿಸಲಾಗಿತ್ತು. ದೈಹಿಕ ಮತ್ತು ಮಾನಸಿಕ ಆಘಾತದಿಂದ ಕುಗ್ಗಿ ಹೋಗಿದ್ದ ಆತ, ಅಂತಿಮವಾಗಿ ಆತ್ಮಹತ್ಯೆಯನ್ನೇ ಪರಿಹಾರವಾಗಿ ಕಂಡುಕೊಂಡಿದ್ದ. ಮೇಲಿನ ಎರಡೂ ಪ್ರಕರಣಗಳನ್ನು ಎರಡು ಆಯಾಮಗಳಲ್ಲಿ ವಿಶ್ಲೇಷಣೆಗೆ ಒಳಪಡಿಸ ಬೇಕಾಗಿದೆ. ಒಂದು, ವಿದ್ಯಾರ್ಥಿಗಳ ಮೇಲೆ ಇಷ್ಟೊಂದು ಭೀಕರವಾಗಿ ರ‍್ಯಾಗಿಂಗ್ ನಡೆಯುತ್ತಿರುವಾಗಲೂ ಅದು ಯಾಕೆ ಶಾಲಾ ಆಡಳಿತ ಮಂಡಳಿಯ ಗಮನಕ್ಕೆ ಬಂದಿಲ್ಲ ಮತ್ತು ಅವರು ಅದರ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ ಎನ್ನುವುದು. ರ‍್ಯಾಗಿಂಗ್ ನ ವಿರುದ್ಧ ಕಠಿಣ ಕಾನೂನು ಜಾರಿಯಲ್ಲಿದ್ದರೂ, ಕಾಲೇಜಿನಲ್ಲಿ ಅದು ನಡೆಯುವುದಕ್ಕೆ ಹೇಗೇ ಸಾಧ್ಯವಾಯಿತು? ದೌರ್ಜನ್ಯಕ್ಕೊಳಗಾಗಿರುವ ವಿದ್ಯಾರ್ಥಿಗಳು ದೂರು ನೀಡಿಲ್ಲ ಎನ್ನುವುದನ್ನು ಆಡಳಿತ ಮಂಡಳಿ ತಮ್ಮ ಸಮರ್ಥನೆಯಾಗಿ ಬಳಸಿಕೊಳ್ಳಬಹುದು. ಆದರೆ ದೌರ್ಜನ್ಯಕ್ಕೊಳಗಾಗಿರುವ ವಿದ್ಯಾರ್ಥಿಗಳು ದೂರು ನೀಡಲಾಗದಂತಹ ಅಸಹಾಯಕತೆ ಅಲ್ಲಿ ಯಾಕೆ ಸೃಷ್ಟಿಯಾಗಿತ್ತು. ಇಂತಹ ಕೃತ್ಯಗಳು ನಡೆಯದಂತೆ ನೋಡಿಕೊಳ್ಳಲು, ಒಂದು ವೇಳೆ ನಡೆದರೂ ಅವುಗಳ ವಿರುದ್ಧ ದೂರು ನೀಡುವಂತಹ ವಾತಾವರಣವನ್ನು ಶಾಲೆ, ಕಾಲೇಜಿನೊಳಗೆ ಸೃಷ್ಟಿಸುವುದು ಆಡಳಿತ ಮಂಡಳಿಯ ಹೊಣೆಗಾರಿಕೆಯಾಗಿದೆ. ಆದುದರಿಂದ, ಈ ರ‍್ಯಾಗಿಂಗ್ ನಲ್ಲಿ ಶಾಲಾ ಮುಖ್ಯಸ್ಥರ ಪಾತ್ರವನ್ನು ಗುರುತಿಸುವ ಕೆಲಸ ಅಗತ್ಯವಾಗಿ ನಡೆಯಬೇಕಾಗಿದೆ. ಇದೇ ಸಂದರ್ಭದಲ್ಲಿ ಪೋಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಸಂವಹನದ ಕೊರತೆಯೂ ಇಂತಹ ಕೃತ್ಯಗಳಿಗೆ ಪರೋಕ್ಷ ಕುಮ್ಮಕ್ಕನ್ನು ನೀಡಬಹುದು. ವಿದ್ಯಾರ್ಥಿಗಳು ಶಾಲೆ, ಕಾಲೇಜುಗಳಲ್ಲಿ ಎದುರಿಸುವ ಒತ್ತಡಗಳಿಗೆ ಪೋಷಕರು ಕಿವಿಯಾಗದೇ ಇದ್ದರೆ ಅದು ಅಂತಿಮವಾಗಿ ವಿದ್ಯಾರ್ಥಿಗಳ ಆತ್ಮಹತ್ಯೆಯಲ್ಲಿ ಮುಕ್ತಾಯವಾಗಬಹುದು.
ಕೇರಳದಲ್ಲಿ ಇಂತಹ ರ‍್ಯಾಗಿಂಗ್ ಪ್ರಕರಣಗಳು ಯಾಕೆ ಹೆಚ್ಚುತ್ತಿವೆ ಎನ್ನುವುದರ ಬಗ್ಗೆಯೂ ತನಿಖೆ ನಡೆಯಬೇಕಾಗಿದೆ. ಸಾಧಾರಣವಾಗಿ ಉತ್ತರ ಭಾರತದಲ್ಲಿ ನಡೆಯುವ ರ್ಯಾಗಿಂಗ್‌ನ ಹಿಂದೆ ಜಾತೀಯತೆ ಮನಸ್ಸುಗಳು ಕೆಲಸ ಮಾಡುತ್ತವೆ. ವಿದ್ಯಾರ್ಥಿಗಳ ಜಾತಿ, ಅವರ ಹಿನ್ನೆಲೆ ಇತ್ಯಾದಿಗಳ ಆಧಾರದ ಮೇಲೆ ಅವರ ಮೇಲೆ ಮೇಲ್‌ಜಾತಿಯ ವಿದ್ಯಾರ್ಥಿಗಳು ದೌರ್ಜನ್ಯಗಳನ್ನು ಎಸಗುವುದು ಮತ್ತು ಒತ್ತಡ ತಾಳಿಕೊಳ್ಳಲಾಗದೆ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡುತ್ತಿರುವುದು ಆಗಾಗ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತವೆ. ಒಟ್ಟು ದೇಶದಲ್ಲಿ ರ‍್ಯಾಗಿಂಗ್ ಗೆ ಸಂಬಂಧಪಟ್ಟ ಪ್ರಕರಣಗಳಲ್ಲಿ ಐದೂವರೆ ವರ್ಷಗಳಲ್ಲಿ 25ಕ್ಕೂ ಅಧಿಕ ಕಾಲೇಜು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಯುಜಿಸಿ ತನ್ನ ವರದಿಯಲ್ಲಿ ಕಳೆದ ವರ್ಷ ತಿಳಿಸಿದೆ. ಬೇರೆ ಬೇರೆ ಕಾರಣಗಳಿಗಾಗಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ತೀವ್ರ ಪ್ರಮಾಣದಲ್ಲಿ ಹೆಚ್ಚುತ್ತಿವೆ. 2013ರಿಂದ 2022ರ ನಡುವೆ ಭಾರತದಲ್ಲಿ 1.04 ಲಕ್ಷ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉತ್ತರ ಭಾರತದಲ್ಲಿ ವಿದ್ಯಾರ್ಥಿಗಳ ರ‍್ಯಾಗಿಂಗ್ ಗಳ ಹಿಂದೆ ಜಾತಿ ಮತ್ತು ವರ್ಗ ಪ್ರಧಾನ ಪಾತ್ರವನ್ನು ವಹಿಸಿದರೆ ಕೇರಳದಂತಹ ರಾಜ್ಯಗಳಲ್ಲಿ ನಡೆಯುವ ರ‍್ಯಾಗಿಂಗ್ ಗಳಲ್ಲಿ ಮಾದಕ ದ್ರವ್ಯ ವ್ಯಸನದ ಪಾತ್ರವಿದೆ. ಕೇರಳ, ಗೋವಾದಂತಹ ರಾಜ್ಯಗಳು ಪ್ರವಾಸೋದ್ಯಮಗಳಿಗಾಗಿ ಖ್ಯಾತವಾಗಿವೆ. ಇಂತಹ ರಾಜ್ಯಗಳನ್ನು ಗುರಿಯಾಗಿಸಿಕೊಂಡು ಮಾದಕ ದ್ರವ್ಯ ಚಟುವಟಿಕೆಗಳು ವ್ಯಾಪಕವಾಗಿ ವಿಸ್ತರಿಸಿಕೊಂಡಿವೆ. ಇತ್ತೀಚಿನ ದಿನಗಳಲ್ಲಿ ಕೇರಳ ರಾಜ್ಯದ ವಿದ್ಯಾರ್ಥಿಗಳು ಈ ಮಾದಕ ದ್ರವ್ಯಗಳ ನೇರ ಗುರಿಯಾಗಿದ್ದಾರೆ. ಈ ಮಾದಕ ವ್ಯಸನಗಳೇ ವಿದ್ಯಾರ್ಥಿಗಳನ್ನು ರಾಕ್ಷಸರನ್ನಾಗಿಸುತ್ತಿದೆ ಎನ್ನುವುದು ಬೇರೆ ಬೇರೆ ಪ್ರಕರಣಗಳಿಂದ ಸಾಬೀತಾಗಿದೆ. ಇತ್ತೀಚೆಗೆ ನಡೆದಿರುವ ರ‍್ಯಾಗಿಂಗ್ ಪ್ರಕರಣಗಳಲ್ಲೂ ಆರೋಪಿಗಳು ಮಾದಕ ದ್ರವ್ಯ ಸೇವಿಸಿರುವ ಬಗ್ಗೆ ಶಂಕಿಸಲಾಗಿದೆ. ಕೇರಳ ಮಾತ್ರವಲ್ಲ, ಎಲ್ಲ ಶಾಲಾ ಕಾಲೇಜುಗಳು ಈ ನಿಟ್ಟಿನಲ್ಲಿ ಮುಂಜಾಗ್ರತೆಯ ಕ್ರಮವನ್ನು ತೆಗೆದುಕೊಳ್ಳಬೇಕು. ರ‍್ಯಾಗಿಂಗ್ ಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಮಾತ್ರವಲ್ಲ, ಅದರ ವಿರುದ್ಧ ದೂರುಗಳನ್ನು ನೀಡುವಲ್ಲಿ ಅವರಿಗೆ ನೈತಿಕ ಸ್ಥೈರ್ಯವನ್ನು ತುಂಬುವ ಕೆಲಸವೂ ನಡೆಯಬೇಕಾಗಿದೆ. ಯಾವುದೇ ಶಾಲೆ, ಕಾಲೇಜುಗಳಲ್ಲಿ ರ‍್ಯಾಗಿಂಗ್ ಗಳು ನಡೆದರೆ, ಅದಕ್ಕೆ ಆಯಾ ಕಾಲೇಜುಗಳನ್ನು ಕೂಡ ಸಮಾನ ಹೊಣೆಯಾಗಿಸಿದಾಗ ಮಾತ್ರ ಕಾಲೇಜು ಆಡಳಿತ ಮಂಡಳಿ ಈ ಬಗ್ಗೆ ಗಂಭೀರ ಕ್ರಮವನ್ನು ತೆಗೆದುಕೊಳ್ಳಲು ಸಾಧ್ಯ. ಸಾಕ್ಷರತೆಗಾಗಿ ದೇಶದಲ್ಲೇ ಗುರುತಿಸಿಕೊಂಡ ಕೇರಳ, ಇದೀಗ ಆ ಸಾಕ್ಷರತೆಯ ಮರೆಯಲ್ಲೇ ಬಚ್ಚಿಟ್ಟುಕೊಂಡ ಕಳಂಕಗಳಿಗಾಗಿ ಸುದ್ದಿಯಾಗುತ್ತಿರುವುದು ವಿಪರ್ಯಾಸವಾಗಿದೆ. ಇದನ್ನು ಆರಂಭದಲ್ಲೇ ಚಿವುಟಿ ಹಾಕದೇ ಇದ್ದರೆ, ಕೇರಳದ ಈ ಪಿಡುಗು ಇಡೀ ದಕ್ಷಿಣ ಭಾರತವನ್ನೇ ವ್ಯಾಪಿಸುವ ಅಪಾಯವಿದೆ.