×
Ad

ದಿಲ್ಲಿ ; ಬಾಣಲೆಯಿಂದ ಬೆಂಕಿಗೆ

Update: 2025-02-10 07:45 IST

PC: facebook.com

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ದಿಲ್ಲಿಯನ್ನು ವಶಪಡಿಸಿಕೊಳ್ಳುವ ಬಿಜೆಪಿಯ ತಂತ್ರಗಾರಿಕೆ ಕೊನೆಗೂ ಯಶಸ್ಸು ಕಂಡಿದೆ. ದೇಶವನ್ನು ಗೆದ್ದರೂ, ತನ್ನ ಮೂಗಿನ ಕೆಳಗೇ ಇರುವ ದಿಲ್ಲಿಯನ್ನು ಗೆಲ್ಲಲಾಗದ ಹತಾಶೆ ಪ್ರಧಾನಿ ಮೋದಿಯನ್ನು ಕಾಡುತ್ತಲೇ ಇತ್ತು. ಈ ಕಾರಣದಿಂದಲೇ ಅವರು ತನ್ನ ಅಧಿಕಾರವನ್ನು ಬಳಸಿಕೊಂಡು ದಿಲ್ಲಿಯ ಆಡಳಿತದ ಮೇಲೆ ಮೂಗು ತೂರಿಸುತ್ತಿದ್ದರು. ಲೆಫ್ಟಿನೆಂಟ್ ಗವರ್ನರ್ ಮತ್ತು ಇತರ ಅಧಿಕಾರಿಗಳನ್ನು ಬಳಸಿಕೊಂಡು ಆಮ್ ಆದ್ಮಿ ಪಕ್ಷದ ನೇತೃತ್ವದಲ್ಲಿ ಸರಕಾರ ಸುಗಮವಾಗಿ ಸಾಗದಂತೆ ಗರಿಷ್ಠ ಮಟ್ಟದಲ್ಲಿ ನೋಡಿಕೊಂಡರು. ಕೇಂದ್ರ ಸರಕಾರ ಮತ್ತು ದಿಲ್ಲಿ ಸರಕಾರದ ನಡುವಿನ ರಾಜಕೀಯ ತಿಕ್ಕಾಟಗಳಿಂದ ದಿಲ್ಲಿಯ ಜನರೇ ಸುಸ್ತಾಗಿದ್ದರು. ಒಳ್ಳೆಯ ಆಡಳಿತವನ್ನು ಕೊಡಲು ಕೇಜ್ರಿವಾಲ್ ನೇತೃತ್ವದ ಸರಕಾರ ಗರಿಷ್ಠ ಪ್ರಯತ್ನವನ್ನು ನಡೆಸುತ್ತಿದ್ದರೆ ಅದನ್ನು ವಿಫಲಗೊಳಿಸಲು ಇನ್ನೊಂದೆಡೆಯಿಂದ ಪೊಲೀಸ್ ಇಲಾಖೆಯಿಂದ ಹಿಡಿದು ಎಲ್ಲ ಉನ್ನತ ಅಧಿಕಾರಿವರ್ಗ ಪ್ರಯತ್ನಿಸುತ್ತಿತ್ತು. ಸರಕಾರ ಜನರಿಗಾಗಿ ಯೋಜನೆಗಳನ್ನು ಘೋಷಿಸಿದರೆ, ಅಧಿಕಾರಿಗಳು ‘ಅಂತಹ ಯೋಜನೆಗಳ ಮಾಹಿತಿಯೇ ಇಲ್ಲ’ ಎಂದು ಜನರನ್ನು ಬರಿಗೈಯಲ್ಲಿ ಕಳುಹಿಸುತ್ತಿದ್ದರು. ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಕೇಜ್ರಿವಾಲ್ ಜೈಲು ಪಾಲಾದರು. ಅದಾಗಲೇ ಆಪ್‌ನ ಒಬ್ಬೊಬ್ಬರೇ ನಾಯಕರು ಜೈಲು ಸೇರುತ್ತಿರುವುದು, ಉಳಿದ ಸಹೋದ್ಯೋಗಿಗಳನ್ನು ಭೀತರನ್ನಾಗಿಸಿತ್ತು. ಆಪ್‌ನೊಳಗಿರುವ ನಾಯಕರನ್ನೇ ಆಪ್‌ನ ವಿರುದ್ಧ ಎತ್ತಿ ಕಟ್ಟುವಲ್ಲಿ ತನಿಖಾ ಸಂಸ್ಥೆಗಳನ್ನು ಕೂಡ ಕೇಂದ್ರ ಸರಕಾರ ದುರುಪಯೋಗ ಪಡಿಸಿಕೊಂಡಿತು. ಸರಕಾರ ನಡೆಸಬೇಕಾಗಿದ್ದ ಆಪ್‌ನ ಸಚಿವರು ಸಾರ್ವಜನಿಕವಾಗಿ ಉಪವಾಸ ಸತ್ಯಾಗ್ರಹ ಮಾಡಬೇಕಾದ ಸ್ಥಿತಿ ನಿರ್ಮಾಣವಾಯಿತು. ಒಟ್ಟಿನಲ್ಲಿ, ಆಪ್ ನಾಯಕರ ಎರಡೂ ಕೈಗಳನ್ನು ಕಟ್ಟಿ, ಚುನಾವಣಾ ಆಖಾಡಕ್ಕೆ ಇಳಿಸಲಾಗಿತ್ತು. ಚುನಾವಣೆಯಲ್ಲಿ ಬರೇ ಆಪ್‌ನ್ನು ಸೋಲಿಸುವುದಷ್ಟೇ ಬಿಜೆಪಿಯ ಗುರಿಯಾಗಿರಲಿಲ್ಲ. ಕೇಜ್ರಿವಾಲ್ ಅವರ ವರ್ಚಸ್ಸನ್ನು ಹರಿದು ಹಾಕುವುದು ಕೂಡ ಅದರ ಅಜೆಂಡಾದಲ್ಲಿ ಸೇರಿತ್ತು. ಕೇಜ್ರಿವಾಲ್‌ರನ್ನು ಚುನಾವಣೆಯಲ್ಲಿ ಸೋಲಿಸುವ ಮೂಲಕ ಅದರಲ್ಲೂ ಬಿಜೆಪಿ ಯಶಸ್ವಿಯಾಗಿದೆ. ಅಷ್ಟೇ ಅಲ್ಲ, ಅವರ ಜೊತೆ ಜೊತೆಗೇ ಎರಡನೇ ಹಂತದ ಬಹುತೇಕ ನಾಯಕರನ್ನ್ನು ಸೋಲಿಸಿ, ಆಪ್‌ನೊಳಗೆ ಅತಂತ್ರವನ್ನು ಸೃಷ್ಟಿಸಿದೆ. ಮುಂದೆ ಯಾರು ಎನ್ನುವ ಆತಂಕ ಆಪ್‌ನ್ನು ಕಾಡುತ್ತಿದೆ.

ಹಗರಣಗಳಲ್ಲಿ ಕೇಜ್ರಿವಾಲ್, ಮನೀಶ್ ಸಿಸೋಡಿಯಾ, ಸಂಜಯ್ ಸಿಂಗ್‌ನಂತಹ ನಾಯಕರು ಸಾಲು ಸಾಲಾಗಿ ಗುರುತಿಸಿಕೊಂಡಿರುವುದು ಚುನಾವಣೆಯ ಹಿನ್ನಡೆಗೆ ಮುಖ್ಯ ಕಾರಣ ಎಂದು ವಿಶ್ಲೇಷಣೆ ಪೂರ್ತಿ ನಿಜವಲ್ಲ. ಯುಪಿಎ ಸರಕಾರದ ಭ್ರಷ್ಟಾಚಾರದ ವಿರುದ್ಧ ನಡೆದ ಬೃಹತ್ ಆಂದೋಲನದಿಂದ ಹುಟ್ಟಿದ ಪಕ್ಷ ಆಪ್. ಕೊನೆಯಲ್ಲಿ ಅದುವೇ ಭ್ರಷ್ಟಾಚಾರದ ಕಳಂಕವನ್ನು ಹೊತ್ತುಕೊಳ್ಳಬೇಕಾಯಿತು. ಕಾಂಗ್ರೆಸ್‌ನ ಭ್ರಷ್ಟಾಚಾರವನ್ನು ವಿರೋಧಿಸಿ ಜನತೆ ಆಪ್‌ನ್ನು ಅಧಿಕಾರಕ್ಕೆ ತಂದರು. ಒಂದು ವೇಳೆ ಆಪ್‌ನ ಭ್ರಷ್ಟಾಚಾರದಿಂದ ಚುನಾವಣೆಯಲ್ಲಿ ಅದಕ್ಕೆ ಹಿನ್ನಡೆಯಾಯಿತು ಎಂದಾದರೆ, ಜನರು ಆಪ್‌ಗೆ ಪರ್ಯಾಯವಾಗಿ ಬಿಜೆಪಿಯನ್ನು ಯಾಕೆ ಆಯ್ಕೆ ಮಾಡಿಕೊಂಡರು ಎನ್ನುವ ಪ್ರಶ್ನೆ ಎದುರಾಗುತ್ತದೆ? ಭ್ರಷ್ಟಾಚಾರದಲ್ಲಿ ಮೋದಿ ನೇತೃತ್ವದ ಬಿಜೆಪಿ ಕಾಂಗ್ರೆಸ್ ಪಕ್ಷವನ್ನು ಮೀರಿಸಿದೆ. ಇಡೀ ದೇಶವನ್ನು ಬಿಜೆಪಿ ಅದಾನಿಗೆ ಒತ್ತೆಯಿಟ್ಟಿರುವುದು ದಿಲ್ಲಿಯ ಮತದಾರರಿಗೆ ಗೊತ್ತಿರುವುದೇ ಆಗಿದೆ. ಬಿಜೆಪಿ ನಡೆಸಿರುವ, ನಡೆಸುತ್ತಿರುವ ಹಗರಣಗಳ ಮುಂದೆ ಕೇಜ್ರಿವಾಲ್‌ರದ್ದು ಏನೇನೂ ಅಲ್ಲ. ಕೇಜ್ರಿವಾಲ್‌ರ ಹಗರಣಗಳು ಅವರಿಗೆ ಮುಳುವಾಯಿತು ಎನ್ನುವ ಮೂಲಕ ಪರೋಕ್ಷವಾಗಿ ಬಿಜೆಪಿಯನ್ನು ಸಭ್ಯ, ಹಗರಣ ರಹಿತ ಪಕ್ಷವೆಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ, ಪ್ರಧಾನಿ ಮೋದಿಯವರು ಜನರಿಗೆ ನೀಡಿರುವ ಉಚಿತ ಕೊಡುಗೆಗಳು ಚುನಾವಣೆಯಲ್ಲಿ ಪರಿಣಾಮ ಬೀರಿತು ಎನ್ನಲಾಗುತ್ತಿದೆ. ಉಚಿತ ಕೊಡುಗೆಗಳ ಬಗ್ಗೆ ಪ್ರಧಾನಿಯ ನಿಲುವಿನ ಬಗ್ಗೆ ದಿಲ್ಲಿಯ ಜನರಿಗೆ ಅರಿವಿಲ್ಲದೇ ಇಲ್ಲ. ಪ್ರಧಾನಿ ಮೋದಿಯವರು, ಕೇಜ್ರಿವಾಲ್‌ರ ದಾರಿಯನ್ನು ಅನುಕರಿಸಿದ್ದರು. ಇದು ಪರೋಕ್ಷವಾಗಿ ಕೇಜ್ರಿವಾಲ್‌ಗೆ ಧನಾತ್ಮಕವಾಗಬೇಕಾಗಿತ್ತು. ಅಷ್ಟೇ ಅಲ್ಲ, ಕೇಜ್ರಿವಾಲ್ ನೀಡಿರುವ ಸೌಲಭ್ಯಗಳನ್ನು ದಿಲ್ಲಿಯ ಜನತೆಗೆ ತಲುಪದಂತೆ ಮಾಡಿದ ಹೆಗ್ಗಳಿಕೆಯನ್ನೂ ಪ್ರಧಾನಿ ಮೋದಿಯವರು ಹೊಂದಿದ್ದಾರೆ. ಇಷ್ಟಾದರೂ ದಿಲ್ಲಿಯ ಜನರು ಬಿಜೆಪಿಯನ್ನು ಯಾಕೆ ಬೆಂಬಲಿಸಿದರು ಎನ್ನುವ ಪ್ರಶ್ನೆ ಕಾಡುತ್ತದೆ. ಈ ಫಲಿತಾಂಶದ ಮೂಲಕ ಒಬ್ಬ ಭ್ರಷ್ಟನಿಂದ ಇನ್ನೊಬ್ಬ ಬ್ರಹ್ಮಾಂಡ ಭ್ರಷ್ಟನಿಗೆ ಅಧಿಕಾರ ಹಸ್ತಾಂತರವಾಗಿದೆ ಮಾತ್ರವಲ್ಲ, ದಿಲ್ಲಿ ತನ್ನ ಜುಟ್ಟನ್ನು ಸಂಪೂರ್ಣವಾಗಿ ಕೇಂದ್ರದ ನಿಯಂತ್ರಣಕ್ಕೆ ಒಪ್ಪಿಸಿದಂತಾಗಿದೆ. ಅಳಿದುಳಿದ ಸಾರ್ವಭೌಮತೆಯನ್ನು ದಿಲ್ಲಿ ಈ ಚುನಾವಣೆಯಲ್ಲಿ ಕಳೆದುಕೊಂಡಿದೆ.

ಕೇಂದ್ರ ಸರಕಾರ ಆಪ್ ಪಕ್ಷವನ್ನು ಹಂತಹಂತವಾಗಿ ಕಟ್ಟಿ ಹಾಕುತ್ತಿರುವಾಗ, ಆಪ್‌ಗೆ ಪರ್ಯಾಯವಾಗಿ ದಿಲ್ಲಿಯಲ್ಲಿ ಪಕ್ಷವನ್ನು ಮರು ನಿರ್ಮಿಸುವುದು ಕಾಂಗ್ರೆಸ್ ಹೊಣೆಗಾರಿಕೆಯಾಗಿತ್ತು. ಆದರೆ, ಕಳೆದುಕೊಂಡ ದಿಲ್ಲಿ ಜನರ ವಿಶ್ವಾಸವನ್ನು ತನ್ನದಾಗಿಸುವಲ್ಲಿ ಕಾಂಗ್ರೆಸ್ ವಿಫಲವಾಗಿತ್ತು. ಅದು ‘ಇಂಡಿಯಾ’ ಮೂಲಕ ಆಪ್ ಜೊತೆಗೆ ಕೈ ಜೋಡಿಸಿಕೊಂಡು ಕೆಲವು ಸ್ಥಾನಗಳನ್ನು ತನ್ನದಾಗಿಸುವ ಬಗ್ಗೆಯಷ್ಟೇ ಚಿಂತಿಸುತ್ತಿತ್ತು. ಕಾಂಗ್ರೆಸ್ ಜೊತೆಗೆ ಕೈ ಜೋಡಿಸಲು ಆಪ್ ಕೂಡ ಸಿದ್ಧವಿರಲಿಲ್ಲ. ಈ ಹಿಂದೆ ಹರ್ಯಾಣದಲ್ಲಿ ಕಾಂಗ್ರೆಸ್ ಹಿನ್ನಡೆಗೆ ಆಪ್ ಕಾರಣವಾಗಿತ್ತು. ಇದೀಗ ಕಾಂಗ್ರೆಸ್‌ಗೆ ತಾನು ಗೆಲ್ಲುವುದಕ್ಕಿಂತಲೂ, ದೇಶಾದ್ಯಂತ ತನ್ನ ಜಾಗವನ್ನು ತುಂಬಲು ಯತ್ನಿಸುತ್ತಿರುವ ಆಪ್‌ನ್ನು ಸೋಲಿಸುವುದಷ್ಟೇ ಉದ್ದೇಶವಾಗಿತ್ತು. ಸಮಯ, ಸಂದರ್ಭವನ್ನು ಗಣನೆಗೆ ತೆಗೆದುಕೊಂಡು ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡಿದ್ದರೆ ಆಪ್‌ಗೆ ಬಹಳಷ್ಟು ಲಾಭವಿತ್ತು. ಕನಿಷ್ಠ ಮತ್ತೊಮ್ಮೆ ಜೈಲಿಗೆ ಹೋಗುವುದನ್ನು ತಪ್ಪಿಸುವುದಕ್ಕಾದರೂ, ಬಿಜೆಪಿ ಅಧಿಕಾರ ಹಿಡಿಯದಂತೆ ನೋಡಿಕೊಳ್ಳುವುದು ಅಗತ್ಯವಿತ್ತು. ಆದರೆ ಕೇಜ್ರಿವಾಲ್‌ರ ಮೊಂಡುತನಕ್ಕೆ ಆಪ್ ಭಾರೀ ಬೆಲೆ ತೆರಬೇಕಾಯಿತು. ಆಪ್‌ನ್ನು ಸೋಲಿಸುವುದನ್ನೇ ತನ್ನ ಗೆಲುವು ಎಂದು ತಿಳಿದುಕೊಂಡು ಕಾಂಗ್ರೆಸ್ ಕೆಲಸ ಮಾಡಿರುವುದರಿಂದ ಶೂನ್ಯ ಸಂಪಾದನೆಯಿಂದ ಅದು ಮುಜುಗರ ಅನುಭವಿಸಿದಂತಿಲ್ಲ. ಬದಲಿಗೆ, ಆಪ್‌ನ ಸೋಲನ್ನೇ ತನ್ನ ಗೆಲುವೆಂದು ಅದು ಭಾವಿಸಿಕೊಂಡಿದೆ. ದಿಲ್ಲಿ ವಿಧಾನಸಭಾಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಮೂರು ಕ್ಷೇತ್ರಗಳನ್ನು ಹೊರತುಪಡಿಸಿ, ಉಳಿದ 67 ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡಿದೆ. ಇದರ ಜೊತೆಗೆ ಚುನಾವಣೆಗೆ ಸ್ಪರ್ಧಿಸಿದ್ದ ಶೇ.80ರಷ್ಟು ಅಭ್ಯರ್ಥಿಗಳಿಗೂ ಇಡುಗಂಟು ನಷ್ಟವಾಗಿದೆ. ಅರವಿಂದ ಕೇಜ್ರಿವಾಲ್ ಸೇರಿದಂತೆ ಆಮ್ ಆದ್ಮಿ ಪಕ್ಷ(ಆಪ್)ದ ಹಲವಾರು ಪ್ರಮುಖ ನಾಯಕರು ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಡೆದಿರುವ ಮತಗಳಿಗಿಂತ ಕಡಿಮೆ ಅಂತರದಲ್ಲಿ ಸೋಲನ್ನಪ್ಪಿದ್ದಾರೆ. ಕಾಂಗ್ರೆಸ್ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದರೆ ಇನ್ನೂ 13 ಕ್ಷೇತ್ರಗಳಲ್ಲಿ ಆಪ್ ಗೆಲ್ಲುವ ಸಾಧ್ಯತೆಗಳಿದ್ದವು.

ಆದರೆ ಅಷ್ಟೇ ಅಲ್ಲ, ಕಳೆದ 10 ವರ್ಷಗಳಲ್ಲಿ ದಿಲ್ಲಿಯಲ್ಲಿ ಬಿಜೆಪಿಯ ಮತಗಳ ಪಾಲು ಶೇ.13ರಷ್ಟು ಹೆಚ್ಚಾಗಿದ್ದರೆ ಇದೇ ಅವಧಿಯಲ್ಲಿ ಆಪ್‌ನ ಮತಗಳ ಪಾಲು ಶೇ.10ರಷ್ಟು ಕುಸಿದಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆಗೆ ಒದಗಿದ ಸ್ಥಿತಿ ಭವಿಷ್ಯದಲ್ಲಿ ದಿಲ್ಲಿಯಲ್ಲಿ ಆಪ್‌ಗೆ ಒದಗಿದರೆ, ಪಕ್ಷ ಕಟ್ಟಿದ ಕೇಜ್ರಿವಾಲ್ ಬೀದಿಗೆ ಬೀಳಬಹುದು. ಎರಡನೆಯ ಹಂತವಾಗಿ ಆಪ್‌ನ್ನು ಒಡೆಯುವ ಅಥವಾ ಗೆದ್ದ ಆಪ್ ಶಾಸಕರು ಆಪರೇಷನ್ ಕಮಲಕ್ಕೆ ಬಲಿಯಾಗುವ ಅಪಾಯಗಳು ಎದ್ದು ಕಾಣುತ್ತದೆ. ಒಟ್ಟಿನಲ್ಲಿ ದಿಲ್ಲಿಯಲ್ಲಿ ಬಿಜೆಪಿಯನ್ನು ಗೆಲ್ಲಿಸಿದ ಹೆಗ್ಗಳಿಕೆ ಆಪ್ ಮತ್ತು ಕಾಂಗ್ರೆಸ್ ಎರಡಕ್ಕೂ ಸೇರಬೇಕು. ತಮ್ಮ ವೈಯಕ್ತಿಕ ಪ್ರತಿಷ್ಠೆಯ ಮುಂದೆ ಜನತೆಯ ಹಿತಾಸಕ್ತಿ ಏನೇನೂ ಅಲ್ಲ ಎನ್ನುವುದನ್ನು ಈ ಎರಡೂ ಪಕ್ಷಗಳು ಚುನಾವಣೆಯಲ್ಲಿ ಸಾಬೀತು ಮಾಡಿವೆ. ದಿಲ್ಲಿ ಬಾಣಲೆಯಿಂದ ಬೆಂಕಿಗೆ ಬಿದ್ದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News