×
Ad

ಎನ್‌ಡಿಎಯನ್ನು ಗೆಲ್ಲಿಸಿತೇ ಚುನಾವಣಾ ಆಯೋಗ?

Update: 2025-11-15 06:50 IST

ಚುನಾವಣಾ ಆಯೋಗ |PTI

ಚುನಾವಣೋತ್ತರ ಸಮೀಕ್ಷೆಯನ್ನು ನಡೆಸಿದ ಸಂಸ್ಥೆಗಳನ್ನೂ ಆಘಾತಕ್ಕೆ ತಳ್ಳುವಂತೆ ಫಲಿತಾಂಶ ಹೊರಬಿದ್ದಿದೆ. ಬಿಹಾರ ವಿಧಾನಸಭೆಯಲ್ಲಿ ಎನ್ಡಿಎ ಬಹುಮತವನ್ನು ಪಡೆಯುತ್ತದೆ ಎಂದು ಸಮೀಕ್ಷೆಗಳು ಹೇಳಿತ್ತಾದರೂ, ‘ನಾನು ಹೇಳಿದ್ದು ಇದಲ್ಲ’ ಎಂದು ಸಮೀಕ್ಷೆಗಳು ಸ್ಪಷ್ಟೀಕರಣ ನೀಡುವಂತಿದೆ ಫಲಿತಾಂಶ. 243 ವಿಧಾನಸಭಾ ಕ್ಷೇತ್ರಗಳಲ್ಲಿ ಎನ್ಡಿಎ 205ಕ್ಕೂ ಅಧಿಕ ಕ್ಷೇತ್ರಗಳನ್ನು ಗೆದ್ದು ದೇಶದ ಹುಬ್ಬೇರುವಂತೆ ಮಾಡಿದೆ. ಇದೇ ಸಂದರ್ಭದಲ್ಲಿ ಚಿರಾಗ್ ಪಾಸ್ವಾನ್ ಅವರ ಎಲ್ಜೆಪಿಯು ಒಂದು ಸ್ಥಾನದಿಂದ 21 ಸ್ಥಾನಕ್ಕೆ ನೆಗೆಯುವ ಮೂಲಕ ಉತ್ತರ ಭಾರತದ ದಲಿತ ರಾಜಕಾರಣದ ಚುಕ್ಕಾಣಿಯನ್ನು ಹೊಸ ದಿಕ್ಕಿಗೆ ತಿರುಗಿಸುವ ಸೂಚನೆ ನೀಡಿದೆ. ನಿತೀಶ್ಗೆ ಪರ್ಯಾಯವಾಗಿ ಬಿಹಾರದಲ್ಲಿ ಬೆಳೆಯುವ ಸಾಧ್ಯತೆಗಳನ್ನು ಪ್ರಕಟ ಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಉವೈಸಿ ನಾಯಕತ್ವದ ಪಕ್ಷ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಯಶಸ್ವಿಯಾಗಿದೆ ಮಾತ್ರವಲ್ಲ, ಕಾಂಗ್ರೆಸ್ನ ಮತಗಳನ್ನು ದೊಡ್ಡ ಮಟ್ಟದಲ್ಲಿ ಸೆಳೆದು ಬಿಜೆಪಿಗೆ ಮುನ್ನಡೆಯಾಗುವಂತೆ ನೋಡಿಕೊಂಡಿದೆ. ಮುಸ್ಲಿಮ್ ಮತದಾರರ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲೂ ಎನ್ಡಿಎ ವಿಜಯ ಸಾಧಿಸಿರುವುದು ಬಿಹಾರದ ರಾಜಕೀಯದಲ್ಲಾಗಿರುವ ಪಲ್ಲಟಗಳನ್ನು ಹೇಳುತ್ತದೆ. ಮುಸ್ಲಿಮರು ಎನ್ಡಿಎಯನ್ನು ಬೆಂಬಲಿಸಿದ್ದಾರೆ ಎನ್ನುವುದಕ್ಕಿಂತಲೂ, ಮುಸ್ಲಿಮರ ಮತಗಳನ್ನು ಒಡೆಯುವಲ್ಲಿ ಎನ್ಡಿಎ ಯಶಸ್ವಿಯಾಗಿದೆ ಎಂದು ಹೇಳಬಹುದು. ಇದೇ ಹೊತ್ತಿಗೆ, ಚುನಾವಣಾ ಆಯೋಗದ ಶತ ಪ್ರಯತ್ನದಿಂದ ಅಳಿಸಲ್ಪಟ್ಟ ಲಕ್ಷಾಂತರ ಮತದಾರರ ಹೆಸರುಗಳಲ್ಲಿ ಮುಸ್ಲಿಮರ ಹೆಸರುಗಳು ಎಷ್ಟು ಎನ್ನುವುದು ಕೂಡ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ.

ಎರಡು ಬಹುಮುಖ್ಯ ಅಂಶಗಳು ಎನ್ಡಿಎ ಭರ್ಜರಿ ಗೆಲುವಿಗೆ ಕಾರಣವಾಗಿದೆ ಎಂದು ಅಂದಾಜಿಸಲಾಗಿದೆ. ಅವೆರಡರಲ್ಲಿ ಮುಖ್ಯವಾಗಿ, ಪ್ರಧಾನಿ ನರೇಂದ್ರ ಮೋದಿಯವರು ಚುನಾವಣೆ ಹೊತ್ತಿಗೇ 1.5 ಕೋಟಿಗೂ ಅಧಿಕ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ 10,000 ರೂ.ಗಳನ್ನು ಜಮೆ ಮಾಡಿರುವುದು. ಮುಖ್ಯಮಂತ್ರಿ ಮಹಿಳಾ ರೋಜ್ಗಾರ್ ಯೋಜನೆಯ ಹೆಸರಿನಲ್ಲಿ ಈ ಹಣವನ್ನು ತಲುಪಿಸಲಾಗಿದೆಯಾದರೂ ಉದ್ದೇಶ ಚುನಾವಣೆಯೇ ಆಗಿತ್ತು. ಈ ಹಿಂದೆಲ್ಲ ಒಂದು ಮತಗಳಿಗೆ ನೂರೋ ಇನ್ನೂರೋ ಪಡೆಯುತ್ತಿದ್ದ ಬಿಹಾರದ ಬಡ ವರ್ಗಕ್ಕೆ ಇದು ಭಾರೀ ದೊಡ್ಡ ಉಡುಗೊರೆಯಾಗಿ ಕಂಡಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಬಿಹಾರದ ಮಹಿಳೆಯರ ಕೈಗೇ ಈ ಹಣ ತಲುಪಿರುವುದು ಮತದಾನದ ಮೇಲೆ ಸಾಕಷ್ಟು ಪರಿಣಾಮವನ್ನು ಬೀರಿತ್ತು. ಇದಕ್ಕೆ ಪೂರಕವಾಗಿ ಈ ಬಾರಿ ಚುನಾವಣೆಯಲ್ಲಿ ಮಹಿಳೆಯರು ದಾಖಲೆ ಪ್ರಮಾಣದಲ್ಲಿ ಮತದಾನ ಮಾಡಿದ್ದಾರೆ. ಶೇ.71.78ರಷ್ಟು ಮಹಿಳೆಯರು ಮತದಾನ ಮಾಡಿದ್ದರೆ ಶೇ.62.98ರಷ್ಟು ಪುರುಷರು ಮತ ಚಲಾಯಿಸಿದ್ದಾರೆ. ಏಳು ಜಿಲ್ಲೆಗಳಲ್ಲಿ ಪುರುಷರಿಗಿಂತ ಶೇ.14ಕ್ಕೂ ಅಧಿಕ ಮಹಿಳೆಯರು ಮತಗಳನ್ನು ಚಲಾಯಿಸಿದ್ದರೆ ಇತರ 10 ಜಿಲ್ಲೆಗಳಲ್ಲಿ ಇದು ಶೇ.10ರಷ್ಟಿದೆ.

ಇತರ ಪಕ್ಷಗಳೂ ಮಹಿಳೆಯರಿಗೆ ಆರ್ಥಿಕ ನೆರವಿನ ಭರವಸೆಗಳನ್ನು ಚುನಾವಣಾ ಪ್ರಣಾಳಿಕೆಗಳಲ್ಲಿ ನೀಡಿದ್ದವು. ಈ ಹಿಂದೆ ಕರ್ನಾಟಕದಲ್ಲಿ ಮಹಿಳೆಯರಿಗಾಗಿ ಘೋಷಿಸಿದ ಗ್ಯಾರಂಟಿ ಯೋಜನೆಗಳ ಕಾರಣದಿಂದ ಕಾಂಗ್ರೆಸ್ ಪಕ್ಷ ಭರ್ಜರಿ ಬಹುಮತದಿಂದ ಅಧಿಕಾರವನ್ನು ಹಿಡಿಯಿತು. ಆದರೆ ಪ್ರಧಾನಿ ಮೋದಿಯವರು ಚುನಾವಣೆಯ ಹೊತ್ತಿಗೆ ಅವರ ಖಾತೆಗಳಿಗೆ ನೇರವಾಗಿ ಹಣವನ್ನೇ ಹಾಕಿ ಬಿಟ್ಟರು. ಇದು ಚುನಾವಣೆಯ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ ಎನ್ನುವುದು ಗೊತ್ತಿದ್ದೂ ಚುನಾವಣಾ ಆಯೋಗ ಕಣ್ಣು, ಕಿವಿ ಮುಚ್ಚಿ ಕೂತಿತ್ತು. ಈ ಹಿಂದೆ, ರಾಜಸ್ಥಾನದಲ್ಲಿ ಚುನಾವಣಾ ನೀತಿ ಸಂಹಿತೆಯ ಬಳಿಕ ಪಿಂಚಣಿ ವಿತರಣೆ ಮಾಡುವುದನ್ನೂ ತಡೆದಿದ್ದ ಚುನಾವಣಾ ಆಯೋಗ, ಚುನಾವಣಾ ನೀತಿ ಸಂಹಿತೆಯ ಬಳಿಕವೂ ಮಹಿಳೆಯರ ಖಾತೆಯಲ್ಲಿ 10,000 ರೂಪಾಯಿ ಬೀಳುವುದನ್ನು ನೋಡಿಯೂ ನೋಡದಂತೆ ವರ್ತಿಸಿತು. ಪ್ರತಿ ಕುಟುಂಬಕ್ಕೆ 10,000 ರೂಪಾಯಿಗಳನ್ನು ನೀಡಿ ಈ ಬಾರಿಯ ಚುನಾವಣಾ ಫಲಿತಾಂಶವನ್ನು ನರೇಂದ್ರಮೋದಿಯವರು ಕೊಂಡುಕೊಂಡರು ಎನ್ನುವ ಆರೋಪ ಈ ಕಾರಣಕ್ಕೆ ಮಹತ್ವವನ್ನು ಪಡೆಯುತ್ತದೆ. ಅಷ್ಟು ದೊಡ್ಡ ಮೊತ್ತವನ್ನು ಅದೇ ಮೊದಲ ಬಾರಿ ಕಂಡ ಬಿಹಾರದ ಬಡ ಮಹಿಳಾ ವರ್ಗ ಬಿಜೆಪಿಗೆ ಮತ ಹಾಕದೇ ಇರುವುದಕ್ಕೆ ಕಾರಣವೇ ಇರಲಿಲ್ಲ. ಒಟ್ಟಿನಲ್ಲಿ ಮಹಿಳಾ ಮತದಾರರು ಚುನಾವಣೆಯಲ್ಲಿ ಪ್ರಾಮುಖ್ಯತೆಯನ್ನು ಪಡೆಯುತ್ತಿದ್ದಾರೆ ಮತ್ತು ಅವರನ್ನು ಕೇಂದ್ರವಾಗಿಟ್ಟುಕೊಂಡು ಚುನಾವಣಾ ಪ್ರಣಾಳಿಕೆಗಳು ಸಿದ್ಧಗೊಳ್ಳುತ್ತಿವೆ. ಇದಕ್ಕೆ ಕರ್ನಾಟಕದ ಕಳೆದ ವಿಧಾನಸಭಾ ಚುನಾವಣೆ ಸ್ಫೂರ್ತಿಯಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಇದೇ ಸಂದರ್ಭದಲ್ಲಿ ಚುನಾವಣಾ ಆಯೋಗವು ನಡೆಸಿದ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆಯೂ ಚುನಾವಣೆಯ ಮೇಲೆ ಪರಿಣಾಮವನ್ನು ಬೀರಿದೆ. ಲಕ್ಷಾಂತರ ಮತದಾರರನ್ನು ಚುನಾವಣಾ ಆಯೋಗವು ಪರಿಷ್ಕರಣೆಯ ಹೆಸರಿನಲ್ಲಿ ಮತದಾನದಿಂದ ಹೊರಗಿಟ್ಟಿತು. ಚುನಾವಣೆ ಹತ್ತಿರ ಬರುತ್ತಿರುವಂತೆಯೇ ಚುನಾವಣಾ ಆಯೋಗ ಚುನಾವಣೆಯಲ್ಲಿ ಭಾಗವಹಿಸಲು ಮತದಾರರನ್ನು ಉತ್ತೇಜಿಸಬೇಕು. ಆದರೆ ಅದಕ್ಕೆ ವಿರುದ್ಧವಾಗಿ, ಎಸ್ಐಆರ್ ಹೆಸರಿನಲ್ಲಿ ಮತದಾರರನ್ನು ಹೇಗೆ ಚುನಾವಣೆಯಿಂದ ದೂರವಿಡಬಹುದು ಎನ್ನುವುದರ ಬಗ್ಗೆ ತಲೆಕೆಡಿಸಿಕೊಂಡಿತು. ಚುನಾವಣೆ ಹತ್ತಿರವಾಗುತ್ತಿರುವ ಹೊತ್ತಿಗೆ ಆತುರಾತುರವಾಗಿ ಪರಿಷ್ಕರಣೆ ನಡೆಸಲು ಮುಂದಾಗಿರುವುದು ಒಟ್ಟು ಗೊಂದಲಗಳಿಗೆ ಕಾರಣವಾಯಿತು. ಮತದಾರರ ಪಟ್ಟಿಯಿಂದ ಹೊರಬಿದ್ದ ಜನರು ಅದರ ವಿರುದ್ಧ ಹೋರಾಟ ನಡೆಸುವ ಶಕ್ತಿಯನ್ನೂ ಹೊಂದಿರಲಿಲ್ಲ. ಯಾಕೆಂದರೆ ಅವರಲ್ಲಿ ಬಹುತೇಕರು ಬಡವರ್ಗ ಮತ್ತು ದುರ್ಬಲ ಜಾತಿಗಳಿಗೆ ಸೇರಿದವರಾಗಿದ್ದರು. ಸೂಕ್ತ ದಾಖಲೆಗಳನ್ನು ಒದಗಿಸಲು ವಿಫಲರಾಗುವ ಬಹುತೇಕರು ಇದೇ ವರ್ಗಕ್ಕೆ ಸೇರಿರುತ್ತಾರೆ ಎನ್ನುವುದು ಚುನಾವಣಾ ಆಯೋಗಕ್ಕೆ ಗೊತ್ತಿಲ್ಲದೇ ಇಲ್ಲ. ಆದುದರಿಂದಲೇ ಈ ಬಾರಿಯ ಚುನಾವಣೆಯಲ್ಲಿ ಎನ್ಡಿಎ ಜೊತೆಗೆ ಚುನಾವಣಾ ಆಯೋಗವೂ ಕೈ ಜೋಡಿಸಿತ್ತು ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ ಮತ್ತು ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಎಯ ಗೆಲುವಿನ ಹೆಗ್ಗಳಿಕೆ ಚುನಾವಣಾ ಮುಖ್ಯ ಆಯುಕ್ತರಿಗೆ ಸೇರಬೇಕು ಎಂದು ವ್ಯಂಗ್ಯವಾಡುತ್ತಿವೆ. ಆರ್ಜೆಡಿಯೊಳಗಿನ ಕುಟುಂಬ ಕಲಹ, ಇಂಡಿಯಾ ಒಕ್ಕೂಟದ ಟಿಕೆಟ್ ವಿತರಣೆಯಲ್ಲಾಗಿರುವ ಅವಾಂತರಗಳು ಫಲಿತಾಂಶದ ಮೇಲೆ ತನ್ನದೇ ರೀತಿಯಲ್ಲಿ ಪರಿಣಾಮಗಳನ್ನು ಬೀರಿವೆ. ಇದೇ ಸಂದರ್ಭದಲ್ಲಿ ದಲಿತರು, ಮುಸ್ಲಿಮರ ಮತಗಳು ತನ್ನ ಹಕ್ಕು ಎನ್ನುವ ಭ್ರಮೆಯಿಂದ ಕಾಂಗ್ರೆಸ್ ಹೊರಗೆ ಬರಬೇಕಾಗಿದೆ. ಈ ಫಲಿತಾಂಶಕ್ಕೆ ಚುನಾವಣಾ ಆಯೋಗದ ಕೊಡುಗೆಗಳೆಷ್ಟು ಎನ್ನುವುದನ್ನು ಲೆಕ್ಕ ಹಾಕುವುದರ ಜೊತೆಗೆ ತಮ್ಮ ತಮ್ಮ ಕೊಡುಗೆಗಳೆಷ್ಟು ಎನ್ನುವ ಆತ್ಮವಿಮರ್ಶೆಯನ್ನು ಆರ್ಜೆಡಿ, ಕಾಂಗ್ರೆಸ್ನಂತಹ ಪಕ್ಷಗಳು ನಡೆಸಿದಾಗ ಮಾತ್ರ ಮುಂದಿನ ಚುನಾವಣೆಗಳನ್ನು ಗೆಲ್ಲುವುದಕ್ಕೆ ಕಾರ್ಯಕ್ರಮಗಳನ್ನು ರೂಪಿಸಬಹುದು. ಇದೇ ಸಂದರ್ಭದಲ್ಲಿ ಬಿಜೆಪಿ, ಜೆಡಿಯುಗಿಂತ ಹೆಚ್ಚು ಮತಗಳನ್ನು ಆರ್ಜೆಡಿ ಹಂಚಿಕೊಂಡಿದೆ. ಬಿಜೆಪಿಗಿಂತ ಶೇ. 1.86 ಮತ್ತು ಜೆಡಿಯುಗಿಂತ 3.97ರಷ್ಟು ಅಧಿಕ ಮತಗಳನ್ನು ಪಡೆದುಕೊಂಡಿದೆ. ಇಷ್ಟಾದರೂ ಎನ್ಡಿಎ ಇಷ್ಟೊಂದು ಮುನ್ನಡೆ ಸಾಧಿಸಲು ಹೇಗೆ ಸಾಧ್ಯವಾಯಿತು ಎನ್ನುವ ಪ್ರಶ್ನೆಗೆ ವಿರೋಧಪಕ್ಷಗಳು ಉತ್ತರ ಕಂಡುಕೊಳ್ಳಲೇಬೇಕು.

ಬಿಹಾರದ ಒಟ್ಟು ಫಲಿತಾಂಶ ಅಲ್ಲಿನ ಮಹಿಳೆಯರ ಪಾಲಿಗೆ, ಶೋಷಿತ ಸಮುದಾಯಗಳ ಪಾಲಿಗೆ ಒಳಿತನ್ನು ಮಾಡುತ್ತವೆ ಎಂದು ನಿರೀಕ್ಷಿಸುವಂತಿಲ್ಲ. ಯಾಕೆಂದರೆ, ಈ ಫಲಿತಾಂಶ ಬಿಜೆಪಿಯೊಳಗಿರುವ ಕೋಮುವಾದಿ ಶಕ್ತಿಗಳಿಗೆ ಹೊಸ ಹುರುಪನ್ನು ತಂದಿದೆ. ನಿತೀಶ್ರನ್ನು ಬದಿಗೊತ್ತಿ ಚಿರಾಗ್ ಎನ್ನುವ ಎಳೆನಿಂಬೆಕಾಯಿಯನ್ನು ಬಳಸಿಕೊಂಡು ಬಿಹಾರವನ್ನು ಹಿಂದುತ್ವದ ಹೆಸರಿನಲ್ಲಿ ಆಳುವ ಕನಸು ಕಾಣಲು ಆರಂಭಿಸಿವೆ. ಈಗಾಗಲೇ ಬಡತನ, ನಿರುದ್ಯೋಗದಿಂದ ತತ್ತರಿಸಲ್ಪಟ್ಟಿರುವ ಬಿಹಾರದಲ್ಲಿ ಹಿಂದುತ್ವ ಶಕ್ತಿಗಳು ಗಟ್ಟಿಯಾಗಿ ಬೇರೂರಿದರೆ ಅದು ಬಿಹಾರವನ್ನು ಇನ್ನಷ್ಟು ಹಿಂದಕ್ಕೆ ಕೊಂಡೊಯ್ಯುವುದರಲ್ಲಿ ಸಂಶಯವಿಲ್ಲ. ಆಗ ಬಿಹಾರದ ಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಬಹುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News