ಮೇಲ್ಮನೆಯ ಘನತೆ ಕೆಳಗಿಳಿಯದಿರಲಿ!
ಮೇಲ್ಮನೆಯೆಂದು ಗೌರವಿಸಲ್ಪಡುವ ವಿಧಾನ ಪರಿಷತ್ಗೆ ಪ್ರತಿನಿಧಿಗಳ ಆಯ್ಕೆ ಪ್ರಕ್ರಿಯೆಗಳು ಆರಂಭವಾದಾಗಲೆಲ್ಲ, ಈ ಮನೆಯ ಪ್ರಸ್ತುತತೆ ಚರ್ಚೆಗೆ ಬರುತ್ತದೆ. ಜನರಿಂದ ನೇರವಾಗಿ ಆಯ್ಕೆಯಾಗುವ ಜನಪ್ರತಿನಿಧಿಗಳಿಗೆ ಅಂದರೆ ವಿಧಾನಸಭೆಗೆ ಮಾರ್ಗದರ್ಶನ ನೀಡುವುದಕ್ಕಾಗಿಯೇ ವಿಧಾನಪರಿಷತ್ ಎನ್ನುವ ಚಿಂತಕರ ಚಾವಡಿಯನ್ನು ಕೆಲವು ರಾಜ್ಯಗಳು ಅಳವಡಿಸಿಕೊಂಡಿವೆ. ಇದಕ್ಕಾಗಿ ಪ್ರತಿವರ್ಷ ಆಯಾ ಸರಕಾರ ಕೋಟ್ಯಂತರ ರೂಪಾಯಿಯನ್ನು ವ್ಯಯ ಮಾಡುತ್ತದೆ. ಇದರ ಅರ್ಥ ವಿಧಾನಪರಿಷತನ್ನು ಅಳವಡಿಸಿಕೊಳ್ಳದ ರಾಜ್ಯಗಳ ಆಡಳಿತ ವ್ಯವಸ್ಥೆ ಕುಲಗೆಟ್ಟು ಹೋಗಿದೆ ಎಂದಲ್ಲ. ಹಾಗೆಯೇ ವಿಧಾನಪರಿಷತ್ ಸದಸ್ಯರಿರುವ ರಾಜ್ಯದ ಆಡಳಿತ ಸಂಪೂರ್ಣ ಸುವ್ಯವಸ್ಥಿತವಾಗಿದೆ ಎನ್ನುವಂತೆಯೂ ಇಲ್ಲ. ವಿಧಾನಪರಿಷತ್ ಸದಸ್ಯರ ಆಯ್ಕೆಗಾಗಿ ನಡೆಯುತ್ತಿರುವ ಕೆಟ್ಟ ರಾಜಕೀಯಗಳನ್ನು ಗಮನಿಸಿದರೆ ಮತ್ತು ಹಾಗೆ ಆಯ್ಕೆಯಾದ ಪ್ರತಿನಿಧಿಗಳು ಪರಿಷತ್ನೊಳಗೆ ವರ್ತಿಸುತ್ತಿರುವ ರೀತಿಯನ್ನು ನೋಡಿದರೆ ನಿಜಕ್ಕೂ ವಿಧಾನಪರಿಷತ್ ತನ್ನ ಉದ್ದೇಶವನ್ನು ಸಾಧಿಸಿಕೊಂಡಿದೆಯೆ? ಎನ್ನುವ ಪ್ರಶ್ನೆ ಏಳುತ್ತದೆ. ಪ್ರತಿನಿಧಿಗಳ ವರ್ತನೆ, ಮೇಲ್ಮನೆಯ ಗೌರವವನ್ನು ಎಂದೋ ನುಚ್ಚು ನೂರು ಮಾಡಿದೆ. ವಿಧಾನಪರಿಷತನ್ನು ಮುಚ್ಚಿ ಬಿಡಿ ಎನ್ನುವ ಮಾತುಗಳು ಇದೀಗ ನಾಡಿನ ಚಿಂತಕರ ವಲಯದಿಂದಲೇ ವ್ಯಾಪಕವಾಗಿ ಕೇಳಿ ಬರುತ್ತಿವೆೆ. ವಿಧಾನಸಭೆಯಲ್ಲಿ ಟಿಕೆಟ್ ವಂಚಿತರಾಗಿರುವ ಅಥವಾ ನೇರವಾಗಿ ಆಯ್ಕೆಯಾಗಲು ವಿಫಲರಾಗುವ, ಪಕ್ಷಕ್ಕೆ ಆರ್ಥಿಕವಾಗಿ ನೆರವಾಗುವ ಜನರನ್ನು ಗುರುತಿಸಿ ಅವರನ್ನು ವಿಧಾನಪರಿಷತ್ಗೆ ಕಳುಹಿಸುವುದು ಸಾಮಾನ್ಯ. ಇವರು ವಿಧಾನಸಭೆಗೆ ಮಾರ್ಗದರ್ಶಿಗಳಾಗುವುದು ಪಕ್ಕಕ್ಕಿರಲಿ, ಇವರಿಗೇ ಸೂಕ್ತ ಮಾರ್ಗದರ್ಶನದ ಅಗತ್ಯವಿರುತ್ತದೆ. ಕಳೆದ ವರ್ಷ ಡಿಸೆಂಬರ್ನಲ್ಲಿ ವಿಧಾನಪರಿಷತ್ನಲ್ಲಿ ಓರ್ವ ಪ್ರತಿನಿಧಿ ತನ್ನ ಸಹೋದ್ಯೋಗಿಯನ್ನು ಅಶ್ಲೀಲವಾಗಿ ನಿಂದಿಸಿ ಸುದ್ದಿಯಾದರು. ಈ ಘಟನೆ ಒಟ್ಟು ಕಲಾಪದ ಉದ್ದೇಶವನ್ನೇ ಬುಡಮೇಲು ಮಾಡಿತು. ಜನಪ್ರತಿನಿಧಿಗಳು ಹೇಗಿರಬಾರದು ಎನ್ನುವುದಕ್ಕೆ ಅಂದು ಅವರು ಮಾದರಿಯಾದರು. ಇಂತಹ ವಿಧಾನಪರಿಷತನ್ನು ಯಾಕೆ ಬರ್ಖಾಸ್ತ್ತು ಮಾಡಬಾರದು ? ಈ ಮೂಲಕ ಕಲಾಪದ ಸಮಯ ಮತ್ತು ವೆಚ್ಚ ಎರಡೂ ಉಳಿದಂತಾಗುತ್ತದೆ ಎನ್ನುವ ಅಭಿಪ್ರಾಯ ಇತ್ತೀಚೆಗೆ ತೀವ್ರ ಬಲವನ್ನು ಪಡೆಯುತ್ತಿದೆ.
ಇದೀಗ ವಿಧಾನಪರಿಷತ್ಗೆ ಸರಕಾರ ಮಾಡಲು ಮುಂದಾಗಿರುವ ನಾಮನಿರ್ದೇಶನ ಮತ್ತೆ ಚರ್ಚೆಯ ಕೇಂದ್ರವಾಗಿದೆ. ಈ ಸ್ಥಾನಕ್ಕಾಗಿ ಪಕ್ಷದೊಳಗಿರುವ ಸ್ಪರ್ಧೆಯೇ ಯಾರನ್ನೂ ಆಯ್ಕೆ ಮಾಡಲಾಗದ ಸ್ಥಿತಿಯನ್ನು ಸರಕಾರಕ್ಕೆ ತಂದೊದಗಿಸಿದೆ. ಎರಡು ದಿನಗಳ ಹಿಂದೆ ನಾಲ್ವರ ಹೆಸರನ್ನು ಅಂತಿಮವಾಗಿಸಲು ಕಾಂಗ್ರೆಸ್ ಯಶಸ್ವಿಯಾಯಿತಾದರೂ ಕೊನೆಯ ಕ್ಷಣದಲ್ಲಿ ಅದಕ್ಕೆ ತಡೆ ಬಿದ್ದಿದೆ. ‘ನಾಮಕರಣದಲ್ಲಿ ಪಕ್ಷದಲ್ಲಿ ದುಡಿದವರನ್ನು ಕಡೆಗಣಿಸಲಾಗಿದೆ’ ಎನ್ನುವ ಟೀಕೆ, ಆಕ್ರೋಶ ಕೇಳಿ ಬಂದ ಹಿನ್ನೆಲೆಯಲ್ಲಿ ಹೈಕಮಾಂಡ್ ಕೊನೆಯ ಕ್ಷಣದಲ್ಲಿ ಪಟ್ಟಿಯನ್ನು ತಡೆ ಹಿಡಿದಿದೆ ಎನ್ನಲಾಗುತ್ತಿದೆ. ರಾಜ್ಯ ವಿಧಾನಪರಿಷತ್ನಲ್ಲಿ ಒಟ್ಟು 75 ಸದಸ್ಯ ಬಲವಿದ್ದು, ಇವರಲ್ಲಿ ಸುಮಾರು 25 ಮಂದಿಯನ್ನು ವಿಧಾನಸಭಾ ಸದಸ್ಯರು ಆಯ್ಕೆ ಮಾಡುತ್ತಾರೆ. ಈ ಸಂದರ್ಭದಲ್ಲಿ ರಾಜಕೀಯ ಪೈಪೋಟಿಗಳಿರುವುದು ಸಹಜ. ಇಲ್ಲಿ ಪಕ್ಷ ರಾಜಕೀಯದಲ್ಲಿ ದುಡಿದವರಿಗೆ ಆಯಾ ರಾಜಕೀಯ ಪಕ್ಷಗಳು ಅವಕಾಶ ನೀಡಿದರೆ ಅದನ್ನು ತಿರಸ್ಕರಿಸುವಂತಿಲ್ಲ. ಈ ಸಂದರ್ಭದಲ್ಲೂ ಮೇಲ್ಮನೆಯ ಮೇಲೆ ಜನರಿಗಿರುವ ಗೌರವವನ್ನು ಪರಿಗಣಿಸಿ ಪಕ್ಷದೊಳಗಿರುವ ಹಿರಿಯ ಮುತ್ಸದ್ದಿ ರಾಜಕಾರಣಿಗಳಿಗೆ, ಅರ್ಹತೆಯಿದ್ದೂ ನೇರ ಚುನಾವಣೆಯನ್ನು ಎದುರಿಸಲಾಗದವರಿಗೆ, ಪ್ರಾತಿನಿಧ್ಯದ ಕೊರತೆ ಎದುರಿಸುವ ಸಮುದಾಯಗಳಿಗೆ ಅವಕಾಶ ನೀಡುವುದು ರಾಜಕೀಯ ಪಕ್ಷಗಳ ಹೊಣೆಗಾರಿಕೆಯಾಗಿದೆ. 25 ಮಂದಿಯನ್ನು ಸ್ಥಳೀಯಾಡಳಿತ ಮತ್ತು 14 ಮಂದಿಯನ್ನು ಪದವೀಧರ ಮತ್ತು ಶಿಕ್ಷಣ ಕ್ಷೇತ್ರಗಳಿಂದ ಆಯ್ಕೆ ಮಾಡಲಾಗುತ್ತದೆ. ಉಳಿದಂತೆ 11 ಮಂದಿ ನಾಮನಿರ್ದೇಶನ ಸದಸ್ಯರಿರುತ್ತಾರೆ. ವಿಧಾನಪರಿಷತ್ನ ಘನತೆ, ಗೌರವಗಳ ಅಳಿವು ಉಳಿವಿನಲ್ಲಿ ಈ ನಾಮಕರಣ ಸದಸ್ಯರ ಪಾತ್ರ ಬಹುದೊಡ್ಡದಾಗಿರುತ್ತದೆ. ಪದವೀಧರ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಚುನಾವಣೆಯನ್ನು ಎದುರಿಸುವುದು ಕಡ್ಡಾಯ. ಆದರೆ ವಿಜ್ಞಾನಿಗಳು, ಹಿರಿಯ ಸಾಹಿತಿಗಳು, ಕವಿಗಳು, ಪತ್ರಕರ್ತರು ಸಮಾಜ ವಿಜ್ಞಾನಿಗಳು ಇವರನ್ನು ಸರಕಾರವೇ ಗುರುತಿಸಿ ಮೇಲ್ಮನೆಗೆ ಕರೆಸಿಕೊಂಡು ಅವರಿಂದ ಸಲಹೆ ಸೂಚನೆಗಳನ್ನು ಪಡೆಯಬೇಕು. ಇದೀಗ ಅಂತಹ ನಾಲ್ಕು ಸ್ಥಾನಗಳಿಗಾಗಿ ಆಯ್ಕೆ ಪ್ರಕ್ರಿಯೆ ಚಾಲನೆಯಲ್ಲಿದೆ.
ಈ ನಾಮಕರಣವನ್ನು ಮಾಡಬೇಕಾದವರು ರಾಜ್ಯಪಾಲರು. ರಾಜ್ಯ ಸರಕಾರ ಸೂಚಿಸಿದವರನ್ನು ಇವರು ನಾಮಕರಣ ಮಾಡುತ್ತಾರೆ. ನಾಮನಿರ್ದೇಶನಗೊಂಡವರ ಮೇಲೆ ವೈಯಕ್ತಿಕವಾಗಿ ಕಳಂಕಗಳಿರುವುದು ಕಂಡು ಬಂದರೆ ಅದನ್ನು ತಡೆಹಿಡಿಯುವ ಅಧಿಕಾರವೂ ರಾಜ್ಯಪಾಲರಿಗಿದೆ. ಆದರೆ, ಇಲ್ಲಿ ಅಂತಿಮಗೊಳಿಸಿದ ಪಟ್ಟಿಯನ್ನು ರಾಜ್ಯಪಾಲರು ತಡೆ ಹಿಡಿಯುವ ಮೊದಲೇ ಕಾಂಗ್ರೆಸ್ ಹೈಕಮಾಂಡ್ ಪಟ್ಟಿಯನ್ನು ತಡೆ ಹಿಡಿದಿದೆ ಮತ್ತು ಪಕ್ಷದಲ್ಲಿ ದುಡಿದವರಿಗೆ ಆದ್ಯತೆ ನೀಡಬೇಕು ಎನ್ನುವ ಕಾರಣ ಇದರ ಹಿಂದಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಕಾಂಗ್ರೆಸ್ ಪಕ್ಷದಲ್ಲಿ ದುಡಿದ ಹಲವರಿಗೆ ಈಗಾಗಲೇ ವಿಧಾನಪರಿಷತ್ನಲ್ಲಿ ಅವಕಾಶವನ್ನು ನೀಡಲಾಗಿದೆ. ಇದೀಗ ನಡೆಯುತ್ತಿರುವ ನಾಮಕರಣ ತನ್ನ ಉದ್ದೇಶವನ್ನು ಸಾಧಿಸಿಕೊಳ್ಳಬೇಕಾದರೆ ಅರ್ಹ ಅಭ್ಯರ್ಥಿಗಳನ್ನು ಸೂಚಿಸುವುದು ಸರಕಾರದ ಹೊಣೆಗಾರಿಕೆಯಾಗಿದೆ. ಅರ್ಹ ಅಭ್ಯರ್ಥಿಯೆಂದರೆ, ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಅಲ್ಲ ಎನ್ನುವುದು ಹೈಕಮಾಂಡಿಗೆ ಪ್ರತ್ಯೇಕವಾಗಿ ತಿಳಿಸಿಕೊಡಬೇಕಾದ ಅಗತ್ಯವೇನೂ ಇಲ್ಲ. ಆದರೆ ಈ ಹಿಂದೆ ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸಿಕೊಂಡು ಬರದೇ ಇದ್ದುದರಿಂದ, ಈ ಬಾರಿಯೂ ನಿಯಮಪಾಲನೆಯ ಅಗತ್ಯವೇನಿದೆ? ಎನ್ನುವ ಪ್ರಶ್ನೆಯನ್ನು ಪಕ್ಷದ ಕಟ್ಟಾ ಅನುಯಾಯಿಗಳು ಕೇಳುತ್ತಿದ್ದಾರೆ. ಸಂಭಾವ್ಯ ಪಟ್ಟಿಯಲ್ಲಿ ಕನಿಷ್ಠ ಓರ್ವ ಪತ್ರಕರ್ತರ ಹೆಸರಾದರೂ ಕಾಣಿಸಿಕೊಂಡಿರುವುದು ಸಮಾಧಾನ ತರುವ ವಿಷಯವಾಗಿದೆ. ಇತ್ತೀಚಿನ ದಿನಗಳಲ್ಲಿ ವಿಧಾನಪರಿಷತ್ನಲ್ಲಿ ಯೋಗ್ಯ ಜನಪ್ರತಿನಿಧಿಗಳ ಕೊರತೆ ಎದ್ದು ಕಾಣುತ್ತಿದೆ. ಪರಿಣಾಮವಾಗಿಯೇ, ಪರಿಷತ್ನ ಕಲಾಪಗಳಲ್ಲಿ ಮೂರನೆಯ ದರ್ಜೆಯ ಭಾಷೆ ಹೆಚ್ಚು ಹೆಚ್ಚು ಪ್ರಯೋಗವಾಗತೊಡಗಿದೆ. ಸಮಾಜದ ಮುತ್ಸದ್ದಿ ರಾಜಕಾರಣಿಗಳು ಮತ್ತು ತಜ್ಞರ ಆಯ್ಕೆಯ ಕೊರತೆಯೇ ಇದಕ್ಕೆ ಮುಖ್ಯ ಕಾರಣ. ಮೇಲ್ಮನೆಯ ಘನತೆಯನ್ನು ಮತ್ತೆ ಮೇಲೆತ್ತಬೇಕಾದರೆ ಸರಕಾರ ನಾಮನಿರ್ದೇಶನದ ಸಂದರ್ಭದಲ್ಲಿ ಸಂವಿಧಾನ ಮತ್ತು ಜಾತ್ಯತೀತತೆಯ ಮೇಲೆ ನಂಬಿಕೆಯನ್ನು, ಬದ್ಧತೆಯನ್ನು ಇಟ್ಟುಕೊಂಡಿರುವ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ತಜ್ಞರನ್ನೇ ಗಣನೆಗೆ ತೆಗೆದುಕೊಳ್ಳಬೇಕು. ರಾಜಕೀಯ ಕ್ಷೇತ್ರದಲ್ಲಿ ಶೋಷಿತರಿಗಾಗಿ, ರೈತರಿಗಾಗಿ ಹೋರಾಟ ನಡೆಸಿದ ನಾಯಕರನ್ನೂ ಈ ಸಂದರ್ಭದಲ್ಲಿ ಪರಿಗಣಿಸಬಹುದು. ಒಟ್ಟಿನಲ್ಲಿ, ವಿಧಾನಪರಿಷತ್ ಎನ್ನುವ ಗುಬ್ಬಚ್ಚಿಯು ಸರಕಾರದ ಮುಷ್ಟಿಯೊಳಗಿದೆ. ಅದು ಬದುಕಿದೆಯೋ? ಸತ್ತಿದೆಯೋ? ಎನ್ನುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ತೀರ್ಮಾನಿಸಬೇಕು. ಕಾಂಗ್ರೆಸ್ ಹೈಕಮಾಂಡ್ಗೆ ಈ ನಿಟ್ಟಿನಲ್ಲಿ ಅವರಿಗೆ ಪೂರ್ಣ ನೈತಿಕ ಬೆಂಬಲವನ್ನು ನೀಡಬೇಕು.