ಅರಳುವ ಹೂವಿಗೆ ಬಾಡುವಾಸೆ ಯಾಕೆ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ 14 ವರ್ಷದ ಬಾಲಕನೊಬ್ಬ ಮರಣ ಪತ್ರ ಬರೆದಿಟ್ಟು ನೇಣುಹಾಕಿಕೊಂಡಿರುವ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬಾಲಕ ಬರೆದಿರುವ ಮರಣ ಪತ್ರ ಎಂತಹ ಕಲ್ಲು ಮನಸ್ಸನ್ನೂ ಛೇದಿಸುವಂತಿದೆ. ಬಾಲಕನ ಪೋಷಕರೂ ಸಮಾಜದಲ್ಲಿ ಗಣ್ಯ ಸ್ಥಾನದಲ್ಲಿರುವವರು. ಕಲಾವಿದರು ಕೂಡ ಹೌದು. ಹೀಗಿದ್ದರೂ ಇಂತಹದೊಂದು ದುರಂತ ಹೇಗೆ ಸಂಭವಿಸಿತು? ಇದಕ್ಕೆ ಯಾರು ಹೊಣೆ ?
ಎನ್ನುವ ಪ್ರಶ್ನೆಗಳಿಗೆ ಉತ್ತರಗಳಿಲ್ಲದೆ ಸಮಾಜ ತಬ್ಬಿಬ್ಬಾಗಿದೆ. ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆಗಳು ಹೆಚ್ಚುತ್ತಿವೆ. ದೇಶದಲ್ಲಿ ಸೃಷ್ಟಿಯಾಗಿರುವ ಆರ್ಥಿಕ ಬಿಕ್ಕಟ್ಟು ಇದಕ್ಕೆ ಮೊದಲ ಕಾರಣ ಎಂದು ಅಭಿಪ್ರಾಯಿಸಲಾಗುತ್ತಿದೆ. ಜೊತೆಜೊತೆಗೇ ಖಿನ್ನತೆಯ ಕಾಯಿಲೆ ಇಂದಿನ ಯುವಕರನ್ನು ಪಿಡುಗಿನಂತೆ ಹಿಡಿದು ಹಿಪ್ಪೆ ಮಾಡುತ್ತಿದೆ. ಒಂದೆಡೆ ನಿರುದ್ಯೋಗ, ಇನ್ನೊಂದೆಡೆ ಕೆಲಸದ ಒತ್ತಡ, ಆರ್ಥಿಕ ಅಭದ್ರತೆ, ಮೊಬೈಲ್‌ಗಳ ಅತಿಯಾದ ಬಳಕೆ ಇವೆಲ್ಲವೂ ಖಿನ್ನತೆಗೆ ಕಾರಣಗಳಾಗುತ್ತಿವೆ ಎಂದು ತಜ್ಞರು ಆರೋಪ ಮಾಡುತ್ತಿದ್ದಾರೆ. ಆದರೆ ಇನ್ನೂ ಬದುಕನ್ನು ಪೂರ್ಣವಾಗಿ ಕಣ್ಣು ಬಿಟ್ಟು ನೋಡದ, ಯಾವುದೇ ಕೌಟುಂಬಿಕ ಭಾರಗಳಿಲ್ಲದ ಎಳೆ ಮಕ್ಕಳು ಯಾಕೆ ಬದುಕಿಗೆ ವಿದಾಯ ಹೇಳುತ್ತಿದ್ದಾರೆ? ಇಂತಹದೊಂದು ನಿರ್ಧಾರವನ್ನು ತೆಗೆದುಕೊಳ್ಳಲು ಅವರಿಗಿರುವ ಒತ್ತಡಗಳಾದರೂ ಯಾವುವು ಎನ್ನುವುದನ್ನು ಇನ್ನಾದರೂ ನಾವು ಚರ್ಚೆ ಮಾಡದಿದ್ದಲ್ಲಿ, ನಮ್ಮನ್ನು ನಾವು ಮನುಷ್ಯರೆಂದು ಭಾವಿಸಿಕೊಳ್ಳುವುದಕ್ಕೆ ಯಾವ ಅರ್ಥವೂ ಉಳಿಯುವುದಿಲ್ಲ.
ಭಾರತದ ಸರಕಾರಿ ಅಂಕಿ ಅಂಶಗಳ ಪ್ರಕಾರ ಸರಾಸರಿ ದಿನಕ್ಕೆ 35ಕ್ಕೂ ಅಧಿಕ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. 2020ರಲ್ಲಿ 12, 521 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದರೆ 2021ರಲ್ಲಿ 13,000ಕ್ಕೂ ಅಧಿಕ ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೆಚ್ಚಿನ ಆತ್ಮಹತ್ಯೆ ಪ್ರಕರಣಗಳಲ್ಲಿ ಪರೀಕ್ಷೆ ವೈಫಲ್ಯ ಕಾರಣವಾಗಿರುತ್ತದೆ. ವರ್ಷದಿಂದ ವರ್ಷಕ್ಕೆ ಮಕ್ಕಳ ಆತ್ಮಹತ್ಯೆಯ ಸಂಖ್ಯೆ ಹೆಚ್ಚುತ್ತಾ ಹೋಗುತ್ತಿದೆ. ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳು ಹತ್ತಿರವಾಗುತ್ತಿದ್ದಂತೆಯೇ ವಿದ್ಯಾರ್ಥಿಗಳಲ್ಲಿ ಖಿನ್ನತೆ, ಆತಂಕಗಳು ಹೆಚ್ಚುತ್ತವೆ. ಅತಿ ನಿರೀಕ್ಷೆ ಅವರನ್ನು ಆತ್ಮಹತ್ಯೆಯೆಡೆಗೆ ತಳ್ಳಬಹುದು. ‘ಪರೀಕ್ಷೆಯಲ್ಲಿ ಅನುತ್ತೀರ್ಣ: ವಿದ್ಯಾರ್ಥಿ ಆತ್ಮಹತ್ಯೆ’ ಎನ್ನುವ ಸುದ್ದಿಯನ್ನು ನಾವು ಪ್ರತಿ ವರ್ಷವೂ ಓದುತ್ತೇವೆ. ಈ ಆತ್ಮಹತ್ಯೆಗೆ ವ್ಯವಸ್ಥೆ ವಿದ್ಯಾರ್ಥಿಯನ್ನೇ ಹೊಣೆ ಮಾಡಿ, ಪ್ರಕರಣವನ್ನು ಮುಗಿಸಿ ಬಿಡುತ್ತದೆ. ಆದರೆ ಅನುತ್ತೀರ್ಣನಾದರೆ ಒಬ್ಬ ವಿದ್ಯಾರ್ಥಿ ಯಾಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ? ಆತನನ್ನು ಅಂತಹ ಸ್ಥಿತಿಗೆ ನೂಕುವಲ್ಲಿ ಶಾಲೆಯ ಆಡಳಿತ ಮಂಡಳಿ, ಪೋಷಕರು, ಸಮಾಜ ಎಷ್ಟರಮಟ್ಟಿಗೆ ಹೊಣೆ? ಎನ್ನುವುದರ ಕುರಿತಂತೆ ಚರ್ಚೆಗಳು ನಡೆಯುವುದೇ ಇಲ್ಲ. ಎಸೆಸ್ಸೆಲ್ಸಿಯಲ್ಲಿ ಪರೀಕ್ಷೆಯ ಕಾರಣದಿಂದ ಒಬ್ಬ ಆತ್ಮಹತ್ಯೆ ಮಾಡಿಕೊಂಡರೆ ಶಾಲೆಯ ಆಡಳಿತ ಮಂಡಳಿ ಮತ್ತು ಪೋಷಕರ ವಿಚಾರಣೆ ನಡೆಯಲೇಬೇಕು. ಹಾಗೆಯೇ ಸಮಾಜ ಕೂಡ ಪರೀಕ್ಷೆಗಳನ್ನು, ಉತ್ತೀರ್ಣ, ಅನುತ್ತೀರ್ಣಗಳನ್ನು ನೋಡುವ ದೃಷ್ಟಿ ಬದಲಿಸಿಕೊಳ್ಳಬೇಕು. ಅನುತ್ತೀರ್ಣಗೊಂಡವನನ್ನು ಸಮಾಜ ಅಸ್ಪಶ್ಯವಾಗಿಸದೆ ಅವರಿಗೆ ಜೊತೆಯಾಗಬೇಕು. ಆದರೆ ಅದು ನಡೆಯುತ್ತಿಲ್ಲ. ಇಂದಿನ ಶಿಕ್ಷಣ ವ್ಯವಸ್ಥೆ ಪರೀಕ್ಷಾ ಕೇಂದ್ರಿತವಾಗಿದ್ದು, ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆಯುವುದನ್ನು ಮಕ್ಕಳ ಸಾವು ಬದುಕಿನ ಪ್ರಶ್ನೆಯೆಂಬಂತೆ ಪೋಷಕರು ವರ್ತಿಸುವುದು ಅಂತಿಮವಾಗಿ ದುರಂತಕ್ಕೆ ಕಾರಣವಾಗಬಹುದು.
ಮೊಬೈಲ್‌ಗಳ ಬಳಕೆಯೂ ಮಕ್ಕಳ ಮನಸ್ಸನ್ನು ಬಲಿತೆಗೆದುಕೊಳ್ಳುತ್ತಿದೆ. ಭಾರತದಲ್ಲಿ ಮಕ್ಕಳಿಗೆ ಇಂಟರ್‌ನೆಟ್ ದಕ್ಕದಂತೆ ನೋಡಿಕೊಳ್ಳುವ ವ್ಯವಸ್ಥೆಯೇ ಇಲ್ಲ. ಎಳೆ ಮಗುವಿಗೆ ಉಣಿಸುವ ಹೊತ್ತಿನಲ್ಲೂ ಮೊಬೈಲ್ ಕೊಟ್ಟು ರಮಿಸುವ ಪಾಲಕರಿದ್ದಾರೆ. ಮೊಬೈಲ್ ಚಟಕ್ಕೆ ಬಿದ್ದ ಮಕ್ಕಳು ಅದರೊಳಗಿರುವ ಕೆಡುಕಿಗೆ ಬಹುಬೇಗ ಬಲಿಯಾಗುವ ಸಾಧ್ಯತೆಗಳಿವೆ. ಹಿಂಸೆ, ಸಾವು, ಆತ್ಮಹತ್ಯೆಗಳನ್ನು ಮೊಬೈಲ್ ಮೂಲಕ ದಿನನಿತ್ಯ ನೋಡುವ ಮಕ್ಕಳು ತಮ್ಮ ಸಣ್ಣ ಪುಟ್ಟ ಸಮಸ್ಯೆಗಳನ್ನೂ ಎದುರಿಸಲು ಶಕ್ತಿ ಸಾಲದೆ ಆತ್ಮಹತ್ಯೆಯ ಮೊರೆ ಹೋಗುವ ಅಪಾಯವಿದೆ. ಇದೇ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳ ಒಳಗಿರುವ ಸೈಬರ್ ಬೆದರಿಕೆಗಳಿಗೆ ಬಲಿಯಾಗಿ ಅಥವಾ ಬ್ಲ್ಯಾಕ್‌ಮೇಲ್‌ಗೆ ಒಳಗಾಗಿ ಅದನ್ನು ಪೋಷಕರಲ್ಲಿ ಹೇಳಿಕೊಳ್ಳಲು ಹಿಂಜರಿದು ಅಪಾಯವನ್ನು ಮೈಮೇಲೆ ಎಳೆದುಕೊಳ್ಳಬಹುದು. ಶಾಲೆ ಕಾಲೇಜುಗಳಿಗೆ ಹೋಗುವ ಮಕ್ಕಳಿಗೆ ಮಾದಕ ವಸ್ತುಗಳು ಸುಲಭದಲ್ಲಿ ದೊರಕುತ್ತಿವೆ. ಈ ದುಶ್ಚಟವೂ ಅವರನ್ನು ಅಪಾಯಕ್ಕೆ ತಳ್ಳಬಹುದು. ಇದೇ ಸಂದರ್ಭದಲ್ಲಿ ಈ ಹಿಂದಿನ ಕೌಟುಂಬಿಕ ವಾತಾವರಣ ಈಗ ಇಲ್ಲ. ಹೆಚ್ಚಿನ ಮನೆಗಳಲ್ಲಿ ತಂದೆ-ತಾಯಿ ಇಬ್ಬರೂ ಕಚೇರಿಗಳಲ್ಲಿ ದುಡಿಯುವುದರಿಂದ ಮಕ್ಕಳ ಮೇಲೆ ಗಮನ ನೀಡುವುದು ಕಷ್ಟವಾಗಿ ಬಿಡುತ್ತದೆ. ಮಕ್ಕಳು ತೀವ್ರ ಒಂಟಿತನದಿಂದ ನರಳುತ್ತಿರುತ್ತಾರೆ. ಕೆಲವೊಮ್ಮೆ ಪೋಷಕರ ನಡುವಿನ ತಿಕ್ಕಾಟಗಳು, ಘರ್ಷಣೆೆಗಳು ಮಕ್ಕಳ ಬದುಕಿನ ಮೇಲೆ ಪರಿಣಾಮ ಬೀರಬಹುದು. ಕನಿಷ್ಠ ಮಕ್ಕಳ ಮುಂದೆಯಾದರೂ ಪೋಷಕರು ಪರಸ್ಪರ ಪ್ರೀತಿ, ಗೌರವದಿಂದ ನಡೆದುಕೊಳ್ಳುವುದು ಅತ್ಯಗತ್ಯ.
ಮಕ್ಕಳಿಗೇನಿದೆ ತಲೆಬಿಸಿ? ಎನ್ನುವ ಬೇಜವಾಬ್ದಾರಿಯ ಧೋರಣೆಯನ್ನು ಪೋಷಕರು ಬದಿಗಿಡಬೇಕು. ದಿನದ ಕೆಲವು ಗಂಟೆಗಳಾದರೂ ಮಕ್ಕಳ ಜೊತೆಗೆ ಕಳೆದು, ಅವರ ಮಾತುಗಳನ್ನು ಆಲಿಸಬೇಕು. ಅವರಿಗೆ ಉಪದೇಶ, ಆದೇಶಗಳನ್ನು ನೀಡುವುದಕ್ಕಿಂತಲೂ ಅವರಿಗೆ ಸಲಹೆ, ಸಾಂತ್ವನಗಳ ಅಗತ್ಯವಿದೆ. ಅವರಲ್ಲಿ ಆತ್ಮವಿಶ್ವಾಸವನ್ನು ಬಿತ್ತಬೇಕೇ ಹೊರತು, ಅವರಲ್ಲಿ ಭಯವನ್ನಲ್ಲ. ಯಾವುದೇ ತಪ್ಪುಗಳು ಅವರಿಂದ ಘಟಿಸಿದರೂ ಅದನ್ನು ಪೋಷಕರೊಂದಿಗೆ ಹಂಚಿಕೊಳ್ಳಲು ಪ್ರೋತ್ಸಾಹಿಸಬೇಕು. ಅವರ ಸಮಸ್ಯೆಗಳಿಗೆ, ಅಳಲಿಗೆ ಪೂರ್ಣವಾಗಿ ಕಿವಿಯಾಗಬೇಕು. ಅವರು ಹೇಳುವ ಸಮಸ್ಯೆಗಳು ತೀರ ಲಘುವಾದದ್ದು ಎಂದು ಪೋಷಕರಿಗೆ ಅನ್ನಿಸಬಹುದು. ಆದರೆ ಮಕ್ಕಳ ಪಾಲಿಗೆ ಅದು ಸಾವು ಬದುಕಿನ ಪ್ರಶ್ನೆಯಾಗಿರಬಹುದು. ಶಾಲೆಯಲ್ಲಿ ಸಹಪಾಠಿಗಳಿಂದ ದೌರ್ಜನ್ಯ, ಶಿಕ್ಷಕರಿಂದ ಕಿರುಕುಳ ಇತ್ಯಾದಿಗಳ ಕುರಿತಂತೆ ದೂರು ಹಿಡಿದುಕೊಂಡು ಬಂದರೆ ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಆಗಾಗ ಶಾಲೆಗೆ ಭೇಟಿ ನೀಡಿ, ಶಿಕ್ಷಕರೊಂದಿಗೆ ಮಾತುಕತೆಗಳನ್ನು ನಡೆಸುತ್ತಿರಬೇಕು. ಮಕ್ಕಳ ಒಳಗಿರುವ ಸೃಜನಶೀಲ ಅಂಶಗಳನ್ನು ಗುರುತಿಸಿ ಅವುಗಳಿಗೆ ಪ್ರೋತ್ಸಾಹ ನೀಡಬೇಕೇ ಹೊರತು, ಪೋಷಕರು ತಮ್ಮ ಇಷ್ಟಾನಿಷ್ಟಗಳನ್ನು ಮಕ್ಕಳ ಮೇಲೆ ಹೇರಲು ಹೋಗಬಾರದು. ಪೋಷಕರು ಮಕ್ಕಳ ಪಾಲಿನ ಸ್ನೇಹಿತರೂ ಆಗುವುದು ಇಂದಿನ ದಿನಗಳಲ್ಲಿ ಅತ್ಯಗತ್ಯ. ಮಕ್ಕಳ ಮನಸ್ಸು ಗಾಜಿನಂತೆ. ನಾಲ್ದಿಕ್ಕುಗಳಿಂದ ಕಲ್ಲುಗಳು ಅವರೆಡೆಗೆ ತೂರಿ ಬರುವಾಗ ಪೋಷಕರು ಗೋಡೆಯಂತೆ ನಿಂತು ಅವರನ್ನು ಕಾಪಾಡಬೇಕು. ಪೋಷಕರೇ ಅವರ ಪಾಲಿಗೆ ಕಲ್ಲುಗಳಾಗಿ ಗಾಜು ಒಡೆಯಲು ಪರೋಕ್ಷ ಕಾರಣರಾಗಬಾರದು. ಈ ನಿಟ್ಟಿನಲ್ಲಿ ಮಕ್ಕಳ ಆತ್ಮಹತ್ಯೆ ತಡೆಯುವಲ್ಲಿ ಪೋಷಕರ ಪಾತ್ರ ಬಹುದೊಡ್ಡದು. ಈ ಬಗ್ಗೆ ಪೋಷಕರು ಆಗಾಗ ತಜ್ಞರ ಕೈಯಿಂದ ಸಲಹೆಗಳನ್ನು ಪಡೆಯುವುದು ಅತ್ಯಗತ್ಯ.