×
Ad

ಕೋಮು ದ್ವೇಷದ ರಾಜಕಾರಣ

Update: 2025-08-12 09:04 IST

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಅಲ್ಪಸಂಖ್ಯಾತರನ್ನು, ಅದರಲ್ಲೂ ಮುಸ್ಲಿಮ್ ಸಮುದಾಯವನ್ನು ಗುರಿಯಾಗಿರಿಸಿಕೊಂಡು ದ್ವೇಷದ ದಾಳಿ ನಡೆಸುವುದು ಇತ್ತೀಚಿನ ವರ್ಷಗಳಲ್ಲಿ ಸಹಜ ಸಂಗತಿ ಎಂಬಂತಾಗಿದೆ. ಮುಂಚೆ ಕೋಮುವಾದಿ ಗುಂಪುಗಳು ಇಂಥ ಅಪ್ರಚೋದಿತ ದಾಳಿಗೆ ಮುಂದಾಗುತ್ತಿದ್ದವು. ಈಗ ಚುನಾಯಿತ ಸರಕಾರಗಳೇ ಇಂಥ ಕುಹಕದ ಕೃತ್ಯಕ್ಕೆ ಕೈ ಹಾಕುತ್ತಿವೆ. ಇದಕ್ಕೆ ತೀರ ಇತ್ತೀಚಿನ ಉದಾಹರಣೆ ಅಂದರೆ ಅಸ್ಸಾಮಿನಲ್ಲಿ ನಡೆಯುತ್ತಿರುವ ಒತ್ತುವರಿ ತೆರವು ಕಾರ್ಯಾಚರಣೆ

ಮನುಷ್ಯ ಹಾಗೂ ಪ್ರಾಣಿಗಳ ನಡುವಿನ ಸಂಘರ್ಷವನ್ನು ತಡೆಯುವುದಕ್ಕಾಗಿ ಅರಣ್ಯ ಒತ್ತುವರಿಯನ್ನು ತೆರವುಗೊಳಿಸಬೇಕೆಂದು ಗುವಾಹಟಿ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿತ್ತು. ಇದರನ್ವಯ ಅಸ್ಸಾಮಿನ ಬಿಜೆಪಿ ಸರಕಾರ ಕಾರ್ಯಾಚರಣೆಯನ್ನು ಆರಂಭಿಸಿತು. ನ್ಯಾಯಾಲಯದ ಸೂಚನೆಯನ್ನು ಪಾಲಿಸುವ ನೆಪದಲ್ಲಿ ಮುಸ್ಲಿಮ್ ಸಮುದಾಯಗಳು ನೆಲೆಸಿರುವ ಪ್ರದೇಶಗಳನ್ನು ಗುರಿಯಾಗಿರಿಸಿಕೊಂಡು ತೆರವು ಕಾರ್ಯಾಚರಣೆ ನಡೆಸುತ್ತಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.

ಅಸ್ಸಾಮಿನಲ್ಲಿ ಬಹುತೇಕ ಎಲ್ಲ ಸಮುದಾಯಗಳ ಜನರೂ ಸರಕಾರಿ ಭೂಮಿ ಹಾಗೂ ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಸರಕಾರದ ಕಂದಾಯ ಭೂಮಿ ಹಾಗೂ ಗೋಮಾಳ ಮತ್ತು ಅರಣ್ಯ ಪ್ರದೇಶಗಳ ಒತ್ತುವರಿಯನ್ನು ತೆರವುಗೊಳಿಸುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಅಲ್ಲಿನ ಸರಕಾರ ಹೇಳಿಕೊಂಡಿದೆ. ಆದರೆ ಈ ತೆರವು ಕಾರ್ಯಾಚರಣೆ ಕೆಲವು ನಿರ್ದಿಷ್ಟ ಪ್ರದೇಶ ಹಾಗೂ ಕುಟುಂಬಗಳನ್ನು ಗುರಿಯಾಗಿರಿಸಿಕೊಂಡು ನಡೆಯುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಅಲ್ಲಿನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಕೋಮು ಪ್ರಚೋದಕ ಹೇಳಿಕೆಗಳನ್ನು ನೀಡುವಲ್ಲಿ ಕುಖ್ಯಾತಿ ಗಳಿಸಿದ್ದಾರೆ. ವಾಸ್ತವವಾಗಿ 2021ರಿಂದ ಈ ಕಾರ್ಯಾಚರಣೆ ನಡೆಯುತ್ತಿದೆ, ಆದರೆ ಈಗಿನ ಮುಖ್ಯಮಂತ್ರಿ ಅದನ್ನು ತಮ್ಮ ರಾಜಕೀಯ ಉದ್ದೇಶಗಳಿಗಾಗಿ ಬಳಸಿಕೊಳ್ಳುತ್ತಿದ್ದಾರೆ. ಭ್ರಷ್ಟಾಚಾರದ ಹಗರಣಗಳ ಆರೋಪ ಹೊತ್ತಿರುವ ಇವರು ಬಿಜೆಪಿ ಸೇರಿದ್ದು, ಈಗ ಕೇಂದ್ರ ನಾಯಕರನ್ನು ಒಲೈಸಲು ಈ ಕಾರ್ಯಾಚರಣೆಯನ್ನು ಬಳಸಿಕೊಳ್ಳುತ್ತಿದ್ದಾರೆ.

ಪರಿಸರ ರಕ್ಷಣೆಯ ಕಾಳಜಿಯಿಂದ ಒತ್ತುವರಿ ತೆರವುಗೊಳಿಸಲು ಗುವಾಹಟಿ ಹೈಕೋರ್ಟ್ ನೀಡಿರುವ ಆದೇಶವನ್ನು ಅಕ್ರಮ ವಲಸೆಗಾರರು ಎಂದು ಗುರುತಿಸಲ್ಪಡುವ ಹಾಗೂ ಬಂಗಾಳಿ ಭಾಷೆಯನ್ನು ಮಾತಾಡುವ ಮುಸ್ಲಿಮರನ್ನು ಹತ್ತಿಕ್ಕಲು ಅಲ್ಲಿನ ರಾಜ್ಯ ಸರಕಾರ ಬಳಸಿಕೊಳ್ಳುತ್ತಿರುವುದು ಆತಂಕದ ಸಂಗತಿಯಾಗಿದೆ. ಮುಸ್ಲಿಮ್ ಸಮುದಾಯ ಹೆಚ್ಚಿನ ಪ್ರಮಾಣದಲ್ಲಿ ನೆಲೆಸಿರುವ ಪ್ರದೇಶಗಳನ್ನು ಗುರುತಿಸಿ ಈ ತೆರವು ಕಾರ್ಯಾಚರಣೆ ನಡೆದಿದೆ. ಒತ್ತುವರಿದಾರರು ಎಂದು ಗುರುತಿಸಲಾಗಿರುವ ನಾಗರಿಕರು ನೈಸರ್ಗಿಕ ವಿಕೋಪಗಳಲ್ಲಿ ಮನೆ, ಮಾರು ಕಳೆದುಕೊಂಡವರಾಗಿದ್ದಾರೆ. ತಮಗೆ ಲಭ್ಯವಿರುವ ಕೆಲವು ಜಾಗಗಳಲ್ಲಿ ಮನೆಗಳನ್ನು ಮಾಡಿಕೊಂಡಿದ್ದಾರೆ. ನಿರ್ದಯವಾಗಿ ನಡೆದಿರುವ ಒತ್ತುವರಿ ತೆರವು ಕಾರ್ಯಾಚರಣೆಯ ನಂತರ ಇವರಲ್ಲಿ ಬಹುತೇಕ ಜನ ಸೂರು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಇದು ಅತ್ಯಂತ ಅಮಾನವೀಯ ಕ್ರಮವಾಗಿದೆ ಎಂದರೆ ತಪ್ಪಿಲ್ಲ.

ಬೀದಿಗೆ ಬಿದ್ದಿರುವ ಇವರ ಕುಟುಂಬಗಳ ಬದುಕು ಮತ್ತು ಭವಿಷ್ಯಕ್ಕೆ ಕತ್ತಲು ಕವಿದಿದೆ. ಇವರ ಬಳಿ ವಾಸ ಸ್ಥಳಕ್ಕೆ ಸಂಬಂಧಿಸಿದ ಅಧಿಕೃತ ದಾಖಲೆಗಳಿವೆ. ದಶಕಗಳಿಂದ ಇಲ್ಲಿ ನೆಲೆಸಿ ಬದುಕನ್ನು ಕಟ್ಟಿಕೊಂಡು ಇಲ್ಲಿನವರೇ ಆಗಿದ್ದಾರೆ. ಸರಕಾರ ಎಂಬುದು ಎಲ್ಲ ಪ್ರಜೆಗಳನ್ನು ಸಮಾನವಾಗಿ ನೋಡಿಕೊಳ್ಳಬೇಕು. ಜಾತಿ, ಮತದ ಹೆಸರಿನಲ್ಲಿ ಯಾವುದೇ ತಾರತಮ್ಯ ಮಾಡಬಾರದು. ಯಾವುದೇ ಸನ್ನಿವೇಶದಲ್ಲೂ ಮಾನವೀಯ ಅನುಕಂಪವನ್ನು ಕಳೆದುಕೊಳ್ಳಬಾರದು.

ಬಾಂಗ್ಲಾದೇಶದಿಂದ ಹಲವಾರು ದಶಕಗಳ ಹಿಂದೆಯೇ ವಲಸೆ ಬಂದು ಬದುಕನ್ನು ಕಟ್ಟಿಕೊಂಡವರಲ್ಲಿ ಹಿಂದೂ, ಮುಸ್ಲಿಮ್ ಸೇರಿದಂತೆ ಹಲವು ಸಮುದಾಯಗಳ ಜನರು ಇದ್ದಾರೆ. ಆದರೆ ಅಸ್ಸಾಮಿನ ಬಿಜೆಪಿ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಕಾಮಾಲೆ ಕಣ್ಣಿಗೆ ಬರೀ ಮುಸಲ್ಮಾನರೇ ಕಾಣುತ್ತಿದ್ದಾರೆ. ಅವರು ಬಹಿರಂಗವಾಗಿ ನೀಡಿರುವ ಹೇಳಿಕೆಯ ಪ್ರಕಾರ ಸ್ಥಳೀಯರು ಮಾಡಿಕೊಂಡಿರುವ ಒತ್ತುವರಿ ಅಪರಾಧವಾಗುವುದಿಲ್ಲ. ವಲಸಿಗ ಮುಸಲ್ಮಾನರನ್ನು ಮಾತ್ರ ಒಕ್ಕಲೆಬ್ಬಿಸುತ್ತಿರುವುದಾಗಿ ಅವರು ಹೇಳಿದ್ದಾರೆ.ಕಾನೂನು ಎಂಬುದು ಎಲ್ಲರಿಗೂ ಒಂದೇ ಆಗಿದೆ. ಒತ್ತುವರಿ ಮಾಡಿಕೊಂಡವರು ಸ್ಥಳೀಯರಾದ ಮಾತ್ರಕ್ಕೆ ಅವರ ಅಕ್ರಮ ಕಾನೂನು ಬದ್ಧವಾಗುತ್ತದೆಯೇ?

ಭಾರತ ಪ್ರಜಾಪ್ರಭುತ್ವ ಒಕ್ಕೂಟ ರಾಷ್ಟ್ರ, ಇದಕ್ಕೊಂದು ಸಂವಿಧಾನವನ್ನು ಡಾ. ಬಾಬಾಸಾಹೇಬ್ ಅಂಬೇಡ್ಕರ್ ನೀಡಿದ್ದಾರೆ. ಇದರ ಅರಿವು ಇಲ್ಲದ ಅಥವಾ ಅರಿವಿದ್ದರೂ ‘ಮೇಲಿನವರನ್ನು’ ಓಲೈಸಲು ನಿಂತಿರುವ ಅಸ್ಸಾಂನ ಮುಖ್ಯಮಂತ್ರಿ ತಾನು ಏನೆಂದು ಪ್ರಮಾಣ ವಚನವನ್ನು ಸ್ವೀಕರಿಸಿದ್ದೆ ಎಂಬು ದನ್ನೂ ಮರೆತಂತೆ ಕಾಣುತ್ತದೆ. ಒಕ್ಕಲೆಬ್ಬಿಸಿದ ಪರಿಣಾಮವಾಗಿ ಬೀದಿಗೆ ಬಿದ್ದಿರುವ ನಿರಾಶ್ರಿತರಿಗೆ ಆಶ್ರಯ ನೀಡುವುದೂ ಸೇರಿದಂತೆ ಯಾವುದೇ ರೀತಿಯ ನೆರವನ್ನೂ ನೀಡಬಾರದೆಂದು ಜನರಿಗೆ ಕರೆ ನೀಡುವಷ್ಟು ನೀಚತನದ ಕೆಳಮಟ್ಟಕ್ಕೆ ಈ ಹಿಮಂತ ಬಿಸ್ವಾ ಶರ್ಮಾ ಇಳಿದಿದ್ದು, ಇದು ಅಮಾನವೀಯತೆಯ ಪರಮಾವಧಿ

ಅಸ್ಸಾಮಿನಲ್ಲಿ ಕಾನೂನು ಬದ್ಧ ನಿವಾಸಿಗಳು ಯಾರು ಹಾಗೂ ಅತಿಕ್ರಮಣ ಕಾರರು ಯಾರು ಎಂಬುದನ್ನು ಅಲ್ಲಿನ ಸರಕಾರ ಮತ್ತು ಅಧಿಕಾರಿಗಳು ತೀರ್ಮಾ ನಿಸುತ್ತಿದ್ದಾರೆ. ಇಲ್ಲಿ ಮುಖ್ಯಮಂತ್ರಿ ಸ್ಥಾನದಲ್ಲಿ ಇರುವ ವ್ಯಕ್ತಿ ‘ನಿರ್ದಿಷ್ಟ ಧರ್ಮಕ್ಕೆ ಸೇರಿದ ಜನರಿಂದ ಆಕ್ರಮಣಶೀಲತೆ’ ಹಾಗೂ ‘ಭೂಮಿ ಜಿಹಾದ್’ ಎಂಬಂಥ ಪ್ರಚೋದನಕಾರಿ ಪದಗಳನ್ನು ಬಳಸಿ ಹೇಳಿಕೆ ನೀಡುತ್ತಿದ್ದಾರೆ. ಇದಕ್ಕೆ ಬಿಜೆಪಿ ನಾಯಕತ್ವದ ಮೌನ ಸಹಮತ ಇದ್ದಂತೆ ಕಾಣುತ್ತದೆ.

2026ರಲ್ಲಿ ಅಸ್ಸಾಂ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಜನಸಾಮಾನ್ಯರನ್ನು ಕೋಮು ಆಧಾರದಲ್ಲಿ ವಿಭಜಿಸಲು ಈ ತೆರವು ಕಾರ್ಯಾಚರಣೆ ನಡೆಯುತ್ತಿದೆ ಎಂಬುವುದರಲ್ಲಿ ಸಂದೇಹವಿಲ್ಲ. ಇದು ವಾಸ್ತವ ಸಂಗತಿ. ಅಲ್ಲಿನ ಮುಖ್ಯಮಂತ್ರಿಯ ಪ್ರಚೋದನಕಾರಿ ಮಾತುಗಳಿಗೂ ಇದೇ ಕಾರಣ.

ಸಂವಿಧಾನ ದೇಶದ ಜನರಿಗೆ ನೀಡಿರುವ ಬದುಕುವ ಹಕ್ಕನ್ನು ಸರಕಾರ ತಮ್ಮ ಸಂಕುಚಿತ ಮತ್ತು ಕೋಮುವಾದಿ ರಾಜಕಾರಣಕ್ಕಾಗಿ ಕಿತ್ತುಕೊಳ್ಳುವುದು ಖಂಡನಾರ್ಹ. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿಗಳು ಗಮನ ಹರಿಸಿ ಸೂಕ್ತ ಕ್ರಮವನ್ನು ಕೈಗೊಳ್ಳುವುದು ತುರ್ತು ಅಗತ್ಯವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News