ಸರಕಾರಿ ಶಾಲೆಗಳು ಉಳಿಯಲಿ
PC: istockphoto
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಭಾರತ ಶಿಕ್ಷಣ ಕ್ಷೇತ್ರದಲ್ಲಿ ಇಂದು ಅಭೂತಪೂರ್ವ ಸಾಧನೆಗಳನ್ನು ಮಾಡಿದೆ. ಶಿಕ್ಷಣವನ್ನು ಅರಸಿಕೊಂಡು ವಿದೇಶಗಳಿಂದಲೂ ಇಲ್ಲಿಗೆ ಆಗಮಿಸುವ ವಾತಾವರಣವಿದೆ. ಇದೇ ಸಂದರ್ಭದಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿ ವಿಶ್ವ ಮಟ್ಟದಲ್ಲಿ ಗುರುತಿಸಲ್ಪಟವರಿದ್ದಾರೆ. ಬ್ರಿಟಿಷರು ಆಗಮಿಸುವ ಮೊದಲು, ಇಲ್ಲಿ ದಲಿತರು, ಹಿಂದುಳಿದವರ್ಗದ ಜನರು ಶಿಕ್ಷಣದಿಂದ ಸಂಪೂರ್ಣ ವಂಚಿತರಾಗಿದ್ದರು. ಮೆಕಾಲೆ ಶಿಕ್ಷಣ ಭಾರತದ ಎಲ್ಲ ಜಾತಿಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು. ಸ್ವಾತಂತ್ರ್ಯ ಸಿಕ್ಕಿದಾಗ ಭಾರತದ ಅತಿ ದೊಡ್ಡ ಸಮಸ್ಯೆ ಆಹಾರ ಮತ್ತು ಶಿಕ್ಷಣವಾಗಿತ್ತು. 1948ರಲ್ಲಿ ಇಡೀ ಭಾರತದಲ್ಲಿದ್ದುದು ಒಟ್ಟು 1, 40,794 ಶಾಲೆಗಳು. ಹಸಿವು, ವಸತಿ, ಆರೋಗ್ಯದ ಸಮಸ್ಯೆಗಳ ನಡುವೆ ಶಿಕ್ಷಣದ ಕುರಿತಂತೆ ತಲೆಕೆಡಿಸಿಕೊಳ್ಳುವ ಸ್ಥಿತಿಯಲ್ಲಿ ಭಾರತ ಇದ್ದಿರಲಿಲ್ಲ. ಜನರಲ್ಲಿ ಶಿಕ್ಷಣದ ಕುರಿತಂತೆ ಜಾಗೃತಿ ಮೂಡಿಸಲು ಸರಕಾರ ಮತ್ತು ಸಾಮಾಜಿಕ ಸಂಘಟನೆಗಳು ನಡೆಸಿದ ಹೋರಾಟ ಇನ್ನೊಂದು ಸ್ವಾತಂತ್ರ್ಯ ಹೋರಾಟಕ್ಕೆ ಸಮವಾಗಿದೆ. ಯಾಕೆಂದರೆ ಈ ದೇಶದ ಪ್ರಜಾಪ್ರಭುತ್ವದ ಯಶಸ್ಸು ಎಲ್ಲರೂ ಶಿಕ್ಷಣವನ್ನು ಪಡೆದು ಪ್ರಜ್ಞಾವಂತರಾಗುವುದರಲ್ಲಿದೆ. ಶಿಕ್ಷಣ ಎಲ್ಲರನ್ನು ತಲುಪದೇ ಇದ್ದರೆ ಸಿಕ್ಕಿದ ಸ್ವಾತಂತ್ರ್ಯ ಉಳ್ಳವರ ಸೊತ್ತಾಗಿ ಬಿಡುವ ಅಪಾಯವಿತ್ತು. ಈ ಹಿನ್ನೆಲೆಯಲ್ಲಿ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಹಮ್ಮಿಕೊಂಡ ಯೋಜನೆಗಳು ಮಹತ್ವದ್ದಾಗಿವೆ.
1951ರಲ್ಲಿ ಭಾರತದ ಸಾಕ್ಷರತಾ ಪ್ರಮಾಣವು ಶೇ. 19.3ರಷ್ಟಿದ್ದರೆ, ಹೊಸ
ನೀತಿಗಳು, ಯೋಜನೆಗಳ ಬಳಿಕ ಇದು ಹಂತಹಂತವಾಗಿ ಏರಿಕೆಯಾಗುತ್ತಾ ಹೋಯಿತು. 2011ರ ಹೊತ್ತಿಗೆ ಸ್ಪಾಕ್ಷರತಾ ಪ್ರಮಾಣ 74.04ಕ್ಕೆ ತಲುಪಿತು. ಹಾಗೆಯೇ ಹತ್ತು ಹಲವು ಪ್ರಯೋಗಗಳು, ಯೋಜನೆಗಳ ಪರಿಣಾಮವಾಗಿ ಮಕ್ಕಳ ದಾಖಲಾತಿಯಲ್ಲೂ ಹೆಚ್ಚಳವಾಯಿತು. ತಳಸ್ತರದಿಂದ ಮಕ್ಕಳಲ್ಲಿ ಅಕ್ಷರ ಬೀಜಗಳನ್ನು ಬಿತ್ತಿ ಜ್ಞಾನದ ಕೊಯ್ದು ಕೊಯ್ಯುವಲ್ಲಿ ಸರಕಾರಿ ಶಾಲೆಗಳು ನೀಡಿದ ಕೊಡುಗೆಯನ್ನು ಯಾರೂ ಮರೆಯುವಂತಿಲ್ಲ. 80ರ ದಶಕದವರೆಗೂ ಸರಕಾರಿ ಶಾಲೆಗಳೇ ಈ ದೇಶವನ್ನು ಕಟ್ಟಿ ಬೆಳೆಸಿತು. ಈ ಶಾಲೆಗಳು ಒಂದೆಡೆ ಜನರನ್ನು ವೈಚಾರಿಕವಾಗಿ ಮೇಲೆತ್ತಿದ್ದರೆ, ಇನ್ನೊಂದೆಡೆ ಎಲ್ಲ ವರ್ಗ, ಜಾತಿ, ಧರ್ಮಗಳಿಂದ ಬಂದ ವಿದ್ಯಾರ್ಥಿಗಳನ್ನು ತನ್ನ ಮಡಿಲಲ್ಲಿಟ್ಟು ಪೊರೆಯಿತು. ವರ್ಗ, ಜಾತಿ, ಧರ್ಮದ ಗಡಿಗಳನ್ನು ಯಾವ ಘೋಷಣೆಗಳೂ ಇಲ್ಲದೆ ಅಪ್ರಜ್ಞಾಪೂರ್ವಕವಾಗಿ ಅಳಿಸುತ್ತಾ ಹೋಯಿತು. ಸರಕಾರಿ ಶಾಲೆಗಳ ಕೊಠಡಿಗಳು, ಮೈದಾನಗಳು ವಿದ್ಯಾರ್ಥಿಗಳಿಗೆ ಬಾಲ್ಯದಲ್ಲೇ ಜಾತ್ಯತೀತವಾಗಿ ಬದುಕುವುದನ್ನು ಕಲಿಸಿದವು.
'ಬಿಸಿಯೂಟ' ಆರಂಭವಾದ ಆನಂತರ, ಇದು ಇನ್ನಷ್ಟು ಅರ್ಥಪೂರ್ಣವಾಗಿ ವಿದ್ಯಾರ್ಥಿಗಳ ಮನವನ್ನು ಮುಟ್ಟಿತು. ಇದೇ ಸಂದರ್ಭದಲ್ಲಿ ಮಾತೃಭಾಷೆಯಲ್ಲಿ ಅಥವಾ ಆಯಾ ರಾಜ್ಯಗಳ ಪ್ರಾದೇಶಿಕ ಭಾಷೆಯಲ್ಲಿ ಸರಕಾರಿ ಶಾಲೆಗಳು ಶಿಕ್ಷಣವನ್ನು ನೀಡಿದವು. ಇವು ಮಕ್ಕಳಲ್ಲಿ ಸ್ಥಳೀಯತೆಯನ್ನು ಬಿತ್ತಿದವು. ಸುಲಭದಲ್ಲಿ ಶಿಕ್ಷಣವನ್ನು ತನ್ನದಾಗಿಸಿಕೊಳ್ಳಲು ಸಾಧ್ಯವಾಯಿತು. ಈ ದೇಶದ ನೂರಾರು ಶ್ರೇಷ್ಠ ಸಾಹಿತಿಗಳು, ವಿಜ್ಞಾನಿಗಳು, ಚಿಂತಕರು, ರಾಜಕಾರಣಿಗಳು ಸರಕಾರಿ ಶಾಲೆಗಳಿಂದ ಹೊರ ಬಂದವರು ಎನ್ನುವುದೇ ಈ ಶಾಲೆಗಳ ಹಿರಿಮೆಯನ್ನು ಹೇಳುತ್ತದೆ. ಸರಕಾರಿ ಶಾಲೆಗಳೆಂದರೆ ಈ ದೇಶದ ಶಿಕ್ಷಣ ವ್ಯವಸ್ಥೆಯ ಅಡಿಗಲ್ಲು.
ಯಾವಾಗ ಖಾಸಗೀಕರಣ ಶಿಕ್ಷಣ ಕ್ಷೇತ್ರಕ್ಕೆ ಕಾಲಿಟ್ಟಿತೋ ಅಲ್ಲಿಂದ ಖಾಸಗಿ ಶಾಲೆಗಳು ಅದರಲ್ಲೂ ಇಂಗ್ಲಿಷ್ ಮಾಧ್ಯಮ ಶಾಲೆಗಳು ಅಣಬೆಗಳಂತೆ ತಲೆಯೆತ್ತ ತೊಡಗಿದವು. ಶಿಕ್ಷಣವೆಂದರೆ ಇಂಗ್ಲಿಷ್ ಕಲಿಕೆಯೆಂಬ ನಂಬಿಕೆಯನ್ನು ಹುಟ್ಟಿಸಿ ಹಾಕಿತು. ಇಂಗ್ಲಿಷ್ ಇಲ್ಲದೆ ದೈನಂದಿನ ವ್ಯವಹಾರಗಳೇ ಇಲ್ಲ ಎನ್ನುವಂತಹ ಸ್ಥಿತಿ ನಿರ್ಮಾಣವಾಯಿತು. ಶಿಕ್ಷಣ ನದಿಯಂತೆ. ಅದು ಹರಿಯುತ್ತಾ ಹೋದಂತೆಯೇ ಬೆಳೆಯುತ್ತಲೂ ಹೋಗುತ್ತದೆ. ಸರಕಾರಿ ಶಾಲೆಗಳು ಆ ಹರಿಯುವಿಕೆಗೆ ತೆರೆದುಕೊಂಡಿದ್ದರೆ ಇಂದು ಸರಕಾರಿ ಶಾಲೆಯೆಂದರೆ ಮೂಗು ಮುರಿಯುವ ಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಅತ್ಯಾಧುನಿಕ ಜಗತ್ತಿಗೆ ಪೂರಕವಾಗಿ ಸರಕಾರಿ ಶಾಲೆಗಳು ತನ್ನನ್ನು ತೆರೆದುಕೊಳ್ಳುವುದು ಅತ್ಯಗತ್ಯವಾಗಿತ್ತು. ಮುಖ್ಯವಾಗಿ ಆಧುನಿಕ ಜಗತ್ತಿನ ಜೊತೆಗೆ ವ್ಯವಹರಿಸುವುದಕ್ಕೆ ಇಂಗ್ಲಿಷ್ ಅನಿವಾರ್ಯ ಎನ್ನುವ ಸ್ಥಿತಿಯಿರುವಾಗ ಸರಕಾರಿ ಶಾಲೆಗಳು ಇಂಗ್ಲಿಷ್ ನ್ನು ಯಾವ ರೀತಿಯಲ್ಲಿ ತನ್ನ ಪಠ್ಯಗಳಲ್ಲಿ ಕೂಡಿಸಿಕೊಳ್ಳಬೇಕು ಎನ್ನುವುದರ ಬಗ್ಗೆ ಗಂಭೀರವಾಗಿ ಯೋಚಿಸಿದ್ದರೆ ಇಂದು ಸರಕಾರಿ ಶಾಲೆ ಇಷ್ಟರಮಟ್ಟಿಗೆ ಹಿನ್ನಡೆ ಅನುಭವಿಸುತ್ತಿರಲಿಲ್ಲವೇನೋ. ವಿಪರ್ಯಾಸವೆಂದರೆ, ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿ ಒಟ್ಟು 23,000 ಸರಕಾರಿ ಶಾಲೆಗಳು ಮುಚ್ಚಲ್ಪಟ್ಟಿವೆ. ಕರ್ನಾಟಕದಲ್ಲೂ ಮುಚ್ಚಲ್ಪಡುತ್ತಿರುವ ಸರಕಾರಿ ಶಾಲೆಗಳು ಸದಾ ಸುದ್ದಿಯಲ್ಲಿವೆ. ಇರುವ ಶಾಲೆಗಳ ಸ್ಥಿತಿಯನ್ನು ನೋಡಿದರೆ ಅವುಗಳು ಮುಚ್ಚಿ ದರೇ ವಾಸಿ ಎನ್ನುವವರು ಹೆಚ್ಚು. ಕಳೆದ ಐದು ವರ್ಷದಲ್ಲಿ 10.32 ಲಕ್ಷದಷ್ಟಿದ್ದ ಶಾಲೆಗಳು 10.07 ಲಕ್ಷಕ್ಕೆ ಇಳಿಕೆಯಾಗಿವೆ. ಎಂದು ಇನ್ನೊಂದು ಅಂಕಿ ಅಂಶ ಹೇಳುತ್ತದೆ. ಉತ್ತರ ಪ್ರದೇಶದಲ್ಲೂ ಮುಚ್ಚಲ್ಪಡುತ್ತಿರುವ ಸರಕಾರಿ ಶಾಲೆಗಳು ಸುದ್ದಿಯಲ್ಲಿವೆ.
ಸರಕಾರಿ ಶಾಲೆಗಳು ಮುಚ್ಚುತ್ತಿವೆ ಎನ್ನುವುದರ ಅರ್ಥ ಸರಕಾರಿ ಶಾಲೆಗಳ ಅಗತ್ಯ ಕಡಿಮೆಯಾಗುತ್ತಿದೆ ಎಂದಲ್ಲ. ಸರಕಾರಿ ಶಾಲೆಗಳನ್ನೇ ಅವಲಂಬಿಸುವ ದೊಡ್ಡ ಸಂಖ್ಯೆಯ ಬಡ, ದಲಿತ, ಹಿಂದುಳಿದವರ್ಗದ ಜನರು ಭಾರತದಲ್ಲಿದ್ದಾರೆ. ಇಂದಿಗೂ ಬಡತನ, ಹಸಿವು, ವಸ್ತ್ರದ ಹೆಸರಿನಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಅಸಹಾಯಕವಾಗಿರುವ ಕುಟುಂಬಗಳಿವೆ. ಶಾಲೆಗಳನ್ನು ಮಚ್ಚುವ ಸಂದರ್ಭದಲ್ಲಿ ಈ ಮಕ್ಕಳು ಶಿಕ್ಷಣದಿಂದ ಶಾಶ್ವತ ವಂಚಿತರಾಗುತ್ತಿರುವುದನ್ನು ಸರಕಾರ ಗಮನಿಸುತ್ತಿಲ್ಲ. ಇದರ ನೇರ ಫಲಾನುಭವಿಗಳು ದಲಿತರು, ಆದಿವಾಸಿಗಳು, ಹಿಂದುಳಿದವರ್ಗದ ಬಡ ಜನರು. ಮೂಲಭೂತ ಸೌಕರ್ಯಗಳ ಕೊರತೆ, ಶಿಕ್ಷಕರ ಕೊರತೆ ಇಂಗ್ಲಿಷ್ ಕಲಿಕೆಯ ಅನಿವಾರ್ಯತೆ ಇವೆಲ್ಲವೂ ಸರಕಾರಿ ಶಾಲೆಗಳಿಂದ ವಿದ್ಯಾರ್ಥಿಗಳನ್ನು ದೂರ ಮಾಡುತ್ತಿವೆ. ಮಧ್ಯಮ ವರ್ಗ ಸಾಲಸೋಲ ಮಾಡಿಯಾದರೂ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸಲು ಹೆಣಗಾಡುತ್ತಿದೆ. ಸರಕಾರಿ ಶಾಲೆಗಳನ್ನು ಪುನರುಜ್ಜಿವನ ಗೊಳಿಸದೇ ಇದ್ದರೆ ಇನ್ನು ಒಂದೆರಡು ದಶಕಗಳಲ್ಲಿ, ದೇಶದಲ್ಲಿ ಸಾಕ್ಷರರ ಸಂಖ್ಯೆ ಇಳಿಕೆಯಾಗುವ ಸಾಧ್ಯತೆಗಳಿವೆ. ದಲಿತರು, ಶೂದ್ರರಿಗೆ ಮತ್ತೆ ಶಿಕ್ಷಣವೆನ್ನುವುದು ಗಗನ ಕುಸುಮವಾಗಲಿದೆ. ದೇಶ ಸಾಮಾಜಿಕವಾಗಿ, ಆರ್ಥಿಕವಾಗಿ ಇಲ್ಲದವರು ಮತ್ತು ಇರುವವರು ಎಂದು ಒಡೆಯುವುದಕ್ಕೆ ಇದು ಪೂರಕ ಕಾರಣಗಳನ್ನು ಒದಗಿಸಲಿದೆ.
ಸರಕಾರಿ ಶಾಲೆಗಳು ಮುಚ್ಚಲ್ಪಡುವುದರ ಜೊತೆಗೇ ಇಂದು ದೇಶದ ಜಾತ್ಯತೀತ ವ್ಯವಸ್ಥೆಯೂ ದುರ್ಬಲವಾಗುತ್ತಿದೆ. ಎಲ್ಲ ವರ್ಗ, ಜಾತಿ, ಧರ್ಮದ ಜನರು ಒಂದಾಗಿ, ಒಟ್ಟಾಗಿ ಕಲಿಯುವ ವಾತಾವರಣವೂ ಕಡಿಮೆಯಾಗುತ್ತಿದೆ. ಪ್ರಾದೇಶಿಕ ಭಾಷೆಗಳ ಉಳಿವಿಗಾಗಿ ಸರಕಾರಿ ಶಾಲೆ ಉಳಿಯಬೇಕು ಎನ್ನುವುದಕ್ಕೆ ಕೆಲವು ಚಿಂತಕರು, ಸಾಮಾಜಿಕ ಕಾರ್ಯಕರ್ತರು ಹೋರಾಟ ಮಾಡುತ್ತಿದ್ದಾರೆ. ನಾವಿಂದು ಯಾವ ಭಾಷೆಯಲ್ಲಿ ಶಿಕ್ಷಣ ಎನ್ನುವ ಚರ್ಚೆಯನ್ನು ಬದಿಗಿಟ್ಟು, ಮೊದಲು ಶಿಕ್ಷಣದ ಹಕ್ಕನ್ನು ಉಳಿಸಿಕೊಳ್ಳಲು ಹೋರಾಟ ನಡೆಸಬೇಕು. ಮೂಲಭೂತ ಸೌಕರ್ಯಗಳನ್ನು, ಅತ್ಯುತ್ತಮ ಶಿಕ್ಷಕರನ್ನು ಒದಗಿಸುವುದರ ಜೊತೆಗೆ ಇಂಗ್ಲಿಷ್ ಮಾಧ್ಯಮವನ್ನು ಅಳವಡಿಸಿಕೊಂಡರೆ ಸರಕಾರಿ ಶಾಲೆಗಳ ಕಡೆಗೆ ಎಲ್ಲ ವರ್ಗಗಳು ತಿರುಗಿ ನೋಡುತ್ತವೆ ಎಂದರೆ ಸರಕಾರ ಅದಕ್ಕೆ ಕ್ರಮ ತೆಗೆದುಕೊಳ್ಳಬೇಕು. ಸರಕಾರಿ ಶಾಲೆಗಳ ಅಳಿವು ಉಳಿವಿನಲ್ಲಿ ಈ ದೇಶದ ತಳಸ್ತರದ ಜನರ ಶಿಕ್ಷಣದ ಹಕ್ಕಿನ ಅಳಿವು ಉಳಿವು ನಿಂತಿದೆ. ಆ ಬಳಿಕವಷ್ಟೇ ನಾವು ಯಾವ ಮಾಧ್ಯಮದಲ್ಲಿ ಕಲಿಸಬೇಕು ಎನ್ನುವುದರ ಬಗ್ಗೆ ಚರ್ಚೆ ಮಾಡಬಹುದು ಅಥವಾ ಎಲ್ಲ ಸರಕಾರಿ ಶಾಲೆಗಳಲ್ಲಿ ದ್ವಿ ಭಾಷಾ ಮಾಧ್ಯಮವನ್ನು ಅಳವಡಿಸಿ, ಆ ಶಾಲೆಗಳಿಗೆ ಬೇಕಾದ ಮೂಲಭೂತ ಅಗತ್ಯಗಳನ್ನು ಈಡೇರಿಸಲು ಸರಕಾರ ಮುಂದಾದರೆ ಸರಕಾರಿ ಶಾಲೆಗಳು ಉಳಿಯಬಹುದು. ಜೊತೆಗೆ ಪ್ರಾದೇಶಿಕ ಭಾಷೆಯೂ ಉಳಿಯಬಹುದು.