ಹೆಚ್ಚುತ್ತಿರುವ ಹೃದಯಾಘಾತ: ಅಧ್ಯಯನ ಮುಂದುವರಿಯಲಿ
PC: istockphoto
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳಿಗೆ ಸಂಬಂಧಿಸಿ ಡಾ. ಕೆ. ಎಸ್. ರವೀಂದ್ರನಾಥ್ ನೇತೃತ್ವದ ತಜ್ಞರ ಸಮಿತಿ ಸರಕಾರಕ್ಕೆ ವರದಿ ನೀಡಿರುವ ಹೊತ್ತಿಗೇ ಇತ್ತ ಹೃದಯಾಘಾತ ಪ್ರಕರಣಗಳು ಇನ್ನಷ್ಟು ವರದಿಯಾಗುತ್ತಿವೆ. ಕೊರೋನ ಕಾಲದಲ್ಲಿ ಮಾಧ್ಯಮಗಳು ಮುಖಪುಟದಲ್ಲಿ ಕೊರೋನ ಸೋಂಕಿತರ ಸಂಖ್ಯೆ ಪ್ರಕಟಿಸುತ್ತಿದ್ದ ಮಾದರಿಯಲ್ಲೇ, ಇದೀಗ ಯುವಕರು ಹೃದಯಾಘಾತದಿಂದ ಮೃತಪಟ್ಟಿರುವ ಅಂಕಿ ಸಂಕಿಗಳು ಹೊರ ಬೀಳುತ್ತಿದೆ. ಪ್ರತಿದಿನ ಇಂದು ಎಷ್ಟು ಜನ ಹೃದಯಾಘಾತದಿಂದ ಮೃತಪಟ್ಟಿದ್ದಾರೆ? ಅವರಲ್ಲಿ ಯುವಕರೆಷ್ಟು? ಬಾಲಕರೆಷ್ಟು? ಎಂದು ಜನರು ಆತಂಕದಿಂದ ಪರಿಶೀಲಿಸುತ್ತಿದ್ದಾರೆ. ಚಾಮರಾಜನಗರದಲ್ಲಿ ನಾಲ್ಕನೇ ತರಗತಿಯ ವಿದ್ಯಾರ್ಥಿಯೊಬ್ಬ ಹೃದಯಾಘಾತದಿಂದ ಮೃತಪಟ್ಟ ಘಟನೆ ಬುಧವಾರ ಸಂಭವಿಸಿದೆ. ಶಾಲೆಯಲ್ಲೇ ವಿದ್ಯಾರ್ಥಿ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ವಿದ್ಯಾರ್ಥಿಗೆ ಈ ಮೊದಲೇ ಹೃದಯ ಸಂಬಂಧಿ ತೊಂದರೆಯಿತ್ತು ಎಂದು ಪೋಷಕರು ಹೇಳುತ್ತಿದ್ದಾರಾದರೂ, ಇಂದಿನ ಸಂದರ್ಭದಲ್ಲಿ ಎಳೆಯ ಬಾಲಕನ ಈ ಹಠಾತ್ ಸಾವು ಜನರಲ್ಲಿ ಆತಂಕ ಹುಟ್ಟಿಸಿದೆ. ಅದೇ ದಿನ ದಾವಣಗೆರೆಯಲ್ಲಿ 26 ವರ್ಷದ ಮಹಿಳೆ ಮತ್ತು 22 ವರ್ಷದ ತರುಣನೊಬ್ಬ ಹಠಾತ್ ಕುಸಿದು ಮೃತಪಟ್ಟಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯುವಕನೊಬ್ಬ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ಹೀಗೆ ಸರಣಿ ಸಾವು ಸಂಭವಿಸುತ್ತಿರುವ ಹೊತ್ತಿಗೇ, ಹೃದಯಾಘಾತಕ್ಕೆ ಕೋವಿಡ್ ಲಸಿಕೆ ಕಾರಣವಲ್ಲ ಎನ್ನುವುದನ್ನು ಡಾ. ಕೆ. ಎಸ್. ರವೀಂದ್ರನಾಥ್ ನೇತೃತ್ವದ ತಜ್ಞರ ಸಮಿತಿ ಹೇಳಿದ್ದಾರೆ. ಹಾಗಾದರೆ ಈ ಹಠಾತ್ ಕುಸಿದು ಬಿದ್ದು ಸಂಭವಿಸುವ ಸಾವಿಗೆ ಕಾರಣವೇನು ಎನ್ನುವುದರ ಬಗ್ಗೆ ಮಾತ್ರ ಸ್ಪಷ್ಟ ವಿವರಗಳನ್ನು ನೀಡಿಲ್ಲ. ಹತ್ತು ದಿನಗಳಲ್ಲಿ ಅದನ್ನು ಹೇಳುವುದು ಸಾಧ್ಯವೂ ಇಲ್ಲ.
ಹೃದಯಾಘಾತಗಳಿಗೆ ಜೀವನ ಶೈಲಿ ಕಾರಣ ಎನ್ನುವುದು ತಜ್ಞರ ಸಮಿತಿ ಸಲ್ಲಿಸಿದ ವರದಿ ಹೇಳುತ್ತದೆ. ಜೀವನ ಶೈಲಿ ಬರೇ ಹೃದಯಾಘಾತಗಳಿಗೆ ಮಾತ್ರವಲ್ಲ, ಇನ್ನೂ ಹತ್ತು ಹಲವು ರೋಗಗಳಿಗೆ ಕಾರಣವಾಗಬಹುದು. ಕೋವಿಡ್ ಲಸಿಕೆಯಿಂದ ಹೃದಯಾಘಾತ ಸಂಭವಿಸಿದೆ ಎನ್ನುವುದಕ್ಕೆ ಯಾವುದೇ ಪುರಾವೆ ಇಲ್ಲ ಎನ್ನುತ್ತಿರುವ ವರದಿಯು, ಈಗಾಗಲೇ ಹೃದಯಾಘಾತಗೊಂಡವರ ಯಾವ ರೀತಿಯ ಜೀವನ ಶೈಲಿ ಅವರ ಬದುಕನ್ನು ಬಲಿ ತೆಗೆದುಕೊಂಡಿದೆ ಎನ್ನುವುದನ್ನು ಸ್ಪಷ್ಟಪಡಿಸಿಲ್ಲ. ಸಾಧಾರಣವಾಗಿ 50 ವರ್ಷ ಮೇಲ್ಪಟ್ಟ ಹೃದಯ ಸಂಬಂಧಿ ರೋಗಿಗಳನ್ನು ನಾವು ಇದರಿಂದ ಹೊರಗಿಟ್ಟು ಚರ್ಚಿಸಬೇಕಾಗಿದೆ. 50ರ ಮೇಲಿನವರಲ್ಲಿ ಹೃದಯಾಘಾತಗಳು ಅದಕ್ಕೆ ಸಂಬಂಧಿಸಿದ ಸಾವುಗಳು ಈ ಹಿಂದೆಯೂ ಸಂಭವಿಸಿವೆ. ಸಣ್ಣ ಪುಟ್ಟ ಹೃದಯ ಸಂಬಂಧಿ ಕಾಯಿಲೆಗಳ ಮುನ್ಸೂಚನೆ ದೊರಕಿ ಹಲವರು ಅದಕ್ಕೆ ಬೇಕಾದ ಶಸ್ತ್ರಕ್ರಿಯೆಗಳನ್ನು ಮಾಡಿಕೊಳ್ಳುವುದು ಸಾಮಾನ್ಯ. ಅದರ ಬಗ್ಗೆ ಯಾರೂ ಚಿಂತಿತರಾಗಿಲ್ಲ. ಆದರೆ ಈಗಿನ ಹೃದಯಾಘಾತ ಅಥವಾ ಹಠಾತ್ ಕುಸಿದು ಬಿದ್ದು ಸಾಯುತ್ತಿರುವ ಪ್ರಕರಣಗಳಲ್ಲಿ ಸಂತ್ರಸ್ತರು 30 ವರ್ಷಕ್ಕಿಂತ ಕೆಳಗಿನವರಿದ್ದಾರೆ ಎನ್ನುವುದು ಅತ್ಯಂತ ಆತಂಕಕಾರಿಯಾಗಿದೆ. ಈ ವಯಸ್ಸಿನಲ್ಲಿ ಹೃದಯಾಘಾತಗಳು ಸಂಭವಿಸುವ ಸಾಧ್ಯತೆಗಳು ತೀರಾ ಕಡಿಮೆ ಎಂದು ನುರಿತ ಹೃದಯತಜ್ಞರು ಹೇಳುತ್ತಾರೆ. ಇವರ ಜೀವನ ಶೈಲಿ ಹೃದಯಾಘಾತಗಳಿಗೆ ಕಾರಣವೇ ಆಗಿದ್ದರೆ ಅದಕ್ಕೆ ಸಂಬಂಧಿಸಿದ ಯಾವುದೇ ಸೂಚನೆಗಳು, ರೋಗಲಕ್ಷಣಗಳು ರೋಗಿಗಳಲ್ಲಿ ಮೊದಲೇ ಪತ್ತೆಯಾಗಬೇಕಿತ್ತು. ಹೃದಯ ಸಂಬಂಧಿ ಕಾಯಿಲೆಗಳಿರುವ ಯಾವುದೇ ಸೂಚನೆಗಳನ್ನು ನೀಡದೇ ಹಠಾತ್ತಾಗಿ ಕುಸಿದು ಬಿದ್ದು ಮೃತಪಡುವ ಪ್ರಕರಣಗಳಿಗಾಗಿ 'ಜೀವನ ಶೈಲಿ'ಯನ್ನು ಹೊಣೆ ಮಾಡಿ ಕೈ ತೊಳೆದುಕೊಳ್ಳುವುದು ಎಷ್ಟು ಸರಿ? ಎನ್ನುವ ಪ್ರಶ್ನೆ ಕಾಡುತ್ತದೆ.
ಸಮಿತಿಯ ವರದಿಯ ಆಧಾರದಲ್ಲಿ ಸರಕಾರ ತಕ್ಷಣಕ್ಕೆ ಹಲವು ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ. ಹಠಾತ್ ಸಾವನ್ನು ಅಧಿಸೂಚಿತ ಕಾಯಿಲೆಯೆಂದು ಸರಕಾರ ಘೋಷಿಸಿದೆ. ಹಾಗೆಯೇ ಶಾಲೆಗಳಲ್ಲಿ ಹೃದಯ ತಪಾಸಣೆಗಳನ್ನು ಕಡ್ಡಾಯಗೊಳಿಸಿದೆ. ಹಠಾತ್ ಮರಣಗಳಿಗೆ ಮರಣೋತ್ತರ ಪರೀಕ್ಷೆ ಕಡ್ಡಾಯ ಮಾಡಿದೆ. ರೈಲು, ಬಸ್ ನಿಲ್ದಾಣ ಮತ್ತಿತರ ಸಾರ್ವಜನಿಕ ಸ್ಥಳಗಳಲ್ಲಿ ಎಇಡಿ ಅಳವಡಿಕೆಗೆ ಮುಂದಾಗಿದೆ. ಈ ಎಲ್ಲ ಕ್ರಮಗಳು ಹೃಠಾತ್ ಹೃದಯಾಘಾತ ಸಂಭವಿಸಿದರೂ, ಅದರಿಂದ ಮರಣ ಸಂಭವಿಸದಂತೆ ತಡೆಯುವ ಪ್ರಯತ್ನವನ್ನು ಮಾಡಬಹುದು. ತಡವಾಗಿಯಾದರೂ ಹೃದಯಾಘಾತಗಳನ್ನು ಗಂಭೀರವಾಗಿ ತೆಗೆದುಕೊಂಡದ್ದಕ್ಕಾಗಿ ರಾಜ್ಯ ಸರಕಾರವನ್ನು ಅಭಿನಂದಿಸಬೇಕು. ದೇಶಾದ್ಯಂತ ಹೃದಯಾಘಾತ ಪ್ರಕರಣಗಳು ಹೆಚ್ಚಿವೆಯಾದರೂ ಅದನ್ನು ಗಂಭೀರವಾಗಿ ತೆಗೆದುಕೊಂಡು, ಅದರ ಅಧ್ಯಯನಕ್ಕೆ ಸಮಿತಿ ನೇಮಕ ಮಾಡಿ ಹೃದಯಾಘಾತದಿಂದ ಸಂಭವಿಸುವ ಸಾವುಗಳನ್ನು ತಡೆಯಲು ಗರಿಷ್ಠ ಮಟ್ಟದಲ್ಲಿ ಕ್ರಮ ತೆಗೆದುಕೊಂಡಿರುವ ಏಕೈಕ ರಾಜ್ಯ ಕರ್ನಾಟಕ, ಕೇಂದ್ರ ಸರಕಾರವಾಗಲಿ, ಇನ್ನಿತರ ರಾಜ್ಯಗಳಾಗಲಿ ಹೆಚ್ಚುತ್ತಿರುವ ಹೃದಯಾಘಾತವನ್ನು ವಿಶೇಷ ಪ್ರಕರಣವಾಗಿ ನೋಡುವುದಕ್ಕೆ ಇನ್ನೂ ಸಿದ್ಧವಾಗಿಲ್ಲ. ಇದೇ ಸಂದರ್ಭದಲ್ಲಿ ರಾಜ್ಯ ಸರಕಾರ ಈ ಹಠಾತ್ ಕುಸಿದು ಬಿದ್ದು ಸಂಭವಿಸುವ ಸಾವಿನ ನಿಜ ಕಾರಣವನ್ನು ಹುಡುಕುವುದು ಅತ್ಯಗತ್ಯವಾಗಿದೆ. ಯಾಕೆಂದರೆ, ಸಾವುಗಳು ಕೇವಲ ನಗರ ಪ್ರದೇಶಗಳಲ್ಲಿ ಮಾತ್ರ ಸಂಭವಿಸಿರುವುದಲ್ಲ. ಗ್ರಾಮೀಣ ಪ್ರದೇಶದ ಯುವಕರೂ ಈ ಹಠಾತ್ ಸಾವಿಗೆ ಬಲಿಯಾಗಿದ್ದಾರೆ. ವ್ಯಾಯಾಮ, ಕ್ರೀಡೆ ಇತ್ಯಾದಿಗಳಲ್ಲಿ ಆಸಕ್ತಿ ವಹಿಸಿದ್ದ ಯುವಕರೂ ಹೃದಯ ಸ್ತಂಭನಕ್ಕೊಳಗಾಗಿ ಸತ್ತಿದ್ದಾರೆ. ನಟ ಪುನೀತ್ ರಾಜ್‌ಕುಮಾರ್ ಅವರು ಉಳಿದ ನಟರಂತೆ ಜೀವನ ಶೈಲಿಯಲ್ಲಿ ಬೇಜವಾಬ್ದಾರಿ ಪ್ರದರ್ಶಿಸಿದವರಲ್ಲ. ದೇಹದಾರ್ಥವನ್ನು ಕಾಪಾಡಿಕೊಂಡವರು. ಅವರ ಸಾವು ಇಂದಿಗೂ ನಿಗೂಢವಾಗಿಯೇ ಉಳಿದು ಬಿಟ್ಟಿದೆ.
ಕೋವಿಡ್ ಲಸಿಕೆಯಿಂದ ಹೃದಯಾಘಾತ ಸಂಭವಿಸಿದೆಯೇ ಎನ್ನುವುದನ್ನು ಬರೇ ಹತ್ತು ದಿನಗಳ ಅಧ್ಯಯನದಿಂದ ಗೊತ್ತುಪಡಿಸುವುದಕ್ಕೆ ಸಾಧ್ಯವಿಲ್ಲ. ತುರ್ತು ವರದಿಯನ್ನು ತಜ್ಞರು ನೀಡಿರುವುದೇನೋ ಸರಿ. ಆದರೆ, ಈ ಹಠಾತ್ ಕುಸಿದು ಬಿದ್ದು ಸಾವಿಗೆ ಸಂಬಂಧಿಸಿ ತಜ್ಞರು ತಮ್ಮ ಅಧ್ಯಯನದ ವ್ಯಾಪ್ತಿಯನ್ನು ಹಿಗ್ಗಿಸಬೇಕು. ಯಾವಾಗ ಕೋವಿಶೀಲ್ಡ್ ಸಂಸ್ಥೆ, ತನ್ನ ಲಸಿಕೆಯಿಂದ ದುಷ್ಪರಿಣಾಮಗಳು ಉಂಟಾಗಬಹುದು ಎಂದು ನ್ಯಾಯಾಲಯದ ಮುಂದೆ ಒಪ್ಪಿಕೊಂಡಿತೋ ಆಗಲೇ, ಕೋವಿಶೀಲ್ಡ್ ಲಸಿಕೆಯನ್ನು ಪಡೆದ ಅಷ್ಟೂ ಜನರ ಮೇಲೆ ಸರಕಾರ ವೈದ್ಯಕೀಯ ಕಣ್ಣಾವಲನ್ನು ಇಡಬೇಕಾಗಿತ್ತು. ತಕ್ಷಣ ದೇಶದಲ್ಲಿ ಕೋವಿಶೀಲ್ಡ್ ಪಡೆದವರ ಸಂಖ್ಯೆ ಮತ್ತು ಅದು ಅವರ ಮೇಲೆ ಬೀರಿದ ಧನಾತ್ಮಕ ಮತ್ತು ಋಣಾತ್ಮಕವಾದ ಪರಿಣಾಮಗಳನ್ನು ಅಧ್ಯಯನ ಮಾಡಲು ತಜ್ಞರ ಸಮಿತಿಯನ್ನು ನೇಮಿಸಬೇಕಾಗಿತ್ತು. ಆದರೆ, ಅಂತಹದೇನನ್ನೂ ಮಾಡದೇ, ಕೋವಿಶೀಲ್‌ನ ತಪ್ರೊಪ್ಪಿಗೆಯ ಜೊತೆಗೆ ತನ್ನ ಅಂತರವನ್ನು ಕೇಂದ್ರ ಸರಕಾರ ಕಾಪಾಡಿಕೊಂಡು ಬಂತು. ಲಸಿಕೆಯಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮವಾಗಿದೆ ಎನ್ನುವುದು ಬಹಿರಂಗವಾದರೆ ಅದು ದೇಶದ ಆರೋಗ್ಯ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರಬಹುದು ಮತ್ತು ಸರಕಾರ ಕಟಕಟೆಯಲ್ಲಿ ನಿಲ್ಲಬೇಕಾಗುತ್ತದೆ ಎನ್ನುವ ಭಯದಿಂದ ಲಸಿಕೆಯ ದುಷ್ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಲು ಹಿಂದೇಟು ಹಾಕುತ್ತಿದೆ. ಈ ಹಿನ್ನೆಲೆಯಲ್ಲಿ ಲಸಿಕೆ ಸಂಬಂಧ ತನಿಖೆಗೆ ಕರ್ನಾಟಕ ಮೊದಲ ಹೆಜ್ಜೆಯಿಡಬೇಕು. ಅಧ್ಯಯನವನ್ನು ಬರೇ ಕೆಲವು ತಾಲೂಕು, ಜಿಲ್ಲೆಗಳಿಗೆ ಸೀಮಿತಗೊಳಿಸದೆ ರಾಜ್ಯಾದ್ಯಂತ ಹಠಾತ್ ಕುಸಿದು ಬಿದ್ದು ಮೃತಪಟ್ಟವರಲ್ಲಿ ಲಸಿಕೆ ಪಡೆದವರ ಸಂಖ್ಯೆ ಎಷ್ಟು ಎನ್ನುವುದರ ಸ್ಪಷ್ಟ ವಿವರಗಳನ್ನು ಕಲೆ ಹಾಕಬೇಕು. ಹೃದಯಾಘಾತಕ್ಕೊಳಗಾದ ಮತ್ತು ಹಠಾತ್ ಕುಸಿದು ಬಿದ್ದು ಮೃತಪಟ್ಟ 40 ವರ್ಷ ಒಳಗಿನವರನ್ನು ಕೇಂದ್ರವಾಗಿಟ್ಟು ಈ ಅಧ್ಯಯನ ನಡೆಯಬೇಕು. ಇದಕ್ಕಾಗಿ ಸಮಿತಿಗೆ ಕನಿಷ್ಠ 12 ತಿಂಗಳ ಸಮಯವನ್ನು ನೀಡಬೇಕಾಗಿದೆ. ಆರೋಗ್ಯಕ್ಕೆ ಸಂಬಂಧಿಸಿ ಬೇರೆ ಬೇರೆ ನೆಲೆಗಳಲ್ಲಿ ತಜ್ಞರಿಂದ ಅಧ್ಯಯನ ನಡೆದಾಗ ಮಾತ್ರ ಈ ಅನಿರೀಕ್ಷಿತ ಸಾವುಗಳ ಬಗ್ಗೆ ಒಂದು ನಿರ್ಧಾರಕ್ಕೆ ಬರಬಹುದು. ಇದು ಮುಂದೆ ರಾಷ್ಟ್ರಮಟ್ಟದಲ್ಲಿ ಲಸಿಕೆ ಮಾಡಿದ ಪರಿಣಾಮಗಳನ್ನು ಅಧ್ಯಯನ ಮಾಡುವುದಕ್ಕೆ ದಾರಿಯನ್ನು ತೆರೆದುಕೊಡಬಹುದು.