ದೇಶದ ಗಡಿಗಳನ್ನು ರಕ್ಷಿಸಲು ಸರಕಾರ ವಿಫಲವಾದರೆ ಅದನ್ನು ಪ್ರಶ್ನಿಸಬಾರದೆ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
‘ನಿಜವಾದ ಭಾರತೀಯ ಇಂತಹ ಹೇಳಿಕೆಯನ್ನು ನೀಡುವುದಿಲ್ಲ’ ಎಂದು ರಾಹುಲ್ ಗಾಂಧಿಯ ವಿರುದ್ಧದ ಪ್ರಕರಣವೊಂದರಲ್ಲಿ ಸುಪ್ರೀಂಕೋರ್ಟ್ ಹೇಳಿದೆ. ಚೀನಾ ಗಡಿಯಲ್ಲಿರುವ ಗಲ್ವಾನ್ ಕಣಿವೆ ಭಾಗದಲ್ಲಿ ಭಾರತದ ಎರಡು ಸಾವಿರ ಚದರ ಕಿಲೋಮೀಟರ್‌ಗಿಂತಲೂ ಹೆಚ್ಚು ಭೂಪ್ರದೇಶವನ್ನು ಚೀನಾ ಸೈನಿಕರು ಆಕ್ರಮಿಸಿರುವ ಬಗ್ಗೆ ಮತ್ತು ಭಾರತದ ಸೈನಿಕರ ಮೇಲೆ ಅವರು ನಡೆಸಿದ ಬರ್ಬರ ದಾಳಿಯ ಬಗ್ಗೆ ಈ ಹಿಂದೆ ರಾಹುಲ್ ಗಾಂಧಿ ಕೇಂದ್ರ ಸರಕಾರವನ್ನು ಪ್ರಶ್ನಿಸಿದ್ದರು. ಗಲ್ವಾನ್ ಘರ್ಷಣೆಯ ಕುರಿತಂತೆ ಸಂಸತ್ತಿನಲ್ಲೂ ಭಾರೀ ಚರ್ಚೆಗಳು ನಡೆದಿದ್ದವು. ಈಗಲೂ ಭಾರತದ ಭೂ ಪ್ರದೇಶ ಚೀನಾದ ಸೈನಿಕರ ಕೈಯಲ್ಲಿರುವುದು ವಾಸ್ತವ. 2022ರ ಭಾರತ್ ಜೋಡೊ ರ್‍ಯಾಲಿ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ಗಲ್ವಾನ್ ಘರ್ಷಣೆಯ ಬಗ್ಗೆ ಕೇಂದ್ರ ಸರಕಾರ ಮೌನವಾಗಿರುವುದರ ಕುರಿತಂತೆ ಆಕ್ರೋಶ ವ್ಯಕ್ತಪಡಿಸಿದ್ದರು. ಇದಕ್ಕಾಗಿ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ಹೂಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಲಕ್ನೊ ನ್ಯಾಯಾಲಯ ರಾಹುಲ್ ಗಾಂಧಿಗೆ ಹೊರಡಿಸಿದ ಸಮನ್ಸ್ ಅನ್ನು ಎತ್ತಿ ಹಿಡಿದ ಅಲಹಾಬಾದ್ ಹೈಕೋರ್ಟ್‌ನ ಆದೇಶ ಪ್ರಶ್ನಿಸಿ ರಾಹುಲ್ ಗಾಂಧಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಸುಪ್ರೀಂಕೋರ್ಟ್ ಈ ಪ್ರಕರಣಕ್ಕೆ ತಡೆ ನೀಡಿದೆಯಾದರೂ, ರಾಹುಲ್ ಗಾಂಧಿ ಈ ಹೇಳಿಕೆಯನ್ನು ನೀಡಬಾರದಿತ್ತು ಎಂದು ಅಭಿಪ್ರಾಯ ಪಟ್ಟಿದೆ. ‘ನಿಜವಾದ ಭಾರತೀಯ ಇಂತಹ ಹೇಳಿಕೆಯನ್ನು ನೀಡುವುದಿಲ್ಲ’ ಎನ್ನುವ ಸುಪ್ರೀಂಕೋರ್ಟ್‌ನ ಅಸೂಕ್ಷ್ಮವಾದ ಮಾತು ತೀವ್ರ ಚರ್ಚೆಗೆ ಕಾರಣವಾಗಿವೆೆ. ಈಗಾಗಲೇ, ರೇಷನ್ ಅಂಗಡಿಯಿಂದ ಚುನಾವಣಾ ಆಯೋಗದ ವರೆಗೆ ‘ಪೌರತ್ವದ ದಾಖಲೆ’ಗಳನ್ನು ಕೇಳುವ ಚಾಳಿಯೊಂದು ಶುರುವಾಗಿದೆ. ಅದರ ಜೊತೆಗೇ, ನಿಜವಾದ ಭಾರತೀಯ ಪೌರ ಏನನ್ನು ಮಾತನಾಡಬೇಕು, ಏನನ್ನು ಮಾತನಾಡಬಾರದು ಎನ್ನುವ ಹೊಸ ಅಂಶವನ್ನು ಪರೋಕ್ಷವಾಗಿ ಸುಪ್ರೀಂಕೋರ್ಟ್ ಸೇರಿಸಿದಂತಾಗಿದೆ. ಮುಂದಿನ ದಿನಗಳಲ್ಲಿ ಒಬ್ಬ ಸಾರ್ವಜನಿಕವಾಗಿ ನೀಡುವ ಹೇಳಿಕೆಯ ಆಧಾರದಲ್ಲಿ ಆತ ಭಾರತೀಯನೋ ಅಲ್ಲವೋ ಎನ್ನುವುದನ್ನು ಘೋಷಿಸುವ ಪರಿಪಾಠ ಆರಂಭವಾದರೆ ಅದರಲ್ಲಿ ಅಚ್ಚರಿಯೇನೂ ಇಲ್ಲ.
ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಬಗ್ಗೆ ಹಲವು ಬಾರಿ ಸ್ವತಃ ಸುಪ್ರೀಂಕೋರ್ಟ್ ತನ್ನ ಕಳವಳವನ್ನು ವ್ಯಕ್ತಪಡಿಸಿದ್ದಿದೆ. ಫೇಸ್‌ಬುಕ್‌ನಲ್ಲಿ ಕವಿತೆಯೊಂದನ್ನು ಪ್ರಕಟಿಸಿದ ಕಾರಣಕ್ಕಾಗಿ ಕಾಂಗ್ರೆಸ್ ಸಂಸದ ಇಮ್ರಾನ್ ಪ್ರತಾಪ್ ಗಢ್ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ನ್ನು ಸುಪ್ರೀಂಕೋರ್ಟ್ ಕಳೆದ ಮಾರ್ಚ್‌ನಲ್ಲಿ ರದ್ದುಗೊಳಿಸಿತ್ತು. ಈ ಸಂದರ್ಭದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುವ ಅಗತ್ಯವನ್ನು ಒತ್ತಿ ಹೇಳಿತ್ತು. ದೇಶದ ಆಂತರಿಕ ಭದ್ರತೆಯ ಹೆಸರಿನಲ್ಲಿ ಕೇಂದ್ರ ಸರಕಾರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಿಸುವ ಬಗ್ಗೆಯೂ ಅದು ಹಲವು ಬಾರಿ ಆಕ್ಷೇಪಗಳನ್ನು ಮಾಡಿದೆ. ಅಭಿವ್ಯಕ್ತಿಯ ಹೆಸರಿನಲ್ಲಿ ದ್ವೇಷ ಭಾಷಣಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದನ್ನೂ ಸುಪ್ರೀಂಕೋರ್ಟ್ ತನ್ನ ತೀರ್ಪೊಂದರಲ್ಲಿ ಹೇಳಿತ್ತು. ಆದರೆ ಇದೀಗ ನೋಡಿದರೆ ಸ್ವತಃ ಸುಪ್ರೀಂಕೋರ್ಟ್ ವಿರೋಧ ಪಕ್ಷದ ನಾಯಕನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಲು ಹೊರಟಿದೆ ಮಾತ್ರವಲ್ಲ, ಸ್ವತಃ ತನ್ನ ಅಭಿವ್ಯಕ್ತಿ ಸ್ವಾತಂತ್ರ್ಯದ ಎಲ್ಲೆಯನ್ನು ಮೀರಿ ಹೇಳಿಕೆಯನ್ನು ನೀಡಿದೆ. ಅದೂ ‘ಭಾರತೀಯತೆ’ಯ ಹೆಸರಿನಲ್ಲಿ. ಭಾರತದ ಆಂತರಿಕ ಭದ್ರತಾ ವೈಫಲ್ಯಕ್ಕೆ ಸಂಬಂಧಪಟ್ಟ ಹಲವು ವಿಷಯಗಳನ್ನು ಸಂಸತ್‌ನಲ್ಲಿ ಚರ್ಚೆ ಮಾಡಲು ಸರಕಾರ ಆಸ್ಪದವನ್ನು ನೀಡುತ್ತಿಲ್ಲ. ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ರಾಹುಲ್ ಗಾಂಧಿಯನ್ನು ಪ್ರಶ್ನೆ ಕೇಳುತ್ತಾರೆ ಎನ್ನುವ ಕಾರಣಕ್ಕೆ ಸಂಸತ್‌ನಿಂದಲೇ ಅವರನ್ನು ಹೊರ ಹಾಕುವ ಪ್ರಯತ್ನ ನಡೆದಿತ್ತು. ಸರಕಾರದ ವೈಫಲ್ಯಗಳನ್ನು ಸಂಸತ್‌ನ ಹೊರಗೆ ಜನರ ಮುಂದಿಡುವುದಲ್ಲದೆ ಬೇರೆ ಉಪಾಯವೇ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಆದರೆ ಇದೀಗ ಸುಪ್ರೀಂಕೋರ್ಟ್ ನೀವು ಸಾಮಾಜಿಕ ಜಾಲತಾಣದಲ್ಲಿ, ಸಾರ್ವಜನಿಕವಾಗಿ ಯಾಕೆ ಮಾತನಾಡುತ್ತೀರಿ? ಎಂದು ಕೇಳುತ್ತಿದೆ. ದೇಶದ ಗಡಿಗಳನ್ನು ರಕ್ಷಿಸುವಲ್ಲಿ ಸರಕಾರವು ಸಂಪೂರ್ಣವಾಗಿ ವಿಫಲಗೊಂಡಾಗ ಆ ಬಗ್ಗೆ ಪ್ರಶ್ನಿಸುವುದು ಪ್ರತಿ ಭಾರತೀಯನ ಕರ್ತವ್ಯವಾಗಿದೆ. ಆದರೆ ಸುಪ್ರೀಂಕೋರ್ಟ್‌ಗೆ ಇದು ಪಥ್ಯವಾಗಿಲ್ಲ. ಸರಕಾರದ ವೈಫಲ್ಯದ ಕಾರಣದಿಂದ ನಮ್ಮ ಸೈನಿಕರು ಗಡಿಯಲ್ಲಿ ದಾಳಿಗೊಳಗಾಗುತ್ತಿರುವಾಗ, ಇನ್ನೊಂದು ದೇಶದ ಆಕ್ರಮಣಕ್ಕೆ ಬಲಿಯಾಗುತ್ತಿರುವಾಗ ‘ಭಾರತೀಯತೆ’ಯನ್ನು ಮುಂದೊಡ್ಡಿ ಸುಪ್ರೀಂಕೋರ್ಟ್ ವಿರೋಧ ಪಕ್ಷದ ನಾಯಕನ ಬಾಯಿ ಮುಚ್ಚಿಸಲು ಹೊರಡುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಸ್ಪಷ್ಟ ಉಲ್ಲಂಘನೆಯಾಗಿದೆ. ರಾಹುಲ್‌ಗಾಂಧಿಯ ಭಾರತೀಯತೆಯನ್ನು ಅನುಮಾನಿಸಿದ ಸುಪ್ರೀಂಕೋರ್ಟ್ ವರ್ತನೆಯನ್ನು ಈ ಕಾರಣಕ್ಕೆ ದೇಶ ಪ್ರಶ್ನಿಸಲು ಮುಂದಾಗಿದೆ.
ಪಾಕಿಸ್ತಾನದ ಗಡಿಯಲ್ಲಿ ಹುಲ್ಲು ಅಲುಗಾಡಿದಾಗಲೂ ಆದಕ್ಕೆ ಬಿಜೆಪಿಯ ಕಾರ್ಯಕರ್ತನಿಂದ ಹಿಡಿದು, ಪ್ರಧಾನಿಯ ವರೆಗೆ ಹೇಳಿಕೆಗಳ ಮೇಲೆ ಹೇಳಿಕೆಗಳನ್ನು ನೀಡಲಾಗುತ್ತದೆ. ಆದರೆ ಚೀನಾದ ಸೈನಿಕರು ಪದೇ ಪದೇ ಭಾರತದ ಸೈನಿಕರ ಮೇಲೆ ದಾಳಿ ಮಾಡುತ್ತಿದ್ದರೆ, ಭಾರತದ ನೆಲವನ್ನು ಆಕ್ರಮಿಸಿಕೊಂಡು ಅಲ್ಲಿ ಕಾಮಗಾರಿಗಳನ್ನು ನಡೆಸುತ್ತಿದ್ದರೆ ಅದನ್ನು ಪ್ರಶ್ನಿಸಬಾರದು, ನೋಡಿಯೂ ನೋಡದಂತಿರಬೇಕು ಎಂದು ವಿರೋಧ ಪಕ್ಷದ ಮುಖಂಡನಿಗೆ ಸುಪ್ರೀಂಕೋರ್ಟ್ ಸಲಹೆ ನೀಡುತ್ತದೆ. ಕೇಂದ್ರ ಸರಕಾರದ ವೈಫಲ್ಯವನ್ನು ಪ್ರಶ್ನಿಸಿದರೆ ‘ನೀವು ಸೈನಿಕರ ನೈತಿಕತೆಯ ಮೇಲೆ ದಾಳಿ ನಡೆಸಿದ್ದೀರಿ’ ಎಂಬಂತೆ ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಳ್ಳುತ್ತದೆ. ಈ ದೇಶಕ್ಕಾಗಿ ತ್ಯಾಗ, ಬಲಿದಾನಕ್ಕೆ ಸಿದ್ಧರಾಗಿ ನಿಂತಿರುವ ನಮ್ಮ ಸೈನಿಕರನ್ನು ರಕ್ಷಿಸಲು ಕೇಂದ್ರ ಸರಕಾರ ವಿಫಲವಾದರೆ, ತನ್ನ ರಾಜಕೀಯಕ್ಕಾಗಿ ಅವರನ್ನು ಸರಕಾರ ಬಲಿಪಶು ಮಾಡಿದರೆ ಅದನ್ನು ವಿರೋಧ ಪಕ್ಷದ ನಾಯಕನಲ್ಲದೆ ಇನ್ನಾರು ಮಾತನಾಡಬೇಕು? ಕಳೆದ ಶತಮಾನದ 60ನೇ ದಶಕದಲ್ಲಿ ಚೀನಾ ಭಾರತದ ಮೇಲೆ ನಡೆಸಿದ ದಾಳಿಗಾಗಿ, ಆ ಸಂಭವಿಸಿದ ನಮ್ಮ ಸೈನಿಕರ ಸಾವು ನೋವಿಗಾಗಿ ಆಗಿನ ಪ್ರಧಾನಿ ನೆಹರೂ ಅವರನ್ನು ಹೊಣೆ ಮಾಡಲಾಗಿತ್ತು. ‘ಇಂಡಿಯಾ ಚೀನಾ ಭಾಯಿ ಭಾಯಿ’ ಎನ್ನುತ್ತಿರುವಾಗಲೇ ಭಾರತದ ಬೆನ್ನಿಗೆ ಅನಿರೀಕ್ಷಿತವಾಗಿ ಚೀನಾ ಚೂರಿ ಹಾಕಿತು. ಭಾರತದ ನೂರಾರು ಸೈನಿಕರು ಈ ಸಂದರ್ಭದಲ್ಲಿ ಚೀನಾ ದಾಳಿಗೆ ಹುತಾತ್ಮರಾದರು. ಅಪಾರ ಭೂಪ್ರದೇಶವನ್ನು ಭಾರತ ಕಳೆದುಕೊಂಡಿತು. ಇದಕ್ಕಾಗಿ ಇಂದಿಗೂ ನೆಹರೂ ಅವರನ್ನು ಬಿಜೆಪಿ ದೂರುತ್ತಾ ಬಂದಿದೆ. ನೆಹರೂ ವೈಫಲ್ಯವನ್ನು ಮುಂದಿಟ್ಟುಕೊಂಡು ಹಲವು ಬರಹಗಳು ಬಂದಿವೆ. ‘ಹಿಮಾಲಯನ್ ಬ್ಲಂಡರ್’ ಎಂದು ನಿವೃತ್ತ ಸೇನಾಧಿಕಾರಿಯೇ ಒಂದು ಕೃತಿಯನ್ನು ರಚಿಸಿದ್ದರು. ಅದಕ್ಕಾಗಿ ಅವರ ‘ಭಾರತೀಯತೆಯನ್ನು ಸಂಶಯಿಸಿದರೆ’ ಅದು ಎಷ್ಟು ಸರಿ? ಪಹಲ್ಗಾಮ್‌ನಲ್ಲಿ ನಡೆದ ದಾಳಿಯ ಬಗ್ಗೆ, ಆಪರೇಷನ್ ಸಿಂಧೂರದಲ್ಲಿ ಭಾರತದ ಯುದ್ಧವಿಮಾನಗಳಿಗೆ ಸಂಭವಿಸಿದ ಹಾನಿಗಳ ಬಗ್ಗೆ ಪ್ರಶ್ನಿಸಿದರೆ ಕೇಂದ್ರ ಸರಕಾರ ತಕ್ಷಣ ಹೆಗಲು ಮುಟ್ಟಿಕೊಳ್ಳುತ್ತದೆ. ಸೈನಿಕರ ನೈತಿಕ ಶಕ್ತಿ, ಆಂತರಿಕ ಭದ್ರತೆಗಳನ್ನು ಮುಂದೊಡ್ಡಿ ವಿರೋಧ ಪಕ್ಷದ ನಾಯಕರ ಬಾಯಿ ಮುಚ್ಚಿಸುತ್ತದೆ. ಇದೀಗ ಚೀನಾ ಗಡಿಯಲ್ಲಿ ಕೇಂದ್ರ ಸರಕಾರದ ವೈಫಲ್ಯವನ್ನು ಪ್ರಶ್ನಿಸಿದ ರಾಹುಲ್‌ಗಾಂಧಿಯ ಭಾರತೀಯತೆಯನ್ನು ಅನುಮಾನಿಸುವ ಮೂಲಕ ಸುಪ್ರೀಂಕೋರ್ಟ್ ಅದೇ ಫ್ಯಾಶಿಸ್ಟ್ ಮನಸ್ಥಿತಿಯನ್ನು ಪ್ರದರ್ಶಿಸಿದೆ. ಈವರೆಗೆ ಬಿಜೆಪಿಯೊಳಗಿರುವ ನಾಯಕರಿಗೆ ಅಂಟಿಕೊಂಡ ಈ ರೋಗ ಇದೀಗ ನ್ಯಾಯ ವ್ಯವಸ್ಥೆಯ ಅತ್ಯುನ್ನತ ಸ್ಥಾನದಲ್ಲಿ ಕುಳಿತವರಿಗೂ ಹರಡಿರುವುದು ನಿಜಕ್ಕೂ ಕಳವಳಕಾರಿಯಾಗಿದೆ.