×
Ad

‘ಶಕ್ತಿ’ ಯೋಜನೆ ತನ್ನ ನಿಲ್ದಾಣ ತಲುಪಲಿ

Update: 2025-07-16 10:32 IST

Photo: PTI 

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳಲ್ಲಿ ‘ಶಕ್ತಿ ಯೋಜನೆ’ ಅತ್ಯಂತ ಮಹತ್ವಾಕಾಂಕ್ಷಿಯಾಗಿತ್ತು. ಮಹಿಳೆಯರಿಗೆ ಉಚಿತ ಪ್ರಯಾಣ ಘೋಷಣೆ ಸಾರಿಗೆ ವಲಯದಲ್ಲಿ ದೊಡ್ಡ ಕ್ರಾಂತಿಯನ್ನೇ ಎಬ್ಬಿಸಿತ್ತು. ಇದೇ ಸಂದರ್ಭದಲ್ಲಿ ಯೋಜನೆಯಲ್ಲಿ ತುಸು ವ್ಯತ್ಯಾಸವಾಗಿದ್ದರೂ ಅದು ಸಾರ್ವಜನಿಕ ಬದುಕನ್ನು ಅಸ್ತವ್ಯಸ್ತಗೊಳಿಸಬಹುದಾಗಿತ್ತು. ಶಕ್ತಿ ಯೋಜನೆಯು ತನ್ನ ಅವ್ಯವಸ್ಥೆಯ ಮೂಲಕವೇ ವಿಫಲವಾಗಿ, ಸರಕಾರಕ್ಕೆ ಹಿನ್ನಡೆಯಾಗುತ್ತದೆ ಎಂದು ವಿರೋಧ ಪಕ್ಷದ ನಾಯಕರು ಭಾವಿಸಿದ್ದರು ಮತ್ತು ಆ ನಿರೀಕ್ಷೆಯಲ್ಲಿ ಇನ್ನೂ ಇದ್ದಾರೆ. ಇವೆಲ್ಲದರ ನಡುವೆ 500 ಕೋಟಿ ಪ್ರಯಾಣವನ್ನು ಮುಗಿಸಿದ ಸಂಭ್ರಮದಲ್ಲಿದ್ದಾರೆ ರಾಜ್ಯದ ಮಹಿಳೆಯರು. ಹಲವು ಕುಂದುಕೊರತೆಗಳ ನಡುವೆಯೂ ಈ ಯೋಜನೆ ಸಾಮಾಜಿಕವಾಗಿ ಮಹಿಳೆಯರ ಬದುಕಿನ ಮೇಲೆ ಬೀರಿದ ಸತ್ ಪರಿಣಾಮವನ್ನು ನಾವು ಶ್ಲಾಘಿಸಲೇ ಬೇಕು. ಸರಕಾರವೂ ಈ ಸಾಧನೆಯನ್ನು ಸಂಭ್ರಮದಿಂದಲೇ ಆಚರಿಸಿಕೊಂಡಿದೆ. ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಎಂಟಿಸಿ ಬಸ್‌ನಲ್ಲಿ ಮಹಿಳೆಯೋರ್ವರಿಗೆ ಸಾಂಕೇತಿಕವಾಗಿ 500ನೇ ಕೋಟಿಯ ಟಿಕೆಟ್‌ನ್ನು

ವಿತರಿಸಿ ಈ ಯೋಜನೆ ಯಾವ ಕಾರಣಕ್ಕೂ ಸ್ಥಗಿತಗೊಳ್ಳುವುದಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.

ಶಕ್ತಿ ಯೋಜನೆಯ ಸಾಧನೆ ಮತ್ತು ವೈಫಲ್ಯಗಳೆರಡನ್ನೂ ಅವಲೋಕಿಸುವುದಕ್ಕೆ ಇದು ಸೂಕ್ತ ಸಮಯವಾಗಿದೆ ಮತ್ತು ಈ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಹೇಗೆ ಮುಂದಕ್ಕೆ ಕೊಂಡೊಯ್ಯಬಹುದು ಎನ್ನುವುದರ ಬಗ್ಗೆ ಸರಕಾರ ಯೋಚಿಸಬೇಕಾಗಿದೆ. ಈ ನಿಟ್ಟಿನಲ್ಲಿ ಶಕ್ತಿಯೋಜನೆಯ ಸಾಧಕ ಬಾಧಕಗಳ ಬಗ್ಗೆ ಸರಕಾರದ ನೇತೃತ್ವದಲ್ಲಿ ಗಂಭೀರ ಅಧ್ಯಯನ ನಡೆಯಬೇಕು. ಇದು ಮಹಿಳೆಯರ ಸಾಮಾಜಿಕ ಬದುಕಿನ ಮೇಲೆ ಮತ್ತು ಆರ್ಥಿಕ ವಲಯದ ಮೇಲೆ ಬೀರಿದ ಪರಿಣಾಮಗಳ ಬಗ್ಗೆ ಪ್ರಾಮಾಣಿಕವಾದ ವಿಮರ್ಶೆಗಳು ನಡೆಯುವಂತೆ ಸರಕಾರ ನೋಡಿಕೊಳ್ಳಬೇಕು. ಈ ಯೋಜನೆಯಿಂದ ಸಾರಿಗೆ ಇಲಾಖೆ ನಷ್ಟಕ್ಕೀಡಾಗುತ್ತದೆ ಎನ್ನುವ ವದಂತಿಯನ್ನು ಹಬ್ಬಿಸಲಾಗಿತ್ತು. ಶಕ್ತಿ ಯೋಜನೆ ಜಾರಿಗೊಳ್ಳುವ ಮೊದಲು ಈ ಸಾರಿಗೆ ಇಲಾಖೆ ‘ಚಿನ್ನದ ಮೊಟ್ಟೆ ಇಡುವ ಕೋಳಿ’ ಏನೂ ಆಗಿರಲಿಲ್ಲ. ಇಷ್ಟಕ್ಕೂ ಸಾರಿಗೆ ಇಲಾಖೆಯ ಉದ್ದೇಶ ಸೇವೆಯೇ ಹೊರತು, ಲಾಭಗಳಿಸುವುದಲ್ಲ. ಸಾರಿಗೆ ಇಲಾಖೆ ಜನಸಾಮಾನ್ಯರಿಗೆ ನೀಡುವ ಸೇವೆಯ ಲಾಭವನ್ನು ಹಣದ ಮೂಲಕ ಅಳೆಯಲಾಗುವುದಿಲ್ಲ. ಆದರೂ ಸರಕಾರಕ್ಕೆ ದೊಡ್ಡ ಮಟ್ಟದಲ್ಲಿ ಹೊರೆಯಾದರೆ ಇಲಾಖೆಯನ್ನು ನಿಭಾಯಿಸುವುದು ಕಷ್ಟವಾಗಬಹುದು ಎಂಬ ಆತಂಕ ಸಹಜವಾಗಿಯೇ ಇತ್ತು. ಶಕ್ತಿ ಯೋಜನೆಯಿಂದ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಏಕಾಏಕಿ ಹೆಚ್ಚಿದೆ. ಆರಂಭದಲ್ಲಿ ‘ಉಚಿತ ಪ್ರಯಾಣದ ಕಾರಣದಿಂದ ಮಹಿಳೆಯರು ಅನಗತ್ಯವಾಗಿ ಯಾತ್ರೆಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ’ ‘ದೇವಸ್ಥಾನ, ಪುಣ್ಯಕ್ಷೇತ್ರಗಳಿಗೆ ಓಡಾಟ ಹೆಚ್ಚಿದೆ’ ಎಂಬಿತ್ಯಾದಿ ಆಕ್ಷೇಪಗಳು ಪುರುಷ ವಲಯದಿಂದ ಕೇಳಿ ಬರುತ್ತಿತ್ತು. ಮಾಜಿ ಮುಖ್ಯಮಂತ್ರಿಯೊಬ್ಬರು ‘‘ಉಚಿತ ಬಸ್ ಪ್ರಯಾಣದಿಂದಾಗಿ ಮಹಿಳೆಯರು ಕೆಡುತ್ತಿದ್ದಾರೆ’’ ಎಂಬ ಬೇಜವಾಬ್ದಾರಿ ಹೇಳಿಕೆಯನ್ನೂ ನೀಡಿದ್ದರು. ವಿಪರ್ಯಾಸವೆಂದರೆ, ಮಹಿಳೆಯರ ಬಗ್ಗೆ ಇಂತಹ ಕೀಳು ಅಭಿರುಚಿಯ ಮಾತುಗಳನ್ನಾಡಿದ ನಾಯಕರ ಕುಟುಂಬ ಸದಸ್ಯರೇ ಬಳಿಕ ಅಶ್ಲೀಲ, ಅನೈತಿಕ ಚಟುವಟಿಕೆಗಳಿಗಾಗಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾದರು.

ಮಹಿಳೆಯರ ಪ್ರಯಾಣಗಳು ಹೆಚ್ಚಾದ ಕಾರಣಕ್ಕೆ ರಾಜ್ಯಾದ್ಯಂತ ಆರ್ಥಿಕ ಚಟುವಟಿಕೆಗಳು ಚುರುಕಾದವು. ಕಚೇರಿಗಳಲ್ಲಿ ಕೆಲಸ ಮಾಡುವ ತಳಸ್ತರದ ಸಿಬ್ಬಂದಿಗೆ, ಪೌರ ಕಾರ್ಮಿಕರಿಗೆ ಈ ಯೋಜನೆ ಬಹುದೊಡ್ಡ ವರದಾನವಾಯಿತು. ಇವರು ಮಾಸಿಕವಾಗಿ ಬಸ್‌ಗಳಿಗೆ ವೆಚ್ಚ ಮಾಡುತ್ತಿದ್ದ ಅಷ್ಟೂ ಹಣ ಉಳಿತಾಯವಾಯಿತು. ಗ್ರಾಮೀಣ ಪ್ರದೇಶದ ಮಹಿಳೆಯರು ಇದರ ಲಾಭಗಳನ್ನು ದೊಡ್ಡ ಮಟ್ಟದಲ್ಲಿ ತಮ್ಮದಾಗಿಸಿಕೊಂಡರು. ಮಹಿಳೆಯರ ಜೀವನ ಮಟ್ಟದಲ್ಲಿ ಸಣ್ಣ ರೀತಿಯಲ್ಲಾದರೂ ಸುಧಾರಣೆಯಾಯಿತು. ಇವೆಲ್ಲವು ಸಾರಿಗೆ ಇಲಾಖೆಯ ಲಾಭದ ಖಾತೆಯಲ್ಲಿ ಜಮೆಯಾಗಬೇಕಾಗಿದೆ. ಇಷ್ಟಕ್ಕೂ ಬಸ್‌ಗಳಲ್ಲಿ ಮಹಿಳೆಯರ ನೂಕು ನುಗ್ಗಲು ಹೆಚ್ಚಾಗಿರುವುದರಿಂದ ಪುರುಷರು ಬಸ್ ಪ್ರಯಾಣ ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆ ಎನ್ನುವ ಆರೋಪಗಳಿವೆ. ಮಹಿಳೆಯರು ಅನ್ಯಗ್ರಹದ ಜೀವಿಗಳಲ್ಲ. ಒಬ್ಬ ಮಹಿಳೆ ಪುರುಷನೊಬ್ಬನ ಪತ್ನಿಯಾಗಿರಬಹುದು ಅಥವಾ ಪುರುಷನೊಬ್ಬನ ತಾಯಿಯೂ ಆಗಿರಬಹುದು. ತಂದೆಯೊಬ್ಬನ ಮಗಳೂ ಆಗಿರುತ್ತಾಳೆ. ಆದುದರಿಂದ ಮಹಿಳೆ ಈ ಯೋಜನೆಯಿಂದ ಪಡೆಯುವ ಲಾಭ ಅಂತಿಮವಾಗಿ ಪುರುಷನದ್ದು ಕೂಡ. ಪುರುಷರು ಮತ್ತು ಮಹಿಳೆಯರು ಶಕ್ತಿ ಯೋಜನೆಯ ಲಾಭವನ್ನು ಸಮವಾಗಿ ಈ ಮೂಲಕ ಹಂಚಿಕೊಂಡಿರುತ್ತಾರೆ. ಆದರೆ ಅದು ನೇರ ಅನುಭವಕ್ಕೆ ಬರುವುದಿಲ್ಲ. ಹೆಣ್ಣು ತನ್ನ ಬದುಕಿನ ಭಾಗ ಎನ್ನುವುದನ್ನು ಅರ್ಥ ಮಾಡಿಕೊಂಡ ಪುರುಷ ಮಾತ್ರ, ಶಕ್ತಿಯೋಜನೆಯಲ್ಲಿ ತಾನೂ ಫಲಾನುಭವಿ ಎನ್ನುವುದನ್ನು ಕಂಡುಕೊಳ್ಳಬಲ್ಲ. ಈ ನಿಟ್ಟಿನಲ್ಲಿ, ಹೆಣ್ಣಿನ ಬಗ್ಗೆ ಪುರುಷನ ದೃಷ್ಟಿ ಕೋನವನ್ನು ಬದಲಿಸುವುದಕ್ಕೆ ಶಕ್ತಿ ಯೋಜನೆ ಸಹಾಯ ಮಾಡಿದೆ ಎನ್ನಬಹುದು. ಮೇಲ್ಮಧ್ಯಮ ವರ್ಗದ ಮಹಿಳೆಯರೂ ಶಕ್ತಿ ಯೋಜನೆಯ ಬಗ್ಗೆ ಅಸಹನೆಯಿಂದ ಮಾತನಾಡುವುದಿದೆ. ಕಾರ್ಮಿಕ ಮಹಿಳೆಯರ ಬೆವರಿನ ವಾಸನೆಯ ಬಗ್ಗೆ ಕೀಳಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಿದೆ. ತಳಸ್ತರದ ಮಹಿಳೆಯರ ಶ್ರಮದ ಬೆವರಿನ ಪರಿಮಳ ಇವರಿಗೆ ಈ ಮೂಲಕವಾದರೂ ತಲುಪಿದರೆ ಅದು ಶಕ್ತಿ ಯೋಜನೆಯ ಪ್ರಯೋಜನವೇ ಸರಿ.

ಉಳಿದಂತೆ ಶಕ್ತಿ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುವ ಬಗ್ಗೆ ಸರಕಾರ ಯೋಚಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಎಷ್ಟೋ ಊರುಗಳಿಗೆ ಸರಕಾರಿ ಬಸ್ ವ್ಯವಸ್ಥೆಯೇ ಇಲ್ಲ. ಇಂತಹ ಪ್ರದೇಶದಲ್ಲಿ ಶಕ್ತಿ ಯೋಜನೆಯ ಪ್ರಯೋಜನ ಮಹಿಳೆಯರಿಗೆ ತಲುಪುವುದು ಹೇಗೆ? ಶಕ್ತಿ ಯೋಜನೆಯ ಬಳಿಕ ಜನರು ಸಾರಿಗೆ ಬಸ್‌ಗಳನ್ನು ಬಳಸುವುದು ಹೆಚ್ಚಾಗಿದೆ. ಆದರೆ ಬಸ್‌ಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿಲ್ಲ. ಗ್ರಾಮೀಣ ಪ್ರದೇಶಗಳಿಗೆ ಇನ್ನಷ್ಟು ಬಸ್‌ಗಳ ವ್ಯವಸ್ಥೆಯನ್ನು ಮಾಡುವುದು, ಬಸ್ ಸಿಬ್ಬಂದಿಯ ಸಂಖ್ಯೆಯನ್ನು ಹೆಚ್ಚಿಸುವುದು, ಸಾರಿಗೆ ಇಲಾಖೆಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಡುವುದರ ಬಗ್ಗೆ ಸರಕಾರ ಯೋಚಿಸಬೇಕು. ಸಾರಿಗೆ ಇಲಾಖೆಯನ್ನು ಉತ್ತಮ ಪಡಿಸುವುದಕ್ಕೆ ಯಾವ ಯಾವ ಮೂಲಗಳಿಂದ ಹಣ ಹೊಂದಿಸಬಹುದು ಎನ್ನುವುದರ ಬಗ್ಗೆಯೂ ಅಧಿಕಾರಿಗಳಿಂದ ಸಲಹೆ ಪಡೆಯಬೇಕು. ಭ್ರಷ್ಟಾಚಾರಗಳನ್ನು ತಡೆದು ಆ ಹಣ ಗ್ಯಾರಂಟಿ ಯೋಜನೆಗಳಿಗೆ ಹರಿಯುವಂತೆ ಮಾಡಬಹುದು. ಇದೇ ಸಂದರ್ಭದಲ್ಲಿ, ಗ್ಯಾರಂಟಿ ಯೋಜನೆಗಳ ಯಶಸ್ವೀ ಜಾರಿ, ಈ ಹಿಂದಿನ ಸರಕಾರಗಳನ್ನು ಪ್ರಶ್ನಿಸುವಂತೆ ಮಾಡಿದೆ. ಈ ಹಿಂದೆ ಯಾವುದೇ ಗ್ಯಾರಂಟಿ ಯೋಜನೆಗಳಿಲ್ಲದೆಯೇ ಸರಕಾರದ ಖಜಾನೆಯನ್ನು ಲೂಟಿ ಮಾಡಲಾಯಿತು. ಇದೀಗ ಗ್ಯಾರಂಟಿ ಯೋಜನೆಗಳನ್ನು ನೀಡಿಯೂ ಸರಕಾರ ಸುಗಮವಾಗಿ ಮುಂದುವರಿಯುತ್ತಿದೆ. ಅಭಿವೃದ್ಧಿಯಲ್ಲಿ ಹತ್ತು ಹಲವು ಅಡೆತಡೆಗಳು ಇವೆಯಾದರೂ, ಈ ಅಡೆ ತಡೆಗಳು ಹಿಂದಿನ ಸರಕಾರದಲ್ಲೂ ಕಂಡು ಬಂದಿವೆ. ಶಕ್ತಿ ಯೋಜನೆಯೂ ಸೇರಿದಂತೆ ಗ್ಯಾರಂಟಿಗಳನ್ನು ಪರಿಣಾಮಕಾರಿಯಾಗಿ ಹೇಗೆ ಮುಂದುವರಿಸಬಹುದು ಎನ್ನುವ ಕುರಿತಂತೆ ವಿರೋಧ ಪಕ್ಷಗಳು ಸರಕಾರಕ್ಕೆ ಸಲಹೆ ಸೂಚನೆಗಳನ್ನು ನೀಡಬೇಕೇ ಹೊರತು, ಅದನ್ನು ಸ್ಥಗಿತಗೊಳಿಸಲು ಒತ್ತಾಯಿಸುವುದಲ್ಲ. ಅಂತಹ ಒತ್ತಾಯ ಮಹಿಳಾ ವಿರೋಧಿ ಮಾತ್ರವಲ್ಲ, ಅಭಿವೃದ್ಧಿ ವಿರೋಧಿಯೂ ಕೂಡ. ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸಿ ಅದರಿಂದ ಉಳಿತಾಯವಾದ ಹಣವನ್ನು ಭ್ರಷ್ಟ ರಾಜಕಾರಣಿಗಳು ಹಂಚಿಕೊಂಡು ತೇಗುವುದಕ್ಕಿಂತ ತಳಸ್ತರದ ಮಹಿಳೆಯರು ತಮ್ಮ ಕುಟುಂಬಗಳ ಯೋಗಕ್ಷೇಮಗಳಿಗೆ ಬಳಸುವುದರಲ್ಲಿ ನಾಡಿನ ಒಳಿತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News