×
Ad

ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಲಗೊಳ್ಳಲಿ

Update: 2025-07-15 07:19 IST

PC: x.com/ndtv

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಸರಕಾರ ಎಷ್ಟೇ ಕ್ರಮಗಳನ್ನು ಕೈಗೊಂಡರೂ ರಸ್ತೆ ಅಪಘಾತದ ಸಾವುಗಳ ನಿಸಂಖ್ಯೆ ಹೆಚ್ಚಾಗುತ್ತಲೇ ಇದೆ. ಜಾಗತಿಕ ಚಾಲನಾ ಶಿಕ್ಷಣ ಕಂಪೆನಿಯೊಂದು ನಡೆಸಿದ ಅಧ್ಯಯನ ವರದಿಯ ಪ್ರಕಾರ ವಿಶ್ವದಲ್ಲಿ ಅತ್ಯಂತ ಹೆಚ್ಚು ಅಪಾಯಕಾರಿ ರಸ್ತೆಗಳನ್ನು ಹೊಂದಿರುವ ಐವತ್ತಾರು ದೇಶಗಳ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಅದರಲ್ಲೂ ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಲ್ಲಿ ವರ್ಷದಿಂದ ವರ್ಷಕ್ಕೆ ವಾಹನ ದಟ್ಟಣೆ ಹೆಚ್ಚಾಗುತ್ತಲೇ ಇದೆ. ನಮ್ಮ ರಾಜಧಾನಿ ಬೆಂಗಳೂರು ಹೈಟೆಕ್ ನಗರ ಎಂದು ಹೆಮ್ಮೆ ಪಟ್ಟುಕೊಳ್ಳುವುದರ ಜೊತೆ, ಜೊತೆಗೆ ಇಲ್ಲಿನ ವಾಹನ ದಟ್ಟಣೆ ಮಿತಿ ಮೀರಿದೆ. ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಹೋಗಬೇಕೆಂದರೆ ಅರ್ಧ ದಿನ ದಾರಿಯಲ್ಲೇ ವ್ಯಯವಾಗುತ್ತದೆ. ರಾಜ್ಯದ ಇತರ ದೊಡ್ಡ ನಗರಗಳಲ್ಲೂ ಇದೇ ಪರಿಸ್ಥಿತಿ ಇದೆ.

ವಿಪರೀತ ವಲಸೆಯಿಂದಾಗಿ, ಉದ್ಯಾನ ನಗರಿಯ ಜನಸಂಖ್ಯೆ ಈಗ ಒಂದೂವರೆ ಕೋಟಿಗೆ ತಲುಪಿದೆ. ಇಲ್ಲಿ 1.23 ಕೋಟಿಗೂ ಹೆಚ್ಚು ವಾಹನಗಳು ನಿತ್ಯ ಬೀದಿಯಲ್ಲಿ ಸಂಚರಿಸುತ್ತಿವೆ. 2024-25ರ ವರೆಗಿನ ಕಾಲಾವಧಿಯಲ್ಲಿ 4.68 ಲಕ್ಷ ದ್ವಿಚಕ್ರ ವಾಹನಗಳು ಹಾಗೂ 1.45 ಲಕ್ಷ ನಾಲ್ಕು ಚಕ್ರದ ವಾಹನಗಳು ಹೊಸದಾಗಿ ಸೇರ್ಪಡೆಯಾಗಿವೆ. ಒಂದೇ ವರ್ಷದ ಕಾಲಾವಧಿಯಲ್ಲಿ 7.22 ಲಕ್ಷ ಹೊಸ ವಾಹನಗಳು ರಸ್ತೆಗೆ ಬಂದಿವೆ. ಕರ್ನಾಟಕದಲ್ಲಿ ಇರುವ ಒಟ್ಟು ಕಾರುಗಳ ಪೈಕಿ ಶೇಕಡಾ 50ಕ್ಕಿಂತ ಹೆಚ್ಚು ಕಾರುಗಳು ಬೆಂಗಳೂರಿನಲ್ಲಿ ನೋಂದಣಿಯಾಗಿವೆ ಎಂದು ಸಂಚಾರಿ ಪೊಲೀಸ್ ಇಲಾಖೆಯ ಅಂಕಿ ಅಂಶಗಳಿಂದ ತಿಳಿದು ಬರುತ್ತದೆ. 2020-21ರಲ್ಲಿ 1 ಕೋಟಿಯಷ್ಟಿದ್ದ ವಾಹನಗಳ ಸಂಖ್ಯೆ 2025ರ ಎಪ್ರಿಲ್ ಕೊನೆಯ ವೇಳೆಗೆ 1.23 ಕೋಟಿಯಷ್ಟು ಹೆಚ್ಚಾಗಿವೆ. ಅಂದರೆ ಪ್ರತೀ ತಿಂಗಳು 60 ಸಾವಿರ ವಾಹನಗಳು ಹೊಸದಾಗಿ ರಸ್ತೆಗೆ ಇಳಿಯುತ್ತಿವೆ. ವಾಸ್ತವ ಸ್ಥಿತಿ ಹೀಗಿರುವಾಗ ಬೆಂಗಳೂರಿನ ವಾಹನ ದಟ್ಟಣೆ ಕಡಿಮೆಯಾಗಲು ಹೇಗೆ ಸಾಧ್ಯ?

ಬೆಂಗಳೂರಿನಂಥ ಮಹಾ ನಗರದಲ್ಲಿ ವಾಹನ ದಟ್ಟಣೆಗೆ ಖಾಸಗಿ ವಾಹನಗಳು ಹೆಚ್ಚಾಗುತ್ತಿರುವುದೇ ಮುಖ್ಯ ಕಾರಣವಾಗಿದೆ. ಮೂವರು ಸದಸ್ಯರಿರುವ ಒಂದು ಕುಟುಂಬದಲ್ಲಿ ಮೂರು ಕಾರುಗಳಿರುತ್ತವೆ. ಮೂರು ದ್ವಿಚಕ್ರ ವಾಹನಗಳಿರುತ್ತವೆ. ಐದಾರು ಜನ ಕುಳಿತುಕೊಂಡು ಪ್ರಯಾಣಿಸಬಹುದಾದ ದೊಡ್ಡ ವಾಹನದಲ್ಲಿ ಒಬ್ಬನೇ ಒಬ್ಬ ಸಂಚರಿಸುತ್ತಿರುತ್ತಾನೆ. ಇಂಥ ಸಾವಿರಾರು ವಾಹನಗಳು ಒಮ್ಮೆಲೇ ರಸ್ತೆಗೆ ಬಂದರೆ, ಸಂಚಾರ ದಟ್ಟಣೆಯಲ್ಲದೆ ಇನ್ನೇನು ಆಗಲು ಸಾಧ್ಯ? ಈ ವಿಪರೀತ ವಾಹನಗಳ ಓಡಾಟವನ್ನು ತಡೆಯುವಷ್ಟು ಸಾಮರ್ಥ್ಯವೂ ನಮ್ಮ ರಸ್ತೆಗಳಿಗೆ ಇಲ್ಲ. ಹಲವೆಡೆ ಮೇಲು ಸೇತುವೆಗಳನ್ನು ನಿರ್ಮಿಸಿದರೂ ದಟ್ಟಣೆ ಕಡಿಮೆಯಾಗಲಿಲ್ಲ. ಮೆಟ್ರೋ ಬಂದರೂ ಪ್ರಯೋಜನವಾಗಿಲ್ಲ. ಈಗ ಮೆಟ್ರೋ ಓಡಾಡುವ ಸೇತುವೆ ಕೆಳಗೆ ಇನ್ನೊಂದು ಸೇತುವೆಯನ್ನು ನಿರ್ಮಿಸಿ ಅಲ್ಲಿ ಖಾಸಗಿ ವಾಹನಗಳಿಗೆ ಮೀಸಲಿಡುವ ಪ್ರಯತ್ನವೂ ನಡೆದಿದೆ.

ಬೆಂಗಳೂರು ಆಗಲಿ, ಯಾವುದೇ ಮಹಾನಗರವಾಗಲಿ ರಸ್ತೆ ಅಪಘಾತಗಳು ಹಾಗೂ ವಾಹನ ದಟ್ಟಣೆಯನ್ನು ತಡೆಯಲು ಸದ್ಯಕ್ಕೆ ಗೋಚರಿಸುವ ಒಂದೇ ಒಂದು ಪರಿಹಾರವೆಂದರೆ ಸಾರ್ವಜನಿಕ ಸಾರಿಗೆಯನ್ನು ಬಲಪಡಿಸುವುದಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಸರಕಾರ ಇತ್ತೀಚೆಗೆ ಕೈಗೊಂಡ ಹಲವಾರು ಕ್ರಮಗಳು ಸ್ವಾಗತಾರ್ಹವಾಗಿವೆ. ಸಾರ್ವಜನಿಕ ಸಾರಿಗೆಯ ಕೆಲವು ಕೊರತೆಯನ್ನು ನಿವಾರಿಸಿ ಇನ್ನಷ್ಟು ವಾಹನಗಳ ಸೌಕರ್ಯಗಳನ್ನು ಕಲ್ಪಿಸಿದರೆ ಅದರಲ್ಲಿ ಪ್ರಯಾಣಿಸಲು ಸಾರ್ವಜನಿಕರು ಆಸಕ್ತಿಯನ್ನು ತೋರಿಸಬಹುದು. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಲು ವಿಶೇಷ ಕ್ರಮಗಳನ್ನು ಕೈಗೊಂಡಿರುವ ಸರಕಾರದ ಕ್ರಮಗಳ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮತ್ತು ಮಾಹಿತಿ ತಂತ್ರಜ್ಞಾನ ಖಾತೆಯ ಸಚಿವ ಪ್ರಿಯಾಂಕ್ ಖರ್ಗೆ ಕಳೆದ ವಾರ ವಿವರಿಸಿದ್ದಾರೆ.

ಸಾರ್ವಜನಿಕ ಸಾರಿಗೆಯನ್ನು ಬಲಪಡಿಸುವ ನಿಟ್ಟಿನಲ್ಲಿ 2030ರ ವೇಳೆಗೆ ಶೇಕಡಾ 70ರಷ್ಟು ಜನರಿಗೆ ಸಾರ್ವಜನಿಕ ಸಾರಿಗೆಯ ಸೌಕರ್ಯವನ್ನು ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಸಚಿವರು ತಿಳಿಸಿದ್ದಾರೆ. ಮುಂದಿನ ವರ್ಷ ಸಾರಿಗೆ ಸಂಸ್ಥೆಗೆ 4,500 ಹೊಸ ಬಸ್‌ಗಳು ಸೇರ್ಪಡೆಯಾಗಲಿವೆ, 95 ಕಿ.ಮೀ. ಮೆಟ್ರೋ ಮಾರ್ಗ ವಿಸ್ತರಣೆಯಾಗಲಿದೆ.

ರಸ್ತೆ ಅಪಘಾತಗಳನ್ನು ತಡೆಯಲು ಸಾರ್ವಜನಿಕ ಸಾರಿಗೆಯನ್ನು ಬಲಪಡಿಸಿದರೆ ಮಾತ್ರ ಸಾಲದು, ಇದರೊಂದಿಗೆ ನಗರ ಮತ್ತು ಪಟ್ಟಣಗಳಲ್ಲಿ ರಸ್ತೆಗಳ ನಿರ್ವಹಣೆಯೂ ಮುಖ್ಯವಾಗಿದೆ. ಅನೇಕ ಕಡೆ ಅವೈಜ್ಞಾನಿಕ ಜಾಮರ್ ಗಳು, ಕಿತ್ತು ಹೋಗಿರುವ ಡಾಂಬರು, ಸುರಕ್ಷಿತವಲ್ಲದ ತಿರುವುಗಳು, ರಸ್ತೆಯಲ್ಲಿ ಅಪಾಯಕಾರಿ ಗುಂಡಿಗಳು ಕೂಡ ವಾಹನ ಅಪಘಾತಕ್ಕೆ ಕಾರಣವಾಗಿವೆ. ಇದರೊಂದಿಗೆ ಪಾದಚಾರಿ ಮಾರ್ಗದ ಒತ್ತುವರಿಯಿಂದಾಗಿ ಏಕಾಏಕಿ ಮುಖ್ಯ ರಸ್ತೆಗೆ ನುಗ್ಗುವ ಪಾದಚಾರಿಗಳು ಹಾಗೂ ಬೇಕಾಬಿಟ್ಟಿ ವಾಹನ ಚಾಲನೆಯೂ ಅಪಘಾತಗಳಿಗೆ ಕಾರಣವಾಗುವ ಇತರ ಅಂಶಗಳಾಗಿವೆ.

ವಾಹನಗಳ ದಟ್ಟಣೆ ತಡೆಯಲು ವಾಹನ ವಹಿವಾಟಿನ ಮೇಲೆ ಸರಕಾರ ನಿಯಂತ್ರಣ ಹೇರಬೇಕು. ಅಟೊಮೊಬೈಲ್ ಉದ್ಯಮಗಳನ್ನು ಬದುಕಿಸಲು ದೇಶದ ಜನರು ಬಲಿಯಾಗುವುದು ಬೇಡ. ಅಟೊಮೊಬೈಲ್ ಉದ್ದಿಮೆ ಉಳಿಯಬಾರದೆಂದಲ್ಲ, ಅದು ಉಳಿಯಲು ಯಾರ ಅಭ್ಯಂತರವೂ ಇಲ್ಲ. ಜನರ ನಿತ್ಯದ ಸಂಚಾರಿ ಬದುಕು ಸುರಕ್ಷಿತವಾಗಿ ಇರಬೇಕು. ವಾಹನಗಳಿಂದ ವಾಯು ಮಾಲಿನ್ಯ ಉಂಟಾಗಬಾರದು. ಈ ದೃಷ್ಟಿಯಿಂದ ಸರಕಾರ ಸಾರ್ವಜನಿಕ ಸಾರಿಗೆಯನ್ನು ಇನ್ನಷ್ಟು ಬಲಪಡಿಸುವುದು ಅಗತ್ಯವಾಗಿದೆ.

ವಿಪರೀತ ವಾಹನ ದಟ್ಟಣೆ ಪರಿಣಾಮವಾಗಿ ಭಾರತ ಮಾತ್ರವಲ್ಲ ಇಡೀ ಜಗತ್ತಿನಲ್ಲಿ ವಾಯು ಮಾಲಿನ್ಯ ವ್ಯಾಪಕವಾಗಿ ದುಷ್ಪರಿಣಾಮ ಉಂಟು ಮಾಡಿದೆ. ಪ್ರತೀ ವರ್ಷ ವಾಯು ಮಾಲಿನ್ಯದಿಂದಾಗಿ ಎಪ್ಪತ್ತು ಲಕ್ಷ ಮಂದಿ ಸಾವಿಗೀಡಾಗುತ್ತಿದ್ದಾರೆ. ಇದರಲ್ಲಿ ಆಫ್ರಿಕಾ ಮತ್ತು ಏಶ್ಯದ ಜನರ ಸಂಖ್ಯೆ ಹೆಚ್ಚಿಗಿದೆ. ವಾಯು ಮಾಲಿನ್ಯದಿಂದಾಗಿ ಶ್ವಾಸಕೋಶ ಹಾಗೂ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಜಾಸ್ತಿಯಾಗುತ್ತಿವೆ. ನಮ್ಮ ದೇಶದ ರಾಜಧಾನಿ ದಿಲ್ಲಿಯಲ್ಲಿ ಉಸಿರಾಡುವ ಗಾಳಿಯೂ ಮಲಿನಗೊಂಡಿದೆ. ಇದನ್ನು ತಡೆಯಲು ಅಲ್ಲಿನ ವಾಹನ ಸಂಚಾರದ ಮೇಲೆ ಸರಕಾರ ಕಡಿವಾಣ ಹಾಕುತ್ತಲೇ ಇದೆ. ಇದಕ್ಕೆ ಬೆಂಗಳೂರು ಕೂಡ ಹೊರತಲ್ಲ. ದೇಶದ ಎರಡನೇ ಅತ್ಯಂತ ಕಲುಷಿತ ನಗರ ಬೆಂಗಳೂರು ಎಂದು ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿಯಿಂದ ಬೆಳಕಿಗೆ ಬಂದಿದೆ. ಇಂಥ ಸನ್ನಿವೇಶದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸುವುದೊಂದೇ ಉಳಿದ ದಾರಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News