×
Ad

ಮಂಗಳೂರು ಸ್ಮಾರ್ಟ್‌ಸಿಟಿ: ತಗಡಿನ ತುತ್ತೂರಿಯ ಬಣ್ಣ ಕರಗಿತೆ?

Update: 2025-05-31 08:30 IST

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ದಕ್ಷಿಣ ಕನ್ನಡ ಜಿಲ್ಲೆಗೆ ಅಂಟಿರುವ ರಕ್ತ ಕಲೆಗಳನ್ನು ತೊಳೆಯುವ ವಿಫಲ ಪ್ರಯತ್ನದ ಭಾಗವೋ ಎಂಬಂತೆ ಕಳೆದ ಒಂದು ವಾರದಿಂದ ಮಳೆ ಧೋ ಎಂದು ಸುರಿಯುತ್ತಿದೆ. ಈ ಅಕಾಲ ವರ್ಷಧಾರೆಯಿಂದ ನೇತ್ರಾವತಿ ತುಂಬಿ ಹರಿದರೂ, ಇಲ್ಲಿನ ದುಷ್ಕರ್ಮಿಗಳ, ರಾಜಕೀಯ ದುಷ್ಟ ಶಕ್ತಿಗಳ ರಕ್ತದ ದಾಹ ಇಂಗಿಲ್ಲ. ಕೆಲವು ದಿನಗಳ ಹಿಂದೆಯಷ್ಟೇ ಒಬ್ಬ ಅಮಾಯಕನನ್ನು ಕಾರಣವೇ ಇಲ್ಲದೆ ಕ್ರಿಮಿನಲ್‌ಗಳ ಗುಂಪು ಕೊಂದು ಹಾಕಿತು. ಮಳೆಗಾಲ ಹತ್ತಿರವಾಗುತ್ತಿದ್ದ ಹಾಗೆಯೇ, ಅದನ್ನು ಎದುರಿಸುವಲ್ಲಿ ಸಿದ್ಧತೆಗಳು ಬಿರುಸಿನಿಂದ ನಡೆಯಬೇಕಾಗಿತ್ತು. ಆದರೆ ಜಿಲ್ಲೆಯ ಜನಪ್ರತಿನಿಧಿಗಳು ಕೋಮು ರಾಜಕಾರಣಗಳಲ್ಲಿ ಮಗ್ನರಾಗಿದ್ದರು. ಒಳಚರಂಡಿ, ಸೇತುವೆ, ರಸ್ತೆ ಇತ್ಯಾದಿಗಳ ಬಗ್ಗೆ ಮಾತನಾಡಬೇಕಾಗಿದ್ದ ರಾಜಕಾರಣಿಗಳು ಜನಸಾಮಾನ್ಯರನ್ನು ‘ಹಿಂದೂ-ಮುಸ್ಲಿಮ್’ ಎಂದು ದಾರಿ ತಪ್ಪಿಸಿದ್ದರು. ಇಷ್ಟಕ್ಕೂ ಈ ಹಿಂದೆ ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷರೇ ಮಂಗಳೂರಿನ ಜನರಿಗೆ ‘‘ನೀವು ಸೇತುವೆ, ರಸ್ತೆ ಎಂದು ಮಾತನಾಡಬೇಡಿ. ಲವ್‌ಜಿಹಾದ್ ಬಗ್ಗೆ ಯೋಚಿಸಿ’’ ಎಂದು ಕರೆ ನೀಡಿದ್ದರು. ದಕ್ಷಿಣ ಕನ್ನಡಜಿಲ್ಲೆಯಲ್ಲಿ ಕೋಮುಧ್ರುವೀಕರಣದ ಹೆಸರಿನಲ್ಲಿ ರಾಜಕಾರಣಿಗಳು ಮತ ಯಾಚಿಸುತ್ತಾ ಬರುತ್ತಿದ್ದಾರೆಯೇ ಹೊರತು, ಅಭಿವೃದ್ಧಿಯ ಹೆಸರಿನಲ್ಲಿ ಅಲ್ಲ. ಪರಿಣಾಮವಾಗಿ ಮಂಗಳೂರಿನ ಮೂಲಭೂತ ಸೌಕರ್ಯಗಳು ವರ್ಷದಿಂದ ವರ್ಷಕ್ಕೆ ಕಳಪೆ ಕಾರಣಗಳಿಗಾಗಿ ಸುದ್ದಿಯಾಗುತ್ತಿವೆ. ಆದುದರಿಂದಲೇ, ಇದೀಗ ನಿರಂತರ ಸುರಿಯುತ್ತಿರುವ ಮಳೆಯನ್ನು ಎದುರಿಸಲಾಗದೆ ಮಂಗಳೂರು ನಗರ ಕಂಗಾಲಾಗಿದೆ.

ಗುರುವಾರ ರಾತ್ರಿ ಸುರಿದ ಮಳೆಗೆ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ‘ಸ್ಮಾರ್ಟ್ ಸಿಟಿ’ ಭಾಗಶಃ ಮುಳುಗಿ ಹೋಗಿದೆ. ಜನಜೀವನ ಅಸ್ತವ್ಯಸ್ತವಾಗಿದೆ. ಕರ್ನಾಟಕದ ಅಭಿವೃದ್ಧಿಯನ್ನು ಬೆಂಗಳೂರಿನ ಬಳಿಕ ಮಂಗಳೂರು ಎತ್ತಿ ಹಿಡಿಯುತ್ತದೆ ಎಂದು ಹೇಳಿಕೊಂಡು ಬರಲಾಗುತ್ತಿದೆಯಾದರೂ, ಈ ಜಿಲ್ಲೆಯ ಕೋಮು ರಾಜಕಾರಣ ಇಲ್ಲಿನ ಅಭಿವೃದ್ಧಿಗೆ ಭಾರೀ ಹೊಡೆತವನ್ನು ನೀಡುತ್ತಿದೆ. ರಾಜಕಾರಣಿಗಳ ಭ್ರಷ್ಟಾಚಾರ, ನಿಷ್ಕ್ರಿಯತೆ, ಬೇಜವಾಬ್ದಾರಿತನ, ಉಡಾಫೆಗಳೆಲ್ಲವನ್ನು ಹಿಂದುತ್ವದ ಹೆಸರಿನಲ್ಲಿ ಮುಚ್ಚಿ ಹಾಕಲಾಗುತ್ತಿದೆ. ಆದರೆ ಸುರಿಯುತ್ತಿರುವ ಭಾರೀ ಮಳೆ ನೀರಿನಲ್ಲಿ ಮುಚ್ಚಿ ಹಾಕಿದ್ದ ಆ ವೈಫಲ್ಯಗಳೆಲ್ಲ ಎದ್ದು ಕಾಣತೊಡಗಿವೆ. ಆ ವೈಫಲ್ಯಗಳಿಗೆ ಒಂದೇ ರಾತ್ರಿ ನಾಲ್ಕು ಜೀವಗಳು ಬಲಿಯಾಗಿವೆ. ಇನ್ನಿಬ್ಬರು ನಾಪತ್ತೆಯಾಗಿದ್ದಾರೆ. ಮಧ್ಯ ರಾತ್ರಿ ನಗರದ ಬಹುತೇಕ ಭಾಗಗಳನ್ನು ನೀರು ಆವರಿಸಿಕೊಂಡಿತು. ಮನೆಗಳು ಭಾಗಶಃ ಮುಳುಗಿ ಹೋಗಿದ್ದವು. ರಸ್ತೆಗಳಲ್ಲಿ ವಾಹನಗಳು ಚಲಿಸಲಾಗದ ಸ್ಥಿತಿ ನಿರ್ಮಾಣವಾಗಿತ್ತು. ಉಳ್ಳಾಲ ತಾಲೂಕಿನ ಮಂಜನಾಡಿ ಗ್ರಾಮದಲ್ಲಿ ಮನೆಯೊಂದರ ಮೇಲೆ ಗುಡ್ಡ ಕುಸಿದು ಬಿದ್ದ ಪರಿಣಾಮ ಇಬ್ಬರು ಪುಟಾಣಿಗಳ ಸಹಿತ ಮೂವರು ಮೃತಪಟ್ಟಿದ್ದಾರೆ. ಅಲ್ಲದೆ ಈ ಮನೆಯಲ್ಲಿದ್ದ ಗಾಯಗೊಂಡ ಇತರ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳ್ಳಾಲ ತಾಲೂಕಿನ ಬೆಳ್ಮ ಗ್ರಾಮದ ಕಾನಕೆರೆ ಎಂಬಲ್ಲಿ ಗುಡ್ಡ ಜರಿದು ಬಿದ್ದ ಪರಿಣಾಮ ಕಾನಕೆರೆಯ ಹತ್ತು ವರ್ಷದ ಬಾಲಕಿ ಮೃತಪಟ್ಟ ಘಟನೆ ಶುಕ್ರವಾರ ಮುಂಜಾವು ನಡೆದಿದೆ. ಮಂಗಳೂರು ಹೊರವಲಯದ ಉಳ್ಳಾಲಬೈಲ್, ಕೋಟೆಕಾರು, ಬೀರಿ, ಮಿಷನ್ ಸ್ಟ್ರೀಟ್, ಎಕ್ಕೂರು, ಜಪ್ಪಿನಮೊಗರು, ಕೊಟ್ಟಾರ ಚೌಕಿ, ಕುಂಪಲ ಸೇರಿದಂತೆ ನಗರದ ಬಹುತೇಕ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನುಗ್ಗಿ ನೂರಾರು ಮನೆಗಳು ಜಲಾವೃತಗೊಂಡಿವೆ. ಹಲವು ಕಡೆಗಳಲ್ಲಿ ಗುಡ್ಡ ಕುಸಿತ, ತಡೆಗೋಡೆ, ದರೆ ಕುಸಿತ, ಮನೆ ಕುಸಿತದಂತಹ ಘಟನೆಗಳು ನಡೆದಿವೆ. ಜೋಕಟ್ಟೆ ಗ್ರಾಪಂ ಮುಂಭಾಗದ ಗುಡ್ಡ ಕುಸಿದು ಮನೆಯೊಂದು ಬೀಳುವ ಹಂತಕ್ಕೆ ತಲುಪಿದೆ. 10ಕ್ಕೂ ಅಧಿಕ ಕಡೆಗಳಲ್ಲಿ ಮರ ಬಿದ್ದು, ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಕೆತ್ತಿಕಲ್ ಭಾಗದಲ್ಲಿ ಗುಡ್ಡ ಕುಸಿತದಿಂದ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. 200ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ತುಂಡಾಗಿದ್ದು, 40ಕ್ಕೂ ಹೆಚ್ಚು ಮನೆಗಳಿಗೆ ಭಾಗಶಃ ಹಾನಿಯಾಗಿದೆ.

ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಮಂಗಳೂರಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಸುಮಾರು 1,000 ಕೋಟಿ ರೂಪಾಯಿ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಸ್ಥಳೀಯಾಡಳಿತ ಹೇಳುತ್ತಲೇ ಬರುತ್ತಿದೆ. 2016ರಲ್ಲಿ ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಯಿತು. ಐದು ವರ್ಷಗಳಲ್ಲಿ ಅನುಷ್ಠಾನಗೊಳ್ಳಬೇಕಾದ ಯೋಜನೆಗಳು 9 ವರ್ಷ ಕಳೆದರೂ ತನ್ನ ಗುರಿಯನ್ನು ತಲುಪಿಲ್ಲ. ಯೋಜನೆಯ ಗಡುವು ವಿಸ್ತರಣೆಗೊಳ್ಳುತ್ತಲೇ ಹೋಗುತ್ತಿದೆ.ಕೈಗೆತ್ತಿಕೊಂಡ 105 ಕಾಮಗಾರಿಗಳಲ್ಲಿ ಇನ್ನೂ ಎಂಟು ಪ್ರಮುಖ ಕಾಮಗಾರಿಗಳು ಪೂರ್ಣವಾಗಿಲ್ಲ. ಪೂರ್ತಿಗೊಂಡ ಕಾಮಗಾರಿಗಳಲ್ಲಿ ಆಗಿರುವ ಎಡವಟ್ಟುಗಳು ಮಳೆಗಾಲದಲ್ಲಿ ಹಲವು ಸಮಸ್ಯೆಗಳನ್ನು ಸೃಷ್ಟಿಸಿವೆ. ಕೃತಕ ನೆರೆ ಬರುವುದಕ್ಕೆ ಈ ಕಾಮಗಾರಿಗಳಲ್ಲಾಗಿರುವ ಲೋಪಗಳೇ ಬಹುಮುಖ್ಯ ಕಾರಣ ಎಂದು ತಜ್ಞರು ಹೇಳುತ್ತಾರೆ. ಮಂಗಳೂರಿನ ಪಂಪ್‌ವೆಲ್ ವೃತ್ತದ ಮೇಲ್‌ಸೇತುವೆಯಂತೂ ಹತ್ತು ಹಲವು ಕಾರಣಗಳಿಗಾಗಿ ಈಗಲೂ ಸುದ್ದಿಯಲ್ಲಿದೆ. ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಅತಿ ಹೆಚ್ಚು ಟ್ರೋಲ್‌ಗೊಳಗಾದುದು ಈ ಸೇತುವೆ ಕಾರಣದಿಂದ. ಪಂಪ್‌ವೆಲ್ ಮೇಲ್‌ಸೇತುವೆ ಮತ್ತು ಕಟೀಲು ಅವರನ್ನು ಬೆಸೆದ ನೂರಾರು ಜೋಕುಗಳು ಮಂಗಳೂರನ್ನು ಈಗಲೂ ರಂಜಿಸುತ್ತವೆ. ಕಳೆದ ಒಂದು ವಾರದಲ್ಲಿ ಮಂಗಳೂರು ಮಳೆಗೆ ತತ್ತರಿಸುತ್ತಿದ್ದ ಹಾಗೆಯೇ ಕಟೀಲು ಮತ್ತು ಪಂಪ್‌ವೆಲ್ ಜೋಕುಗಳು ಮತ್ತೆ ಜೀವ ಪಡೆದುಕೊಂಡಿವೆ. ಈ ಭಾಗದಲ್ಲಿ ಸೃಷ್ಟಿಯಾಗಿರುವ ಕೃತಕ ನೆರೆಗೆ ಮೇಲ್‌ಸೇತುವೆ ನಿರ್ಮಾಣದಲ್ಲಾದ ಲೋಪಗಳೇ ಕಾರಣ ಎಂದು ನಗರದ ಜನರು ಆಕ್ರೋಶವ್ಯಕ್ತಪಡಿಸುತ್ತಿದ್ದಾರೆ. ಈ ಸೇತುವೆ ನಿರ್ಮಾಣಕ್ಕೆ ಸುದೀರ್ಘ ಸಮಯವನ್ನು ತೆಗೆದುಕೊಳ್ಳಲಾಯಿತು. ಈ ಸೇತುವೆ ನಿರ್ಮಾಣಕ್ಕಾಗಿ ಜನರು ಸಾಕಷ್ಟು ತೊಂದರೆಗಳನ್ನು ಸಹಿಸಿಕೊಂಡಿದ್ದಾರೆ. ಇದೀಗ ಸೇತುವೆ ಪೂರ್ಣಗೊಂಡು ಜನ ಸಂಚಾರಕ್ಕೆ ಬಿಟ್ಟುಕೊಟ್ಟ ಬಳಿಕವೂ ಮಳೆಗಾಲದಲ್ಲಿ ಇನ್ನಷ್ಟು ಸಮಸ್ಯೆಗಳನ್ನು ಅವರು ಸಹಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ನಗರದ ರೈಲ್ವೇ ಕೆಳ ಸೇತುವೆ ಕಾಮಗಾರಿಯೂ ಕುಂಟುತ್ತಾ ಸಾಗುತ್ತಿದ್ದು, ಮಳೆಗಾಲದಲ್ಲಿ ಕೃತಕ ನೆರೆಗೆ ಇದೂ ಕಾರಣವಾಗಿದೆ. ನೇತ್ರಾವತಿ ಜಲಾಭಿಮುಖ ಪ್ರದೇಶ ಅಭಿವೃದ್ಧಿ ಕಾಮಗಾರಿಯಿಂದಾಗಿಯೂ ಹಲವು ಎಡವಟ್ಟುಗಳು ನಡೆದಿವೆ. ಮುಖ್ಯವಾಗಿ, ಕಾಂಡ್ಲಾವನಗಳ ನಾಶ ಪ್ರಕೃತಿಯ ಏರುಪೇರುಗಳಿಗೆ ಕಾರಣವಾಗಿದೆ. ಇದರ ವಿರುದ್ಧ ಪರಿಸರ ಹೋರಾಟಗಾರರು ಪ್ರತಿಭಟನೆ ನಡೆಸಿದ್ದರು. ಮಂಗಳೂರು ಸ್ಮಾರ್ಟ್ ಸಿಟಿಯ ವ್ಯವಸ್ಥಾಪಕ ನಿರ್ದೇಶಕರ ಪ್ರಕಾರ ಈ ಯೋಜನೆಯಡಿ ಎತ್ತಿಕೊಂಡ ಕಾಮಗಾರಿಗಳು ತನ್ನ ಉದ್ದೇಶವನ್ನು ಸಾಧಿಸಿಕೊಂಡಿವೆ. ಹಾಗಾದರೆ, ಮಂಗಳೂರು ನಗರ ಯಾಕೆ

ಆರಂಭದ ಮಳೆಯನ್ನೇ ತಾಳಿಕೊಳ್ಳಲು ವಿಫಲವಾಗಿದೆ? ಸ್ಮಾರ್ಟ್‌ಸಿಟಿಯೆನ್ನುವ ತಗಡಿನ ತುತ್ತೂರಿಯ ಬಣ್ಣ ಯಾಕೆ ಮೊದಲ ಮಳೆಗೇ ಕರಗಿದೆ? ಈ ಪ್ರಶ್ನೆಗೆ ಜನಪ್ರತಿನಿಧಿಗಳು ಉತ್ತರಿಸಬೇಕು.

ಅಭಿವೃದ್ಧಿ ಮತ್ತು ಹಿಂಸಾಚಾರ ಎರಡೂ ಜೊತೆಜೊತೆಯಾಗಿ ಸಾಗಲಾರವು. ಈ ಎರಡು ದೋಣಿಯ ಮೇಲೆ ಕಾಲಿಟ್ಟು ಮುಂದಕ್ಕೆ ಹೊರಟಿರುವ ಮಂಗಳೂರಿನ ಸ್ಮಾರ್ಟ್

ಸಿಟಿ ಮುಳುಗುವುದು ಸಹಜವೇ ಆಗಿದೆ. ಇಂದು ಧರ್ಮದ ಹೆಸರಿನಲ್ಲಿ ದ್ವೇಷವನ್ನು ಕಾರುವುದಕ್ಕಾಗಿ ಸೇರುವ ಜನರು, ನಗರದ ಮೂಲಸೌಕರ್ಯ, ಅಭಿವೃದ್ಧಿಯ ಹೆಸರಿನಲ್ಲಿ ಸೇರಬೇಕಾಗಿದೆ. ಅಭಿವೃದ್ಧಿಗೆ ಒತ್ತಾಯಿಸಿ ಬೀದಿಗಿಳಿದ ಜನರನ್ನು ದಮನಿಸಲು ಅತ್ಯುತ್ಸಾಹ ತೋರಿಸುವ ಪೊಲೀಸ್ ಇಲಾಖೆ, ಧರ್ಮದ ಹೆಸರಿನಲ್ಲಿ ಸಾರ್ವಜನಿಕವಾಗಿ ವಿಷಕಾರುವ ಮಂದಿಯನ್ನು ದಮನಿಸಲು ತನ್ನ ಲಾಠಿಯನ್ನು ಪ್ರಯೋಗಿಸಬೇಕಾಗಿದೆ. ಆಗ ಮಾತ್ರ ಮುಳುಗುವ ಮಂಗಳೂರನ್ನು ಮೇಲೆತ್ತಿ ಉಳಿಸಲು ಸಾಧ್ಯ. ಬೆಳೆಸಲು ಸಾಧ್ಯ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News