ಸಂಪತ್ತು ಶಾಪವಾಗದಿರಲಿ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಸ್ವಾತಂತ್ರ್ಯೋತ್ತರ ಭಾರತವು ಜನಸಂಖ್ಯಾ ಸ್ಫೋಟಕ್ಕೆ ಹೆದರಿದಷ್ಟು, ಪರಮಾಣು ಬಾಂಬಿಗೂ ಹೆದರಿರಲಿಲ್ಲ. ವಿದ್ಯಾರ್ಥಿಗಳ ಪಠ್ಯ ಪುಸ್ತಕಗಳಿಂದ ಹಿಡಿದು ಪತ್ರಿಕೆಗಳ ಮುಖಪುಟಗಳಲ್ಲಿ ಸದಾ ಈ ‘ಸ್ಫೋಟ’ ಸುದ್ದಿಯಾಗುತ್ತಲೇ ಇರುತ್ತಿತ್ತು. ‘ಜನಸಂಖ್ಯಾ ಸ್ಫೋಟ’ ಭಾರತದ ಅತಿ ದೊಡ್ಡ ಸಮಸ್ಯೆ ಎಂಬುದಾಗಿ ಇತ್ತೀಚಿನವರೆಗೂ ನಂಬಿಸಿಕೊಂಡು ಬರಲಾಗಿದೆ. ಜನಸಂಖ್ಯೆಯಲ್ಲಿ ಭಾರತವು ಚೀನಾವನ್ನು ಮೀರಿಸುತ್ತಿದ್ದು, ಇದನ್ನು ಭಾರತದ ಪಾಲಿನ ಹಿನ್ನಡೆಯಾಗಿ ವಿಶ್ಲೇಷಿಸುತ್ತಾ ಬರಲಾಗಿದೆ. ಇದೇ ಹೊತ್ತಿಗೆ ಏರುತ್ತಿರುವ ಜನಸಂಖ್ಯೆಗೆ ನಿಯಂತ್ರಣ ಹೇರಲು ಕಟು ನಿಯಮವನ್ನು ಜಾರಿಗೆ ತಂದಿದ್ದ ಚೀನಾ ಅದರಿಂದ ಹಿಂದೆ ಸರಿದು, ತನ್ನ ಜನಸಂಖ್ಯಾ ನೀತಿಯಿಂದಾಗಿರುವ ದುಷ್ಪರಿಣಾಮಗಳನ್ನು ತಡೆಯಲು ಕ್ರಮ ತೆಗೆದುಕೊಳ್ಳುತ್ತಿದೆ. ವೃದ್ಧರು ಮತ್ತು ಯುವಕರ ಅನುಪಾತದಲ್ಲಿ ಆಗಿರುವ ಅಸಮತೋಲನ ಭವಿಷ್ಯದಲ್ಲಿ ಚೀನಾವನ್ನು ವೃದ್ಧರ ನಾಡಾಗಿ ಬದಲಿಸುವ ಅಪಾಯವನ್ನು ಅದು ಕಂಡುಕೊಂಡಿದೆ. ಒಂದು ಕುಟುಂಬಕ್ಕೆ ಒಂದೇ ಮಗುವಿನಿಂದ ಹಿಂದೆ ಸರಿದು ಅದು ಹೆಚ್ಚು ಮಕ್ಕಳನ್ನು ಹೆರಲು ಪ್ರೋತ್ಸಾಹ ನೀಡತೊಡಗಿದೆ.
ಭಾರತದಲ್ಲಿ ಜನಸಂಖ್ಯೆಯೂ ‘ರಾಜಕೀಯ ವಿಷಯ’ವಾಗಿ ಮಾರ್ಪಟ್ಟಿದೆ. ಇಲ್ಲಿ ರಾಜಕಾರಣಿಗಳು ಒಮ್ಮೊಮ್ಮೆ ‘ಭಾರತದ ಬಡತನಕ್ಕೆ ಒಂದು ನಿರ್ದಿಷ್ಟ ಸಮುದಾಯ ಹೆಚ್ಚು ಹೆಚ್ಚು ಮಕ್ಕಳನ್ನು ಹುಟ್ಟಿಸುತ್ತಿರುವುದೇ ಕಾರಣ’ ಎಂದು ಭಾಷಣ ಬಿಗಿಯುತ್ತಾರೆ. ಇನ್ನೊಮ್ಮೆ ‘ಹಿಂದೂ ಸಮಾಜ ಹೆಚ್ಚು ಹೆಚ್ಚು ಮಕ್ಕಳನ್ನು ಹುಟ್ಟಿಸಬೇಕು’ ಎಂದು ಕರೆ ನೀಡುತ್ತಾರೆ. ಜಾತಿಗಣತಿಯ ವರದಿ ಬಿಡುಗಡೆ ಮಾಡುವ ಸಂದರ್ಭದಲ್ಲಿ ‘ನಮ್ಮ ಜಾತಿಯು ಜನಸಂಖ್ಯೆಯಲ್ಲಿ ಹೆಚ್ಚಿದೆ’ ಎಂದು ವಾದಿಸುತ್ತಾರೆ. ಜನಸಂಖ್ಯೆಯ ಬಗ್ಗೆ ಭಾರತ ಸದಾ ದ್ವಂದ್ವ ನಿಲುವುಗಳನ್ನು ಅನುಸರಿಸುತ್ತಾ ಬಂದಿದೆ. ತನ್ನ ಆರ್ಥಿಕ ನೀತಿ, ವಿಫಲ ಆಡಳಿತ ಇತ್ಯಾದಿಗಳಿಂದ ಹೆಚ್ಚುತ್ತಿರುವ ಬಡತನ, ನಿರುದ್ಯೋಗ ಇವೆಲ್ಲವನ್ನು ಮುಚ್ಚಿಡುವುದಕ್ಕಾಗಿ ಸರಕಾರ ಜನಸಂಖ್ಯೆ ಹೆಚ್ಚಳವನ್ನು ಗುರಾಣಿಯಾಗಿ ಬಳಸುತ್ತಾ ಬಂದಿದೆ. ನಿಜಕ್ಕೂ ಭಾರತದಲ್ಲಿ ಜನಸಂಖ್ಯೆ ಹೆಚ್ಚಳವಾಗಿದೆಯೆ? ಈ ಹೆಚ್ಚಳ ಹೀಗೆ ಮುಂದುವರಿದರೆ ಭಾರತದ ಸ್ಥಿತಿ ಏನಾಗಬಹುದು ಎನ್ನುವ ಅಂಶದತ್ತ ವಿಶ್ವಸಂಸ್ಥೆಯ ನೂತನ ಜನಸಂಖ್ಯಾ ವರದಿ ಬೆಳಕು ಚೆಲ್ಲಿದೆ. ವರ್ಷಾಂತ್ಯದೊಳಗೆ ಭಾರತದ ಜನಸಂಖ್ಯೆ 146 ಕೋಟಿಗೆ ಏರಲಿದೆ ಎನ್ನುವ ಅಂಶವನ್ನು ಈ ವರದಿ ಹೇಳುತ್ತಲೇ, ದೇಶದ ಫರ್ಟಿಲಿಟಿ ಅಥವಾ ಸಂತಾನೋತ್ಪತ್ತಿ ದರ ಗಂಭೀರವಾಗಿ ಇಳಿಕೆಯಾಗುತ್ತಿರುವ ಬಗ್ಗೆ ಅದು ಕಳವಳ ವ್ಯಕ್ತಪಡಿಸಿದೆ.
ಭಾರತವು ಪ್ರಸಕ್ತ ಜಗತ್ತಿನ ಅತ್ಯಧಿಕ ಜನಸಂಖ್ಯೆಯಿರುವ ರಾಷ್ಟ್ರವಾಗಿದೆ. ಇದನ್ನು ಹೆಮ್ಮೆಯಿಂದ ಹೇಳಬೇಕೋ ಕೀಳರಿಮೆಯಿಂದ ಹೇಳಬೇಕೋ ಎನ್ನುವುದರ ಬಗ್ಗೆ ಭಾರತಕ್ಕೆ ಇನ್ನೂ ಗೊಂದಲವಿದೆ. ಭಾರತದ ಜನಸಂಖ್ಯೆ 170 ಕೋಟಿಯವರೆಗೆ ಏರಿಕೆಯಾಗಲಿದ್ದು, ಈಗಿನಿಂದ 40 ವರ್ಷಗಳ ಬಳಿಕ ಅದು ಕುಸಿಯುವ ಸಾಧ್ಯತೆಗಳಿವೆ ಎನ್ನುವುದನ್ನು ಯುಎನ್‌ಎಫ್‌ಪಿಎ ಹೇಳುತ್ತದೆ. ಸದ್ಯ ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ. 24ರಷ್ಟು ಮಂದಿ 14 ವರ್ಷದ ಒಳಗಿನವರು. ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ. 68ರಷ್ಟು ಮಂದಿ ದುಡಿಯುವ ವರ್ಗದ ವಯಸ್ಸಿನವರಾಗಿದ್ದಾರೆ. ಇದು ನಿಜಕ್ಕೂ ದೇಶ ನಿಟ್ಟುಸಿರು ಬಿಡಬೇಕಾದ ವಿಷಯವಾಗಿದೆ. ಈ ಯುವ ಸಮೂಹವನ್ನು ಭಾರತವು ಸಂಪನ್ಮೂಲವಾಗಿ ಪರಿವರ್ತಿಸುವಲ್ಲಿ ಸೋಲುತ್ತಿದೆ ಎನ್ನುವುದನ್ನು ವಿಶ್ವಸಂಸ್ಥೆ ಬೆಟ್ಟು ಮಾಡುತ್ತಿದೆ. ಭಾರತದ ವಯೋವೃದ್ಧರ ಸಂಖ್ಯೆ ದೇಶದ ಒಟ್ಟು ಜನಸಂಖ್ಯಾ ಬಲದ ಶೇ. 5.7ರಷ್ಟಿದೆ. 2025ರಲ್ಲಿ ಭಾರತೀಯರ ಸರಾಸರಿ ಜೀವಿತಾವಧಿಯು ಪುರುಷರಿಗೆ 71 ವರ್ಷ ಹಾಗೂ ಮಹಿಳೆಯರಿಗೆ 74 ವರ್ಷವಾಗಿರುತ್ತದೆ ಎಂದು ವರದಿ ವಿವರಿಸುತ್ತದೆ. ಇದೇ ಸಂದರ್ಭದಲ್ಲಿ ಭಾರತದಲ್ಲಿ ಏರುತ್ತಿರುವ ಜನಸಂಖ್ಯೆ ಬಿಕ್ಕಟ್ಟಾಗಿಲ್ಲ, ಬದಲಿಗೆ ಫಲವಂತಿಕೆಯ ಕೊರತೆ ನಿಜವಾದ ಬಿಕ್ಕಟ್ಟಾಗಿದೆ. ಯಾಕೆಂದರೆ ಭವಿಷ್ಯದಲ್ಲಿ ಇದು ದೇಶದ ದುಡಿಯುವ ವರ್ಗದ ಪ್ರಮಾಣವನ್ನು ಇಳಿಕೆ ಮಾಡುವ ಸಾಧ್ಯತೆಗಳಿವೆ. ಭಾರತದಲ್ಲಿ ಪ್ರತೀ ಮಹಿಳೆಯ ಸರಾಸರಿ ಫಲವಂತಿಕೆ ದರವು 2.1 ಇದ್ದುದು ಈಗ 1.9ಕ್ಕೆ ಕುಸಿದಿದೆ. ಅಂದರೆ ತಲೆಮಾರಿನಿಂದ ತಲೆಮಾರಿಗೆ ಜನ್ಮ ನೀಡುವ ಸಾಮರ್ಥ್ಯ ಭಾರತೀಯ ಮಹಿಳೆಯರಲ್ಲಿ ಕುಸಿಯುತ್ತಿದೆ ಅಥವಾ ಇಂದಿನ ಕುಟುಂಬ ಹೆಚ್ಚು ಮಕ್ಕಳನ್ನು ಹೊಂದಲು ಬಯಸುತ್ತಿಲ್ಲ. 1960ರಲ್ಲಿ ಭಾರತದ ಜನಸಂಖ್ಯೆ 43.60 ಕೋಟಿ ಆಗಿತ್ತು. ಆಗ ಸರಾಸರಿ ಓರ್ವ ಮಹಿಳೆಗೆ ಆರು ಮಕ್ಕಳಿದ್ದವು. ಅದು ಈಗ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಭವಿಷ್ಯದಲ್ಲಿ ಭಾರತದ ಜನಸಂಖ್ಯೆಯ ಇಳಿಕೆಗೆ ಈ ಫರ್ಟಿಲಿಟಿ ದರ ಕುಸಿತ ಕಾರಣವಾಗಲಿದೆ. ಜನಸಂಖ್ಯೆ ಸಂಪನ್ಮೂಲವಾದಾಗ ಮಾತ್ರ ದೇಶದ ಅಭಿವೃದ್ಧಿಯಾಗಲು ಸಾಧ್ಯ. ಆದುದರಿಂದ, ಈಗ ಇರುವ ಯುವ ಸಮೂಹವನ್ನು ಸಮರ್ಪಕ ಉದ್ಯೋಗ ಮತ್ತು ನೀತಿಗಳ ಮೂಲಕ ಸರಕಾರ ಬೆಂಬಲಿಸಿದರೆ ಮಾತ್ರ ಇವರು ಭವಿಷ್ಯದಲ್ಲಿ ಭಾರತದ ಅಭಿವೃದ್ಧಿಗೆ ಪೂರಕವಾಗಲಿದ್ದಾರೆ.
ಭಾರತದ ಸಂಪನ್ಮೂಲಕ್ಕೆ ಹೋಲಿಸಿದರೆ, ಇಲ್ಲಿರುವ ಜನಸಂಖ್ಯೆ ಭಾರವೇನೂ ಅಲ್ಲ ಎಂಬುದನ್ನು ಆರ್ಥಿಕ ತಜ್ಞರು ವಿಶ್ಲೇಷಿಸುತ್ತಲೇ ಬಂದಿದ್ದಾರೆ. ಸಂಪನ್ಮೂಲದ ಸರಿಯಾದ ಹಂಚಿಕೆಯಾಗದೇ ಇರುವುದೇ ಭಾರತದಲ್ಲಿ ಬಡತನ ಹೆಚ್ಚುವುದಕ್ಕೆ ಮುಖ್ಯ ಕಾರಣವಾಗಿದೆ. 2024ರ ‘ಫೋರ್ಬ್ಸ್’ ಜಾಗತಿಕ ಅತಿ ಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿ ಏಶ್ಯದ ನಂಬರ್ ವನ್ ಶ್ರೀಮಂತರೆಂದು ಗುರುತಿಸಲ್ಪಟ್ಟಿದ್ದರು. ಇದೇ ಪಟ್ಟಿಯ ಆಧಾರದಲ್ಲಿ ಜಗತ್ತಿನ ಅತಿ ಶ್ರೀಮಂತರ ಪಟ್ಟಿಯಲ್ಲಿ 200 ಭಾರತೀಯರು ಸ್ಥಾನ ಪಡೆದಿದ್ದಾರೆ. 2023ಕ್ಕೆ ಹೋಲಿಸಿದರೆ 2024ರಲ್ಲಿ 39 ಮಂದಿ ಬಿಲಿಯಾಧೀಶರು ಪಟ್ಟಿಗೆ ಹೊಸದಾಗಿ ಸೇರ್ಪಡೆಗೊಂಡಿದ್ದಾರೆ. ಭಾರತದಲ್ಲಿ ಶೇ. 1ರಷ್ಟು ಅತಿ ಶ್ರೀಮಂತರು ಈ ದೇಶದ 40ರಷ್ಟು ಸಂಪತ್ತನ್ನು ಕೈವಶ ಮಾಡಿಕೊಂಡಿದ್ದಾರೆ. 10,000 ಶ್ರೀಮಂತ ವ್ಯಕ್ತಿಗಳು 22.6 ಶತಕೋಟಿ ರೂಪಾಯಿ ಸಂಪತ್ತನ್ನು ಹೊಂದಿದ್ದಾರೆ. ವಿಪರ್ಯಾಸವೆಂದರೆ, ಈ ಬಿಲಿಯಾಧೀಶರ ಸಂಖ್ಯೆ ಹೆಚ್ಚುತ್ತಾ ಹೋದಂತೆಯೇ ಬಡವರ ಸಂಖ್ಯೆಯೂ ದೇಶದಲ್ಲಿ ಹೆಚ್ಚುತ್ತಿದೆ. ಈ ದೇಶದ ಬಿಲಿಯನೇರ್‌ಗಳ ಮೇಲೆ ಶೇ. 1ರಷ್ಟು ಸಂಪತ್ತಿನ ತೆರಿಗೆಯನ್ನು ವಿಧಿಸಿದರೂ ಇಲ್ಲಿನ ಆರೋಗ್ಯ ಮಿಷನ್‌ಗೆ ಸುಮಾರು ಮೂರು ವರ್ಷಗಳ ಕಾಲ 36,960 ಕೋಟಿ ರೂಪಾಯಿಗಳನ್ನು ಒದಗಿಸಬಹುದು. ಶೇ. 2ರಷ್ಟು ತೆರಿಗೆಯನ್ನು ವಿಧಿಸುವ ಮೂಲಕ ಈ ದೇಶದ ಅಪೌಷ್ಟಿಕತೆಯನ್ನು ನಿವಾರಿಸಬಹುದು ಎಂದು ಆರ್ಥಿಕತಜ್ಞರು ಹೇಳುತ್ತಾರೆ. ಅಂದರೆ, ಒಂದೆಡೆ ಶೇಖರವಾಗಿರುವ ಸಂಪತ್ತನ್ನು ಇತರರಿಗೆ ಹಂಚುವ ಮೂಲಕ ಜನಸಂಖ್ಯೆಯನ್ನು ಸದೃಢಗೊಳಿಸುತ್ತಾ ಹೋದರೆ, ಅದೇ ಜನಸಂಖ್ಯೆ ದೇಶದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತದೆ. ಹುಟ್ಟಿದ ಕೂಸನ್ನು ಇತರರ ತಟ್ಟೆಯಿಂದ ಅನ್ನ ಕಸಿಯಬಂದ ಕೈಗಳೆಂದು ಭಾವಿಸದೆ, ಈ ದೇಶದ ದುಡಿಯುವ ಶಕ್ತಿಗೆ ಇನ್ನಷ್ಟು ಬಲ ನೀಡಲು ಬಂದ ಕೈಗಳೆಂದು ಭಾವಿಸಿ ಸರಕಾರ ತನ್ನ ನೀತಿಗಳನ್ನು ರೂಪಿಸಬೇಕು. ಸಂಪನ್ಮೂಲ ಸರಿಯಾಗಿ ವಿತರಣೆಯಾದಾಗ ಜನಸಂಖ್ಯೆಯೂ ದೇಶದ ಸಂಪತ್ತಾಗಿ ಪರಿವರ್ತನೆಯಾಗುತ್ತದೆ. ಇಲ್ಲವಾದರೆ, ನಮ್ಮ ಪಾಲಿನ ಸಂಪತ್ತೇ ನಮಗೆ ಶಾಪವಾಗಿ ಬಿಡಬಹುದು.