×
Ad

ಭಾರತವನ್ನು ಎರಡಾಗಿ ಒಡೆದ ಮೋದಿಯ ಆರ್ಥಿಕ ನೀತಿ

Update: 2025-07-10 06:42 IST

PC: PTI 

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಮೋದಿ ನೇತೃತ್ವದ ಎನ್‌ಡಿಎ ಸರಕಾರದೊಳಗಿದ್ದುಕೊಂಡೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಆಗಾಗ ವಿರೋಧ ಪಕ್ಷದ ಪಾತ್ರ ವಹಿಸುವುದಿದೆ. ಸರಕಾರದ ವೈಫಲ್ಯಗಳ ಕಡೆಗೆ ಬೊಟ್ಟು ಮಾಡುತ್ತಾ ವಿರೋಧ ಪಕ್ಷದ ನಾಯಕರಿಗೆ ಅವರ ಹೊಣೆಗಾರಿಕೆಗಳನ್ನು ಜ್ಞಾಪಿಸುತ್ತಿರುತ್ತಾರೆ. ಎರಡು ದಿನಗಳ ಹಿಂದೆ, ಈ ದೇಶದಲ್ಲಿ ಬಡವರ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಅವರು ತೀವ್ರ ಕಳವಳವನ್ನು ವ್ಯಕ್ತಪಡಿಸಿದ್ದರು. 'ದೇಶದಲ್ಲಿ ಬಡತನ ತೀವ್ರ ಪ್ರಮಾಣದಲ್ಲಿ ಇಳಿಕೆಯಾಗಿದೆ' ಎಂದು ವಿಶ್ವಬ್ಯಾಂಕ್ ತನ್ನ ಶಿಫಾರಸನ್ನು ನೀಡಿದ ಬೆನ್ನಿಗೇ ಗಡ್ಕರಿ ತಮ್ಮ ಈ ಕಳವಳವನ್ನು ವ್ಯಕ್ತಪಡಿಸಿದ್ದಾರೆ. 'ದೇಶದಲ್ಲಿ ಬಡವರ ಸಂಖ್ಯೆ ಏರಿಕೆಯಾಗುತ್ತಿದೆ. ಕೇವಲ ಕೈಬೆರಳೆಣಿಕೆಯ ಮಂದಿಯ ಬಳಿ ಸಂಪತ್ತು ಕೇಂದ್ರೀಕೃತವಾಗುತ್ತಿದೆ'' ಎಂದು ಮಹಾರಾಷ್ಟ್ರದ ನಾಗಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು. “ಉದ್ಯೋಗಗಳನ್ನು ಸೃಷ್ಟಿಸುವ ಹಾಗೂ ಗ್ರಾಮೀಣ ಪ್ರದೇಶಗಳನ್ನು ಮೇಲಕ್ಕೆತ್ತಲು ಸಹಾಯವಾಗುವಂತಹ ರೀತಿಯಲ್ಲಿ ದೇಶದ ಆರ್ಥಿಕತೆಯು ಬೆಳವಣಿಗೆಯಾಗಬೇಕಾಗಿದೆ'' ಎಂದು ಗಡ್ಕರಿ ಆಗ್ರಹಿಸಿದ್ದರು. ಸ್ವತಃ ಸರಕಾರದ ಭಾಗವಾಗಿರುವ ನಿತಿನ್‌ ಗಡ್ಕರಿಯವರ ಈ ಆಗ್ರಹವು ಪ್ರಧಾನಿ ಮೋದಿಯವರ ಆರ್ಥಿಕ ನೀತಿಯ ವಿರುದ್ಧ ಮಾಡಿದ ನೇರ ದಾಳಿಯಾಗಿದೆ. ಬಿಲಿಯಾಧಿಪತಿಗಳು ಇನ್ನಷ್ಟು ಶ್ರೀಮಂತರಾಗುವುದು ಮತ್ತು ಬಡವರು ಇನ್ನಷ್ಟು ಬಡವರಾಗುವುದನ್ನು ಅಭಿವೃದ್ಧಿಯೆಂದು ಕರೆಯಲಾಗುವುದಿಲ್ಲ ಎನ್ನುವುದನ್ನು ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಶ್ರೀಮಂತರು ಮತ್ತು ಬಡವರ ನಡುವೆ ಈ ಅಂತರ ಹೆಚ್ಚುವುದಕ್ಕೆ ಮೋದಿ ನೇತೃತ್ವದ 'ಅದಾನಿ, ಅಂಬಾನಿ ಪರ'ವಾಗಿರುವ ಆಡಳಿತ ನೀತಿಯೇ ಕಾರಣ ಎನ್ನುವುದನ್ನು ಅವರು ಈ ಮೂಲಕ ಸ್ಪಷ್ಟಪಡಿಸಿದ್ದಾರೆ.

ಬಿಹಾರ ಚುನಾವಣೆಗೆ ಸಿದ್ಧತೆ ನಡೆಯುತ್ತಿರುವಂತೆಯೇ ವಿಶ್ವಬ್ಯಾಂಕ್ 'ಭಾರತದಲ್ಲಿ ಶೇ. 5.3ರಷ್ಟು ಜನ ಮಾತ್ರ ಬಡತನ ರೇಖೆಗಿಂತ ಕೆಳಗಿದ್ದಾರೆ' ಎಂದು ಹೇಳಿತು. ಸುಮಾರು 25 ಕೋಟಿಗೂ ಅಧಿಕ ಜನರು ಮೋದಿ ಸರಕಾರದ ಆಡಳಿತದಲ್ಲಿ ಬಡತನದಿಂದ ಮೇಲಕ್ಕೆ ಬಂದಿದ್ದಾರೆ ಎನ್ನುವುದನ್ನು ವಿಶ್ವಬ್ಯಾಂಕ್ ತನ್ನ ವರದಿಯಲ್ಲಿ ಪ್ರತಿಪಾದಿಸಿತ್ತು. ವಿಶ್ವಬ್ಯಾಂಕ್ ಹೇಳಿರುವುದನ್ನು ಭಾರತದ ನೀತಿ ಆಯೋಗದ ಮುಖ್ಯಸ್ಥರು 2024ರಲ್ಲೇ ಘೋಷಿಸಿದ್ದರು. ಬಡತನವನ್ನು ಇಲ್ಲವಾಗಿಸಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕಾಗಿ ಆಯೋಗವು ಭಾರತದಲ್ಲಿ ಬಡತನವನ್ನು ಅಳೆಯುವ ಮಾನದಂಡವನ್ನೇ ಬದಲಿಸಿತು. ಪರಿಣಾಮವಾಗಿ ಭಾರತ ಜಾಗತಿಕವಾಗಿ ಹಸಿವು ಸೂಚ್ಯಂಕದಲ್ಲಿ ಅತ್ಯಂತ ಕಳಪೆ ಸಾಧನೆಗಳನ್ನು ಮಾಡಿದ್ದರೂ ಬಡವರ ಸಂಖ್ಯೆ ಇಳಿಕೆಯಾಗಿದೆ. 2011ರಲ್ಲಿ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ 122 ದೇಶಗಳಲ್ಲಿ ಭಾರತವು 67ನೇ ಸ್ಥಾನದಲ್ಲಿದ್ದರೆ 2016ರಲ್ಲಿ ಅದು 97ನೇ ಸ್ಥಾನಕ್ಕೆ ಕುಸಿದಿತ್ತು. 2024ರಲ್ಲಿ ಭಾರತವು ಹಸಿವಿನ ಸೂಚ್ಯಂಕದಲ್ಲಿ 105ನೇ ಸ್ಥಾನವನ್ನು ತಲುಪಿದೆ. ಇದೇ ಸಂದರ್ಭದಲ್ಲಿ ಭಾರತದಲ್ಲಿ ಬಿಲಿಯಾಧೀಶರ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ ಎನ್ನುವುದು ಇನ್ನೊಂದು ವಿಪರ್ಯಾಸ, ಕೋವಿಡ್ ಕಾಲದಲ್ಲಿ ಭಾರತದ ಬಹುತೇಕ ಉದ್ದಿಮೆಗಳು ನೆಲಕಚ್ಚಿದ್ದವು. ಸಾವಿರಾರು ಜನರು ನಿರುದ್ಯೋಗಿಗಳಾದರು. ಆದರೆ ಈ ಅವಧಿಯಲ್ಲಿ ಅಂಬಾನಿ ಮತ್ತು ಅದಾನಿಗಳ ಶ್ರೀಮಂತಿಕೆಗೆ ಯಾವುದೇ ಧಕ್ಕೆಯುಂಟಾಗಲಿಲ್ಲ. ವಿಶ್ವದ ಅತಿ ಶ್ರೀಮಂತರ ಪಟ್ಟಿಯಲ್ಲಿ ಅವರು ತುತ್ತ ತುದಿಯಲ್ಲಿದ್ದರು.

ಹಾಗಾದರೆ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಕಳೆದ ಒಂದು ದಶಕದಲ್ಲಿ ಸಾಧಿಸಿದ್ದಾದರೂ ಏನು? ಸ್ವಿಸ್ ಬ್ಯಾಂಕಿನಿಂದ ಕಪ್ಪು ಹಣವನ್ನು ತರುತ್ತೇನೆ ಎಂದವರು ನೋಟು ನಿಷೇಧದ ಹೆಸರಿನಲ್ಲಿ ಈ ದೇಶದ ಜನಸಾಮಾನ್ಯರ ಜೇಬಿನಲ್ಲಿರುವ ಹಣವನ್ನು ಬ್ಯಾಂಕಿಗೆ ತುಂಬಿಸಿದರು. ಪರಿಣಾಮವಾಗಿ ದೇಶದ ಲಕ್ಷಾಂತರ ಜನರು ತಮ್ಮದೇ ಹಣಕ್ಕಾಗಿ ಬ್ಯಾಂಕಿನ ಮುಂದೆ ಕ್ಯೂ ನಿಲ್ಲುವ ಸ್ಥಿತಿ ನಿರ್ಮಾಣವಾಯಿತು. ನೋಟುನಿಷೇಧವು ಈ ದೇಶದ ಆರ್ಥಿಕತೆಯ ಮೇಲೆ ಭಾರೀ ದುಷ್ಪರಿಣಾಮವನ್ನು ಉಂಟು ಮಾಡಿತ್ತು. ದೇಶದೊಳಗಿರುವ ಕಪ್ಪು ಹಣವನ್ನು ಹೊರಗೆ ತರಲು 'ನೋಟು ನಿಷೇಧ' ಮಾಡಲಾಯಿತು ಎಂದು ಪ್ರಧಾನಿ ಮೋದಿಯವರು ಹೇಳಿಕೊಂಡರಾದರೂ, ಈವರೆಗೆ ವಶಪಡಿಸಿಕೊಂಡ ಕಪ್ಪು ಹಣದ ವಿವರವನ್ನು ದೇಶಕ್ಕೆ ನೀಡಿಲ್ಲ. ನೋಟು ನಿಷೇಧದಿಂದ ಎಷ್ಟು ಕಪ್ಪು ಹಣ ಬಂತು ಎನ್ನುವ ವಿವರಗಳನ್ನು ನೀಡಲು ಅವರು ಸಂಪೂರ್ಣ ವಿಫಲರಾಗಿದ್ದಾರೆ. ಇದೇ ಸಂದರ್ಭದಲ್ಲಿ ಸ್ವಿಸ್ ಬ್ಯಾಂಕ್ ನಲ್ಲಿ ಭಾರತೀಯರ ಹಣವು 2024ರಲ್ಲಿ ಮೂರು ಪಟ್ಟು ಹೆಚ್ಚಾಗಿದೆ ಎಂದು ಸ್ವಿಸ್ ನ್ಯಾಶನಲ್ ಬ್ಯಾಂಕ್ ಬಹಿರಂಗಪಡಿಸಿದೆ. 2021ರ ನಂತರ ಸ್ವಿಸ್ ಬ್ಯಾಂಕ್‌ ಗಳಲ್ಲಿ ಭಾರತೀಯ ಗ್ರಾಹಕರು ಇಟ್ಟಿರುವ ಠೇವಣಿ ಮೊತ್ತ ಶೇ. 11ರಷ್ಟು ಏರಿಕೆಯಾಗಿದೆ. ಸ್ವಿಸ್ ಬ್ಯಾಂಕ್‌ನಿಂದ ಕಪ್ಪು ಹಣ ತರುವುದಂತೂ ದೂರದ ಮಾತಾಯಿತು. ನೋಟು ನಿಷೇಧಕ್ಕಾಗಿ ಈ ದೇಶದ ಜನರು ಅನುಭವಿಸಿದ ನಾಶ, ನಷ್ಟ, ದೇಶದ ಒಳಿತಿಗಾಗಿ ಎಂದು ಅವರು ಮಾಡಿದ ಬಲಿದಾನಗಳೆಲ್ಲವೂ ಈ ಮೂಲಕ ವ್ಯರ್ಥವಾದವು.

ಇಂದು ದೇಶದ ಶೇ.1ರಷ್ಟು ಶ್ರೀಮಂತರು ದೇಶದ ಒಟ್ಟು ಸಂಪತ್ತಿನ ಶೇ. 40ರಷ್ಟು ಭಾಗವನ್ನು ಹೊಂದಿದ್ದಾರೆ ಎಂದು ಆಕ್ಸ್ಫಾಮ್ ವರದಿ ಹೇಳುತ್ತದೆ. ಆ ವರದಿಯ ಪ್ರಕಾರ ಭಾರತದ ಕೇವಲ 10 ಅತಿ ಶ್ರೀಮಂತರಿಗೆ ಶೇಕಡ 5ರಷ್ಟು ತೆರಿಗೆಯನ್ನು ವಿಧಿಸಿದರೆ, ಅರ್ಧದಲ್ಲೇ ಶಾಲೆ ತೊರೆದ ಅಷ್ಟೂ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸಬಹುದು. 2017-2021ರ ಅವಧಿಯಲ್ಲಿ ಕೇವಲ ಒಬ್ಬ ಗೌತಮ್ ಅದಾನಿಯ ಮೇಲೆ ತೆರಿಗೆ ವಿಧಿಸಿದ್ದಿದ್ದರೆ ಅದು 50 ಲಕ್ಷ ಪ್ರಾಥಮಿಕ ಶಾಲಾ ಶಿಕ್ಷಕರನ್ನು ನೇಮಿಸಿಕೊಳ್ಳಲು ಸಾಕಾಗುತ್ತಿತ್ತು ಎಂದು ವರದಿ ಹೇಳಿತ್ತು. ಭಾರತದ ಅಷ್ಟೂ ಬಿಲಿಯಾಧಿಪತಿಗಳ ಸಂಪತ್ತಿನ ಮೇಲೆ ಒಮ್ಮೆಗೆ ಶೇ. 2ರಷ್ಟು ತೆರಿಗೆ ವಿಧಿಸಿದರೆ, ಮೂರು ವರ್ಷಗಳವರೆಗೆ ದೇಶದ ಅಪೌಷ್ಟಿಕತೆಯ ನಿವಾರಣೆಗಾಗಿ

40,423 ಕೋಟಿ ರೂಪಾಯಿಯನ್ನು ಒದಗಿಸಿದಂತಾಗುತ್ತದೆ ಎಂದು ವರದಿ ಬೆಟ್ಟು ಮಾಡಿ ತೋರಿಸಿತ್ತು. ಭಾರತದಲ್ಲಿ ಹೆಚ್ಚುತ್ತಿರುವ ಬಿಲಿಯಾಧಿಪತಿಗಳನ್ನು ತೋರಿಸಿ ಈ ದೇಶ ಅಭಿವೃದ್ಧಿಯಾಗುತ್ತಿದೆ ಎಂದು ನಂಬಿಸಲಾಗುತ್ತಿದೆ. ಆದರೆ, ಬಡವರನ್ನು ಇನ್ನಷ್ಟು ಬಡವರನ್ನಾಗಿಸಿ ಬಿಲಿಯಾಧಿಪತಿಗಳನ್ನು ಇಲ್ಲಿ ಪೋಷಿಸಲಾಗುತ್ತಿದೆ. ಮೋದಿ ಆಡಳಿತ ಕಳೆದ ಒಂದು ದಶಕದಿಂದ ಇದನ್ನೇ ಮಾಡುತ್ತಾ ಬಂದಿದೆ. ಆದುದರಿಂದಲೇ, ದೇಶ ಆರ್ಥಿಕವಾಗಿ ಜರ್ಜರಿತವಾಗಿದೆ. ಇದನ್ನು ಉಲ್ಲೇಖಿಸಿ ಗಡ್ಕರಿ ತಮ್ಮ ಕಳವಳನ್ನು ವ್ಯಕ್ತಪಡಿಸಿದ್ದಾರೆ. ಈ ಅಸಮಾನತೆಯನ್ನು ಸರಿದೂಗಿಸದೇ ಇದ್ದರೆ ಭಾರತ ಅತಿ ಶ್ರೀಮಂತರು ಮತ್ತು ಬಡವರು ಎಂದು ಸ್ಪಷ್ಟವಾಗಿ ವಿಭಜನೆಯಾಗುವುದಕ್ಕೆ ಹೆಚ್ಚು ದಿನ ಬೇಕಾಗಿಲ್ಲ. ಸದ್ಯದ ಭಾರತದ ಈ ಸ್ಥಿತಿಗೆ ಯಾರು ಕಾರಣ ಎನ್ನುವುದು ಗಡ್ಕರಿಯವರಿಗೆ ತಿಳಿಯದ ವಿಷಯವೇನೂ ಅಲ್ಲ.

ಆದುದರಿಂದ, ತಮ್ಮ ಕಳವಳವನ್ನು ಪ್ರಧಾನಮಂತ್ರಿ ಮೋದಿ ಮತ್ತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಜೊತೆಗೆ ಹಂಚಿಕೊಂಡು, ಅದಕ್ಕೆ ಪರಿಹಾರವನ್ನು ಹುಡುಕಬೇಕಾಗಿದೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News