×
Ad

ಕುಡಿಯುವ ನೀರಿಗೆ ವಿಷ: ಯಾರು ಹೊಣೆ?

Update: 2025-08-04 07:09 IST

ಆರೋಪಿಗಳಾದ ಸಾಗರ ಪಾಟೀಲ/ಕೃಷ್ಣ ಮಾದರ/ನಾಗನಗೌಡ ಪಾಟೀಲ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ದೇಶವಿರೋಧಿ, ಜೀವವಿರೋಧಿ ಶಕ್ತಿಗಳು ಎಸಗಿರುವ ಕೃತ್ಯಕ್ಕೆ ನಾಡು ಬೆಚ್ಚಿ ಬಿದ್ದಿದೆ. ಇಲ್ಲಿನ ಸರಕಾರಿ ಶಾಲೆಯೊಂದರ ಕುಡಿಯುವ ನೀರಿನ ಟ್ಯಾಂಕ್‌ಗೆ ದುಷ್ಕರ್ಮಿಗಳು ವಿಷ ಬೆರೆಸಿದ್ದಾರೆ. ಈ ನೀರನ್ನು ಕುಡಿದ ಹಲವು ಮಕ್ಕಳು ಅಸ್ವಸ್ಥರಾಗಿದ್ದಾರೆ. ತನಿಖೆ ನಡೆದಾಗ ಹೊರ ಬಿದ್ದ ಸತ್ಯ ಇನ್ನಷ್ಟು ಭೀಕರವಾಗಿದೆ. ಈ ದುಷ್ಕೃತ್ಯದ ನೇತೃತ್ವ ವಹಿಸಿದಾತ ಶ್ರೀರಾಮಸೇನೆ ಸಂಘಟನೆಯ ಮುಖಂಡ ಪ್ರಮುಖ ಆರೋಪಿ ಸಂಘಟನೆಯ ತಾಲೂಕು ಅಧ್ಯಕ್ಷ. ಈತನ ಕೃತ್ಯಕ್ಕೆ ನೆರವಾದರು ಆ ಸಂಘಟನೆಯ ಉಳಿದ ಕಾರ್ಯಕರ್ತರು. ಈ ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯ ಮುಸ್ಲಿಮ್ ಧರ್ಮಕ್ಕೆ ಸೇರಿರುವುದೇ ಕೃತ್ಯ ಎಸಗಲು ಮುಖ್ಯ ಕಾರಣ. 13 ವರ್ಷದಿಂದ ಮುಖ್ಯ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಸುಲೈಮಾನ್ ಎಂಬವರನ್ನು ಕೆಲಸದಿಂದ ವಜಾಗೊಳಿಸುವುದಕ್ಕಾಗಿ ದುಷ್ಕರ್ಮಿಗಳು ನೀರಿಗೆ ವಿಷ ಬೆರೆಸಿದ್ದಾರೆ. ತುಸು ಏರು ಪೇರಾಗಿದ್ದರೂ ಅಷ್ಟೂ ಮಕ್ಕಳು ಸಾಯಬೇಕಾಗಿತ್ತು. ತನಿಖೆ ನಡೆಸಿದ ಪೊಲೀಸರು ಎಲ್ಲಾ ಆರೋಪಿಗಳನ್ನು ಬಂಧಿಸಿದ್ದಾರೆ. ಶ್ರೀರಾಮನ ಹೆಸರಿನಲ್ಲಿ ನಾಡಿಗೆ ದ್ವೇಷದ ವಿಷವನ್ನು ಹಂಚುತ್ತಾ ಬಂದಿರುವ ಪ್ರಮೋದ್ ಮುತಾಲಿಕ್ ನೇತೃತ್ವದ ಶ್ರೀ ರಾಮಸೇನೆ ಸಂಘಟನೆಯ ಕಾರ್ಯಕರ್ತರು ಶಾಲೆಯೊಂದರ ಕುಡಿಯುವ ನೀರಿಗೆ ವಿಷ ಹಾಕುವುದು ಆಘಾತಕಾರಿ ವಿಷಯವೇನೂ ಅಲ್ಲ. ಆ ಸಂಘಟನೆಯ ಕಾರ್ಯಕರ್ತರು ತಮ್ಮ ದುರುದ್ದೇಶ ಸಾಧಿಸಲು ಎಂತಹ ಹೀನ ಕೃತ್ಯಕ್ಕೂ ಇಳಿಯಬಲ್ಲರು ಎನ್ನುವುದು ಪದೇ ಪದೇ ಸಾಬೀತಾಗಿದೆ. ಈ ಸಂಘಟನೆಯನ್ನು ಕಟ್ಟಿರುವುದೇ ಜನರಿಗೆ ಧರ್ಮ, ಕೋಮುವಿನ ಹೆಸರಿನಲ್ಲಿ ದ್ವೇಷದ ವಿಷವನ್ನು ಉಣಿಸಲು. ನೀರಿಗೆ ವಿಷ ಹಾಕುವ ಮೂಲಕ, ವಿದ್ಯಾರ್ಥಿಗಳನ್ನು ಬಲಿಕೊಟ್ಟು ಸಮಾಜದಲ್ಲಿ ಉದ್ದಿಗ್ನ ವಾತಾವರಣ ನಿರ್ಮಿಸುವುದು ಇವರ ಅಂತಿಮ ಉದ್ದೇಶವಾಗಿತ್ತು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ 'ಇದೊಂದು ಆಘಾತಕಾರಿ ಘಟನೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ್ದಾರೆ. “ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ದ್ವೇಷ ಬಿತ್ತಿ, ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಬಿಜೆಪಿ ನಾಯಕರು ಈಗ ಏನು ಹೇಳುತ್ತಾರೆ?'' ಎಂದು ಅವರು ಕೇಳಿದ್ದಾರೆ. ಆದರೆ ಮೊದಲು ಶ್ರೀರಾಮ ಸೇನೆ ಸಂಘಟನೆ ಮತ್ತು ಅದರ ಮುಖಂಡರ ವಿರುದ್ಧ ಸರಕಾರ ಏನು ಕ್ರಮ ತೆಗೆದುಕೊಳ್ಳುತ್ತದೆ? ಇದನ್ನು ಒಂದು ಕ್ರಿಮಿನಲ್ ಪ್ರಕರಣವಾಗಿಯಷ್ಟೇ ನೋಡುತ್ತದೆಯೋ ಅಥವಾ ಸಮಾಜದ ಶಾಂತಿ ಸುವ್ಯವಸ್ಥೆಯನ್ನು ಕೆಡಿಸಲು ಸಂಚು ಹೂಡಿದ ಆರೋಪದಲ್ಲಿ ಶ್ರೀ ರಾಮಸೇನೆ ಸಂಘಟನೆಯ ವಿರುದ್ದ ಕ್ರಮ ತೆಗೆದುಕೊಳ್ಳುತ್ತದೆಯೋ ಎಂದು ಜನರು ಕೇಳುತ್ತಿದ್ದಾರೆ.

ನಾಡಿಗೆ ದ್ರೋಹ ಬಗೆಯುವ ಇಂತಹ ಅಮಾನವೀಯ ಕೃತ್ಯಗಳಲ್ಲಿ ಈ ಹಿಂದೆಯೂ ಶ್ರೀ ರಾಮಸೇನೆ ಗುರುತಿಸಿಕೊಂಡಿದೆ. ಹುಬ್ಬಳ್ಳಿಯ ನ್ಯಾಯಾಲಯದ ಆವರಣದಲ್ಲಿ ಸ್ಪೋಟ ನಡೆಸಿ ಬಳಿಕ ಅದನ್ನು ಅಮಾಯಕ ಮುಸ್ಲಿಮರ ತಲೆಗೆ ಕಟ್ಟುವ ಪ್ರಯತ್ನವನ್ನು ಶ್ರೀ ರಾಮಸೇನೆ ಹಿಂದೆ ನಡೆಸಿತ್ತು. ಈ ಸಂಬಂಧ ಜಂಬಗಿ ಮತ್ತು ಆತನ ಸಹಚರರನ್ನು ವರ್ಷಗಳ ಬಳಿಕ ಬಂಧಿಸಲಾಗಿತ್ತು. ಹೆದ್ದಾರಿ ದರೋಡೆ, ಕೊಲೆ ಮೊದಲಾದ ಕ್ರಿಮಿನಲ್ ಕೃತ್ಯಗಳಲ್ಲಿ ಇವರು ಭಾಗವಹಿಸಿರುವುದು ಆಗ ತನಿಖೆಯಿಂದ ಬೆಳಕಿಗೆ ಬಂದಿದ್ದವು. ಸಿಂಧಗಿಯಲ್ಲಿ ಶ್ರೀ ರಾಮಸೇನೆಯ ಕಾರ್ಯಕರ್ತರು ಪಾಕಿಸ್ತಾನದ ಧ್ವಜವನ್ನು ಹಾರಿಸಿದ್ದರು. ಬಳಿಕ ಅದೇ ಶ್ರೀ ರಾಮಸೇನೆಯ ಕಾರ್ಯಕರ್ತರು ಸಿಂಧಗಿಯ ತಹಶೀಲ್ದಾರ್ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ, ಸ್ಥಳೀಯ ಮುಸ್ಲಿಮರ ವಿರುದ್ದ ದ್ವೇಷ ಕಾರಿದ್ದರು. ಆದರೆ ತನಿಖೆಯಲ್ಲಿ ಪಾಕಿಸ್ತಾನ ಧ್ವಜ ಹಾರಿಸಿದ್ದು ಶ್ರೀರಾಮಸೇನೆ ಕಾರ್ಯಕರ್ತರು ಎನ್ನುವುದು ಬೆಳಕಿಗೆ ಬಂತು. ಇತ್ತೀಚೆಗಷ್ಟೇ ಬೆಳಗಾವಿಯಲ್ಲಿ ಶ್ರೀ ರಾಮಸೇನೆ ಸಂಘಟನೆ ಯುವಕರಿಗೆ ಶಸ್ತ್ರಾಸ್ತ್ರ ತರಬೇತಿ ನೀಡುವ ಆರೋಪ ಕೇಳಿ ಬಂದಿತ್ತು. ಯುವಕರು ಕೋವಿ ಹಿಡಿದು ತರಬೇತಿ ಪಡೆಯುತ್ತಿರುವ ಚಿತ್ರಗಳು ಮಾಧ್ಯಮಗಳಲ್ಲೂ ಪ್ರಕಟವಾಗಿದ್ದವು. ಈ ಬಗ್ಗೆ ಪೊಲೀಸ್ ಇಲಾಖೆಗೆ ದೂರನ್ನು ನೀಡಿ, ಶ್ರೀ ರಾಮಸೇನೆ ಸಂಘಟನೆಯನ್ನು ನಿಷೇಧಿಸಲು ಆಗ್ರಹಿಸಲಾಗಿತ್ತು. ಆದರೆ ಸರಕಾರ ಕಣ್ಣಿದ್ದೂ ಕುರುಡನಂತೆ ವರ್ತಿಸುತ್ತಾ ಬಂದಿದೆ. 'ನೀರಿಗೆ ವಿಷ ಹಾಕಿದ ಕೃತ್ಯದ ಹೊಣೆಯನ್ನು ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೊರುತ್ತಾರೆಯೆ?' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಳಿದ್ದಾರೆ. ಸಮಾಜಕ್ಕೆ ಸದಾ ವಿಷ ಉಣಿಸುತ್ತಾ ಬಂದಿರುವ ಪ್ರಮೋದ್ ಮುತಾಲಿಕ್ ಪಾಲಿಗೆ ಈ ಕೃತ್ಯ ಹೆಮ್ಮೆ ಪಡುವಂತಹದು. ಅವರು ಸಂಘಟನೆಯನ್ನು ಕಟ್ಟಿರುವುದೇ ಇಂತಹ ದುಷ್ಕೃತ್ಯಗಳನ್ನು ಎಸಗಿ, ಒಂದು ಧರ್ಮದ ವಿರುದ್ದ ಇನ್ನೊಂದು ಧರ್ಮವನ್ನು ಎತ್ತಿ ಕಟ್ಟುವುದಕ್ಕಾಗಿ, ನೀರಿಗೆ ವಿಷ ಬೆರೆಸುವಂತಹ ಮನಸ್ಥಿತಿಯನ್ನು ತನ್ನ ಕಾರ್ಯಕರ್ತರಲ್ಲಿ ಬೆಳೆಸಿದ್ದು ಪ್ರಮೋದ್ ಮುತಾಲಿಕ್. ಈತನ ದ್ವೇಷಪೂರಿತವಾದ ಮಾತುಗಳಿಂದ ಪ್ರೇರಣೆ ಪಡೆದು ಅವರು ವಿದ್ಯಾರ್ಥಿಗಳನ್ನು ಸಾಮೂಹಿಕವಾಗಿ ಕೊಲ್ಲುವ ಪ್ರಯತ್ನ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಪ್ರಮೋದ್ ಮುತಾಲಿಕ್ ಆರೋಪಿಗಳಲ್ಲಿ ಒಬ್ಬ ಎನ್ನುವುದನ್ನು ಸರಕಾರ ಅರ್ಥ ಮಾಡಿಕೊಳ್ಳಬೇಕು. ಆತನಿಂದ 'ನೈತಿಕ ಹೊಣೆ'ಯನ್ನು ನಿರೀಕ್ಷಿಸುವುದೇ ಮೂರ್ಖತನವಾಗುತ್ತದೆ. ಈ ಕೃತ್ಯದ ನೈತಿಕ ಹೊಣೆಯನ್ನು ಹೊರಬೇಕಾದದ್ದು ಗೃಹ ಸಚಿವರು. ಯಾಕೆಂದರೆ ರಾಮಸೇನೆ ಒಂದರ ಮೇಲೆ ಒಂದರಂತೆ ದೇಶದ ವಿರೋಧಿ, ಜನ ವಿರೋಧಿ ಕೃತ್ಯಗಳನ್ನು ಎಸಗುತ್ತಾ ಬಂದರೂ ಅದರ ವಿರುದ್ಧ ಯಾವುದೇ ನಿರ್ಬಂಧವನ್ನು ಹೇರದ, ಕ್ರಿಮಿನಲ್ ಆರೋಪಗಳಿದ್ದರೂ ಆತನನ್ನು ಈವರೆಗೆ ಬಂಧಿಸದ ಸರಕಾರವೇ

ರಾಮಸೇನೆಯ ಕಾರ್ಯಕರ್ತರ ಅಮಾನವೀಯ ಕೃತ್ಯಕ್ಕೆ ಹೊಣೆಯಾಗಿದೆ. ವಿದ್ಯಾರ್ಥಿಗಳ ಮೆದುಳಲ್ಲಿ ಕೋಮುದ್ವೇಷದ ವಿಷವನ್ನು ಬಿತ್ತುವಲ್ಲಿ ಸಂಘಪರಿವಾರ ಸಂಘಟನೆಗಳು ಭಾಗಶ: ಯಶಸ್ವಿಯಾಗಿವೆ. ಶಾಲಾ ಪಠ್ಯದಲ್ಲೂ ದ್ವೇಷವನ್ನು ಬಿತ್ತುವ ಕೆಲಸ ಬಿರುಸಿನಿಂದ ನಡೆಯುತ್ತಿದೆ. ತಮ್ಮ ಉದ್ದೇಶ ಸಾಧಿಸಲು ಕುಡಿಯುವ ನೀರಿಗೆ ಮಾತ್ರವಲ್ಲ, ವಿದ್ಯಾರ್ಥಿಗಳು ಉಣ್ಣುವ ಬಿಸಿಯೂಟಕ್ಕೂ ಇವರು ವಿಷ ಬೆರೆಸಬಲ್ಲರು. ಸಮಾಜವನ್ನು ವಿಚ್ಛಿದ್ರಗೊಳಿಸಿ ಅದರಿಂದ ಲಾಭವನ್ನು ಪಡೆಯಲು ಕೇಸರಿ ಸಂಘಟನೆಗಳು ಎಂತಹ ಮಟ್ಟಕ್ಕೂ ಇಳಿಯಬಲ್ಲವು. ಮಕ್ಕಾ ಮಸೀದಿಗೆ ಬಾಂಬಿಟ್ಟವರು, ಮಾಲೆಗಾಂವ್‌ನಲ್ಲಿ ಸ್ಫೋಟ ನಡೆಸಿದರು, ಸಂಜೋತಾ ಎಕ್ಸ್‌ ಪ್ರೆಸ್‌ನ್ನು ಸ್ಫೋಟಿಸಿ ನೂರಾರು ಜನರ ಸಾವಿಗೆ ಕಾರಣವಾದರು, ನೀರಿಗೆ ವಿಷವಿಕ್ಕುವುದು ಏನು ಮಹಾ? ಆದರೆ ಕಾನೂನು ಕ್ರಮ ತೆಗೆದುಕೊಳ್ಳಲು ಮುಂದಾದಾಗಲೆಲ್ಲ ಅವರು ಧರ್ಮವನ್ನು ಗುರಾಣಿಯಾಗಿ ಬಳಸಿಕೊಂಡಿದ್ದಾರೆ. ಮಾಲೆಗಾಂವ್ ಸ್ಫೋಟದಲ್ಲಿ ಆರೋಪಿಗಳಾಗಿದ್ದ ಪ್ರಜ್ಞಾ ಸಿಂಗ್, ಪುರೋಹಿತ್ ನಂತಹ ದುರುಳರು ಹೇಗೆ

ಶಿಕ್ಷೆಯಿಂದ ನುಣುಚಿಕೊಂಡರು ಎನ್ನುವುದನ್ನು ನಾವು ನೋಡಿದ್ದೇವೆ. ಧರ್ಮದ ಮುಖವಾಡದಲ್ಲಿರುವ ಈ ಭಯೋತ್ಪಾದಕರನ್ನು ವ್ಯವಸ್ಥೆಯೇ ಪೋಷಿಸುತ್ತಾ, ನಮ್ಮ ಮಕ್ಕಳು ಉಣ್ಣುವ ಅನ್ನಕ್ಕೆ, ಉಸಿರಾಡುವ ಗಾಳಿಗೆ, ಕುಡಿಯುವ ನೀರಿಗೆ ವಿಷ ಬೆರೆಸಲು ಕೈ ಜೋಡಿಸುತ್ತಿದೆ. ಇತ್ತೀಚೆಗೆ ಮೂಡಿಗೆರೆಯಲ್ಲಿ ಕಾಂಗ್ರೆಸ್ ಪಕ್ಷದ ಯುವ ನಾಯಕಿಯೊಬ್ಬರು ಇದೇ ಶ್ರೀರಾಮಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಜೊತೆಗೆ ವೇದಿಕೆ ಹಂಚಿಕೊಂಡರು. ಮುತಾಲಿಕ್ ಅವರ ಧಾರ್ಮಿಕ ಸೇವೆಯನ್ನು ಬಾಯಿ ತುಂಬಾ ಹೊಗಳಿದರು. ಇದೀಗ ಸವದತ್ತಿಯಲ್ಲಿ ಕುಡಿಯುವ ನೀರಿಗೆ ವಿಷ ಬೆರೆಸಿದ ಶ್ರೀ ರಾಮಸೇನೆಯನ್ನು ಅವರು ಯಾವ ಮುಖದಲ್ಲಿ ಸಮರ್ಥಿಸಿಕೊಳ್ಳುತ್ತಾರೆ? ಶಾಲೆಯ ನೀರಿಗೆ ವಿಷವಿಕ್ಕುವುದು ಯಾವ ಧರ್ಮ? ಅಮೃತಕ್ಕೂ ವಿಷಕ್ಕೂ ಇರುವ ವ್ಯತ್ಯಾಸವನ್ನು

ಅರಿಯಲು ವಿದ್ಯಾವಂತರೂ, ಸಂವಿಧಾನವನ್ನು ಓದಿಕೊಂಡವರೂ ಆಗಿರುವ ನಯನಾ ಮೋಟಮ್ಮನಂತಹವರೇ ವಿಫಲರಾದರೆ ಇನ್ನು ಜನಸಾಮಾನ್ಯರ ಪಾಡೇನು? ನಮ್ಮ ಮಕ್ಕಳಿಗೆ ನಾವೇ ಕೈಯಾರೆ ವಿಷ ಉಣಿಸುವುದೆಂದರೆ ಇದೇ ಅಲ್ಲವೆ?

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News